ಕೊಪ್ಪಳ ಏ. : ಕರಡಿ ಆಡಿಸುವವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ೧೨ ಜನರಿಗೆ ನೀಡಲಾದ ತಲಾ ೨೫ ಸಾವಿರ ರೂ.ಗಳ ಸಾಲ ಸೌಲಭ್ಯದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಬುಧವಾರದಂದು ವಿತರಣೆ ಮಾಡಿದರು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ. ಹುನಗುಂದ ಅವರು ಕೆಲ ತಿಂಗಳುಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿ, ಕರಡಿ ಆಡಿಸುವ ಕುಟುಂಬಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಖಿಲ ಕರ್ನಾಟಕ ಕರಡಿ ಆಟಗಾರರ ಪರಿಹಾರ ಹೋರಾಟ ಸಮಿತಿ, ಮಂಗಳಾಪುರ ಇವರು ಸಹ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ, ಕುಟುಂಬದ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ, ಕರಡಿ ಆಡಿಸುವ ಕುಟುಂಬಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಕರಡಿ ಆಡಿಸುತ್ತ ಜೀವನ ಸಾಗಿಸುತ್ತಿದ್ದ, ಜಿಲ್ಲೆಯ ಮಂಗಳಾಪುರ ಗ್ರಾಮದ ೧೨ ಜನರಿಗೆ ತಲಾ ೨೫ ಸಾವಿರ ರೂ. ಗಳ ಸಾಲ ಸೌಲಭ್ಯವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮಂಜೂರು ಮಾಡಿದೆ. ೨೫ ಸಾವಿರ ರೂ. ಗಳ ಸಾಲ ಸೌಲಭ್ಯದಲ್ಲಿ ಶೇ. ೨೫ ರಷ್ಟು ಅಂದರೆ ೬೨೫೦ ರೂ. ಸಹಾಯಧನವಾಗಿದ್ದು, ಉಳಿದ ಶೇ. ೭೫ ರಷ್ಟು ಅಂದರೆ ೧೮೭೫೦ ರೂ. ಸಾಲದ ಮೊತ್ತವಾಗಿದ್ದು, ಇದನ್ನು ಶೇ. ೪ ರ ಬಡ್ಡಿದರದಲ್ಲಿ ೨ ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡಬೇಕಿದೆ. ಸಾಲದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಝಾಕಿರ್ ಹುಸೇನ್, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ರಾಜಾಬಕ್ಷಿ ಇದ್ದರು.
Subscribe to:
Post Comments (Atom)
0 comments:
Post a Comment