ಕೊಪ್ಪಳ : ಕಿನ್ನಾಳದ ಕಲೆಗೆ ಪ್ರೋತ್ಸಾಹ ನೀಡುವದರ ಮೂಲಕ ಆ ಕಲೆಯನ್ನು ಉಳಿಸಿಕೊಳ್ಳುವಂತಹ ಕಾರ್ಯ ಮಾಡಬೇಕಾಗಿದೆ ಎಂದು ಇತಿಹಾಸ ಉಪನ್ಯಾಸಕಿ ಮತ್ತು ಪರಂಪರಾಕೂಟದ ಸಂಚಾಲಕಿ ಶ್ರೀಮತಿ ಶುಭಾ ನುಡಿದರು. ಅವರು ಇತ್ತೀಚಿಗೆ ಕಿನ್ನಾಳ ಗ್ರಾಮದ ಕಲಾವಿದ ಧರ್ಮಣ್ಣ ಚಿತ್ರಗಾರ ಇವರ ಮನೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಕಿನ್ನಾಳ ಕಲೆಯ ಮಾಹಿತಿ ತಿಳಿಯುವಂತಹ ವಿಶಿಷ್ಠ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದುವರೆದು ಮಾತನಾಡಿ ತಾಲೂಕಿನ ಕಿನ್ನಾಳ ಕಲೆಯು ವಿಜಯನಗರ ಸಾಮ್ರಾಜ್ಯದಲ್ಲಿ ಪೋಷಿತಗೊಂಡು ಬೆಳೆದ ಕಲೆಯಾಗಿದೆ. ಕ್ರಿ.ಶ ೧೫೬೫ ರಲ್ಲಿ ವಿಜಯನಗರ ಸಾಮ್ರಾಜ್ಯ ಪತನ ಗೊಂಡ ಮೇಲೆ ಕೆಲವು ಕಲಾವಿದರು ಕರ್ನಾಟಕ ತುಂಬ ಹರಿದು ಹಂಚಿ ಹೋದರು. ವಿಜಯನಗರಕ್ಕೆ ಸಮೀಪವಾಗಿರುವ ಕೊಪ್ಪಳ ಹಿರೇಹಳ್ಳದ ದಡದಲ್ಲಿನ ಮತ್ತು ನೇಕಾರಿಕೆಗೆ ಪ್ರಸಿದ್ದಿಯಗಿರುವ ಸೀರೆ, ಕುಪ್ಪಸಗಳ ಬಣ್ಣಗಳಿಗೆ ಹೆಸರಾದ ಕಿನ್ನಾಳಗೆ ಈ ಕಲಾವಿದರು ಬಂದರು. ಇವರ ಪ್ರಾಚೀನ ಕಲೆಯನ್ನು ಇಂದಿಗೂ ಹಂಪಿಯ ವಿರುಪಾಕ್ಷ ದೇವರ ಗುಡಿಯ ಛತ್ತಿನ ಮೇಲೆ ಈಗಲೂ ಕಾಣಬಹುದು. ಈ ಕಲಾವಿದರು ಗ್ರಾಮಾಂತರ ಪ್ರದೇಶದ ದೇವರು ಹಾಗೂ ದೇವತೆಗಳನ್ನು ಕಟ್ಟಿಗೆಯಲ್ಲಿ ಕೆತ್ತಿ ಆಕರ್ಷಕ ಬಣ್ಣ ಕೊಡುತ್ತಾರೆ. ಮೆರವಣಿಗೆಯಲ್ಲು ಬಳಸುವ ಛತ್ರ ಚಾಮರ, ಪಲ್ಲಕ್ಕಿ ಇತರೇ ಸಾಮಗ್ರಿಗಳನ್ನು ತಯಾರಿಸುತ್ತಾರೆ. ಕಚ್ಚಾಸಾಮಗ್ರಿಗಳನ್ನು ಬಳಸಿಕೊಂಡು ಗೊಂಬೆ, ಚೌಕಿ, ಎತ್ತು, ದನ, ಕರು, ನೈಜವಾಗಿ ಕಾಣುವ ಆಕರ್ಷಕ ಹಣ್ಣಿನ ತಟ್ಟೆಗಳು, ತಾಂಬೂಲ ತಟ್ಟೆ ಹಾಗೂ ಮೊದಲದ ಕಲಾ ಪ್ರgಕಾರಗಳು ರಾಷ್ಟ್ರವ್ಯಾಪಿಯಾಗಿ ಪ್ರಚಾರ ಪಡೆದಿವೆ. ಈ ದೇಸಿಯ ಕಲೆಗೆ ಸರ್ಕಾರ ಪ್ರೋತ್ಸಾಹ ನೀಡುವದರ ಮೂಲಕ ಆ ಕಲೆಯನ್ನು ಜೀವಂತ ಉಳಿಸಿಕೊಳ್ಳುವಂತಹ ಕಾರ್ಯ ಮಾಡಬೇಕಾಗಿದೆ ಎಂದರು.
ಈ ಸಮಯದಲ್ಲಿ ಕಿನ್ನಾಳ ಗ್ರಾಮದ ಕಲಾವಿದ ಧರ್ಮಣ್ಣ ಚಿತ್ರಗಾರ ಇವರ ಮನೆಗೆ ಭೇಟಿ ನೀಡುವಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಾವಿದ ಧರ್ಮಣ್ಣ ಚಿತ್ರಗಾರ ವಿದ್ಯಾರ್ಥಿಗಳಿಗೆ ಕಿನ್ನಾಳ ಕಲೆಯ ಮೂಲ, ಗೊಂಬೆಗಳ ತಯಾರಿಕೆಗೆ ಬಳಸುವ ವಸ್ತುಗಳು, ಗೊಂಬೆಗಳ ತಯಾರಿಕಾ ವಿಧಾನ ಇತ್ಯಾದಿಗಳನ್ನು ತಿಳಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರಂಪರಾ ಕೂಟದ ವತಿಯಿಂದ ಕಲಾವಿದ ಧರ್ಮಣ್ಣ ಚಿತ್ರಗಾರ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪರಂಪರಾ ಕೂಟವು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕರಾದ ಶರಣಪ್ಪ ತಳವಾರ, ಜ್ಞಾನೇಶ ಪತ್ತರ್, ಗೋಣಿಬಸಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

0 comments:
Post a Comment