PLEASE LOGIN TO KANNADANET.COM FOR REGULAR NEWS-UPDATES

ಜಾನುವಾರು ಹತ್ಯೆ ತಡೆಗೆ ಹೊಸ ಕಾನೂನಿನ ಅಗತ್ಯವಿಲ್ಲ 

ಬೆಂಗಳೂರು, ಮಾ.: ಜಾನು ವಾರು ಹತ್ಯೆ ತಡೆಗಟ್ಟುವಲ್ಲಿ 1974ರ ಕಾಯ್ದೆ ಸಮರ್ಥವಾಗಿದ್ದು, ಈ ಸಂಬಂಧ ಹೊಸ ಕಾನೂನಿನ ಅಗತ್ಯವಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಅಗತ್ಯವಿಲ್ಲ. ಈ ಹಿಂದೆ ಬಿಜೆಪಿ ಸರಕಾರ ಕೋಮು ಭಾವನೆ ಕೆರಳಿಸಲು ಎರಡು ಕಾನೂನುಗಳನ್ನು ರೂಪಿಸಿತ್ತು ಎಂದು ಆಕ್ಷೇಪಿಸಿದರು.
ಜಾನುವಾರು ಹತ್ಯೆ ತಡೆಗೆ 1974ರ ಕಾನೂನು ಬಲಿಷ್ಠವಾಗಿದ್ದು, ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. 10ವರ್ಷ ಮೇಲ್ಪಟ್ಟ ಜಾನುವಾರುಗಳನ್ನು ವೈದ್ಯರ ದೃಢೀಕರಣದ ಬಳಿಕ ಕಸಾಯಿಖಾನೆಗೆ ಕಳುಹಿಸಬಹುದು ಎಂಬ ನಿಯಮವಿದೆ ಎಂದ ಅವರು, ಇದರಲ್ಲಿ ವೈಫಲ್ಯ ವಿದ್ದು, ಪಶು ವೈದ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾನೂನು ಜಾರಿಗೆ ಮುಂದಾಗಬೇಕೆಂದರು. ವೌಢ್ಯ ಆಚರಣೆ ನಿಷೇಧಕ್ಕೆ ನಮ್ಮ ಸರಕಾರ ಮುಂದಾಗಿತ್ತು. ಆದರೆ ಕಾಯ್ದೆ ಪರವಾಗಿ ಸೂಕ್ತ ಜನ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಅದನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದ ಸಚಿವರು, ಮಾಧ್ಯಮಗಳು ಕಾಯ್ದೆ ಪರವಾಗಿ ಸಹಕರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನುವಾರುಗಳಿಗೆ ಲಸಿಕೆ: ಕಾಲುಬಾಯಿ ಜ್ವರ ತಡೆಗೆ ಪಲ್ಸ್ ಪೋಲಿಯೊ ಮಾದರಿಯಲ್ಲಿ 1.26 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕುವ ಆಂದೋಲನ ಕೈಗೊಂಡಿದ್ದು, ಪ್ರತಿ 120 ಜಾನುವಾರುಗಳಿಗೆ ಒಬ್ಬ ಅಧಿಕಾರಿಯಂತೆ ಒಟ್ಟು 8 ಸಾವಿರಕ್ಕೂ ಅಧಿಕ ಮಂದಿ ನಿಯೋಜಿಸಲಾಗಿದೆ. 4 ತಿಂಗಳ ಕರು, ಗರ್ಭಾವಸ್ಥೆಯಲ್ಲಿನ ರಾಸುಗಳನ್ನು ಹೊರತುಪಡಿಸಿ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು ಎಂದರು.
ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ 200 ಪಶು ವೈದ್ಯಕೀಯ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ 200 ಹೊಸ ಆಸ್ಪತ್ರೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು, ನೂರು ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 354 ಪಶುವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಇನ್ನೂ 300 ವೈದ್ಯರ ನೇಮಕಾತಿಗೆ ಶೀಘ್ರವೆ ಅಧಿಸೂಚನೆ ಹೊರಡಿಸಲಾಗುವುದು ಎಂದ ಜಯಚಂದ್ರ, ಬೇಸಿಗೆ ಸಂದರ್ಭದಲ್ಲಿ ಗೋಶಾಲೆ ಸ್ಥಾಪನೆಗೆ ರಾಜ್ಯದ ಯಾವುದೇ ಜಿಲ್ಲೆಯಿಂದಲೂ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದರು.

Advertisement

0 comments:

Post a Comment

 
Top