ಚುನಾವಣೆಯ ಹಿನ್ನೆಲೆಯಲ್ಲಿ ಈ ಭಾಗದ ರೈತರನ್ನು ಮರೆತ ಸರ್ಕಾರ: ಶಿವರಾಮಗೌಡ
ಎಪ್ರಿಲ್ ೨೦ರ ವರೆಗೆ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಮಾಜಿ ಲೋಕಸಭಾ ಸದಸ್ಯರಾದ ಶಿವರಾಮಗೌಡರವರು ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರನ್ನು ಒತ್ತಾಯಿಸಿರುತ್ತಾರೆ.
ರಾಜ್ಯ ಸರ್ಕಾರವು ಗ್ರಾಮ ಪಂಚಾಯತ ಚುನಾವಣೆಗೆ ಮಹತ್ವ ನೀಡಿ ರೈತರ ಹಿತ ಕಡೆಗಣಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮಾರ್ಚ ೩೧ ರ ವರೆಗೆ ಮಾತ್ರ ನೀರು ಬಿಡುವುದರಿಂದ, ಭತ್ತದ ಬೆಳೆಯು ಮಾರ್ಚ ತಿಂಗಳಾಂತ್ಯದ ಸಮಯದಲ್ಲಿ ಹಾಲು ತುಂಬುವ ಹಂತದಲ್ಲಿರುತ್ತದೆ. ಏಪ್ರಿಲ್ ೨೦ ರವರೆಗೆ ನೀರು ಬಿಟ್ಟರೆ ಮಾತ್ರ ಭತ್ತದ ಬೆಳೆಯು ಸಂಪೂರ್ಣವಾಗಿ ರೈತರ ಕೈ ಸೇರುತ್ತದೆ. ಇಲ್ಲದಿದ್ದಲ್ಲಿ ಭತ್ತದ ಬೆಳೆಯು ಸಂಪೂರ್ಣ ಜೊಳ್ಳಾಗಿ ರೈತರಿಗೆ ನಷ್ಟವಾಗುತ್ತದೆ.
ಈಗಾಗಲೇ ಪ್ರತಿ ಎಕರೆಗೆ ೨೫ ರಿಂದ ೩೦ ಸಾವಿರ ರೂಪಾಯಿವರೆಗೆ ರೈತರು ಸಾಲ ಮಾಡಿ ಭತ್ತದ ನಾಟಿ ಮಾಡಿದ್ದು, ಐಸಿಸಿ ನಿರ್ಣಯದಂತೆ ಕೇವಲ ಮಾರ್ಚ್ ೩೧ ರವರೆಗೆ ನೀರು ಹರಿಸುವುದರಿಂದ ಶೇಕಡಾ ೪೦ ರಷ್ಟು ಮಾತ್ರ ಬೆಳೆಯು ರೈತರ ಕೈಸೇರಲಿದ್ದು, ಎಪ್ರಿಲ್ ೨೦ ರ ವರೆಗೆ ನೀರು ಬಿಡದಿದ್ದರೆ ಇನ್ನುಳಿದ ಶೇ. ೬೦ ರಷ್ಟು ಭತ್ತದ ಬೆಳೆ ನಷ್ಟವಾಗಲಿದೆ ಎನ್ನುವ ಅಂಶವನ್ನು ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಒಂದು ವಾರ ಮಾತ್ರ ವಿಸ್ತರಿಸುವ ಭರವಸೆ ನೀಡಿದ್ದಾರೆ.
ತುಂಗಭದ್ರಾ ನಾಲೆಗಳಿಗೆ ಎಪ್ರಿಲ್ ೨೦ ರ ವರೆಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಾಜಿ ಸಂಸದರಾದ ಶಿವರಾಮಗೌಡರು ಒತ್ತಾಯಿಸಿದ್ದಾರೆ.
0 comments:
Post a Comment