PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,  : ನಕ್ಸಲರ ಶರಣಾಗತಿಗೆ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‍ನಂತೆ ಶರಣಾಗತಿಯಾಗುವ ನಕ್ಸಲರ ಪುನರ್ವಸತಿಗಾಗಿ ಎರಡೂವರೆ ಲಕ್ಷ ರೂ ಸಹಾಯಧನ ಮತ್ತು ಎರಡೂವರೆ ಲಕ್ಷ ರೂ ಸಾಲ ಹಾಗೂ ಐದು ಸಾವಿರ ರೂ ಮಾಸಾಶನ ನೀಡಲಾಗುವುದು ಎಂದು ಗೃಹ ಸಚಿವ  ಕೆ. ಜೆ. ಜಾರ್ಜ್ ಅವರು ರಾಜ್ಯ ವಿಧಾನ ಸಭೆಗೆ ಮಂಗಳವಾರ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ   ವಿ. ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ಸರ್ಕಾರ ಈ ಪ್ಯಾಕೇಜ್ ಪ್ರಕಟಿಸಿದೆ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಸಮಿತಿಯು ಮುಖ್ಯವಾಹಿನಿಗೆ ಬರುವ ನಕ್ಸಲರ ಪೂರ್ವಾಪರ ಹಾಗೂ ಹಿನ್ನೆಲೆಯನ್ನು ಗುರುತಿಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಿದೆ ಎಂದರು.

ನಕ್ಸಲರ ಶರಣಾಗತಿ ಪ್ಯಾಕೇಜ್‍ಗೆ ಕಾಲಾನುಸಾರ ತಿದ್ದುಪಡಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಗಿರಿಜನರನ್ನು ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಸಚಿವರು ವಿವರಿಸಿದಾಗ, ಸಭಾಧ್ಯಕ್ಷ  ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ, ಆ ಪ್ರದೇಶದ ಜನರ ಮೂಲ ಸೌಕರ್ಯಗಳಿಗೂ ಆಧ್ಯತೆ ನೀಡಿ ಎಂದು ಸಲಹೆ ಮಾಡಿದರು.
ಸೌಕರ್ಯ-ವಂಚಿತ ಪ್ರದೇಶಗಳಲ್ಲಿ ವಾಸಿಸುವವರನ್ನು ಕೆಲವು ಗುಂಪುಗಳು ದಾರಿ ತಪ್ಪಿಸುತ್ತಿವೆ. ಆ ಪ್ರದೇಶದಲ್ಲಿ ವಾಸಿಸುವವರಿಗೆ ಹಕ್ಕು ಪತ್ರ, ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿದಲ್ಲಿ ನಕ್ಸಲರ ಸಮಸ್ಯೆ ಉದ್ಭವವಾಗುವುದಿಲ್ಲ. ಕೆಲವೇ ಪ್ರದೇಶಗಳಲ್ಲಿ ಈ ಚಟುವಟಿಕೆಗಳಿವೆ. ಆ ಭಾಗದ ಚುನಾಯಿತ ಪ್ರತಿನಿಧಿಗಳ ಜೊತೆಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಸೂತ್ರವನ್ನು ರೂಪಿಸಬೇಕೆಂದು ಸಭಾಧ್ಯಕ್ಷರು ಸರ್ಕಾರಕ್ಕೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ   ಕೆ. ಜೆ. ಜಾರ್ಜ್ ಅವರು ಈ ಕುರಿತಂತೆ ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಹಾಗೂ ಗೃಹ ಸಚಿವರೂ ಸೇರಿದಂತೆ ಅಧಿಕಾರಿಗಳು ಸಭೆ ಸೇರಿ ಭಾರತ ಸರ್ವೋಚ್ಛ ನ್ಯಾಲಾಯದ ನಿರ್ದೇಶನದ ಅಡಿಯಲ್ಲಿ ಸೂಕ್ತ ಪರಿಹಾರ ಕಂಡು ಹಿಡಿಯುವುದಾ ಸದನಕ್ಕೆ ಭರವಸೆ ನೀಡಿದರು.

ಪ್ರತಿಪಕ್ಷ ನಾಯಕ   ಜಗದೀಶ್ ಶೆಟ್ಟರ್, ಭಾರತೀಯ ಜನತಾ ಪಕ್ಷದ ಸದಸ್ಯರಾದ  ಕೆ. ಜಿ. ಬೋಪಯ್ಯ,   ಡಿ. ಎನ್. ಜೀವರಾಜ್ ಅವರೂ ಚರ್ಚೆಯಲ್ಲಿ ಪಾಲ್ಗೊಂಡು ಕಾಲಮಿತಿಯೊಳಗೆ ಪರಿಹಾರ ಕಂಡುಹಿಡಿಯಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು

Advertisement

0 comments:

Post a Comment

 
Top