PLEASE LOGIN TO KANNADANET.COM FOR REGULAR NEWS-UPDATES

  ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಅರಣ್ಯ ಪ್ರದೇಶ ವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದದು.  ಯಾವುದೇ ಕಾರಣಕ್ಕೂ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಲಾಗುವುದಿಲ್ಲವೆಂದು ಅರಣ್ಯ ಸಚಿವ ಬಿ. ರಮಾನಾಥ್ ರೈ ಅವರು ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಅರಣ್ಯ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನವನದ ಆವಾಸ ಸ್ಥಾನದಲ್ಲಿ ವಾಸಿಸುವವರು ಯಾವುದೇ ಆತಂಕಪಡುವ ಅಗತ್ಯವಿಲ್ಲ.  ಹಾಗೆಯೇ ಕೃಷಿಕರು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವ ಬಗ್ಗೆ ಯಾವುದೇ ನಿರ್ಬಂಧವನ್ನು ವರದಿಯಲ್ಲಿ ಶಿಫಾರಸ್ಸು ಮಾಡಿರುವುದಿಲ್ಲವೆಂದು ಸಚಿವರು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಐವನ್ ಡಿಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಸ್ತೂರಿ ರಂಗನ್ ವರದಿಯನ್ನು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಮುಂಚಿತವಾಗಿ ಅದರ ಸಾಧಕ ಭಾದಕಗಳ ಬಗ್ಗೆ ಚರ್ಚಿಸುವ  ಸಲುವಾಗಿ ತಮ್ಮ ಅಧ್ಯಕ್ಷತೆÉಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ಎಂದರು.
ಉಪ ಸಮಿತಿಯು ಹಲವು ಬಾರಿ ಸಭೆ ನಡೆಸಿ, ಕಸ್ತೂರಿ ರಂಗನ್ ವರದಿಯಲ್ಲಿ ಶೇಕಡ 20 ಕ್ಕಿಂತಲೂ ಹೆಚ್ಚು ಭೂ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿರುವ ಬದಲಿಗೆ ಶೇಕಡ  50 ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಭೂ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದಲ್ಲಿ ಆ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವಂತೆ ಶಿಫಾರಸ್ಸು ಮಾಡಲಾಗಿದೆ.  ಇದರಿಂದ ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿರುವ ಗ್ರಾಮಗಳ ಸಂಖ್ಯೆಯಲ್ಲಿಯೂ ಸಹ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಸಚಿವರು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರಕ್ಕೆ ವರದಿ ನೀಡಬೇಕಿರುವ ಆರು ರಾಜ್ಯಗಳ ಪೈಕಿ ಒಂದು ರಾಜ್ಯ ಮಾತ್ರ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ.  ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಏಪ್ರಿಲ್  15 ರವರೆಗೆ ಕಾಲಾವಕಾಶÀವಿರುವ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿಯ ಸದಸ್ಯರು ಎರಡು ತಂಡಗಳಾಗಿ ಪಶ್ಷಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಖುದ್ದು ಭೇಟಿನೀಡಿ ಸ್ಥಳೀಯ ಜನ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಸಾಧಕ ಭಾದಕಗಳನ್ನು ಅರಿತ ನಂತರವೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.

Advertisement

0 comments:

Post a Comment

 
Top