ಇದುವರೆಗೂ ಯಾವುದೇ ಶೌಚಾಲಯ ಹೊಂದದೆ ಇರುವ ಸರಕಾರಿ ನೌಕರರು ಮಾ.೧೫ ರೊಳಗಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ.
ಆರೋಗ್ಯದ ದೃಷ್ಠಿಯಿಂದ ಮತ್ತು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಹಾಗೂ ಗ್ರಾಮೀಣ ರೋಗಗಳ ನಿವಾರಣೆ ದೃಷ್ಠಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಆಂದೋಲನ ರೂಪದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಬಹಳಷ್ಟು ಮಾಧ್ಯಮಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಹಾಗೂ ಸಾರ್ವಜನಿಕರಿಂದ ಸರ್ಕಾರಿ ಅಧಿಕಾರಿ ಮತ್ತು ನೌಕರರ ಮನೆಯಲ್ಲಿ ಎಷ್ಟು ಜನ ಶೌಚಾಲಯ ಹೊಂದಿದ್ದಾರೆ? ಎಂಬ ಕಠಿಣ ಪ್ರಶ್ನೆಯನ್ನು ಸರಕಾರ ಎದುರಿಸಬೇಕಾಗಿದೆ. ವಿದ್ಯಾವಂತರು ಹಾಗೂ ವ್ಯವಸ್ಥಿತವಾದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರೇ ನೈರ್ಮಲ್ಯತೆಯಲ್ಲಿ ಹಿಂದೆ ಬೀಳುವುದು ಹಾಗೂ ಅದಕ್ಕೆ ಉತ್ತರಿಸುವುದು ಕಷ್ಟದ ಕೆಲಸವಾಗಿದೆ.
ಆದ್ದರಿಂದ ಕೂಡಲೇ ಸರಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಶೌಚಾಲಯ ಹೊಂದದೇ ಇರುವ ನೌಕರರು ಕೂಡಲೆ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಹೊರಗುತ್ತಿಗೆ ನೌಕರರು, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರ ಸಮಗ್ರವಾದ ಮಾಹಿತಿಯನ್ನು ಕಲೆಹಾಕಿ, ಸೂಕ್ತ ಫಲಾನುಭವಿಗಳಾಗಿದ್ದಲ್ಲಿ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡು ಪ್ರೋತ್ಸಾಹಧನ ಪಡೆದುಕೊಳ್ಳಬೇಕು. ಫಲಾನುಭವಿಗಳಲ್ಲದೇ ಇರುವ ನೌಕರ ವರ್ಗದವರು ತಾವೇ ಸ್ವತಃ ಶೌಚಲಯ ಕಟ್ಟಿಸಿಕೊಳ್ಳುವುದು ಅವಶ್ಯಕವಾಗಿದೆ. ಶೌಚಾಲಯ ಹೊಂದಿರುವ ಹಾಗೂ ಹೊಂದದೇ ಇರುವ ಸಿಬ್ಬಂದಿಗಳ ವಿವರವನ್ನು ಒಂದು ವಾರದಲ್ಲಿ ಕಟ್ಟುನಿಟ್ಟಾಗಿ ಪೂರೈಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ.
ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲೆಗಳಲ್ಲಿ ಬಿಸಿಯೂಟ ತಯಾರಕರು, ಗ್ರಾಮ ಸಹಾಯಕರು ಹಾಗೂ ಗ್ರಾಮ ಪಂಚಾಯತಿಯ ಸರ್ವ ಸಿಬ್ಬಂದಿಗಳು ಶೌಚಾಲಯ ಹೊಂದುವುದು ಅತಿ ಮುಖ್ಯವಾಗಿದೆ. ಶೌಚಾಲಯ ಮತ್ತು ಶುಚಿತ್ವ ಹೊಂದುವುದರ ಮೂಲಕ ಅಂಗನವಾಡಿ ಮಕ್ಕಳ, ಶಾಲಾ ಮಕ್ಕಳ ಆರೋಗ್ಯ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ, ತಕ್ಷಣ ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಶೌಚಾಲಯ ಹೊಂದಿದ ಬಗ್ಗೆ ಮತ್ತು ಹೊಂದುತ್ತಿರುವ ಕುರಿತು ವಿವರವಾದ ವರದಿಯನ್ನು ಒಂದು ವಾರದೊಳಗಾಗಿ ನೀಡಬೇಕು ಹಾಗೂ ಶೌಚಾಲಯ ಹೊಂದದೇ ಇರುವಂತಹ ಎಲ್ಲಾ ಸಿಬ್ಬಂದಿಗಳು ಮಾ.೧೫ ರೊಳಗಾಗಿ ಶೌಚಾಲಯ ಹೊಂದಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
0 comments:
Post a Comment