ಎಸ್.ಎಫ್.ಐ ರಾಜ್ಯ ಮುಖಂಡರೊಂದಿಗೆ ಸಭೆಯಲ್ಲಿ ಭರವಸೆ.
ಕೊಪ್ಪಳ: ಮುಂಬರುವ ಬಜೆಟ್ ನಲ್ಲಿ ಸರ್ಕಾರಿ ಶಾಲಾ-ಕಾಲೇಜು-ಹಾಸ್ಟೆಲ್‌ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಿರುವ ಶೇ. ೧೭.೨ ದಿಂದ ಶೇ ೩೦ರಷ್ಟು ಹಣ ಮೀಸಲಿಡಬೇಕೆಂಬ ಎಸ್ ಎಫ್ ಐ ನ ಬೇಡಿಕೆಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಶಿಕ್ಷಣ ಕೇತ್ರಕ್ಕೆ ಹಣ ಹೆಚ್ಚಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಅವರು ಎಸ್‌ಎಫ್‌ಐನ ರಾಜ್ಯ ನಿಯೋಗದೊಂದಿಗೆ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆ ಕುರಿತು ವಿಧಾನಸೌಧದ ಸಮಿತಿಗಳ ಸಭಾಂಗಣದಲ್ಲಿ ಫೆ.೯ರಂದು ಸಂಜೆ ನಡೆದ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಡೊನೇಶನ್ ಹಾಗೂ ಟ್ಯೂಷನ್ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು, ಆರ್.ಟಿ.ಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಶಿಕ್ಷಣದ ಕೋಮುವಾದಿಕರಣ ತಡೆಗಟ್ಟಲು ಸಮಿತಿ ರಚಿಸುವುದಾಗಿ ಸಚಿವ ಕಿಮ್ಮನೆ ರತ್ನಾಕರ ಈ ಸಂದರ್ಭದಲ್ಲಿ ಹೇಳಿದರು
ಇದೇ ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಮಾತನಾಡಿ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಹೆಚ್ಚಿಸಿ, ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಹಾಸ್ಟೆಲ್‌ಗಳ ಸ್ಥಾಪನೆ, ಈಗಿರುವ ಹಾಸ್ಟೆಲ್ ಗಳಲ್ಲಿ ಗ್ರಂಥಾಲಯ ಆರಂಭಕ್ಕೆ ಅನುದಾನ, ಗುಣ ಮಟ್ಟದ ಸೌಲಭ್ಯಗಳನ್ನು ಒದಗಿಸಿ ಎಸ್.ಸಿ/ಎಸ್.ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮುಂದುವರಿಸುತ್ತೇವೆಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲ ಮಾತನಾಡಿ ೨೦೦೬ರ ವೃತ್ತಿಶಿಕ್ಷಣ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಮತ್ತು ಖಾಸಗಿ ವೃತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಕೇಂದ್ರಿಯ ಶಾಸನ ಜಾರಿಗಾಗಿನ ಎಸ್‌ಎಫ್‌ಐ ನ ಬೇಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರಲ್ಲದೇ ಅಗತ್ಯವಿರುವೆಡೆಗಳಲ್ಲಿ ಮೇಡಿಕಲ್ ಕಾಲೇಜು ಮಂಜೂರುಗೊಳಿಸಲಾಗುವುದು ಮತ್ತು ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿ, ಸೂಕ್ತ ರಕ್ಷಣೆಗಾಗಿ ಎಲ್ಲ ’ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ’ ರಚಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಷ, ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ, ಕೇಂದ್ರ ಸಮಿತಿ ಸದಸ್ಯೆ ರೇಣುಕಾ ಕಹಾರ, ಕೊಪ್ಪಳ ಜಿಲ್ಲಾಧ್ಯಕ್ಷ್ಷ ಅಮರೇಶ ಕಡಗದ, ಬೆಂಗಳೂರು ಜಿಲ್ಲಾಧ್ಯಕ್ಷ ಎಸ್.ಚಿಕ್ಕರಾಜು ಹಾಗೂ ರಾಜ್ಯ ಸಮಿತಿ ಸದಸ್ಯ ದುರಗೇಶ ಡಗ್ಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

0 comments:
Post a Comment