PLEASE LOGIN TO KANNADANET.COM FOR REGULAR NEWS-UPDATES



ಸಿದ್ದರಾಮಯ್ಯ ಸಹಕಾರಕ್ಕೆ ನಾಯ್ಡು ಮೆಚ್ಚುಗೆ
 ತುಂಗಭದ್ರಾ ಬಲ ದಂಡೆಯ ಮೇಲ್ಮಟ್ಟ ಹಾಗೂ ಕೆಳ ಮಟ್ಟದ ನಾಲೆಗಳ ಆಧುನೀಕರಣಕ್ಕೆ ಕರ್ನಾಟಕ ಸರಕಾರ ಹಾಗೂ ಆಂಧ್ರಪ್ರದೇಶದ ಸರಕಾರಗಳು ಸಹಮತ ವ್ಯಕ್ತಪಡಿಸಿವೆ. ಸೋಮವಾರ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರಕಾರಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆಯ ನಂತರ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು. ನಾಲೆಯ ಮೂಲ ಹರಿವಿನ ಸಾಮರ್ಥ್ಯವನ್ನು ಮಾರ್ಪಡಿಸದೆ ಹಾಗೂ ನ್ಯಾಯಾಧಿಕರಣವು ಇತ್ಯರ್ಥಪಡಿಸಿರುವ ವಿಷಯಗಳನ್ನು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಬಾಧಿಸದೆಯೇ ಈ ನಿಟ್ಟಿನಲ್ಲಿ ಮುನ್ನಡೆಯಲು ಎರಡೂ ರಾಜ್ಯಗಳು ತೀರ್ಮಾನಿಸಿವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದರು. ನಾಲೆಗಳ ಆಧುನೀಕರಣ ಕುರಿತಂತೆ ಆಂಧ್ರಪ್ರದೇಶ ಸರಕಾರದ ಪ್ರಸ್ತಾವವನ್ನು ಕರ್ನಾಟಕ ನೀರಾವರಿ ನಿಗಮ ಪರಿಗಣಿಸಿದ ನಂತರ, ಜಲಸಂಪನ್ಮೂಲ ಇಲಾಖೆಯ ತಾಂತ್ರಿಕ ಉಪ ಸಮಿತಿಯು ಸುದೀರ್ಘವಾಗಿ ಚರ್ಚಿಸಿ ಹಾಗೂ ಸಮಗ್ರವಾಗಿ ಪರಿಶೀಲಿಸಿ, ತುಂಗಭದ್ರಾ ಮಂಡಳಿಗೆ ವರದಿ ಸಲ್ಲಿಸಲಿದೆ. ಭಾರತ ಸರಕಾರದ ಜಲಸಂಪನ್ಮೂಲ ಮಂತ್ರಾಲಯದ ಪ್ರತಿನಿಧಿ ಅಧ್ಯಕ್ಷರಾಗಿರುವ ತುಂಗಭದ್ರಾ ಮಂಡಳಿಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಾಮ ನಿರ್ದೇಶಿತ ಪ್ರತಿನಿಧಿಗಳು ಮಾತ್ರವಲ್ಲದೆ, ತೆಲಂಗಾಣ ರಾಜ್ಯದ ಪ್ರತಿನಿಧಿಯೂ ಇರುತ್ತಾರೆ. ಮಂಡಳಿಯು ಹಸಿರು ನಿಶಾನೆ ತೋರಿದ ನಂತರ ಈ ನಿಟ್ಟಿನಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಎರಡೂ ಸರಕಾರಗಳ ಈ ಪ್ರಸ್ತಾವಕ್ಕೆ ತುಂಗಭದ್ರಾ ಮಂಡಳಿಯ ಸಮ್ಮತಿ ದೊರೆತ ನಂತರವೇ ಆರ್ಥಿಕ ಸಂಪನ್ಮೂಲದ ಆವಶ್ಯಕತೆ ಹಾಗೂ ಕ್ರೋಡೀಕರಣದ ಕುರಿತು ಯೋಚಿಸಲಾಗುವುದು. ನಾಲೆಯಲ್ಲಿ ಪ್ರತಿ ವರ್ಷವೂ ಶೇಕಡ 0.45 ರಷ್ಟು ಹೂಳು ಸೇರುತ್ತಿದೆ. ಹೂಳು ಸೇರುವುದರಿಂದ ಮೂಲ ಸಂಗ್ರಹಣಾ ಸಾಮರ್ಥ್ಯದ ಶೇಕಡ 25ರಷ್ಟು ಅಂದರೆ ಸುಮಾರು 32 ಟಿಎಂಸಿ ನೀರು ನಷ್ಟವಾಗುತ್ತಿದೆ ಎಂದರು. ಕರ್ನಾಟಕ ಮುಖ್ಯಮಂತ್ರಿಯೊಂದಿಗೆ ಧ್ವನಿಗೂಡಿಸಿದ ಚಂದ್ರಬಾಬು ನಾಯ್ಡು ಅವರು ಕರ್ನಾಟಕ ವ್ಯಾಪ್ತಿಯ 105 ಕಿ.ಮೀ. ವರೆಗೆ ಹಾಗೂ ನಂತರದ ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಹರಿವು ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಹಿತ ಕಾಯ್ದುಕೊಳ್ಳಲು ನಾಲೆಗಳ ಆಧುನೀಕರಣ ಅತ್ಯಾವಶ್ಯವಾಗಿದೆ ಎಂದರಲ್ಲದೆ, ಆತ್ಮೀಯವಾಗಿ ಸ್ವಾಗತಿಸಿ ಆಂಧ್ರಪ್ರದೇಶದ ಪ್ರಸ್ತಾಪಕ್ಕೆ ಸಹಮತ ಸೂಚಿಸಿದುದಕ್ಕೆ ಸಿದ್ದರಾಮಯ್ಯಗೆ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಪರವಾಗಿ ಜಲಸಂಪನ್ಮೂಲ ಸಚಿವ ಎಂ. ಬಿ.ಪಾಟೀಲ್, ಪಶುಸಂಗೋಪನೆ ಮತ್ತು ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ, ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಸಿಎಂರವರ ಅಪರ ಮುಖ್ಯ ಕಾರ್ಯದರ್ಶಿ ಡಿ.ಎನ್.ನರಸಿಂಹರಾಜು, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು. ಆಂಧ್ರಪ್ರದೇಶ ಸರಕಾರದ ಪರವಾಗಿ ಅಲ್ಲಿನ ನೀರಾವರಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಹಾಗೂ ಜಲಸಂಪನ್ಮೂಲ ನಿರ್ವಹಣಾ ಸಚಿವ ದೇನೇನಿ ಉಮಾಮಹೇಶ್ವರ ರಾವ್, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಬೆಲೆ ನಿಗಾ ಸಚಿವೆ ಪರಿಟಾಲ ಸುನೀತಮ್ಮಾ, ನೀರಾವರಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎ.ಎನ್.ದಾಸ್, ಕೃಷಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎ.ಸಿ. ಪುನೀತ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top