

ಒಂದು ಕಾಲದಲ್ಲಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್, ಸೋಷಲಿಸ್ಟ್ ಪಾರ್ಟಿ ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಪ್ರಭಾವಶಾಲಿಯಾಗಿದ್ದವು. ಎಪ್ಪತ್ತರ ದಶಕ ದಲ್ಲಂತೂ ವಿಧಾನಸಭಾ ಚುನಾವಣೆಯಲ್ಲಿ ಸೋಷಲಿಸ್ಟ್ ಗೋಪಾಲಗೌಡರಿಗೆ ಸಿಪಿಎಂನ ಅಪ್ಪಣ್ಣ ಹೆಗ್ಡೆ, ಪ್ರಬಲ ಪೈಪೋಟಿ ನೀಡಿ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಆದರೆ ಗೌಡರ ಸಾವಿನ ನಂತರ ಪರಿಸ್ಥಿತಿ ಬದಲಾಯಿತು. ಕಾಂಗ್ರೆಸ್ ವಿರೋಧಿ ರಂಗದ ಹೆಸರಿನಲ್ಲಿ ಸೋಷಲಿಸ್ಟರು ಆರೆಸ್ಸೆಸ್ ತೋಡಿದ ಖೆಡ್ಡಾಕ್ಕೆ ಬಿದ್ದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು. ಕಮ್ಯುನಿಸ್ಟರು ಭದ್ರಾವತಿ ಕಾರ್ಖಾನೆಗೆ ಸೀಮಿತ ಗೊಂಡರು.
ಸೋಷಲಿಸ್ಟ್ ಪಾರ್ಟಿ ಅಸ್ತಿತ್ವ ಕಳೆದು ಕೊಂಡ ನಂತರವೂ ಗೋಪಾಲಗೌಡರ ಶಿಷ್ಯರಾದ ಸಾರೆಕೊಪ್ಪ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಪರಮೇಶ್ವರಪ್ಪ, ಕಾಂಗ್ರೆಸ್ ಸೇರಿ ತಮ್ಮ ಪ್ರಭಾವ ಉಳಿಸಿಕೊಂಡಿದ್ದರು. ಆದರೆ ಕಾಂಗ್ರೆಸ್ ನೇತೃತ್ವದ ಬಗ್ಗೆ ಅಸಮಾಧಾನಗೊಂಡು ಯಾವಾಗ ಬಂಗಾರಪ್ಪ ಬಿಜೆಪಿ ಸೇರಿ ದರೋ ಆಗಲೇ ಇಡೀ ಮಲೆನಾಡು ಕೋಮು ವಿಷಸರ್ಪಗಳ ತಾಣವಾಯಿತು. ಬಂಗಾರಪ್ಪನವರನ್ನು ಬಿಜೆಪಿಗೆ ಸೇರಿಸಿ ಕೊಂಡು ಅವರ ಗೆಲುವಿನ ತಂತ್ರಗಳನ್ನೆಲ್ಲಾ ಕರಗತಮಾಡಿಕೊಂಡ ಚಡ್ಡಿಗಳು ನಂತರ ಬಂಗಾರಪ್ಪನವರನ್ನು ಮೂಲೆಗುಂಪು ಮಾಡಿ ದರು.
ಈ ನಡುವೆ ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ನಕ್ಸಲೀಯರ ಚಳವಳಿಯಿಂದ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳಿಗೆ ಒಂದಿಷ್ಟು ಪ್ರತಿರೋಧ ಬಂತು. ಆದರೆ ಈ ಚಳವಳಿ ವಿಫಲಗೊಂಡ ನಂತರ ಈ ಗೋಡ್ಸೆವಾದಿಗಳಿಗೆ ಪ್ರತಿರೋಧವೇ ಇಲ್ಲದಂತಾಯಿತು. ಆದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ, ಯಡಿಯೂರಪ್ಪ, ಆರಗ ಜ್ಞಾನೇಂದ್ರರಂಥವರ ಭಕ್ಷಣಾ ಸಾಮರ್ಥ್ಯವನ್ನು ಕಂಡ ಜನ ಕಾಂಗ್ರೆಸ್ಸಿನ ಕಾಗೋಡು, ಕಿಮ್ಮನೆಯವರನ್ನು ಗೆಲ್ಲಿಸಿದರು. ಈಗ ಸೋಲಿನ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಕೋಮುವಾದಿ ಶಕ್ತಿಗಳು ಈಗ ನಂದಿತಾ ಸಾವಿನ ಪ್ರಕರಣವನ್ನು ಬಳಸಿ ಕೊಂಡು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿ ಕಟ್ಟಿ ಕುಸಿದು ಹೋದ ತಮ್ಮ ಕೋಟೆ ಗೋಡೆಯನ್ನು ಪುನರ್ ನಿರ್ಮಿಸಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ನೊಳಗಿನ ಒಡಕನ್ನು ಬಳಸಿ ಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಮಾತೆಯರೆಂದು ತುಟಿ ಸೇವೆ ಸಲ್ಲಿಸುವ ಇವರಿಗೆ ಹೆಣ್ಣು ಮಕ್ಕಳ ಮಾನ ಮರ್ಯಾದೆಯ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಯೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದ. ಶಾಸಕನೊಬ್ಬ ಪತ್ನಿಯನ್ನು ಕೊಂದು ದಿಲ್ಲಿಯ ಕಾಂಗ್ರೆಸ್ ನಾಯಕರೊಬ್ಬನ ನೆರವಿನಿಂದ ಪಾರಾಗಿ ಬಂದ, ಆಕೆಯ ಸಾವಿನ ಮೂಕಯಾತನೆ ಮಣ್ಣು ಪಾಲಾಯಿತು.
ತೀರ ಇತ್ತೀಚೆಗೆ ಇದೇ ಮಲೆನಾಡಿನ ಹವ್ಯಕ ಬ್ರಾಹ್ಮಣ ಮಠಾಧೀಶನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾನೆ. ಈ ನಂದಿತಾ ಪ್ರಕರಣದ ಹುಯಿಲೆಬ್ಬಿಸಿದ ನಕಲಿ ರಾಷ್ಟ್ರ ಭಕ್ತರೇ ‘ಅತ್ಯಾಚಾರಿ’ ಸ್ವಾಮಿಯನ್ನು ರಕ್ಷಿಸಲು ಹರಸಾಹಸ ಪಟ್ಟರು ಮತ್ತು ಪಡುತ್ತಿದ್ದಾರೆ. ಚಡ್ಡಿ ಮಾಧ್ಯಮ ಜೀವಿಯೊಬ್ಬ ಈ ರಕ್ಷಣಾ ಕಾರ್ಯ ಪಡೆಯ ಸಾರಥ್ಯವಹಿಸಿದ್ದಾನೆ. ಈ ಸ್ವಾಮಿಯಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆ ತನ್ನ ಬಳಿ ಅಹವಾಲು ಹೇಳಿ ಕೊಳ್ಳಲು ಬಂದರೆ ಅದನ್ನು ಸ್ವಾಮಿಗೆ ತಿಳಿಸಿ ಆಕೆ ಮತ್ತು ಆಕೆಯ ಪತಿಯನ್ನು ಬ್ಲಾಕ್ ಮೇಲ್ ಪ್ರಕರಣದಲ್ಲಿ ಜೈಲಿಗಟ್ಟಲಾಯಿತು.
ತೀರ್ಥಹಳ್ಳಿ ಸೇರಿ ಮಲೆನಾಡಿಗೆ ಬೆಂಕಿ ಹಚ್ಚಲು ಹೊರಟಿರುವ ಗೋಡ್ಸೆ ಸಂತಾನವನ್ನು ಬೈದು ಉಪಯೋಗವಿಲ್ಲ. ನಾವು ಪ್ರಗತಿ ಪರರೆನ್ನಿಸಿಕೊಳ್ಳುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಈ ನೆಲದ ಸಂಸ್ಕೃತಿಗೆ ಪರಕೀಯರಾದ ಕೋಮುವಾದಿಗಳು ಈ ಪರಿ ಬಾಲಬಿಚ್ಚಲು ಕಾರಣವೇನು? ನಾವೇಕೆ ಪ್ರತಿರೋಧ ಒಡ್ಡಲು ಸಾಧ್ಯವಾಗುತ್ತಿಲ್ಲ? ಇವರು ಹಚ್ಚಿದ ಬೆಂಕಿ ನಂದಿಸುವುದಷ್ಟೇ ನಮ್ಮ ನಿತ್ಯದ ಕೆಲಸವಾಗಬೇಕೇ? ಈ ಎಲ್ಲ ಅಂಶಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಾಗಿದೆ.
ಈಗ ತೀರ್ಥಹಳ್ಳಿ ಮಾತ್ರವಲ್ಲ ಇಡೀ ದೇಶಕ್ಕೆ ಫ್ಯಾಸಿಸ್ಟ್ ವಿರೋಧಿ ರಂಗವೊಂದು ಬೇಕಾಗಿದೆ. ಕಾಂಗ್ರೆಸ್-ಬಿಜೆಪಿ ಸಮಾನ ಶತ್ರುಗಳೆಂಬ ಹಳೆ ಮಂತ್ರಪಠಣವನ್ನು ಕೈಬಿಟ್ಟು ಜನವಿಭಜಕ ಕೋಮುವಾದಿ ಶಕ್ತಿಗಳ ಹುನ್ನಾರವನ್ನು ವಿಫಲ ಗೊಳಿಸಲು ಶ್ರಮಿಸಬೇಕಾಗಿದೆ. ಸಂಘ ಪರಿವಾರದ ಮನುವಾದಿ ಫ್ಯಾಸಿಸಂ ನಮ್ಮ ಪ್ರಧಾನ ಶತ್ರುವೆಂದು ಪರಿಗಣಿಸಬೇಕಾಗಿದೆ.
0 comments:
Post a Comment