PLEASE LOGIN TO KANNADANET.COM FOR REGULAR NEWS-UPDATES


ಮಡೆಸ್ನಾನವೆಂಬ ವೌಢ್ಯವು ವಿಜ್ಞಾನ ಯುಗದಲ್ಲಿ ಅಜ್ಞಾನದ ಪ್ರದರ್ಶನ ಎಂದು ಶಿವಮೊಗ್ಗದ ಪ್ರಭುದೇವ ಜ್ಞಾನ ಕೇಂದ್ರದ ನವಲಿಂಗ ಮಹಾಶರಣ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಮಡೆಸ್ನಾನ ಅಳಿಯಲಿ ಮಾನವತೆ ಉಳಿಯಲಿ ವೈಚಾರಿಕತೆ ಬೆಳೆಯಲಿ’ ಎಂಬ ಜನಜಾಗೃತಿ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಇಂದು ಚಾಲನೆ ನೀಡಿ ಬಳಿಕ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇವರ ಭಕ್ತಿಗೆ ಹಲವಾರು ಮಾರ್ಗಗಳಿವೆ. ಆತ್ಮಪೂರ್ವಕವಾಗಿ ಸಮರ್ಪಣಾ ಭಾವದಿಂದ ನಡೆಸುವ ಭಕ್ತಿ, ಆಚರಣೆಯೇ ದೇವರನ್ನು ಒಲಿಸಬಲ್ಲುದೇ ಹೊರತು ವೌಢ್ಯವಲ್ಲ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂರಂತಹ ಮಹಿಳೆಯರು ಚಂದ್ರನ ಮೇಲೆ ಪಾದವೂರಿ ಬಂದಿದ್ದಾರೆ. ಇಂತಹ ವಿಜ್ಞಾನ ಯುಗದಲ್ಲಿ ನಾವು ಬದುಕುತ್ತಿದ್ದರೂ ಮತ್ತೊಂದೆಡೆ ದೇವರು, ಸಂಪ್ರದಾಯ, ಭಕ್ತಿಯ ಹೆಸರಿನಲ್ಲಿ ಮಡೆಸ್ನಾನದಂತಹ ಅನಾಗರಿಕ ಆಚರಣೆ ನಡೆಸುವುದು ನಮ್ಮವರನ್ನು ನಾವೇ ಶೋಷಣೆಗೆ ಒಳಪಡಿಸಿದಂತೆ. ಭಕ್ತಿಯನ್ನು ಪ್ರತಿಪಾದಿಸುವ ದೇವರ ಸ್ಥಳದಲ್ಲಿ ಶೋಷಣೆ ಯಾಕೆ? ಎಂದು ಪ್ರಶ್ನಿಸಿದ ಸ್ವಾಮೀಜಿ, ಮಾನವೀಯತೆ ಮರೆತು ಮಾನವನ ಮಾನವನ್ನು ನಿಕೃಷ್ಟಗೊಳಿಸುವುದು ವಿಜ್ಞಾನಕ್ಕೊಂದು ಕಪ್ಪು ಚುಕ್ಕೆ ಎಂದು ಅವರು ಅಭಿಪ್ರಾಯಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಗೌಳಿ ಗುರುಪೀಠದ ಪೀಠಾಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಅಧ್ಯಾತ್ಮದ ತವರೂರಾದ ಭಾರತದಲ್ಲಿ ಕೆಲ ವೊಂದು ಅಜ್ಞಾನ, ಅಂಧಶ್ರದ್ಧೆಗಳೂ ನುಸುಳಿಕೊಂಡು ಬಂದಿವೆ. ಇದರಿಂದ ಸಾಮಾನ್ಯ ಜನರು, ದೀನದಲಿ ತರು, ಅನಕ್ಷರಸ್ಥರು ನೋವಿಗೆ ಒಳಗಾಗುವ, ಶೋಷಣೆಗೊಳ ಗಾಗುವ ಪರಿಸ್ಥಿತಿ ತಲೆದೋರಿದೆ ಎಂದರು. ಇಂತಹ ವೌಢ್ಯಗಳ ಬಗ್ಗೆ ಧರ್ಮಗುರುಗಳು, ಸಮಾಜ ಸೇವಕರು, ಪ್ರಗತಿಪರ ಚಿಂತಕರು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹಿಂದೂ ಧರ್ಮದಲ್ಲಿನ ಹಲವಾರು ರೀತಿಯ ಗೊಂದಲಗಳಿಂದಾಗಿ ಇಂದು ಹಿಂದೂಗಳ ಒಗ್ಗಟ್ಟಿಗೆ ಕುತ್ತು ಬಂದಿದೆ. ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿ ಇಂತಹ ಅನಿಷ್ಟ ಪದ್ಧತಿಗಳನ್ನು ನಿಲ್ಲಿಸಬೇಕು ಎಂದು ಹೇಳಿದ ಸ್ವಾಮೀಜಿ, ಮಡೆಸ್ನಾನ, ಪಂಕ್ತಿಬೇಧ ನಿಲ್ಲಿಸಬೇಕು. ವೌಢ್ಯ ಪ್ರತಿಬಂಧಕ ಕಾಯಿದೆಯನ್ನು ಸರಕಾರ ಜಾರಿಗೊಳಿಸಬೇಕೆಂಬುದು ಸರಕಾರದ ಮುಂದೆ ನಮ್ಮ ಪ್ರಮುಖ ಬೇಡಿಕೆಗಳು ಎಂದು ಆಗ್ರಹಿಸಿದರು. ಮಾರುಕಟ್ಟೆಯಲ್ಲಿ ವಸ್ತುವೊಂದನ್ನು ಖರೀದಿಸುವ ಸಂದರ್ಭ ಅದರ ಪೂರ್ವಾಪರ ವಿಚಾರಿಸುವ ನಾವು ನಮ್ಮ ನಂಬಿಕೆ, ಜೀವನದ ಬಗ್ಗೆ ವಿಚಾರ ಮಾಡದೆ ಮುಂದುವರಿಯುವುದು ಅದೆಷ್ಟು ಸರಿ ಎಂದು ಸಿರಗುಪ್ಪದ ಗುರು ಬಸವಮಠದ ಬಸವಭೂಷಣ ಸ್ವಾಮೀಜಿ ಪ್ರಶ್ನಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ವಿದ್ಯಾವಂತರ ನಾಡಾದ ದ.ಕ. ಜಿಲ್ಲೆಯಲ್ಲಿ ಮಡೆಸ್ನಾನದಂತಹ ಅನಾಗರಿಕ, ಅಮಾನವೀಯ ಪದ್ಧತಿ ನಡೆಯುವ ಮೂಲಕ ವೌಢ್ಯದ ನಾಡಾಗಿ ಪರಿವರ್ತನೆಯಾಗುವಂತೆ ಭಾಸವಾಗುತ್ತಿದೆ ಎಂದರು. ಮಾನವ ಘನತೆಯನ್ನು ಅವಮಾನನಿಸುವ ಈ ದೇವರು, ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಕೃತ್ಯ ವ್ಯಭಿಚಾರಕ್ಕಿಂತ ಘೋರವಾದದ್ದು ಎಂದು ಹೇಳಿದ ಅವರು, ಪುರೋಹಿತಶಾಹಿ ವರ್ಗದ ಹುನ್ನಾರದಿಂದಾಗಿ ಜನ ವೌಢ್ಯದಲ್ಲಿ ಬದುಕು ಕಳೆಯುವಂತಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಅಹಿಂದ ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನ್ಯಾಯವಾದಿ ಬಿ.ಎಂ. ಭಟ್ ಮೊದಲಾದವರು ಮಾತನಾಡಿದರು. ಕರ್ನಾಟಕ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್, ದಲಿತ ಹಕ್ಕುಗಳ ಹೋರಾಟ ಸಮಿತಿ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯ ಸಂಚಾಲಕ ಶಶಿಧರ್ ಸಂಗಾಪುರ, ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಆದಿವಾಸಿ ರಕ್ಷಣಾ ಪರಿಷತ್‌ನ ವಿಠಲ ಮಲೆಕುಡಿಯ, ವಸಂತ ನಡ, ಜಯಾನಂದ ದೇವಾಡಿಗ, ಲೋಲಾಕ್ಷ, ಲಿಂಗಯ್ಯ ಕಾವೂರು, ಜೀವನ್ ರಾಜ್ ಕುತ್ತಾರ್, ಯೋಗೀಶ್ ಜಪ್ಪಿನಮೊಗರು, ಈಶ್ವರಿ ಮೊದಲಾದವರು ಭಾಗವಹಿಸಿದ್ದರು.
ಸರಕಾರ ಬದ್ಧತೆ ಪ್ರದರ್ಶಿಸಲಿ: ಶಿವರಾಮು
 ಸಮಾಜದಲ್ಲಿದ್ದ ಹಲವಾರು ರೀತಿಯ ವೌಢ್ಯ ಪದ್ಧತಿಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಮಡೆಸ್ನಾನವನ್ನು ನಿಷೇಧಿಸುವಲ್ಲಿ ಸರಕಾರ ತನ್ನ ಬದ್ಧತೆ ಪ್ರದರ್ಶಿಸಬೇಕಿದೆ. ಸಾಮಾಜಿಕ ನ್ಯಾಯದ ಹರಿಕಾರ, ಪ್ರಗತಿಪರರೆಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರೋಧ ಪಕ್ಷದಲ್ಲಿದ್ದ ಸಂದರ್ಭ ಮಡೆಸ್ನಾನದ ವಿರುದ್ಧ ಹೋರಾಟ ನಡೆಸಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಎರಡು ವರ್ಷಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಸ್ಪಷ್ಟ ನಿಲುವನ್ನು ತೆಗೆದುಕೊಂಡು ವೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಬೇಕು. ಮಡೆಸ್ನಾನಕ್ಕೆ ಮೂಲ ಕಾರಣವಾದ ಪಂಕ್ತಿಭೇದವನ್ನು ನಿಷೇಧಿಸುವ ಅಧಿಕಾರ ಅವರಿಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಒತ್ತಾಯಿಸಿದರು.

Advertisement

0 comments:

Post a Comment

 
Top