ಪ್ರತಿಯೊಂದು ಮಕ್ಕಳಲ್ಲೂ ವಿಶೇಷ ಪ್ರತಿಭೆಗಳು ಇರುತ್ತವೆ. ಶಿಕ್ಷಕರು ಸೂಕ್ತ ಸಮಯದಲ್ಲಿ ಪ್ರತಿಭೆಯನ್ನು ಗುರುತಿಸಿ, ಅಂತಹ ಮಕ್ಕಳಿಗೆ ಸಕಾಲದಲ್ಲಿ ತರಬೇತಿ ನೀಡಿದಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ. ಇಂತಹ ಪ್ರತಿಭೆಗಳನ್ನು ಪರಿಚಯಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಗುಣವನ್ನು ಬೆಳೆಸಬೇಕು. ಸೋಲು, ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿದೆ. ಬರುವ ಮಾರ್ಚ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ೫ ರಿಂದ ೬ನೇ ಸ್ಥಾನ ಬರುವಂತಾಗಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ತಾವು ಕೂಡ ೧೦ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅನುಭವ ಹಂಚಿಕೊಂಡರು. ಜಿ.ಪಂ. ವತಿಯಿಂದ ಶೌಚಾಲಯ ಹಾಗೂ ಸ್ವಚ್ಛತೆ ಕುರಿತಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಮನವೊಲಿಸಿ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ೦೧ ಲಕ್ಷ ಶೌಚಾಲಯ ಗುರಿಯನ್ನು ಹೊಂದಲಾಗಿದ್ದು, ಈಗಾಗಲೆ ೭೫೦೦೧ ನೇ ಶೌಚಾಲಯದ ಉದ್ಘಾಟನೆಯಾಗಿದೆ. ಬರುವ ದಿನಗಳಲ್ಲಿ ೧ ಲಕ್ಷದ ಒಂದನೇ ಶೌಚಾಲಯವನ್ನು ಮುಖ್ಯಮಂತ್ರಿಗಳಿಂದಲೇ ಉದ್ಘಾಟನೆ ಮಾಡಿಸುವ ಆಶಾಭಾವನೆ ಹೊಂದಲಾಗಿದೆ. ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಮಾದರಿ ಮಾಡಲು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಹಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಹೆಚ್ಚಿನ ರೀತಿಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ಅವರು ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೂರಸಾಬ್ ಮಹ್ಮದಸಾಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ದಾನಪ್ಪ ಜಿ.ಕವಲೂರು, ಶ್ರೀನಿವಾಸ ಹ್ಯಾಟಿ, ಗ್ರಾ.ಪಂ. ಸದಸ್ಯರಾದ ಚಂದ್ರಪ್ಪ ಉಂಕಿ, ಸರಸ್ವತಿ ಇಟ್ಟಂಗಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಬಿ. ಕುರಿ, ಕಾಲೇಜಿನ ಪ್ರಾಚಾರ್ಯ ಮಂಡಸೊಪ್ಪಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಪ್ಪ ಬಿ, ಉಪಾಧ್ಯಕ್ಷೆ ಲಲಿತಾ ಆರ್. ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರಂಭದಲ್ಲಿ ಶಾರದಾ ಹಾಗೂ ತ್ರಿವೇಣಿ ಸಂಗಡಿಗರು ಪ್ರಾರ್ಥಿಸಿದರು, ಗುರುಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಎಂ.ಎಂ. ಮುಜುಗುಂಡ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
0 comments:
Post a Comment