ಕೊಪ್ಪಳ, ನ. ೨೭- ದೇಶದ ಮಕ್ಕಳಲ್ಲಿ ಅಪೌಷ್ಠಿಕತೆ ತೊಲಗಿಸಲು ಮತ್ತು ಶಾಲೆಯಲ್ಲಿ ಹಾಜರಾತಿ ಹೆಚ್ಚಿಸಲು ಬಿಸಿಯೂಟ ಯೋಜನೆ ಸರ್ಕಾರ ಜಾರಿಗೆ ತಂದಿದೆ. ಅದರೆ ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಕೊಳ್ಳೆ ಹೊಡೆಯಲು ಅನುಕೂಲ ಮಾಡಿಕೊಂಡಿದ್ದಾರೆ. ಲೂಟಿ ತಡೆಗೆ ಪ್ರತಿಯೊಬ್ಬ ಪಾಲಕರು ಮುಂದೆ ಬಂದಾಗ ಮಾತ್ರ ಗುಣ ಮಟ್ಟದ ಬಿಸಿಯೂಟ ಮಕ್ಕಳಿಗೆ ಸಿಗಲು ಸಾಧ್ಯ ಎಂದು ಜಿಲ್ಲಾ ಜನಪರ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಮೈಲಪ್ಪ ಬಿಸರಳ್ಳಿ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ಬಾಂಧವಿ ಶಾಲೆಯಲ್ಲಿ ವಿಸ್ತಾರ ಸಂಸ್ಥೆಯ ಸಿಆರ್‌ಇಎ ನೆಟ್‌ವರ್ಕ್ ಮೂಲಕ ಸರ್ಕಾರಿ ಶಾಲೆಗಳಲ್ಲಿನ ಅಕ್ಷರ ದಾಸೋಹ ಯೋಜನೆಯ ಒಂದು ಅಧ್ಯಯನ ವರದಿಯಲ್ಲಿ ’ನಮ್ಮ ಮಕ್ಕಳು ಮತ್ತು ಬಿಸಿಯೂಟ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ನಂತರ ವಿಸ್ತಾರ ಸಂಸ್ಥೆಯ ಸಂಯೋಜಕ ನಾಜರ್ ಪಿ.ಎಸ್. ಮಾತನಾಡಿ, ಪ್ರತಿ ವರ್ಷ ಐದು ವರ್ಷದೊಳಗಿನ ಮಕ್ಕಳು ಹಸಿವು, ಅಪೌಷ್ಠಿಕತೆ, ಅನಾರೋಗ್ಯದಿಂದ ಭಾರತದಲ್ಲಿ ಮಾತ್ರ ಸಾಯಿಯುತ್ತಿದ್ದಾರೆ. ಗ್ರಾಮಂತರ ಭಾಗದಲ್ಲಿ ಮಹಿಳೆಯರಲ್ಲಿ ಶೇ. ೬೦% ರಷ್ಟು ಜನರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ನೋಡಿದಾಗ ನಮಗೆ ಪೌಷ್ಠಿಕ ಆಹಾರದ ಕೊರತೆ ಇದೆ ಎನ್ನುವದು ಕಂಡು ಬರುತ್ತದೆ. ದೇಶದಲ್ಲಿ ದಿನಕ್ಕೆ ಕನಿಷ್ಟ ೬ ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದು. ವಿಶ್ವ ಸಂಸ್ಥೆ ವರದಿ ಪ್ರಕಾರ ಭಾರತದಲ್ಲಿ ಅಗತ್ಯಕ್ಕೂ ಮೀರಿ ಆಹಾರ ಉತ್ಪನ್ನ ಇದೆ ಎನ್ನುವ ಮಾಹಿತಿ ಸರ್ಕಾರದ ಆಹಾರ ಉತ್ಪನ್ನ ಮತ್ತು ಪೂರೈಕೆ ವ್ಯವಸ್ಥೆ ಸರಿ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಈ ಮಾಹಿತಿ ಹುಡುಕಾಟದ ಮೂಲವೇ ’ಮಕ್ಕಳು ಮತ್ತು ಬಿಸಿಯೂಟ’ ಪುಸ್ತಕವಾಗಿದೆ ಎಂದು ಹೇಳಿದರು.
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್ ಮಾತನಾಡಿ, ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಊಟಕ್ಕಿಂತ ಜೈಲಿನಲ್ಲಿರುವ ಖೈದಿಗಳ ಊಟಕ್ಕೆ ಹೆಚ್ಚು ಹಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅಷ್ಟೇ ಅಲ್ಲ ಖಾಸಗಿ ಶಾಲೆಗಳಲ್ಲಿಯೂ ಓದುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯಾದ ಸೋನಿ ಮಾತನಾಡಿ ಶಾಲೆಗಳ ಊಟದಲ್ಲಿ ತರಕಾರಿಯೇ ಇರುವುದಿಲ್ಲ, ಸಾರಿನಲ್ಲಿ ನೀರಿನ ಅಂಶವೇ ಹೆಚ್ಚಾಗಿರುತ್ತದೆ. ಹಾಗಾಗಿ ಊಟ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಇನ್ನೊಬ್ಬ ವಿದ್ಯಾರ್ಥಿ ಭೀಮಕ್ಕ ಮಾತನಾಡಿ ಬಿಸಿಯೂಟ ಯೋಜನೆ ೧೯೯೧ರಲ್ಲಿ ಸರಿಯಾದ ಉದ್ದೇಶದಿಂದ ಜಾರಿಯಾಗಿದ್ದು, ಅನುಷ್ಠಾನ ಸರಿಯಲ್ಲವೆಂದು ಹೇಳಿದರು.
ಕಾರ್ಯಕ್ರಮ ಪ್ರಾರಂಭದಲ್ಲಿ ಮಕ್ಕಳಿಂದ ಕ್ರಾಂತಿ ಗೀತೆ ನಡೆಯಿತು. ಶೈಲಜಾ ಉಪಸ್ಥಿತರಿದ್ದರು. ಸ್ವಾಗತ ಸುಧಾಕರ, ನಿರೂಪಣೆ ಸುಂಕಪ್ಪ ಮೀಸಿ, ವಂದನಾರ್ಪಣೆಯನ್ನು ಸುಭಾಸಚಂದ್ರ ಬಂಡಿ ಮಾಡಿದರು.
0 comments:
Post a Comment