ಕೊಪ್ಪಳ ನ. ೨೮ : ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ದಿಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಗಂಗಾವತಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ಅರಿಶಿಣಕೇರಿ - ಕೊಡದಾಳ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಮಗ್ರ ಗ್ರಾಮೀಣ ಅಭಿವೃದ್ದಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ರಸ್ತೆ ಕಾಮಗಾರಿ ಜೊತೆಗೆ ಕುಡಿಯುವ ನೀರು, ಆರೋಗ್ಯ ಸೌಲಭ್ಯ, ಶಿಕ್ಷಣ ಕ್ಷೇತ್ರಕ್ಕೂ ಆದತೆ ಮೇರೆಗೆ ಅನುದಾನ ನೀಡಲಾಗುವುದು. ಅರಿಶಿಣಕೇರಿ-ಕೊಡದಾಳ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ೩೩ ಲಕ್ಷ ರೂ. ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮೆತಗಲ್‌ನ ಬಸವರಾಜೇಶ್ವರಿ ಸ್ವಸಹಾಯ ಸಂಘದ ಕಟ್ಟಡಕ್ಕೆ ನಿವೇಶನ ಮಂಜೂರಿ ಮಾಡಿಸಿ ಅನುದಾನ ಒದಗಿಸಲಾಗುವುದು ಎಂದು ಶಾಸಕ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.
ನಂತರ ನಾಗೇಶನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿ ೪ ಕೋಟಿ ೨೦ ಲಕ್ಷ ವೆಚ್ಚದ ನಾಗೇಶನಹಳ್ಳಿ-ಎಡಹಳ್ಳಿಯ ೮ ಕಿ.ಮೀ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮೆತಗಲ್ ಗ್ರಾ.ಪಂ ಅಧ್ಯಕ್ಷ ಜೀವಣ್ಣ, ಬೂದಗುಂಪ ಗ್ರಾ.ಪಂ ಅಧ್ಯಕ್ಷೆ ಪಾರಮ್ಮ, ಮುಖಂಡರಾದ ಎಸ್.ಬಿ.ಖಾದ್ರಿ, ಖಾಸಿಂಸಾಬ ಗದ್ವಾಲ್, ಸಂಗಮೇಶ ಬಾದವಾಡಗಿ, ಬಸವಕುಮಾರ ಪಟ್ಟಣಶೆಟ್ಟರ, ಕೊಟ್ರೇಶ, ಪಕೀರಪ್ಪ ಎಮ್ಮಿ, ನಜೀರ ಸಾಬ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪೂಬಾಲನ್, ಜೆ.ಇ ಖಾಜಾಜಿ ಉಪಸ್ಥಿತರಿದ್ದರು.
0 comments:
Post a Comment