. ೧೪ ರಂದು ಮುಖ್ಯಮಂತ್ರಿ ಕೊಪ್ಪಳ ಜಿಲ್ಲೆಗೆ : ೧೩ ಯೋಜನೆಗಳಿಗೆ ಚಾಲನೆ
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅ. ೧೪ ರಂದು ಕೊಪ್ಪಳ ಜಿಲ್ಲೆಯ ಕನಕಗಿರಿಗೆ ಭೇಟಿ ನೀಡಲಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪೂರಕವೆನಿಸಿರುವ ಹಲವಾರು ಯೋಜನೆಗಳಿಗೆ ಅಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಅ. ೧೪ ರಂದು ಮಧ್ಯಾಹ್ನ ೧೨ ಗಂಟೆಗೆ ಕನಕಗಿರಿಯ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳು ಅಂದು ಚಾಲನೆ ನೀಡಲಿರುವ ಯೋಜನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ. ರೈಸ್ ಟೆಕ್ನಾಲಜಿ ಪಾರ್ಕ್ : ಭತ್ತದ ನಾಡು ಎನಿಸಿರುವ ಕೊಪ್ಪಳ ಜಿಲ್ಲೆಯಲ್ಲಿ ವಿಶೇಷವಾಗಿ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ೩೭. ೧೯ ಕೋಟಿ ರೂ. ವೆಚ್ಚದಡಿ ೪೨೪. ೩೭ ಎಕರೆ ವಿಸ್ತೀರ್ಣದಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ ಪೂರಕವಾಗಿ ಈಗಾಗಲೆ ಕಾರಟಗಿಯಲ್ಲಿ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಭತ್ತದ ಎಲ್ಲಾ ಸಮಸ್ಯೆಗಳಿಗೆ ಏಕಗವಾಕ್ಷಿ ಮೂಲಕ ಪರಿಹಾರ, ಉಪ ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಜೋಡಣೆಗೊಳಿಸುವುದು, ಭತ್ತದ ಹುಟ್ಟುವಳಿಯನ್ನು ಭವಿಷ್ಯತ್ತಿನ ಮಾರುಕಟ್ಟೆಗೆ ಜೋಡಣೆಗೊಳಿಸುವುದು ಅಲ್ಲದೆ ಸಾರ್ವಜನಿಕ, ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಭತ್ತ ಮತ್ತು ಅಕ್ಕಿ ಉತ್ಪನ್ನಗಳ ಸಂಸ್ಕರಣ ಸಾಮರ್ಥ್ಯವನ್ನು ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವುದು, ತುಂಗಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಉತ್ಪಾದಿಸಲಾಗುವ ಭತ್ತವನ್ನು ಇಲ್ಲಿಯೇ ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಇತರೆಡೆ ಸಾಗಾಟ ಮಾಡುವುದು, ಭತ್ತದ ಉಪ ಉತ್ಪನ್ನಗಳಿಂದ ವಿದ್ಯುತ್, ಆಲ್ಕೋಹಾಲ್ ಮುಂತಾದ ಅನುಷಂಘಿಕ ಉದ್ಯಮಗಳ ಉತ್ತೇಜನ ನೀಡುವುದು ಸಹ ಇದರ ಉದ್ದೇಶವಾಗಿದೆ. ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲಾಗುತ್ತಿದ್ದು, ಇದರಿಂದ ಭತ್ತದ ಕೊಯ್ಲು ಪೂರ್ವ ಮತ್ತು ಕೊಯ್ಲು ನಂತರದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಂತಾಗುತ್ತದೆ. ಕೃಷಿಕರಿಗೆ ಅಕ್ಕಿಯನ್ನು ಸಂಸ್ಕ್ರಿಸಿ ಮೌಲ್ಯವರ್ಧಿತ ಉತ್ಪಾದನೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಲಿದೆ. ದೇಶದಲ್ಲಿ ಅಕ್ಕಿಯ ಸಮಗ್ರ ಸೌಲಭ್ಯದ ಒಂದು ಮಾದರಿ ಮಾರುಕಟ್ಟೆ ಸ್ಥಾಪಿಸಿದಂತಾಗುತ್ತದೆ ಅಲ್ಲದೆ, ರೈತರ, ವರ್ತಕರ, ಸಂಸ್ಕರಣದಾರರ, ರಫ್ತುದಾರರ, ಗ್ರಾಹಕರ ಹಿತರಕ್ಷಣೆಯ ಜೊತೆಗೆ ಅಕ್ಕಿ ವಿಶೇಷ ವಲಯವನ್ನು ಸ್ಥಾಪಿಸಿದಂತಾಗಲಿದೆ. ಇದೀಗ ಈ ಯೋಜನೆಗೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ. ತುಂಗಭದ್ರೆಯಿಂದ ೮ ಕೆರೆಗಳ ಭರ್ತಿ : ಜಿಲ್ಲೆಯ ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲುಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು, ದೇವಲಾಪುರ ಸೇರಿದಂತೆ ಒಟ್ಟು ೦೮ ಕೆರೆಗಳನ್ನು ತುಂಗಭದ್ರಾ ನದಿಯಿಂದ ೦. ೨೮೧ ಟಿ.ಎಂ.ಸಿ. ನೀರು ಬಳಸಿ ಭರ್ತಿ ಮಾಡುವ ೧೪೧ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ದೇವಲಾಪುರ ಕೆರೆ, ಇಂಗಳದಾಳ ಕೆರೆ, ರಾಂಪುರ ಕೆರೆ, ಲಕ್ಷ್ಮೀದೇವಿ ಕೆರೆ, ಲಾಯದುಣಸಿ ಕೆರೆ, ಕಾಟಾಪುರ ಕೆರೆ, ವಿಠಲಾಪುರ ಕೆರೆ ಹಾಗೂ ಬಸರಿಹಾಳ ಕೆರೆಗಳು ಇದರಿಂದ ಭರ್ತಿಯಾಗಲಿವೆ. ಯೋಜನೆಯಿಂದ ಗಂಗಾವತಿ ತಾಲೂಕಿನ ೧೯, ಯಲಬುರ್ಗಾ-೨೯, ಮತ್ತು ಕುಷ್ಟಗಿ ತಾಲೂಕಿನ ೨೬ ಗ್ರಾಮಗಳು ಸೇರಿದಂತೆ ಒಟ್ಟು ೭೪ ಗ್ರಾಮಗಳ ೧. ೭೮ ಲಕ್ಷ ಜನ ಶುದ್ಧ ಕುಡಿಯುವ ನೀರು ಪಡೆಯಲಿದ್ದಾರೆ. ಯೋಜನೆ ಕಾಮಗಾರಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೆ ೧೮ ತಿಂಗಳ ಕಾಲಾವಕಾಶ ನೀಡಲಾಗಿದೆ. ಯೋಜನೆಗಳು ಹತ್ತು ಹಲವು : ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ೩೫. ೨೩ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದ ಉದ್ಘಾಟನೆ. ನವಲಿ ವಿದ್ಯುತ್ ಉಪಕೇಂದ್ರವನ್ನು ೧೦. ೭೬ ಕೋಟಿ ರೂ. ವೆಚ್ಚದಲ್ಲಿ ೧೧೦/೧೧ ಕೆ.ವಿ. ಉಪಕೇಂದ್ರವನ್ನಾಗಿ ಉನ್ನತೀಕರಿಸುವುದು ಅಲ್ಲದೆ ೧೧೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ. ಕಾರಟಗಿಯಲ್ಲಿ ಜೆಸ್ಕಾಂನ ನೂತನ ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಪ್ರಾರಂಭ. ಇದರಿಂದ ಸುತ್ತಮುತ್ತಲ ಸುಮಾರು ೬೦ ಗ್ರಾಮಗಳಿಗೆ ಅನುಕೂಲ. ೮೦ ಲಕ್ಷ ರೂ. ವೆಚ್ಚದಲ್ಲಿ ಶ್ರೀರಾಮನಗರ-ಬೆನ್ನೂರು ಎಕ್ಸ್‌ಪ್ರೆಸ್ ಫೀಡರ್ ಲೈನ್ ನಿರ್ಮಾಣ ಕಾಮಗಾರಿ. ಭಕ್ತಾದಿಗಳ ಅನುಕೂಲಕ್ಕಾಗಿ ಕನಕಗಿರಿಯ ಕನಕಾಚಲಪತಿ ದೇವಾಲಯ ಬಳಿ ೧ ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹ ಕಟ್ಟಡ ನಿರ್ಮಾಣ. ಅಲ್ಲದೆ ಕನಕಾಚಲಪತಿ ದೇವಸ್ಥಾನದ ಹತ್ತಿರ ನಿರ್ಮಿಸಿರುವ ಯಾತ್ರಿ ನಿವಾಸದ ಲೋಕಾರ್ಪಣೆ. ಕನಕಗಿರಿಯಲ್ಲಿ ನೂತನ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾರಂಭೋತ್ಸವ. ಗಂಗಾವತಿ ತಾಲೂಕಿನ ಕಾರಟಗಿ ಮತ್ತು ಇತರೆ ೨೭ ಗ್ರಾಮಗಳಿಗೆ ೨೧. ೮೩ ಕೋಟಿ ರೂ. ವೆಚ್ಚದಲ್ಲಿ. ನವಲಿ ಹಾಗೂ ಇತರೆ ೨೨ ಗ್ರಾಮಗಳಿಗೆ ೧೧. ೧೧ ಕೋಟಿ ರೂ. ವೆಚ್ಚದಲ್ಲಿ. ಹಾಗೂ ಕನಕಗಿರಿ ಹಾಗೂ ಇತರೆ ೦೯ ಗ್ರಾಮಗಳಿಗೆ ೮. ೧೬ ಕೋಟಿ ರೂ. ವೆಚ್ಚದಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ. ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ದೊರೆಯಲಿದೆ. ಗಂಗಾವತಿ ತಾಲೂಕು ಉಳೇನೂರು ಗ್ರಾಮದಲ್ಲಿ ೭೩. ೧೨ ಲಕ್ಷ ರೂ. ವೆಚ್ಚದಲ್ಲಿ. ಸಿಂಗನಾಳ ಗ್ರಾಮದಲ್ಲಿ ೭೭. ೨೬ ಲಕ್ಷ ರೂ. ವೆಚ್ಚದಲ್ಲಿ. ಮರ್ಲಾನಹಳ್ಳಿ ಗ್ರಾಮದಲ್ಲಿ ೧. ೨೩ ಕೋಟಿ ರೂ. ವೆಚ್ಚದಲ್ಲಿ. ಚಿಕ್ಕಮಾದಿನಾಳ ಗ್ರಾಮದಲ್ಲಿ ೬೪. ೫೧ ಲಕ್ಷ ರೂ. ವೆಚ್ಚದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು. ಲೋಕೋಪಯೋಗಿ ಇಲಾಖೆಯಡಿ ಕನಕಗಿರಿ-ಯತ್ನಟ್ಟಿ ಗ್ರಾಮದ ೧೭. ೫೦ ಕಿ.ಮೀ. ರಸ್ತೆಯನ್ನು ೧. ೫೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ. ಕನಕಗಿರಿ-ಚಿಕ್ಕತಾಂಡಾ ಗ್ರಾಮದ ೧೧. ೭೦ ಕಿ.ಮೀ. ರಸ್ತೆಯನ್ನು ೧ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು. ಕನಕಗಿರಿ-ಬೊಮ್ಮಸಾಗರ ಗ್ರಾಮದ ೧೫. ೩೫ ಕಿ.ಮೀ. ರಸ್ತೆಯನ್ನು ೧. ೫೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ಕನಕಗಿರಿ-ಕಲಕೇರಿ ರಸ್ತೆಯಲ್ಲಿ ೧. ೨೦ ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಕಾರಟಗಿ-ಹನವಾಳ ೧೦ ಕಿ.ಮೀ. ರಸ್ತೆಯನ್ನು ೬ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. ೧೪ ರಂದು ಕನಕಗಿರಿಯಲ್ಲಿ ಚಾಲನೆ ನೀಡಲಿದ್ದಾರೆ.
0 comments:
Post a Comment