PLEASE LOGIN TO KANNADANET.COM FOR REGULAR NEWS-UPDATES

 ಸಕಾಲದಲ್ಲಿ ಚೀಟಿ ಹಣ ಪಾವತಿಸದೇ ಇರುವುದು ಸೇವಾ ನ್ಯೂನತೆ ಆಗಿರುವುದರಿಂದ, ಚೀಟಿ ಹಾಕಿದ ಗ್ರಾಹಕರಿಗೆ 25 ಸಾವಿರ ಪರಿಹಾರ ಮೊತ್ತ ನೀಡುವಂತೆ ಕೊಪ್ಪಳ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
  ಕೊಪ್ಪಳದ ಮಂಜುನಾಥ ಮುದಗಲ್ ಅವರು ನಗರದ ಶ್ರೀರಾಮ್ ಚಿಟ್ಸ್ (ಕರ್ನಾಟಕ) ಪ್ರೈ.ಲಿ. ಇವರ ಬಳಿ 5 ಲಕ್ಷ ರೂ.ಗಳ ಚೀಟಿ ಹಾಕಿದ್ದು, 40 ಕಂತುಗಳ ಪೈಕಿ 35 ನೇ ಕಂತಿನಲ್ಲಿ 32500 ರೂ. ಗಳಿಗೆ ಸವಾಲು ಮಾಡಿ ಚೀಟಿ ಪಡೆದಿದ್ದರು.  ಅಲ್ಲದೆ ಮುಂದಿನ ನಾಲ್ಕು ಕಂತುಗಳನ್ನು ತುಂಬಲು ಭದ್ರತೆಗಾಗಿ 50 ಸಾವಿರ ರೂ. ಗಳನ್ನು ಚೀಟಿ ಹಣದಲ್ಲಿ ಠೇವಣಿಯಾಗಿ 1 ವರ್ಷ ಇಡಲು ಒಪ್ಪಿ, ಅಗತ್ಯ ದಾಖಲೆಗಳಿಗೆ ಅಂದೇ ಸಹಿ ಮಾಡಿ ಕೊಟ್ಟಿದ್ದರು.  ಆದರೆ ಕಂಪನಿಯವರು ಮೂರು ತಿಂಗಳು ವಿಳಂಬ ಮಾಡಿ, ಉಳಿದ ನಾಲ್ಕು ಕಂತುಗಳ ಮೊತ್ತ ಅಲ್ಲದೆ ಇತರೆ ಮೊತ್ತವನ್ನು ಕಡಿತಗೊಳಿಸಿ 3. 63 ಲಕ್ಷ ರೂ.ಗಳನ್ನು ಚೀಟಿದಾರರಿಗೆ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಕಂಪನಿಯವರು ಅನಗತ್ಯ ವಿಳಂಬ ಮಾಡಿದ್ದರಿಂದ, ನಿವೇಶನ ಖರೀದಿ ವ್ಯವಹಾರದಲ್ಲಿ 1 ಲಕ್ಷ ರೂ. ನಷ್ಟವಾಗಿದ್ದು, ಕಂಪನಿಯವರ ಈ ವಿಳಂಬ ಪಾವತಿಯನ್ನು ಸೇವಾ ನ್ಯೂನತೆ ಹಾಗೂ ವ್ಯಾಪಾರದ ಅನುಚಿತ ವರ್ತನೆ ಎಂದು ಪರಿಗಣಿಸಿ 4. 05 ಲಕ್ಷ ರೂ. ಗಳ ಪರಿಹಾರವನ್ನು ದೊರಕಿಸಿಕೊಡುವಂತೆ ಚೀಟಿದಾರರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
  ವೇದಿಕೆ ಮುಖಾಂತರ ಜಾರಿ ಮಾಡಲಾದ ಸಮನ್ಸ್ಗೆ, ಕಂಪನಿಯವರು ವಕೀಲರ ಮೂಲಕ ಹಾಜರಾಗಿ, ಕಂಪನಿಯ ನಿಯಮದಂತೆ 45 ದಿನಗಳ ಒಳಗಾಗಿ ಚೀಟಿ ಹಣ ಪಾವತಿಸಬೇಕಾಗಿರುತ್ತದೆ.  ಅದರಂತೆ ನಿಗದಿತ ಅವಧಿಯೊಳಗೆ ಚೀಟಿ ಹಣ ಪಾವತಿಸಿದ್ದು, ಯಾವುದೇ ವಿಳಂಬವಾಗಿಲ್ಲ ಎಂಬುದಾಗಿ ಸೇವಾ ನ್ಯೂನತೆಯನ್ನು ಅಲ್ಲಗೆಳೆದಿರುತ್ತಾರೆ.  ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು, ಚಿಟ್ ಫಂಡ್ ಕಾಯ್ದೆ- 1982 ರನ್ವಯ ಚೀಟಿಯ ಸವಾಲಾದ ನಂತರ ಚಿಟ್ಸ್ ಕಂಪನಿಯವರು ಯಶಸ್ವಿ ಚಿಟ್ದಾರರಿಗೆ, 7 ದಿನಗಳ ಒಳಗಾಗಿ ಅಥವಾ ಮುಂದಿನ ತಿಂಗಳ ಚೀಟಿಯ ಸವಾಲಿನ ದಿನಗಳ ಒಳಗಾಗಿ ಚೀಟಿ ಹಣ ಪಾವತಿಸಬೇಕು.  ಈ ಪ್ರಕರಣದಲ್ಲಿ ಕಂಪನಿಯವರು 3 ತಿಂಗಳು ವಿಳಂಬ ಮಾಡಿರುವುದು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ, ಇದಕ್ಕಾಗಿ 25 ಸಾವಿರ ರೂ. ಗಳ ಪರಿಹಾರವನ್ನು ಕಂಪನಿಯು ಚೀಟಿದಾರರಿಗೆ 2014 ರ ಡಿಸೆಂಬರ್ ಒಳಗಾಗಿ ಪಾವತಿಸುವಂತೆ ಆದೇಶಿಸಿದೆ.

Advertisement

0 comments:

Post a Comment

 
Top