PLEASE LOGIN TO KANNADANET.COM FOR REGULAR NEWS-UPDATES


ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅ. 08 ರಂದು ಜಿಲ್ಲಾ ಕೇಂದ್ರದಲ್ಲಿ ಭಕ್ತಿ ಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
  ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಅಕ್ಟೋಬರ್ 08 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.  ಈ ಬಾರಿ ಜಿಲ್ಲಾ ಮಟ್ಟದಲ್ಲಿ ನಡೆಸುವ ಕಾರ್ಯಕ್ರಮಕ್ಕೆ ಸರ್ಕಾರ ಅನುದಾನವನ್ನು 25 ರಿಂದ 50 ಸಾವಿರ ರೂ. ಗಳಿಗೆ ಹೆಚ್ಚಿಸಿ, ಬಿಡುಗಡೆ ಮಾಡಿದೆ.  ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ 10 ಸಾವಿರ ರೂ. ಅನುದಾನ ಒದಗಿಸಿದೆ.  ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗುವುದು.  ಮೆರವಣಿಗೆಯಲ್ಲಿ ವಿವಿಧ ಸಾಂಸ್ಕøತಿಕ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.  ಮೆರವಣಿಗೆಯ ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.   ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮನವಿ ಮಾಡಿದರು.  ವಾಲ್ಮೀಕಿ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ವಾಲ್ಮೀಕಿ ಜಯಂತಿ ಅಂಗವಾಗಿ ಅಂದು ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹೊಸಪೇಟೆಯ ಡಾ. ಪನ್ನಂಗದವರ್ ಅಥವಾ ತೇಜಸ್ವಿ ಕಟ್ಟಿಮನಿ ಅವರನ್ನು ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡುವಂತೆ ಆಹ್ವಾನಿಸಲು ತೀರ್ಮಾನಿಸಲಾಯಿತು.  ಅಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಹೊಸಪೇಟೆ ಆಕಾಶವಾಣಿ ಕೇಂದ್ರದ ಮಂಜುನಾಥ್ ಡೊಳ್ಳಿನ ಅವರ ಸಲಹೆ ಮೇರೆಗೆ ಪರಿಶಿಷ್ಟ ವರ್ಗದವರಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ದೊರೆಯುವ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಡಿಕೆ ಪತ್ರವನ್ನು ತಯಾರಿಸಿ, ಕಾರ್ಯಕ್ರಮದ ದಿನದಂದು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು.   
    ಸಭೆಯಲ್ಲಿ ಡಿವೈಎಸ್‍ಪಿ ರಾಜೀವ್, ಸಮಾಜದ ಮುಖಂಡರಾದ ಮಂಜುನಾಥ ಗೊಂಡಬಾಳ, ಎಂ.ಹೆಚ್. ವಾಲ್ಮೀಕಿ, ಹನುಮೇಶ್ ನಾಯಕ್, ರತ್ನಾಕರ್ ಟಿ., ಶರಣಪ್ಪ ನಾಯಕ್, ರಾಮಣ್ಣ ಕಲ್ಲನ್ನವರ್, ಪ್ರಭುಗೌಡ ಪಾಟೀಲ್, ರಾಜಕುಮಾರ ನಾಯಕ್ ಸೇರಿದಂತೆ, ಗಣ್ಯರಾದ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್ ಮತ್ತಿತರ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Advertisement

0 comments:

Post a Comment

 
Top