PLEASE LOGIN TO KANNADANET.COM FOR REGULAR NEWS-UPDATES



ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಕಠಿಣ ಪರಿಶ್ರಮಪಡಬೇಕು. ಮಕ್ಕಳು ಶಿಲೆ ಇದ್ದಂತೆ ಆ ಶಿಲೆಯನ್ನು ಕೆತ್ತಿ ಮೂರ್ತಿ ಮಾಡುವ ಶಿಲ್ಪಿ ಶಿಕ್ಷಕರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದಕ್ಕೂ ಮೊದಲು ಡಾ.ಎಸ್.ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈ ಸಂಸ್ಥೆಯು ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ  ೧೦೦% ಫಲಿತಾಂಶ ಗಳಿಸಿದ್ದು ಸಂತೋಷಕರ ಸಂಗತಿ.ಸಂಸ್ಥೆಯು  ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿರುವುದು ಶ್ಲಾಘನೀಯವಾದದ್ದು. ಶಿಕ್ಷಕರು ಪರಿಶ್ರಮದಿಂದ ಕಾರ‍್ಯನಿರ್ವಹಿಸಿದರೆ ಯಶಸ್ಸು ಖಂಡಿತ ಎಂದು ಹೇಳಿದರು. ನಂತರ  ಶಾಲೆಯ ೧೦೦% ಫಲಿತಾಂಶಕ್ಕೆ ಕಾರಣಿಕರ್ತರಾದ ಶಿಕ್ಷಕರಿಗೆ ಸನ್ಮಾನ ಹಾಗೂ ಎಲ್ಲ ಶಿಕ್ಷಕರಿಗೆ ಕೈಗಡಿಯಾರವನ್ನು ಕಿರುಕಾಣಿಕೆಯಾಗಿ ವಿತರಿಸಲಾಯಿತು.
ಕಾರ‍್ಯಕ್ರಮಕ್ಕೆ ಉಪಸ್ಥಿತರಿದ್ದ ಇನ್ನೊರ್ವ ಅತಿಥಿ ಪ್ರಮೋದ ತುರ್ವಿಹಾಳ ಮಾತನಾಡಿ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುವ ದಿಶೆಯಲ್ಲಿ ಕಾರ‍್ಯನಿರ್ವಹಿಸಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ನಮಗೆಲ್ಲಾ ಆದರ್ಶವಾಗಬೇಕು. ಅವರ ಗುಣಗಳನ್ನು ನಮ್ಮ ಶಿಕ್ಷಕರು ಅಳವಡಿಸಿಕೊಂಡು ಸಮಾಜದ ಆದರ್ಶ ಶಿಕ್ಷಕರಾಗಬೇಕು ಎಂದರು. ಇದೇ ಸಮಯದಲ್ಲಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ‍್ಯದರ್ಶಿ ಆರ್.ಎಚ್.ಅತ್ತನೂರ ವಹಿಸಿದ್ದರು. ವೇದಿಕೆಯ ಮೇಲೆ ಬಿಆರ್ ಸಿ ಕೋಆರ್ಡಿನೇಟರ್ ಶರಣಪ್ಪ,ಬಿ.ಎಂ.ಸವದತ್ತಿ,ರೇಣುಕಾ ಅತ್ತನೂರ, ಜಯಶ್ರಿ ಕುಲಕರ್ಣಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 
ಕಾರ‍್ಯಕ್ರಮಕ್ಕೆ ಕು.ಆಶಾ ನಿರೂಪಿಸಿದರು. ಕಾವ್ಯಾ ಸಬರದ ಸ್ವಾಗತಿಸಿದರು. ಶ್ರೀನಿವಾಸ ಬೂದಿಹಾಳ ಪುಷ್ಪಾರ್ಪಣೆ ಮಾಡಿದರು. ಅರ್ಪಿತ ಹಾಗೂ ಸಂಗಡಿಗರು ಪ್ರಾರ್ಥಿಸಿದರೆ ಕೊನೆಯಲ್ಲಿ ಸಂಗೀತಾ ಹೊಳಗುಂದಿ ವಂದಿಸಿದರು. 

Advertisement

0 comments:

Post a Comment

 
Top