PLEASE LOGIN TO KANNADANET.COM FOR REGULAR NEWS-UPDATES



ಕಾವಿಧಾರಿಗಳಿಂದ ಅತ್ಯಾಚಾರದಂಥ ಪ್ರಕರಣಗಳು ಮೂವತ್ತು ವರ್ಷಗಳ ಹಿಂದೆ ನಡೆದಿದ್ದರೆ ದೊಡ್ಡ ಪ್ರತಿಭಟನೆಯ ಅಲೆ ಎದ್ದಿರುತ್ತಿತ್ತು. ಆಗ ಕೊಪ್ಪಳದ ಹತ್ತಿರವಿರುವ ಕುದುರಿಮೋತಿ ಎಂಬ ಊರಿನ ಸ್ವಾಮಿ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಾಗ, ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರರ ನೇತೃತ್ವದಲ್ಲಿ ಅಲ್ಲಿ ದೊಡ್ಡ ಹೋರಾಟವೇ ನಡೆದಿತ್ತು. ಅದು ರಾಜ್ಯ ವ್ಯಾಪಿ ಪ್ರತಿಧ್ವನಿಸಿತ್ತು. ಮಾಧ್ಯಮಗಳು ಅಂದರೆ ಅಂದಿನ ಪ್ರಮುಖ ದಿನಪತ್ರಿಕೆಗಳು (ಆಗ ಟಿವಿ ಇರಲಿಲ್ಲ) ಈ ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿದ್ದವು. ಆದರೆ ಆ ಸ್ವಾಮಿಯ ಜಾತಿಗೆ ಸೇರಿದ ಕೆಲವರು ಆತನ ಬೆಂಬಲಕ್ಕೆ ನಿಂತರೂ ಸ್ವಾಮಿಯ ಮಾನ ಉಳಿಸಿಕೊಳ್ಳಲು ಆಗಲಿಲ್ಲ. ಆದರೆ ಈಗ ಅತ್ಯಾಚಾರ ಸಾಮಾನ್ಯ ರಿಂದಲೇ ನಡೆಯಲಿ, ಸ್ವಾಮಿಗಳಿಂದಲೇ ನಡೆಯಲಿ ಅದು ಸಹಜ ಸಂಗತಿ ಎಂದು ಸಮಾಜ ಒಪ್ಪಿಕೊಂಡಿದೆ. ಹಿಂದೂ ಸಂಸ್ಕೃತಿ ವೌಲ್ಯಗಳ ಬಗ್ಗೆ ಮಾತಾಡುವ ಸಂಘಟನೆಗಳೂ ಅದು ಮುಖ್ಯವಿಚಾರದಲ್ಲಿ ಇಂಥ ದೂರುಗಳು ಬಂದರೆ ತಮ್ಮ ಧರ್ಮದ ಸ್ವಾಮಿಯ ವಿರುದ್ಧ ಪಿತೂರಿ ನಡೆದಿದೆ ಎಂದು ಅವು ಕೋಮು ಬಣ್ಣ ಕೊಡುತ್ತಿವೆ. 90ರ ದಶಕದ ನಂತರ ಸ್ವಾಮಿಗಳು, ಮಠಾಧೀಶರು ಏನು ಬೇಕಾದ್ದನ್ನು ಮಾಡಿದವರೆನ್ನಿಸಿಕೊಳ್ಳುತ್ತಾ ಬಂದಿದ್ದಾರೆ.
ಕಳೆದ ವಾರವೆಲ್ಲ ಕನ್ನಡ ಪತ್ರಿಕೆಗಳ ಮುಖ
ಪುಟಗಳಲ್ಲಿ ಇಬ್ಬರು ಮಠಾಧೀಶರು ಮಿರಮಿರನೆ ಮಿಂಚಿ ದರು. ಭಕ್ತರಿಗೆ ಸಾಯುಜ್ಯ ಪದವಿ ನೀಡಲು ಅವತರಿಸಿ ಬಂದಿದ್ದಾರೆಂದು ಬಿಂಬಿಸಲ್ಪಡುತ್ತಿರುವ ಇವರಿಬ್ಬರೂ ಓದುಗರ ಗಮನ ಸೆಳೆದದ್ದು ಅತ್ಯಾಚಾರ ಮತ್ತು ಲೈಂಗಿಕ ವ್ಯವಹಾರದ ಕಾರಣಕ್ಕಾಗಿ, ಇವರ ಪೈಕಿ ಬೆಂಗಳೂರಿನ ಬಿಡದಿ ಬಳಿಯ ಆಶ್ರಮದ ನಿತ್ಯಾನಂದ ಸ್ವಾಮಿ. ಈಗಾಗಲೇ ತನ್ನ ಲೀಲೆಗಳಿಂದ ನಾಡಿನಲ್ಲಿ ಮನೆಮಾತಾಗಿದ್ದಾನೆ. ಇನ್ನೊಬ್ಬ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತಿ. ಇವರಿಬ್ಬರ ಪ್ರಕರಣಗಳು ಈಗ ನ್ಯಾಯಾಲಯದ ಅಂಗಳದಲ್ಲಿವೆ. ಈಗ ಹೇಳಲು ಹೊರಟಿದ್ದು ಅದನ್ನಲ್ಲ. ಆದರೆ ತಮ್ಮ ಪತ್ರಿಕೆಗಳು ಈ ಸ್ವಾಮಿಗಳಿಬ್ಬರ ಸುದ್ದಿಗಳನ್ನು ಪ್ರಕಟಿಸುವಾಗ ತೋರಿಸಿದ ಪಕ್ಷಪಾತದ ಬಗ್ಗೆ. ನಿತ್ಯಾನಂದನ ಸುದ್ದಿ ಪ್ರಕಟವಾದಾಗ ‘ಪುರುಷತ್ವ ಪರೀಕ್ಷೆ ಮುಗಿಸಿದ ನಿತ್ಯ’, ‘ಬಾಲಕನಲ್ಲ ಈ ನಿತ್ಯಾ’ ಹೀಗೆ ತರತರದ ತಲೆಬರಹಗಳು. ಆದರೆ ರಾಘವೇಶ್ವರ ಭಾರತಿ ಸುದ್ದಿ ಪ್ರಕಟಿಸುವಾಗ ‘ಪ್ರಕರಣಕ್ಕೆ ಅತ್ಯಾಚಾರ ಅಂಟಿಸಲು ಯತ್ನ’, ರಾಮಚಂದ್ರಪುರ ಮಠಕ್ಕೆ ಧಕ್ಕೆ ತರುವ ಹುನ್ನಾರ’, ‘ನಿಜವಾಯ್ತು ಶ್ರೀ ವಿರುದ್ಧದ ಸಂಚು’, ‘ಗೃಹ ಸಚಿವರೆ ಇದೆಂತಾ ನಿಮ್ಮ ಕಾರ್ಯವೈಖರಿ’-ಹೀಗೆ ಅನುಕೂಲ ಸಿಂಧು ತಲೆಬರಹಗಳು.
 ನಾನು ನಾಲ್ಕು ದಶಕ ಕಾಲ ಮಣ್ಣು ಹೊತ್ತು ಹಾಗೂ ನನ್ನ ಬದುಕಿಗೆ ಆಧಾರವಾದ ಪತ್ರಿಕೋದ್ಯಮದ ಇಂದಿನ ಸ್ಥಿತಿಯನ್ನು ಕಂಡು ಕಳವಳದಿಂದಲೇ ಇದನ್ನು ಬರೆಯುತ್ತಿದ್ದೇನೆ. ಅಂದಿನ ಮತ್ತು ಇಂದಿನ ಪತ್ರಿಕಾವೃತ್ತಿಯ ವ್ಯತ್ಯಾಸದ ಕುರಿತು ಅನೇಕ ಬಾರಿ ಆತಂಕ ಉಂಟಾಗುತ್ತದೆ. ಆಗಲೂ ಜಾತಿವಾದ, ಕೋಮುವಾದ, ಪಟ್ಟಭದ್ರ ಹಿತಾಸಕ್ತಿ ಎಲ್ಲ ಇದ್ದವು. ಆದರೆ, ವೃತ್ತಿಧರ್ಮಕ್ಕೆ ಧಕ್ಕೆಯಾಗಲಿಲ್ಲ. ಈಗ ಹಾಗೆ ಹೇಳುವ ಧೈರ್ಯ ನನಗಿಲ್ಲ. ನಿತ್ಯಾನಂದನ ಪ್ರಕರಣ ಹಳೆಯದು. ಈತನ ಮೇಲೂ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ಆದೇಶ ದಂತೆ ಈತನ ಪುರುಷತ್ವ ಪರೀಕ್ಷೆಯೂ ನಡೆಯಿತು. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಇದು ರೋಚಕ ಸುದ್ದಿ ಆಯಿತು. ಆದರೆ ರಾಘವೇಶ್ವರ ಭಾತಿ ಮೇಲೆ ಅವರ ಭಕ್ತೆಯಾಗಿದ್ದ ಮಹಿಳೆ ಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಳು. ಇದರಿಂದ ರೊಚ್ಚಿಗೆದ್ದ ಈ ಸ್ವಾಮಿಯ ಚೇಲಾಗಳು ಆಕೆ ಮತ್ತು ಆಕೆಯ ಪತಿ ಬ್ಲಾಕ್ ಮೇಲ್ ಮಾಡು ತ್ತಿದ್ದಾರೆಂದು ಪ್ರತಿ ದೂರು ನೀಡಿದರು. ಆದರೆ ಮಾಧ್ಯಮಗಳಲ್ಲಿ ಪ್ರತಿದೂರಿನ ಸುದ್ದಿ ಮಾತ್ರ ದೊಡ್ಡದಾಗಿ ಪ್ರಕಟವಾಯಿತು. ಅತ್ಯಾಚಾರಕ್ಕೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸಿದ್ದು ಕೇವಲ ಕೆಲವೇ ಪತ್ರಿಕೆಗಳು ಮಾತ್ರ.
ರಾಘವೇಶ್ವರ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವರನ್ನೇ ಬೆದರಿಸುವ ಯತ್ನವೂ ನಡೆದಿದೆ. ಮಠದ ಪರಂಪರೆಯ ರಕ್ಷಣೆಯ ಹೆಸರಿನಲ್ಲಿ ತನಿಖೆ ಪ್ರಕ್ರಿಯೆ ಮೇಲೆ ಚಪ್ಪಡಿ ಕಲ್ಲು ಎಳೆಯುವ ಹುನ್ನಾರವೂ ನಡೆದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದರು ಪುರೋಹಿತಶಾಹಿ ಕೋಮುವಾದಿ ಶಕ್ತಿಗಳು ಎಷ್ಟು ಪ್ರಬಲವಾಗಿವೆ ಎಂದರೆ ಸ್ವಾಮಿಯೊಬ್ಬನ ಮೇಲೆ ಅತ್ಯಾಚಾರದ ಆರೋಪ ಬಂದರೆ ತನಿಖೆಗೆ ಅಡ್ಡಿಪಡಿಸುತ್ತವೆ. ಈ ಹಿಂದೆ ಬೇರೆ ಬೇರೆ ಮಠಾಧೀಶರ ಮೇಲೂ ಅತ್ಯಾಚಾರದ ಆರೋಪಗಳು ಬಂದಿವೆ. ಆಗೆಲ್ಲ ಮಾಧ್ಯಮಗಳು ವೃತ್ತಿಧರ್ಮಕ್ಕೆ ಅನುಗುಣವಾಗಿ ಸುದ್ದಿಯನ್ನು ಪ್ರಕಟಿಸಿವೆ. ಆಪಾದನೆ ಗೊಳಗಾದ ಮಠಾಧೀಶರು ಜೈಲಿಗೆ ಹೋಗಿ ಬಂದ ಉದಾಹರಣೆಗಳು ಇವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಒಪ್ಪಿಕೊಂಡಾಗ ಪರಂಪರೆಯ ರಕ್ಷಣೆಯ ಹೆಸರಿನಲ್ಲಿ ಅತ್ಯಾಚಾರದ ಆರೋಪ ಹೊತ್ತ ಸ್ವಾಮಿಯನ್ನು ರಕ್ಷಿಸುವಂಥ ಅಕ್ಷರ ಹಾದರ ಮಾಡುವುದು ಸರಿಯಲ್ಲ.
ಪತ್ರಿಕೆಯೊಂದರ, ಟಿವಿ ವಾಹಿನಿ ಯೊಂದರ ಸಂಪಾದಕ, ಇಲ್ಲವೇ ಸಂಪಾದಕೀಯ ಸಿಬ್ಬಂದಿಯ ಜಾತಿ ಮತ್ತು ‘‘ಅತ್ಯಾಚಾರಿ’’ ಸ್ವಾಮಿಯ ಜಾತಿ ಒಂದೇ ಆಗಿರುವುದರಿಂದ ಹಾಗೂ ಮಠದಿಂದ ಪ್ರಯೋಜನ ಇರುವುದ ರಿಂದ ಈ ರೀತಿ ವೃತ್ತಿಧರ್ಮಕ್ಕೆ ಶೋಭೆ ತರದ ಸುದ್ದಿಗಳು ಪ್ರಕಟವಾಗುತ್ತವೆ.
ಅತ್ಯಾಚಾರದ ಆರೋಪಕ್ಕೊಳಗಾದ ಈ ಸ್ವಾಮಿಯನ್ನು ಕಾನೂನು ಪ್ರಕಾರ ಈಗಾಗಲೇ ಬಂಧಿಸಬೇಕಾಗಿತ್ತು. ಆದರೆ ಕಾನೂನು ಎಂಬುದು ಕತ್ತೆ ಇದ್ದಂತೆ. ಅದರ ಮೇಲೆ ಸವಾರಿ ಮಾಡುವಷ್ಟು ಮಠಾಧೀಶರು ಪ್ರಬಲರಾಗಿದ್ದಾರೆ. ಈ ನಡುವೆ ರಾಮಚಂದ್ರಾಪುರ ಮಠದ ಸ್ವಾಮಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಮುಂಚೆ ಲೈಂಗಿಕ ದೌರ್ಜನ್ಯ ಪ್ರಕರಣ ಮಾತ್ರ ದಾಖಲಾಗಿತ್ತು. ಆದರೆ ಕೆಲ ಮಾಧ್ಯಮಗಳು ತನಿಖೆಗೆ ಹೈಕೋರ್ಟ್ ತಡೆ ಹಾಕಿದ್ದನ್ನೇ ದೊಡ್ಡದಾಗಿ ಪ್ರಕಟಿಸಿ ಅತ್ಯಾಚಾರದ ದೂರು ದಾಖಲಾದ ಸುದ್ದಿ ಪ್ರಕಟವಾಗಲೇ ಇಲ್ಲ. ಹೀಗೆ ಜಾತಿ ಮತ್ತು ಕಾಂಚಾಣ ಸತ್ಯಕ್ಕಿಂತ ಪ್ರಬಲ ವಾಗಿರುವುದರಿಂದ ಜನರಿಗೆ ಮಾಹಿತಿ ನೀಡಬೇಕಾದ ಮಾಧ್ಯಮಗಳು ಅದಕ್ಕೆ ಬದಲಾಗಿ ಇನ್ನೇನನ್ನೋ ನೀಡುತ್ತಿವೆ. ಡಾ.ರಾಮಮನೋಹರ ಲೋಹಿಯಾ ಅವರು ಹೇಳಿದಂತೆ ವ್ಯವಸ್ಥೆ, ಅವ್ಯವಸ್ಥೆ ಯಾಗಿ, ಕುವ್ಯವಸ್ಥೆಯಾಗಿ ನಾಶಗೊಂಡ ನಂತರ ಹೊಸ ವ್ಯವಸ್ಥೆ ಉದಯಿಸುತ್ತದೆ ಎಂದು ಆ ದಿನಗಳಿಗಾಗಿ ಕಾಯುವುದನ್ನು ಬಿಟ್ಟು ಬೇರೆ ದಾರಿ ಗೋಚರಿಸುತ್ತಿಲ್ಲ.
courtesy-- varthabharati

Advertisement

0 comments:

Post a Comment

 
Top