PLEASE LOGIN TO KANNADANET.COM FOR REGULAR NEWS-UPDATES




  ಬದುಕಿನ ಬಂಡಿ ಸಾಗಿಸಲು ಹತ್ತು ಹಲವು ದಾರಿಗಳಿವೆ.  ಆದರೆ ಬೇಸಾಯವೆಂದರೆ ವೃಥಾ ಶ್ರಮವೆಂದು ಮೂಗು ಮುರಿಯುವ ಯುವಕರೇ ಇಂದಿನ ದಿನಮಾನಗಳಲ್ಲಿ ಹೆಚ್ಚು ಕಾಣಸಿಗುತ್ತಾರೆ.  ಆದರೆ ಹವಾಯಿ ದ್ವೀಪ ಮೂಲದ ರೆಡ್‌ಲೇಡಿ ತಳಿಯ ಪಪ್ಪಾಯಿ ಹಣ್ಣು ಬೆಳೆಯನ್ನು ಬೆಳೆದು ಲಕ್ಷ. ಲಕ್ಷ ರೂಪಾಯಿ ಭರಪೂರ ಆದಾಯ ಗಳಿಸುತ್ತಿರುವ ಕೊಪ್ಪಳ ಜಿಲ್ಲೆ ಹಿಟ್ನಾಳ ಗ್ರಾಮದ ರೈತರು ಇತರರಿಗೆ ಮಾದರಿ ಎನಿಸಿದ್ದಾರೆ.  ಈ ಯಶೋಗಾಥೆ ವರದಿ ಸಂಗ್ರಹಣೆಗೆ ವಾರ್ತಾ ಇಲಾಖೆಯ ವತಿಯಿಂದ ಪತ್ರಕರ್ತರಿಗೆ ವಿಶೇಷ ಮಾಧ್ಯಮ ಅಧ್ಯಯನ ಪ್ರವಾಸ ಏರ್ಪಡಿಸಲಾಗಿತ್ತು.  
  ಕೊಪ್ಪಳ ನಗರದಿಂದ ಹೊಸಪೇಟೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯಿಂದ ಸ್ವಲ್ಪ ದೂರ ಸಾಗಿ, ಎಡಕ್ಕೆ ಹೊರಳಿದಲ್ಲಿ, ಸುಮಾರು ೪೦ ಎಕರೆ ಪ್ರದೇಶದಲ್ಲಿ ಸೊಗಸಾಗಿ ಬೆಳೆದಿರುವ ಪಪ್ಪಾಯಿ ತೋಟ ಕಾಣಸಿಗುತ್ತದೆ.  ಪ್ರತಿಯೊಂದು ಗಿಡಗಳಲ್ಲೂ ದೊಡ್ಡ ದೊಡ್ಡ ಸೈಜಿನ ಪಪ್ಪಾಯಿ ಹಣ್ಣುಗಳಿಂದ ನಳನಳಿಸುತ್ತಿದ್ದು, ಸಮೃದ್ಧ ತೋಟವೆಂದರೆ ಹೀಗಿರಬೇಕು ಎನಿಸುತ್ತದೆ.  ಈ ೪೯ ಎಕರೆ ತೋಟ ಒಬ್ಬ ರೈತನದ್ದಲ್ಲ.  ಒಟ್ಟು ೧೦ ಜನ ರೈತರು ಒಟ್ಟಾಗಿ ತಮ್ಮ ತಮ್ಮ ಹೊಲದಲ್ಲಿ ಒಂದೇ ತಳಿಯ ಪಪ್ಪಾಯಿ ಬೆಳೆದು, ಒಟ್ಟಾಗಿಯೇ ದುಡಿದು, ಲಕ್ಷ ಲಕ್ಷ ಆದಾಯ ಗಳಿಸಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.  ಇಲ್ಲಿನ ೪೦ ಎಕರೆ ಪ್ರದೇಶದಲ್ಲಿ ಟನ್‌ಗಟ್ಟಲೆ ಬೆಳೆದ ಪಪ್ಪಾಯಿ, ದೇಶ, ವಿದೇಶಗಳಿಗೆ ರಫ್ತಾಗುತ್ತಿದೆ.  ಇತ್ತೀಚೆಗೆ ರಂಜಾನ್ ಹಬ್ಬದ ಸೀಜನ್ ಇದ್ದುದ್ದರಿಂದ, ಪಪ್ಪಾಯಿ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು, ಎಲ್ಲ ರೈತರೂ ಲಕ್ಷ, ಲಕ್ಷ ಆದಾಯದ ಮಾತನ್ನಾಡುತ್ತಿದ್ದಾರೆ.
ರೈತರ ಪರಿಶ್ರಮ : ಕೊಪ್ಪಳ ತಾಲೂಕಿನ ಹಿಟ್ನಾಳ, ಹಿರೇಬಗನಾಳ ಸುತ್ತಮುತ್ತಲ ಗ್ರಾಮಗಳ ರೈತರಾದ ಲಕ್ಷ್ಮವ್ವ, ಫಕೀರವ್ವ, ಬಸಮ್ಮ, ಲಕ್ಷ್ಮಣ, ಹನುಮೇಶ್, ಬಸಪ್ಪ, ರಾಜಶೇಖರ, ಆನಂದ, ರಮೇಶ್, ನಾಗರಾಜ್, ಮಾರ್ಕಂಡೆಪ್ಪ ಅಡಗಿ ಅವರು ತಮ್ಮ ಒಟ್ಟು ೪೦ ಎಕರೆ ಜಮೀನಿನಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ ಎಂಬುದರ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ, ಸಹಕಾರ ಪಡೆದು, ಹವಾಯಿ ದ್ವೀಪ ಮೂಲದ ರೆಡ್‌ಲೇಡಿ-೭೮೬ ಎಂಬ ಹೊಸ ತಳಿಯ ಪಪ್ಪಾಯಿ ಬೆಳೆಯಲು ನಿರ್ಧರಿಸಿದರು, ಪ್ರತಿ ಎಕರೆಗೆ ಸುಮಾರು ೧ ಲಕ್ಷ ರೂ. ವೆಚ್ಚವಾಗಿದ್ದು, ತೋಟಗಾರಿಕೆ ಇಲಾಖೆಯಿಂದ ೨೦೧೨-೧೩ ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಶೇ. ೫೦ ರಷ್ಟು ಸಹಾಯಧನ ಸಹಾಯಧನ ಪಡೆದುಕೊಂಡರು.  ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. ೯೦ ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ತೋಟಕ್ಕೆ ಅಳವಡಿಸಿಕೊಳ್ಳಲಾಯಿತು.  ಹೊಲ ಹದ ಮಾಡಿಕೊಂಡ ರೈತರು ಪ್ರತಿ ಎಕರೆಗೆ ೧೨೦೦ ಸಸಿಗಳನ್ನು, ೫-೬ ಅಡಿ ಅಂತರದಲ್ಲಿ ರೆಡ್‌ಲೇಡಿ ತಳಿಯ ಪಪ್ಪಾಯಿ ಗಿಡ ನಾಟಿ ಮಾಡಿದರು.  ಹನಿ ನೀರಾವರಿ ಪದ್ಧತಿ ಅಳವಡಿಸಿದ್ದರಿಂದ, ನೀರು ಹಾಯಿಸುವ ಶ್ರಮವೂ ಬರಲಿಲ್ಲ.  ಭೂಮಿ ಸಿದ್ಧತೆ, ಬೆಡ್ ಹಾಕುವುದು, ಸಸಿ ನಾಟಿ ಹಾಗೂ ಗೊಬ್ಬರ ಸೇರಿದಂತೆ ಬೇಸಾಯ ಕ್ರಮಗಳು ಹಾಗೂ ಗಿಡಗಳ ನಿರ್ವಹಣೆಗೆ ತೋಟಗಾರಿಕೆ ತಜ್ಞರ ಸಲಹೆ ಪಡೆದುಕೊಂಡು, ತೋಟವನ್ನು ಜೋಪಾನ ಮಾಡಲಾಯಿತು.  ಎಲ್ಲರೂ ಶ್ರಮ ವಹಿಸಿ ದುಡಿಯುತ್ತಿದ್ದು, ಇದೀಗ ೪೦ ಎಕರೆ ಪ್ರದೇಶದಲ್ಲಿ ಸಮೃದ್ಧ ಪಪ್ಪಾಯಿ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. 
ಭವಿಷ್ಯದ ಆದಾಯಕ್ಕೂ ಪ್ಲಾನಿಂಗ್ : ಪಪ್ಪಾಯಿ ಬೆಳೆ ೨ ವರ್ಷಗಳ ವರೆಗೆ ಫಲ ನೀಡಲಿದ್ದು, ಮುಂದೇನು ಎಂಬುದರ ಬಗ್ಗೆ ಈಗಲೇ ಯೋಜನೆ ಸಿದ್ಧಪಡಿಸಿಟ್ಟುಕೊಂಡಿರುವ ರೈತರು, ಪಪ್ಪಾಯಿ ಬೆಳೆಯ ಮಧ್ಯೆ ಉತ್ತಮ ತಳಿಯ ದಾಳಿಂಬೆ ಗಿಡಗಳನ್ನು ಮಿಶ್ರ ಬೆಳೆಯಾಗಿ ಈಗಾಗಲೆ ನಾಟಿ ಮಾಡಿದ್ದಾರೆ.   ಪಪ್ಪಾಯಿ ಕೃಷಿ ಮುಗಿಯುವ ವೇಳೆಗೆ ದಾಳಿಂಬೆ ಫಸಲು ಕೈಗೆ ಬರುತ್ತದೆ. ಪಪ್ಪಾಯಿ ಗಿಡಗಳ ಮಧ್ಯೆ ದಾಳಿಂಬೆ ಬೆಳೆದರೆ ದುಂಡಾಣು ಅಂಗಮಾರಿ ರೋಗ ನಿಯಂತ್ರಿಸಬಹುದಾಗಿದೆ.  ತೋಟಗಾರಿಕೆ ತಜ್ಞರ ಸಲಹೆಯಂತೆ ಸಕಾಲಕ್ಕೆ ನೀರು, ಗೊಬ್ಬರ, ರೋಗ ನಿಯಂತ್ರಣ ಮಾಡಿದ ಕಾರಣ ಉತ್ತಮ ಫಸಲು ದೊರೆತಿದೆ.  ಈಗಾಗಲೆ ಕಟಾವು ಆರಂಭವಾಗಿದ್ದು, ಮುಂಬೈ ಮಾರುಕಟ್ಟೆಗೆ ಹಣ್ಣು ಒದಗಿಸಲಾಗುತ್ತಿದೆ.  ದುಡಿಯುವ ಛಲ ಹಾಗೂ ಪರಿಶ್ರಮಕ್ಕೆ ಆದ್ಯತೆ ನೀಡಿದರೆ, ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಲಾಭವಿದೆ.  ಆದರೆ ಇಂದಿನ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎನ್ನುತ್ತಾರೆ ರೈತ ಮಾರ್ಕಂಡೆಪ್ಪ ಅಗಡಿ ಅವರು.
ಪಪ್ಪಾಯಿ ಲಾಭದಾಯಕವಾಗಿದ್ದು ಹೇಗೆ? : ಸಾಮಾನ್ಯವಾಗಿ ಪಪ್ಪಾಯಿ ಗಿಡ ನಾಟಿ ಮಾಡಿದ ೮ ತಿಂಗಳ ನಂತರ ಇಳುವರಿ ನೀಡಲು ಪ್ರಾರಂಭಿಸುತ್ತದೆ.  ಪಪ್ಪಾಯಿ ಗಿಡ ಸುಮಾರು ೨ ವರ್ಷಗಳವರೆಗೆ ಪಪ್ಪಾಯಿ ಹಣ್ಣು ನೀಡಲಿದೆ.  ಅದರಂತೆ ಇದೀಗ ತೋಟ, ಪಪ್ಪಾಯಿ ಹಣ್ಣುಗಳಿಂದ ತುಂಬಿದ್ದು, ಪ್ರತಿಯೊಂದು ಗಿಡದಿಂದಲೂ ಸರಾಸರಿ ೮೦ ರಿಂದ ೧೦೦ ಕೆ.ಜಿ. ಇಳುವರಿ ಪಡೆಯಬಹುದಾಗಿದೆ.  ಮಾರುಕಟ್ಟೆಯಲ್ಲಿ ೧ ಕೆ.ಜಿ. ಪಪ್ಪಾಯಿಗೆ ಕನಿಷ್ಟವೆಂದರೂ ೮ ರೂ. ದೊರೆಯುತ್ತದೆ.  ಇನ್ನು ರಂಜಾನ್ ಹಬ್ಬದ ಸಂದರ್ಭದಲ್ಲಿ ಈ ಹಣ್ಣಿಗೆ ದೇಶ, ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ ಇರುವ ಕಾರಣ, ಆ ಸಂದರ್ಭದಲ್ಲಿ ೧೪ ರೂ. ಗಳವರೆಗೂ ಬೆಲೆ ಸಿಗುತ್ತದೆ.  ೧ ಎಕರೆಗೆ ಕನಿಷ್ಟವೆಂದರೂ ೬೦ ಟನ್ ಪಪ್ಪಾಯಿ ಹಣ್ಣು ದೊರೆಯಲಿದೆ.  ಅಂದರೆ ಎಕರೆಗೆ ೯. ೬೦ ಲಕ್ಷ ರೂ. ಆದಾಯ ಗಳಿಸಬಹುದಾಗಿದೆ. ಐಸ್‌ಕ್ರೀಂ ಉದ್ಯಮಗಳು ಹಾಗೂ ಬೇಕರಿ ತಿನಿಸುಗಳಿಗೆ ಸಂಸ್ಕರಿಸಿದ ಪಪ್ಪಾಯಿ ಹಣ್ಣಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿರುವುದರಿಂದ ಪಪ್ಪಾಯಿ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ.  ಪಪ್ಪಾಯಿ ತೋಟದ ನಿರ್ವಹಣೆಗೆ ಅತ್ಯಂತ ಕಡಿಮೆ ಖರ್ಚು ಆಗಲಿದ್ದು, ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ರುದ್ರಪ್ಪ ಬಿಡನಾಳ ಅವರು.
  ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ವಿಸ್ತರಣೆಗೆ ಶೇ. ೫೦ ರ ಸಹಾಯಧನ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹನಿ ನೀರಾವರಿ ವ್ಯವಸ್ಥೆಗೆ ಶೇ. ೯೦ ರಷ್ಟು ಸಬ್ಸಿಡಿ ಸೌಲಭ್ಯ ದೊರೆಯಲಿದ್ದು, ಇಲಾಖೆ ನೀಡುವ ಸೌಲಭ್ಯವನ್ನು ರೈತರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು.  ಪಪ್ಪಾಯ ಹಣ್ಣು ಬೆಳೆಯುವ ಅನೇಕ ರೈತರ ನಡುವೆ, ತಾಂತ್ರಿಕತೆಯನ್ನು ಅಳವಡಿಸಿಕೊಂಡು, ತೋಟಗಾರಿಕೆಯನ್ನು ಲಾಭದಾಯಕವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಲಾಭ ಪಡೆಯುತ್ತಿರುವ  ಇಲ್ಲಿನ ರೈತರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್‌ನ ಸಲಹಾಧಿಕಾರಿ ವಾಮನಮೂರ್ತಿ ಅವರು.  ಮಾಹಿತಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ರುದ್ರಪ್ಪ ಬಿಡನಾಳ- ೯೯೮೦೩ ೬೧೬೭೩.  ರೈತ ಮಾರ್ಕಂಡೆಪ್ಪ ಅಡಗಿ- ೯೪೪೮೯ ೪೬೯೭೭ ಕ್ಕೆ ಸಂಪರ್ಕಿಸಬಹುದು.

Advertisement

0 comments:

Post a Comment

 
Top