PLEASE LOGIN TO KANNADANET.COM FOR REGULAR NEWS-UPDATES


ರಾಬರ್ಟ್ ರಾಯಿಕ್ ಕನ್ನಡಕ್ಕೆ: ಸುರೇಶ್ ಭಟ್, ಬಾಕ್ರಬೈಲ್
ರಾಜಕಾರಣದಿಂದ ರೋಸಿ ಹೋಗಿರುವ ಅಮೆರಿಕದ ಜನ ಅದರ ಬಗ್ಗೆ ಉದಾಸೀನ ಮನೋಭಾವ ತಾಳಿರುವುದಷ್ಟೆ ಅಲ್ಲ ಅದರಿಂದ ವಿಮುಖರೂ ಆಗುತ್ತಿದ್ದಾರೆ. ಸಂಸತ್ತು (ಕಾಂಗ್ರೆಸ್) ಮಾಡುತ್ತಿರುವ ಕೆಲಸವನ್ನು ಬೆಂಬಲಿಸುವವರೆಷ್ಟೆಂದು ನೋಡಹೊರಟರೆ ನಮಗೆ ಕಾಣಸಿಗುವುದು ಒಟ್ಟಾರೆ ಜನ ಸಂಖ್ಯೆಯ ಕೇವಲ 13 ಪ್ರತಿಶತದಷ್ಟು ಜನ. ರಾಷ್ಟ್ರಾಧ್ಯಕ್ಷರ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಬಹುಪಾಲು ಜನತೆ ಮತದಾನ ಮಾಡುವ ಗೋಜಿಗೇ ಹೋಗುತ್ತಿಲ್ಲ. 2012ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬರೀ 57.5 ಪ್ರತಿಶತ ಮತದಾರರಷ್ಟೆ ಭಾಗವಹಿಸಿದ್ದಾರೆ. ಸರಳವಾಗಿ ಹೇಳುವುದಾದರೆ ಹೆಚ್ಚಿನ ಮತದಾರರಲ್ಲಿ ತಾವು ಅಶಕ್ತರು ಎಂಬ ಭಾವನೆ ಮನೆಮಾಡಿದೆ. ಅವರೇನು ಯೋಚಿಸುತ್ತಾರೆಂದರೆ ‘‘ಹೇಗೂ ಈ ರಾಜಕೀಯದಾಟದ ಫಲಿತಾಂಶ ಪೂರ್ವನಿರ್ಧರಿತವಾಗಿರುತ್ತದೆ; ಹಾಗಾಗಿ ನಾವು ಯಾತಕ್ಕೋಸ್ಕರ ತೊಂದರೆ ತೆಗೆದುಕೊಳ್ಳಬೇಕು?’’ 1981ರಿಂದ 2002ರ ವರೆಗಿನ ಅವಧಿಯನ್ನೆತ್ತಿಕೊಂಡು ಮಾರ್ಟಿನ್ ಜಿಲನ್ಸ್ (ಪ್ರಿನ್ಸ್‌ಟನ್ ವಿವಿ) ಮತ್ತು ಬೆಂಜಮಿನ್ ಪೇಜ್ (ನಾರ್ತ್‌ವೆಸ್ಟರ್ನ್ ವಿವಿ) ಜಂಟಿಯಾಗಿ ನಡೆಸಿರುವ ಹೊಸ ಅಧ್ಯಯನವೊಂದು ಇದನ್ನೇ ದೃಢಪಡಿಸುತ್ತದೆ. ಅವರು ‘‘ಸಾಮಾನ್ಯ ಪ್ರಜೆಯೊಬ್ಬನ ಆದ್ಯತೆಗಳು ಸರಕಾರದ ಕಾರ್ಯನೀತಿಗಳ ಮೇಲೆ ಬೀರುವ ಪ್ರಭಾವ ಅಮುಖ್ಯ, ಹೆಚ್ಚು ಕಡಿಮೆ ಶೂನ್ಯ ಸಂಖ್ಯಾಶಾಸ್ತ್ರದನ್ವಯ ನಗಣ್ಯ’’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಶಾಸಕರು ಯಾರ ಮಾತುಗಳನ್ನು ಆಲಿಸುತ್ತಾರೆ? ಅತಿ ಹೆಚ್ಚು ಲಾಬಿ ನಡೆಸುವವರ ಮಾತುಗಳನ್ನು. ಚುನಾವಣಾ ಪ್ರಚಾರಗಳಿಗೆ ಅತ್ಯಧಿಕ ದುಡ್ಡೆರೆಯಬಲ್ಲ ಧನಿಕರ ಮಾತುಗಳನ್ನು. ಮತ್ತು ಸಿರಿವಂತ ವಾಣಿಜ್ಯ ಹಿತಾಸಕ್ತಿಗಳ ಮಾತುಗಳನ್ನು. ಸುಪ್ರೀಂ ಕೋರ್ಟು ಹಣವಂತರ ಪರ ತೀರ್ಪು ನೀಡಿರುವುದು, ದಿವಾಳಿ ಎದ್ದ ವಾಲ್ ಸ್ಟ್ರೀಟ್ ಕಂಪೆನಿಗಳಿಗೆ ಧಾರಾಳ ಸಬ್ಸಿಡಿ ಕೊಟ್ಟು ಬದುಕಿಸಿರುವುದು ಮುಂತಾದ ಘಟನೆಗಳೆಲ್ಲ ನಡೆದಿರುವುದು 2002ರ ನಂತರ.
ಶ್ರೀಸಾಮಾನ್ಯನಿಗೆ ಹೇಳಿಕೊಳ್ಳು ವಂಥಾ ಅಧಿಕಾರ ಯಾವತ್ತಾದರೂ ಇತ್ತೇ? ಶ್ರೇಷ್ಠ ಪತ್ರಕರ್ತ ಹಾಗೂ ವಿಮರ್ಶಕ ವಾಲ್ಟರ್ ಲಿಪ್‌ಮನ್ 1922ರಷ್ಟು ಹಿಂದೆಯೆ ‘ಸಾರ್ವಜನಿಕರ ಅಭಿಪ್ರಾಯ’ ಎಂಬ ಪುಸ್ತಕ ಬರೆದಿದ್ದ. ಅದರಲ್ಲಿ ಆತ ಜನಸಾಮಾನ್ಯರಿಗೆ ಒಂದೋ ರಾಷ್ಟ್ರನೀತಿಗಳ ಅರಿವಿರುವುದಿಲ್ಲ ಅಥವಾ ಅದರ ಬಗ್ಗೆ ಅನಾಸಕ್ತಿಯಿಂದಿರುತ್ತಾರೆೆ ಎಂದು ವಾದಿಸಿದ್ದಾನೆ. ಗಣ್ಯವರ್ಗಗಳು ಬಹು ಜಾಣ್ಮೆಯಿಂದ ಜನಸಾಮಾನ್ಯರನ್ನು ದುರುಪಯೋಗ ಮಾಡಿ ಅವರ ಸಮ್ಮತಿಯನ್ನು ಉತ್ಪಾದಿಸುತ್ತವೆ. ಕೊನೆಯಲ್ಲಿ ಲಿಪ್‌ಮನ್ ‘‘ಇನ್ನು ಮುಂದೆ.... ಪ್ರಜಾಪ್ರಭುತ್ವದ ಮೂಲ ಸಿದ್ಧಾಂತದಲ್ಲಿ ನಂಬಿಕೆ ಇರಿಸಲು ಸಾಧ್ಯವಿಲ್ಲ’’ ಎಂಬ ತೀರ್ಮಾನಕ್ಕೆ ಬರುತ್ತಾನೆ.
ಆದರೂ ಇಪ್ಪತ್ತನೆ ಶತಮಾನದ ಪೂರ್ವಾರ್ಧದಲ್ಲಿ ಕಮ್ಯೂನಿಸ್ಟ್ ಅಥವಾ ಸರ್ವಾಧಿಕಾರಿ ಪ್ರಭುತ್ವಗಳಿಗೆ ತುತ್ತಾದ ಇನ್ನಿತರ ದೇಶಗಳಿಗೆ ಹೋಲಿಸಿದಾಗ ಅಮೆರಿಕದ ಪ್ರಜಾಪ್ರಭುತ್ವ ಗಟ್ಟಿಮುಟ್ಟಾಗಿರುವಂತೆ ಅನಿಸಿತ್ತು. ರಾಜಕೀಯ ಶಾಸ್ತ್ರಜ್ಞರ ಪ್ರಕಾರ ದ್ವಿತೀಯ ಮಹಾಯುದ್ಧಾನಂತರದ ಕಾಲದಲ್ಲಿ ಅಮೆರಿಕದ ಪ್ರಜೆಗಳಿಗೆ ವೈಯಕ್ತಿಕವಾಗಿ ಧ್ವನಿ ಇಲ್ಲದಿದ್ದರೂ ಅವರಲ್ಲನೇಕರು ವಿವಿಧ ಸಂಘಸಂಸ್ಥೆಗಳು ಮತ್ತು ಹಿತಾಸಕ್ತಿ ಗುಂಪುಗಳ ಸದಸ್ಯರಾಗಿದ್ದರು. ಮುಖ್ಯವಾಗಿ ಕಾರ್ಮಿಕ ಸಂಘಟನೆಗಳು, ರೈತ ಸಹಕಾರಿ ಸಂಘಗಳು, ಚಿಲ್ಲರೆ ವ್ಯಾಪಾರಿಗಳು, ಸಣ್ಣಪುಟ್ಟ ಬ್ಯಾಂಕುಗಳು ಇತ್ಯಾದಿ. ಆ ಕಾಲದಲ್ಲಿ ರಾಜಕಾರಣಿಗಳು ಇಂಥಾ ಗುಂಪುಗಳಿಗೆ ಸ್ಪಂದಿಸುತ್ತಿದ್ದರು ಕೂಡ. ಅಮೆರಿಕದ ಪ್ರಜಾಪ್ರಭುತ್ವವನ್ನು ಮುನ್ನಡೆಸಿದ್ದೇ ವೈಯಕ್ತಿಕ ನಿಲವುಗಳನ್ನು ನಿರ್ದಿಷ್ಟ ಮಾರ್ಗದಲ್ಲಿ ತೊಡಗಿಸಿದ ಈ ಬಗೆಯ ಪರ್ಯಾಯ ಶಕ್ತಿ ಕೇಂದ್ರಗಳು.
ಈ ಜನಸಾಮಾನ್ಯರ ಶಕ್ತಿ ಕೇಂದ್ರಗಳ ಸಾಮರ್ಥ್ಯ ಬೃಹತ್ ಕಾರ್ಪೊರೇಟುಗಳು ಹಾಗೂ ವಾಣಿಜ್ಯೋದ್ಯಮಿಗಳ ರಾಜಕೀಯ ಪ್ರಾಬಲ್ಯಕ್ಕೆ ಸರಿಸಾಟಿಯಾಗಿತ್ತು ಮತ್ತು ಅದನ್ನು ಸರಿದೂಗಿಸುವ ರೀತಿಯಲ್ಲಿತ್ತು. ಅರ್ಥಶಾಸ್ತ್ರಜ್ಞ ಗಾಲ್‌ಬ್ರೈತ್ ಈ ‘ಸಮತೂಗುವ ಶಕ್ತಿ’ಯನ್ನು ಬೆಂಬಲಿಸಿದ್ದ. ಈ ಪರ್ಯಾಯ ಶಕ್ತಿ ಕೇಂದ್ರಗಳಿಂದಾಗಿ ಅಮೆರಿಕದ ಮಧ್ಯಮ ಮತ್ತು ಕಾರ್ಮಿಕ ವರ್ಗಗಳಿಗೆ ಸೇರಿದ ದೊಡ್ಡ ಸಂಖ್ಯೆಯ ಜನರಿಗೆ ಆರ್ಥಿಕ ಅಭಿವೃದ್ಧಿಯ ಗಣನೀಯ ಪಾಲು ಲಭಿಸುವಂತಾಗಿತ್ತು.
1980ರ ನಂತರ ಮಹತ್ತರ ಬದಲಾ ವಣೆಗಳಾದವು. ಇದಕ್ಕೆ ಎರಡು ಕಾರಣ ಗಳಿವೆ. ಒಂದು, ಜಿಲನ್ಸ್ ಮತ್ತು ಪೇಜ್ ಕಂಡುಕೊಂಡಿರುವಂತೆ ದೊಡ್ಡ ಕಾರ್ಪೊ ರೇಟುಗಳು ಮತ್ತು ಶ್ರೀಮಂತರ ರಾಜಕೀಯ ಪ್ರಾಬಲ್ಯದಲ್ಲಿ ಅಪಾರ ಹೆಚ್ಚಳವಾಯಿತು. ಎರಡನೆಯದಾಗಿ ಪರ್ಯಾಯ ಶಕ್ತಿ ಕೇಂದ್ರಗಳ ಪ್ರಾಬಲ್ಯ ಇಳಿಮುಖವಾಗುತ್ತ ಸಾಗಿತು.
ಪಗಾರಗಳಲ್ಲಿ ಹೆಚ್ಚಳವಾಗದ ಕಾರಣ ಕುಟುಂಬದ ವೆಚ್ಚವನ್ನು ಭರಿಸುವುದಕ್ಕೋಸ್ಕರ ಜನ ಹೆಚ್ಚೆಚ್ಚು ಹೊತ್ತು ಕೆಲಸ ಮಾಡಬೇಕಾಗಿ ಬಂತು. ಮಾತ್ರವಲ್ಲ ಅದುವರೆಗೆ ಗೃಹಕೃತ್ಯಗಳಲ್ಲಿ ತೊಡಗಿರುತ್ತಿದ್ದ ಹೆಣ್ಣು ಮಕ್ಕಳು ಸಮೇತ ಉದ್ಯೋಗ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗೆ ಬಿಡುವಿಲ್ಲದ ದುಡಿಮೆ ತಳಮಟ್ಟದ ಜನಸಾಮಾನ್ಯರ ಸಂಘಟನೆಗಳ ಮೇಲೆ ದುಷ್ಪರಿಣಾಮ ಬೀರಿತು. ಅವುಗಳ ಸದಸ್ಯತ್ವ ಕಡಮೆಯಾಗತೊಡಗಿತು. ಕಾರ್ಪೊರೇಟುಗಳು ತಮ್ಮ ಕೆಲಸಗಳನ್ನು ವಿದೇಶಗಳಲ್ಲಿ ಮಾಡಿಸಲಾರಂಭಿಸಿದವು. ಇತ್ತ ಕಾರ್ಮಿಕರು ಯೂನಿಯನ್ ಕಟ್ಟಿಕೊಳ್ಳಲು ಪ್ರಯತ್ನಿಸಿದಾಗ ಕಾರ್ಪೊರೇಟುಗಳು ಅದನ್ನೂ ವಿರೋಧಿಸಿದವು. (ವೈಮಾನಿಕ ಸಂಚಾರ ನಿಯಂತ್ರಕರು ಮುಷ್ಕರ ಹೂಡಿದಾಗ ರೊನಾಲ್ಡ್ ರೇಗನ್ ಅವರನ್ನು ಕೆಲಸದಿಂದ ಕಿತ್ತುಹಾಕಿದ. ಇದು ಕಾರ್ಪೊರೇಟುಗಳ ಕ್ರಮಕ್ಕೆ ಮತ್ತಷ್ಟು ಸಮರ್ಥನೆ ನೀಡಿದಂತಾಗಿದೆ)
ಚಿಲ್ಲರೆ ವ್ಯಾಪಾರಿಗಳು, ಕಾರ್ಮಿಕ ಸಂಘಟನೆಗಳು, ರೈತ ಸಹಕಾರಿ ಸಂಘಗಳು, ಸ್ಥಳೀಯ ಹಾಗೂ ಪ್ರಾದೇಶಿಕ ಬ್ಯಾಂಕುಗಳು ಹೊಂದಿದ್ದ ‘ಸಮತೂಗಿಸುವ ಶಕ್ತಿ’ಯನ್ನು ರಾಷ್ಟ್ರ ಮಟ್ಟದ ಮಾಲ್‌ಗಳು, ಭಾರೀ ಕೃಷಿ ಉದ್ದಿಮೆಗಳು ಮತ್ತು ‘ವಾಲ್ ಸ್ಟ್ರೀಟ್’ ಎಂಬ ಸರಾಫ ಕಟ್ಟೆಗಳು ಕಸಿದುಕೊಂಡವು. ಇತ್ತ ರಾಜಕೀಯ ಪಕ್ಷಗಳು ಕೂಡ ಹೆಚ್ಚಿನ ಮತದಾರರ ನಿಲವುಗಳನ್ನು ಮಂಡನೆ ಮಾಡುವುದನ್ನೆ ನಿಲ್ಲಿಸಿದವು. ಚುನಾವಣಾ ಪ್ರಚಾರದ ವೆಚ್ಚಗಳು ಗಗನಕ್ಕೇರತೊಡಗಿದಂತೆ ಪಕ್ಷಗಳು ರಾಜ್ಯ ಮತ್ತು ಸ್ಥಳೀಯ ಸದಸ್ಯ ಸಂಘಟನೆಗಳಾಗಿ ಉಳಿಯದೆ ರಾಷ್ಟ್ರಮಟ್ಟದ ದೇಣಿಗೆ ಸಂಗ್ರಹ ಯಂತ್ರಗಳಾದವು.
ರಾಜಕೀಯ ಅಧಿಕಾರ ಹೆಚ್ಚೆಚ್ಚಾಗಿ ಉಳ್ಳವರ ಕೈಯಲ್ಲೇ ಕೇಂದ್ರೀಕೃತವಾಗತೊಡಗಿತು. ಹೀಗೆ ಒಮ್ಮೆ ರಾಜಕೀಯವಾಗಿ ಪ್ರಬಲರಾದ ಉಳ್ಳವರು ಆ ಬಲವನ್ನು ಕೇವಲ ತಮ್ಮ ಅನುಕೂಲಕ್ಕೋಸ್ಕರ ಬಳಸಿಕೊಂಡಾಗ ಅದೊಂದು ವಿಷ ವರ್ತುಲವಾಗಿ ಪರಿಣಮಿಸಿತು. ಅವರು ತಮಗೋಸ್ಕರ ತೆರಿಗೆ ವಿನಾಯಿತಿಗಳನ್ನು ಪಡೆದುಕೊಂಡರು; ತೆರಿಗೆ ವಂಚನೆಗೆ ಹೆಚ್ಚೆಚ್ಚು ಕಳ್ಳದಾರಿಗಳನ್ನು ಮಾಡಿಸಿಕೊಂಡರು, ಕಾರ್ಪೊರೇಟು ಕಲ್ಯಾಣ ಮತ್ತು ಮುಕ್ತ ವಾಣಿಜ್ಯ ಒಪ್ಪಂದಗಳನ್ನು, ಕಾರ್ಮಿಕ ಯೂನಿಯನ್ ವಿರೋಧಿ ಕಾನೂನುಗಳನ್ನು ಮಾಡಿಸಿಕೊಂಡರು, ಸುರಕ್ಷತಾ ಉಪಕ್ರಮಗಳ ವೆಚ್ಚದಲ್ಲಿ ಕಡಿತ, ಸಾರ್ವಜನಿಕ ಹೂಡಿಕೆಯಲ್ಲಿ ಕಡಿತ ಇತ್ಯಾದಿಗಳನ್ನು ಜಾರಿಗೊಳಿಸಿದರು.
ಇವೆಲ್ಲದರಿಂದಾಗಿ ಆರ್ಥಿಕ ಪ್ರಗತಿಯ ಫಲ ವೆಲ್ಲ ಮೇಲ್ವರ್ಗಗಳ ಪಾಲಾಗಿ ಮಿಕ್ಕುಳಿದವರಲ್ಲಿ ಅಧಿಕಾಂಶ ಮಂದಿ ಅದರಿಂದ ಹೊರಗುಳಿಯುವಂತಾಗಿದೆ. ಇವತ್ತು ಜನರಿಗೆ ತಾವು ಬಲಹೀನರು, ತಮ್ಮಿಂದೇನೂ ಸಾಧ್ಯವಾಗುತ್ತಿಲ್ಲವೆಂದು ಅನಿಸಲು ಇದೇ ಕಾರಣ. ಹಾಗಾಗಿ ರಾಜಕೀಯ ಅಂದಾಕ್ಷಣ ಜನ ಮೂಗು ಮುರಿಯುವಂತಾಗಿದೆ; ಮತದಾನ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ.
ಆದರೆ ಹೀಗೆ ರಾಜಕೀಯ ವ್ಯವಸ್ಥೆಯಿಂದ ದೂರಾದರೆ ನಮ್ಮ ಕಥೆ ಮುಗಿದ ಹಾಗೆ. ಬಲಹೀನತೆ ಎಂಬುದು ತನ್ನ ನುಡಿಯನ್ನು ತಾನೇ ದಿಟವಾಗಿಸುವ ಭವಿಷ್ಯವಾಣಿಯಂತೆ. ಅಶಕ್ತರು ಅಂದುಕೊಳ್ಳುತ್ತ ಹಾಗೇ ಇದ್ದುಬಿಟ್ಟರೆ ಮತ್ತಷ್ಟು ಅಶಕ್ತರಾಗುತ್ತಾ ಹೋಗುತ್ತೇವೆ. ಈಗ ಉಳಿದಿರುವ ದಾರಿ ಒಂದೇ. ಮತ್ತೊಮ್ಮೆ ಕ್ರಿಯಾಶೀಲ ರಾಜಕಾರಣಕ್ಕೆ ಧುಮುಕಿ, ಸಂಘಟಿತರಾಗಿ, ಸನ್ನದ್ಧರಾಗಿ, ಹೊಸ ಸಮತೂಗುವ ಶಕ್ತಿಯೊಂದನ್ನು ರಚಿಸಿ ಬಹುಸಂಖ್ಯಾತ ಜನಸಾಮಾನ್ಯರಿಗಾಗಿರುವ ಹೊಸದೊಂದು ಪ್ರಜಾಪ್ರಭುತ್ವ ಹಾಗೂ ಆರ್ಥಿಕತೆಯನ್ನು ಸ್ಥಾಪಿಸುವುದು.
 ದುಡ್ಡೆಣಿಸುವುದರಲ್ಲಿ ಸಿದ್ಧಹಸ್ತರಾದ ಆರ್ಥಿಕ ಹಿತಾಸಕ್ತಿಗಳು ಆ ಕೆಲಸ ಮಾಡುತ್ತಾ ಇವೆ. ನಮ್ಮ ನೈಪುಣ್ಯವಿರುವುದು ಧ್ವನಿ, ಚೈತನ್ಯ ಮತ್ತು ಮತಗಳ ಬಳಕೆಯಲ್ಲಿ ನಾವೀಗ ಅದನ್ನೇ ಮಾಡಬೇಕಾಗಿದೆ. ಟಿಪ್ಪಣಿ: ಭಾರತದ ಪ್ರಜೆಗಳಾದ ನಮ್ಮ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿದೆಯೇ?  
-varthabharati

Advertisement

0 comments:

Post a Comment

 
Top