ಕೊಪ್ಪಳ, ಅ. ೨೭. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ೧೯೮೯ ಅನುಷ್ಠಾನ ಮತ್ತು ಬಲವರ್ಧನಾ ಸಮಿತಿಗೆ ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಗೊಂಡಬಾಳ ಅವರ ಆಯ್ಕೆಯನ್ನು ಅವಿರೋಧವಾಗಿ ಮಾಢಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಿಂಗಪ್ಪ ದೊಡ್ಡಮನಿ, ಉಪಾಧ್ಯಕ್ಷರಾಗಿ ರಮೇಶ ಕಾಳಿ ಮತ್ತು ಮಾರ್ಕಂಡೆಪ್ಪ ಹಲಗಿ, ಸಹ ಕಾರ್ಯದರ್ಶಿಯಾಗಿ ಕೆ. ಎಸ್. ಮೈಲಾರಪ್ಪ ಹಾಗು ಕಾರ್ಯಕಾರಿ ಸಮಿತಿಗೆ ರೇಣುಕಮ್ಮ ಸಾವಕ್ಕನವರ ಹಾಗೂ ಫಕೀರಮ್ಮ ಘಾಟಿ, ಕಂಡಕ್ಟರ್ ರವೀಂದ್ರ ವೈ. ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಮಹಿಳಾ ವೇದಿಕೆಗೆ ಜಿಲ್ಲಾ ಅಧ್ಯಕ್ಷೆಯಾಗಿ ಕಾತರಕಿಯ ಹುಲಿಗೆಮ್ಮ ಸಿಂಗಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಮರಿಯಮ್ಮ ದುರಗಪ್ಪ ಈಚನಾಳ, ಉಪಾಧ್ಯಕ್ಷರಾಗಿ ರತ್ನಮ್ಮ ದ್ಯಾಮಪ್ಪ ವಡ್ಡರ ಹಾಗೂ ಖಜಾಂಚಿಯಾಗಿ ಮಂಜುಳಾ ಭರಮಪ್ಪ ತಳಕಲ್ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟಕ್ಕೆ ಜಿಲ್ಲಾಧ್ಯಕ್ಷರಾಗಿ ಗಂಗಾಧರ ಮುದಕಪ್ಪ ಈಚನಾಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಭಾಗ್ಯಶ್ರೀ ಶೇಖರಪ್ಪ ತಳವಾರ ಆಯ್ಕೆಯಾದರು.
ರಾಜ್ಯ ಸಮಿತಿ ಸದಸ್ಯರಾದ ಜೆ. ಶಂಕರ ಗಂಗಾವತಿ, ರಮೇಶ ಕೋಟಿ ಕನಕಗಿರಿ ಹಾಗೂ ಮಂಜುನಾಥ ಕೋಳೂರ ಕೊಪ್ಪಳ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಡಾ|| ಜ್ಞಾನಸುಂದರ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ದಲಿತರ ಏಳ್ಗೆ ಆಗಬೇಕಾದರೆ ಮಾತು ಕಡಿಮೆಯಾಗಿ ಕೆಲಸ ಜಾಸ್ತಿಯಾಗಬೇಕು, ದಲಿತರು ವಿದ್ಯಾವಂತರಾಗಬೇಕು, ದುಡಿಮೆಯ ಕಡೆಗೆ ಪೂರ್ಣಪ್ರಮಾಣದ ಕಾಳಜಿವಹಿಸಬೇಕು ಸ್ವಚ್ಛವಾದ ಬದುಕನ್ನು ರೂಢಿಸಿಕೊಳ್ಳಬೇಕು, ಅದರ ಜೊತೆಗೆ ದಲಿತ ಜನಪ್ರತಿನಿಧಿಗಳನ್ನು ನಿದ್ದೆಯಿಂದ ಎಬ್ಬಿಸುವ ಕೆಲಸವಾಗಬೇಕು, ಅವರು ಅಧಿಕಾರ ಹಿಡಿದುಕೊಂಡು ನಿದ್ದೆಗೆ ಜಾರಿದ್ದಾರೆ, ನಿದ್ದೆಯಿಂದ ಎಬ್ಬಿಸಬೇಕು ಇಲ್ಲವಾದರೆ ಅವರನ್ನು ಅ ಜಾಗದಿಂದಲೇ ಮನೆಗೆ ಕಳಿಸಬೇಕು, ದಲಿತರು ಜಾಗೃತರಾಗದ ಹೊರತು ಅಭಿವೃದ್ಧಿ ಅಸಾಧ್ಯ, ನಮ್ಮನ್ನು ದುರುಪಯೋಗ ಪಡಿಸಿಕೊಳ್ಳುವ ಜನರಿಂದ ದೂರವಿರಬೇಕು ಎಂದು ಸಹ ಎಚ್ಚರಿಕೆ ನೀಡಿದರು.
ನೂತನ ಅಧ್ಯಕ್ಷರ ಅಭಿನಂದನಾ ಭಾಷಣ ಮಾಡಿದ ಜೆ. ಶಂಕರ, ರಾಜ್ಯ ಸಮಿತಿಯ ಸದಾಶಯದ ನುಡಿಗಳನ್ನು ಹೇಳಿದ ಅವರು, ಜಿಲ್ಲಾ ಸಮಿತಿಯ ಮುಂದಿನ ಕಾರ್ಯಗಳ ಕುರಿತು ವಿವರಿಸಿದರು.
0 comments:
Post a Comment