ದ್ವಿತೀಯ ಪಿಯುಸಿ ಪರೀಕ್ಷೆಯ ನಕಲಿ ಅಂಕಪಟ್ಟಿಯನ್ನು ಸಲ್ಲಿಸಿ, ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಗಿಟ್ಟಿಸಿ ಸೇವೆ ಸಲ್ಲಿಸುತ್ತಿದ್ದ ಮೂವರು ಗ್ರಾಮ ಲೆಕ್ಕಿಗರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇದ್ದ ಗ್ರಾಮ ಲೆಕ್ಕಿಗರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕಳೆದ 2012 ರ ಜೂನ್ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಲಾಯಿತು. ನಂತರ ನೇಮಕಾತಿ ಪ್ರಕ್ರಿಯೆಯಂತೆ ಆಯ್ಕೆಯಾಗಿದ್ದ ಒಟ್ಟು 33 ಅಭ್ಯರ್ಥಿಗಳ ಪೂರ್ವ ವೃತ್ತಾಂತದ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಪಡೆದು, ಸ್ಥಳ ಆಯ್ಕೆಗೆ ಕೌನ್ಸಿಲಿಂಗ್ ನಡೆಸಿ, ಎಲ್ಲ 33 ಅಭ್ಯರ್ಥಿಗಳಿಗೆ 2013 ರ ಜನವರಿ 02 ರಂದು ನೇಮಕಾತಿ ಆದೇಶ ನೀಡಲಾಯಿತು. ಉಡುಪಿ ಜಿಲ್ಲೆಯ ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ನೈಜತೆಯಿಂದ ಕೂಡಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸರ್ಕಾರ ಇನ್ನಿತರ ಜಿಲ್ಲೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪೂರ್ವದಲ್ಲಿ ಅಂಕಪಟ್ಟಿಗಳ ನೈಜತೆಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪರಿಶೀಲಿಸಿ, ದೃಢಪಡಿಸಿಕೊಂಡ ನಂತರವೇ ನೇಮಕಾತಿ ಆದೇಶವನ್ನು ನೀಡುವಂತೆ ಹಾಗೂ ಈಗಾಗಲೆ ನೇಮಕಾತಿ ಹೊಂದಿರುವ ಅಭ್ಯರ್ಥಿಗಳ ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಿ, ನಕಲು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತು. ಅದರನ್ವಯ ನೇಮಕಾತಿ ಹೊಂದಿ, ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 25 ಗ್ರಾಮ ಲೆಕ್ಕಿಗರ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೋರಿ ಕೊಪ್ಪಳ ಜಿಲ್ಲಾಧಿಕಾರಿಗಳು, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಅಭ್ಯರ್ಥಿಗಳ ಅಂಕಪಟ್ಟಿಗಳೊಂದಿಗೆ ಮನವಿ ಸಲ್ಲಿಸಿತು. 25 ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಪರಿಶೀಲಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯು 25 ರ ಪೈಕಿ 22 ಅಭ್ಯರ್ಥಿಗಳ ಅಂಕಪಟ್ಟಿಗಳು ನೈಜತೆಯಿಂದ ಕೂಡಿದ್ದು, ಇನ್ನುಳಿದ ಜಯಂತ್ ಎಲ್. ಹರೀಶ್ ಎಂ. ಮತ್ತು ಮನುರಾಧನ್ ಹೆಚ್. ಸೇರಿದಂತೆ 03 ಅಭ್ಯರ್ಥಿಗಳ ಅಂಕಪಟ್ಟಿಗಳು ನಕಲಿ ಎಂಬುದಾಗಿ ವರದಿಯನ್ನು ನೀಡಿದೆ.
ಮೂವರು ಗ್ರಾಮ ಲೆಕ್ಕಿಗರ ವಿವರ : ಯಲಬುರ್ಗಾ ತಾಲೂಕು ವಜ್ರಬಂಡಿ ಗ್ರಾಮ ಲೆಕ್ಕಿಗರಾಗಿರುವ ಜಯಂತ ಎಲ್. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದೊಡ್ಡಚೆನ್ನಹಳ್ಳಿ ಗ್ರಾಮದವರಾಗಿದ್ದು, ತ್ಯಾಮಗೊಂಡ್ಲು ಊರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇವರು ದ್ವಿತೀಯ ಪಿಯುಸಿ ಯಲ್ಲಿ ವಾಸ್ತವವಾಗಿ ಪಡೆದಿರುವ ಒಟ್ಟು ಅಂಕಗಳು 305. ಆದರೆ ನಕಲಿ ಅಂಕಪಟ್ಟಿಯಲ್ಲಿದಿದ್ದು, ಒಟ್ಟು 574 ಅಂಕಗಳು. ಯಲಬುರ್ಗಾ ತಾಲೂಕು ಶಿರೂರು ಗ್ರಾಮ ಲೆಕ್ಕಿಗರಾಗಿರುವ ಹರೀಶ್ ಎಂ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಮುಗಬಲಾ ಗ್ರಾಮದವರಾಗಿದ್ದು, ಹೊಸಕೋಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇವರು ವಾಸ್ತವವಾಗಿ ಪಡೆದ ಅಂಕಗಳು ಒಟ್ಟು 224. ಆದರೆ ನಕಲಿ ಅಂಕಪಟ್ಟಿಯಲ್ಲಿದ್ದಿದ್ದು ಒಟ್ಟು 569 ಅಂಕಗಳು. ಯಲಬುರ್ಗಾ ತಾಲೂಕು ಬೇವೂರು ಗ್ರಾಮ ಲೆಕ್ಕಿಗರಾಗಿರುವ ಮನುರಾಧನ ಹನುಮಂತಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಓಬಳಾಪುರ ಗ್ರಾಮದವರಾಗಿದ್ದು, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಆದಿಚುಂದನಗಿರಿಯ ಎಸ್.ಜಿ. ಸ್ವಾಮಿ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇವರು ವಾಸ್ತವವಾಗಿ ಪಡೆದದ್ದು ಒಟ್ಟು 382 ಅಂಕಗಳು. ಆದರೆ ನಕಲಿ ಅಂಕಪಟ್ಟಿಯಲ್ಲಿದ್ದಿದ್ದು 576 ಅಂಕಗಳು.
ಕರ್ನಾಟಕ ಸೇವಾ ನಿಯಮಗಳಂತೆ ಖೊಟ್ಟಿ ಅಂಕಪಟ್ಟಿಗಳನ್ನು ಸಲ್ಲಿಸಿ ಆಯ್ಕೆಯಾದ ಮೂವರು ಗ್ರಾಮ ಲೆಕ್ಕಿಗರನ್ನು ಜು. 31 ರಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment