ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ಆ. 02 ರಂದು ಶನಿವಾರದಿಂದಲೇ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗಿದ್ದು ನ. 30 ರವರೆಗೆ ನೀರನ್ನು ಒದಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು.
ಮುನಿರಾಬಾದಿನ ಕಾಡಾ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸ
ಲಾಗಿದ್ದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 99ನೇ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಮಳೆಯ ವಿಳಂಬದ ಕಾರಣ ಕಾಲುವೆಗಳಿಗೆ ನೀರು ಹರಿಸುವುದು ಸಹ ವಿಳಂಬವಾಗಿದೆ. ಜಲಾಶಯಕ್ಕೆ 1,34,282 ಕ್ಯೂಸೆಕ್ ಒಳಹರಿವಿದ್ದು, ಸದ್ಯ 98. 662 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಮಟ್ಟ 1632. 43 ಅಡಿ ಇದೆ. ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್ ಮೂಲಕ 1. 74 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿದ್ದು, ಈಗಾಗಲೆ ಆ. 02 ರಿಂದಲೇ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಸರಾಸರಿ 3200 ಕ್ಯೂಸೆಕ್‍ನಂತೆ ಆ. 02 ರಿಂದ ನವೆಂಬರ್ 30 ರವರೆಗೆ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಸರಾಸರಿ 600 ಕ್ಯೂಸೆಕ್‍ನಂತೆ ನವೆಂಬರ್ 30 ರವರೆಗೆ, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ 1000 ಕ್ಯೂಸೆಕ್‍ನಂತೆ ನವೆಂಬರ್ 30 ರವರೆಗೆ. ರಾಯ ಬಸವಣ್ಣ ಕಾಲುವೆಗೆ ಈಗಾಗಲೆ ಸರಾಸರಿ 180 ಕ್ಯೂಸೆಕ್‍ನಂತೆ ನೀರು ಹರಿಸಲಾಗುತ್ತಿದ್ದು ಡಿಸೆಂಬರ್ 10 ರವರೆಗೆ ಅಥವಾ ನೀರು ಲಭ್ಯ ಇರುವವರೆಗೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30 ರವರೆಗೆ ಸರಾಸರಿ 16 ಕ್ಯೂಸೆಕ್‍ನಂತೆ ನೀರು ಹರಿಸಲಾಗುವುದು. ವಿವಿಧ ಕಾಲುವೆಗಳಿಗೆ ಈಗ ನಿರ್ಧರಿಸಲಾಗಿರುವ ಅವಧಿಯು ನಿರ್ಧರಿತ ಪ್ರಮಾಣದಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ, ಇದರಲ್ಲಿ ಯಾವುದು ಮೊದಲು ಅನ್ವಯಿಸುತ್ತದೆಯೋ ಅದರಂತೆ ನೀರಿ ಹರಿಸಲು ನಿರ್ಧರಿಸಲಾಗಿದೆ. ಈಗಾಗಲೆ ಬಳ್ಳಾರಿ ನಗರಕ್ಕೆ ಹೆಚ್.ಎಲ್.ಸಿ. ಮೂಲಕ 0. 071 ಟಿ.ಎಂ.ಸಿ. ನೀರನ್ನು ಹಾಗೂ ಗಂಗಾವತಿ, ಸಿಂಧನೂರು ಪಟ್ಟಣಗಳಿಗೆ ನದಿ ಮೂಲಕ 0. 259 ಟಿ.ಎಂ.ಸಿ. ನೀರನ್ನು ಕುಡಿಯುವ ಸಲುವಾಗಿ ಜುಲೈ ತಿಂಗಳಿನಲ್ಲಿ ಹರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಹೇಳಿದರು. ಶಾಸಕರುಗಳಾದ ಪ್ರತಾಪಗೌಡ ಪಾಟೀಲ್, ಎನ್.ಎಸ್. ಭೋಸರಾಜು (ವಿಧಾನಪರಿಷತ್), ತುಂಗಭದ್ರಾ ಯೋಜನಾ ವೃತ್ತದ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ ಗುಂಗಿ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ಮುನಿರಾಬಾದಿನ ಕಾಡಾ ಸಭಾಂಗಣದಲ್ಲಿ ನಡೆದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 99ನೇ ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ಸಂಸದ ಬಿ. ಶ್ರೀರಾಮುಲು, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ಬಾದರ್ಲಿ ಹಂಪನಗೌಡ, ಹಂಪಯ್ಯ ನಾಯಕ್, ಹಾಲಪ್ಪ ಆಚಾರ್, ತಿಪ್ಪರಾಜು, ನಾಗರಾಜ್, ಮೃತ್ಯುಂಜಯ ಜಿನಗ, ಪ್ರತಾಪಗೌಡ ಪಾಟೀಲ್, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯಕ್ ಕಟ್ಟಿಮನಿ ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಉನ್ನತ ಅಧಿಕಾರಿಗಳು, ವಿವಿಧ ಗಣ್ಯರು ಭಾಗವಹಿಸಿದ್ದರು.
0 comments:
Post a Comment