PLEASE LOGIN TO KANNADANET.COM FOR REGULAR NEWS-UPDATES

 ಕೇಂದ್ರ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತಹ ಪ್ರಧಾನಮಂತ್ರಿ ಜನ-ಧನ ಯೋಜನೆ ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಜನ-ಧನ ಯೋಜನೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಇದುವರೆಗೂ ಬ್ಯಾಂಕಿಂಗ್ ಕ್ಷೇತ್ರದ ಸೌಲಭ್ಯಗಳಿಂದ ವಂಚಿತರಾಗಿರುವ ಹಿಂದುಳಿದ, ಆರ್ಥಿಕವಾಗಿ ಸಬಲರಲ್ಲದ ಕೆಳಸ್ಥರದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತದ ಬಡಜನರ ಶ್ರೇಯೋಭಿವೃದ್ಧಿಯ ಆಶಯದೊಂದಿಗೆ ಸರಳ, ಹೊಸತನದಿಂದ ಕೂಡಿದ ಪ್ರಧಾನಮಂತ್ರಿ ಜನ-ಧನ ಯೋಜನೆ ದೇಶಾದ್ಯಂತ ಏಕಕಾಲದಲ್ಲಿ ಇಂದಿನಿಂದ ಜಾರಿಯಾಗಲಿದ್ದು, ಬ್ಯಾಂಕಿಂಗ್ ಕ್ಷೇತ್ರ ಪ್ರತಿಯೊಬ್ಬರ ಮನೆ ಬಾಗಿಲಿಗೇ ಬರಲಿದೆ.  ಆಗಸ್ಟ್ ೧೫ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ ಕೇವಲ ೧೩ ದಿನಗಳಲ್ಲಿಯೇ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ಕೇಂದ್ರ ಸರ್ಕಾರದ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.  ಸದ್ಯ ದೇಶದಲ್ಲಿರುವ ಕುಟುಂಬಗಳ ಸಂಖ್ಯೆಗೂ, ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಒಟ್ಟು ಖಾತೆಗಳ ಸಂಖ್ಯೆಗೂ ಅಜ-ಗಜಾಂತರ ವ್ಯತ್ಯಾಸವಿದೆ.  ಈ ವ್ಯತ್ಯಾಸವನ್ನು ಹೋಗಲಾಡಿಸಿ, ಪ್ರತಿಯೊಂದು ಕುಟುಂಬವೂ ಬ್ಯಾಂಕ್ ಖಾತೆಯನ್ನು ಹೊಂದಬೇಕು ಎನ್ನುವ ಆಶಯ ಜನ-ಧನ ಯೋಜನೆಯಲ್ಲಿದೆ.  ಬ್ಯಾಂಕ್ ಖಾತೆ ಅಂತಹ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲಿದೆ.  ಅಲ್ಲದೆ ಎಲ್ಲ ಕುಟುಂಬಗಳೂ ವಿಮಾ ಸೌಲಭ್ಯದ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿವೆ.  ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದ್ದು, ಇದರಿಂದ ಅವರಿಗೆ ಹೆಚ್ಚಿನ ಬಡ್ಡಿದರದ ಹೊರೆ ತಗ್ಗಲಿದೆ.  ತುತ್ತಿನ ಚೀಲ ತುಂಬಿಸಲು ಶ್ರಮಪಡುವ ಸಣ್ಣ-ಪುಟ್ಟ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳೂ ಸಹ ಈ ಯೋಜನೆ ಸೌಲಭ್ಯ ಪಡೆಯಬಹುದಾಗಿದ್ದು, ಬ್ಯಾಂಕಿಂಗ್ ಸೌಲಭ್ಯದ ಜೊತೆಗೆ ೫೦೦೦ ರೂ. ಗಳವರೆಗಿನ ಖಾತೆ ಕೊರತೆ (ಓವರ್ ಡ್ರಾಫ್ಟ್) ಮಿತಿ ಸೌಲಭ್ಯ ದೊರೆಯಲಿದ್ದು, ಆರ್ಥಿಕ ಸಬಲತೆಯ ಜೊತೆಗೆ, ಅವರಲ್ಲಿ ಹಣದ ಸದ್ಬಳಕೆಯ ಭಾವನೆಯೂ ಬೆಳೆಯಲಿದೆ.  ವಿವಿಧ ಸಬ್ಸಿಡಿ ನೇರ ನಗದು ಪಾವತಿ, ಸಾಮಾಜಿಕ ಪಿಂಚಣಿ ಪಾವತಿ ಮುಂತಾದ ಸೌಲಭ್ಯಗಳಿಗೆ ಈ ಯೋಜನೆ ವರವಾಗಲಿದ್ದು, ಇಂತಹ ಮಹತ್ವಪೂರ್ಣ ಯೋಜನೆಯನ್ನು ಬ್ಯಾಂಕ್ ಅಧಿಕಾರಿಗಳು ಜನಸಾಮಾನ್ಯರಿಗೆ ತ್ವರಿತವಾಗಿ ತಲುಪಿಸಲು ಶ್ರಮಿಸುವಂತೆ ಸಂಸದ ಸಂಗಣ್ಣ ಕರಡಿ ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ. ರವೀಂದ್ರ ಅವರು ಮಾತನಾಡಿ, ಆಗಸ್ಟ್ ೧೫ ರಿಂದ ಈವರೆಗೆ ಈಗಾಗಲೆ ೧೫ ಸಾವಿರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಎಲ್ಲ ಬ್ಯಾಂಕ್‌ಗಳು ಯೋಜನೆಗೆ ಉತ್ತಮವಾಗಿ ಸ್ಪಂದಿಸುತ್ತಿವೆ.  ಜನ-ಧನ ಯೋಜನೆಯಡಿ ಪ್ರತಿಯೊಂದು ಕುಟುಂಬದ ಪುರುಷ ಮತ್ತು ಮಹಿಳೆಯರು ಯಾವುದೇ ಕನಿಷ್ಟ ಮೊತ್ತದ ಷರತ್ತು ಇಲ್ಲದೆ ಮೂಲ ಉಳಿತಾಯ ಠೇವಣಿ ಖಾತೆ ತೆರೆಯಬಹುದು ಅಲ್ಲದೆ ಉಚಿತ ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯ, ತಿಂಗಳಿಗೆ ೪ ಬಾರಿ ಉಚಿತ ನಗದು ಹಿಂಪಡೆಯುವ ಸೌಲಭ್ಯವಿದೆ.  ಖಾತೆಯಲ್ಲಿ ಇಂತಿಷ್ಟು ಕನಿಷ್ಟ ಮೊತ್ತ ಇರಬೇಕೆಂಬ ಷರತ್ತು ಇಲ್ಲ.  ಬ್ಯಾಂಕಿಂಗ್ ಕಾರ್ಯನಿರ್ವಾಹಕರ ಮೂಲಕ ನೇರ ಮನೆಯ ಬಾಗಿಲಿಗೆ ಸೌಲಭ್ಯ.  ಹೊಸ ಖಾತೆ ತೆರೆಯುವ ಸಂದರ್ಭದಲ್ಲಿ ೦೧ ಲಕ್ಷ ರೂ. ವರೆಗಿನ ವಿಮೆ ಸೌಲಭ್ಯ ದೊರೆಯಲಿದೆ ಎಂದರು.
  ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಎಸ್‌ಬಿಹೆಚ್ ಬಳ್ಳಾರಿ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ವೆಂಕಟೇಶ್ವರರಾವ್, ಜನರಲ್ ಮ್ಯಾನೇಜರ್ ಸುರೇಂದ್ರ ಉಪಸ್ಥಿತರಿದ್ದರು.  ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಜನ-ಧನ ಯೋಜನೆಯಡಿ ವಿವಿಧ ಕುಟುಂಬಗಳಿಗೆ ಬ್ಯಾಂಕ್ ಖಾತೆ ತೆರೆದು, ಪಾಸ್ ಬುಕ್, ಎಟಿಎಂ, ಡೆಬಿಟ್ ಕಾರ್ಡ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Advertisement

0 comments:

Post a Comment

 
Top