PLEASE LOGIN TO KANNADANET.COM FOR REGULAR NEWS-UPDATES

 ಫುಲ್ ಕಾಮಿಡಿ, ಫುಲ್ ಪವರ್

        ಹಲವು ವಿಘ್ನಗಳನ್ನ ಎದುರಿಸಿ ವಿನಾಯಕನ ಹಬ್ಬಕ್ಕೆ ಬಿಡುಗಡೆಗೊಂಡ ಪುನೀತ್‌ರಾಜ್‌ಕುಮಾರ್ ಸಿನಿಮಾ ಪವರ್‌ಸ್ಟಾರ್ ಮೇಲ್ನೋಟಕ್ಕೆ ಮಾಸ್ ಪಿಕ್ಚರ್ ಥರಾ ಕಂಡರೂ ಒಳಗೆಲ್ಲ ಕಾಮಿಡಿಯ ಸರಕಿದೆ. ತೆಲುಗಿನ ದೂಕುಡು ಸಿನಿಮಾದ ರಿಮೇಕ್ ಅಗಿರುವ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗಂತೂ ಹಬ್ಬ. 
        ಶೇ.೧೦ ರಷ್ಟು ಹಾಡುಗಳು, ಶೇಕಡಾ ೨೦ ರಷ್ಟು ಸೆಂಟಿಮೆಂಟ್, ಶೇ.೩೦ ರಷ್ಟು ಪವರ್ ಹಾಗೂ ಶೇಕಡಾ ೪೦ ರಷ್ಟು ಕಾಮಿಡಿ ಪವರ್‌ನಲ್ಲಿದೆ. ಒಟ್ಟಾರೆ ಕಾಮಿಡಿಗೆ ಪ್ರಾಧಾನ್ಯತೆ ಇರುವ ಪವರ್‌ಸ್ಟಾರ್‌ನಲ್ಲಿ ಪುನೀತ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಅಷ್ಟೇ ಪವರ್‌ಫುಲ್ಲಾಗಿ ಸ್ಟಂಟ್ ಕೂಡಾ ಮಾಡಿದ್ದಾರೆ. ಅಫ್‌ಕೋರ್ಸ್ ರಿವಾಲ್ವಾರ್ ಕೂಡಾ ಪುನೀತ್ ಸಿನಿಮಾದಲ್ಲಿ ಜಾಸ್ತಿ ಸ್ಕೋಪ್ ತಗೊಂಡಿದೆ.
        ಫ್ಯಾಮಿಲಿ ಸ್ಟೋರಿಯೊಂದಿಗೆ ತೆರೆದುಕೊಳ್ಳುವ ಚಿತ್ರ ಕೇವಲ ೧೦ ನಿಮಿಷದಲ್ಲಿ ಭೂಗತಲೋಕಕ್ಕೆ ಕಾಲಿಡುತ್ತದೆ. ೧೨ ನೇ ನಿಮಿಷಕ್ಕೆ ಹೀರೊ ಎಂಟ್ರಿ. ಎಸಿಪಿ ಆಗಿ ಕಾಣಿಸಿಕೊಂಡಿರೋ ಪುನೀತ್, ಚಿತ್ರದ ಕ್ಲೈಮ್ಯಾಕ್ಸ್‌ವರೆಗೂ ಪೊಲೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಎಲ್ಲ ಸಿನಿಮಾಗಳಲ್ಲಿ ಇರುವಂತೆ ಇಲ್ಲೂ ಲವ್ ಇದೆ. ಆಕ್ಷನ್ ಇದೆ, ಸಾಂಗ್ ಇದೆ, ನಕ್ಕು ಸುಸ್ತಾಗುವಷ್ಟು ಕಾಮಿಡಿಯ ಸರಕಿದೆ. ಆದರೆ ತೆಲುಗು ಸಿನಿಮಾದಲ್ಲಿರುವಷ್ಟು ಜೋಶ್ ಇನ್ನಷ್ಟು ಬೆಕ್ಕಿತ್ತು, ಡೈಲಾಗ್‌ನಲ್ಲೊಂದಿಷ್ಟು ಪವರ್ ಬರಬೇಕಿತ್ತು.
       ರಾಜ್ ಅಭಿಮಾನಿ ಶಿವಾಜಿಪ್ರಭು ಊರಿಗೆ ಉಪಕಾರ ಮಾಡುತ್ತಾ, ರಾಜಕಾರಣಿಯಾಗಿ ಬೆಳೆಯುತ್ತಾನೆ. ವೈರಿ ಮನೆಗೆ ಬಂದರೂ ಉಪಚರಿಸುವ ದೊಡ್ಡ ಗುಣ ಆವರದು. ವ್ಯವಹಾರದ ಲಾಭವನ್ನೇ ಮುಖ್ಯವಾಗಿಸಿಕೊಂಡಿರೋ ದೊಡ್ಡಣ್ಣ, ನಕಲಿ ಮಾತ್ರೆಗಳನ್ನ ಮಾರುಕಟ್ಟೆಯಲ್ಲಿ ಬಿಟ್ಟು ಸಾಕಷ್ಟು ಲಾಭ ಮಾಡಿಕೊಳ್ಳುತ್ತಾನೆ. ರೋಗಿಗಳ ಪ್ರಾಣ ಹೋಗುತ್ತದೆ. ಸಹಿಸದ ಶಿವಾಜಿಪ್ರಭು ದೊಡ್ಡಣ್ಣನನ್ನು ಎಚ್ಚರಿಸುವುದಷ್ಟೇ ಅಲ್ಲ, ಸ್ಟಾಕ್‌ಗೆ ಬೆಂಕಿ ಹಚ್ಚುತ್ತಾನೆ. ನಕಲಿ ಮಾತ್ರೆಯ ಕಂಪನಿಯ ಮುಖ್ಯಸ್ಥ ಡಾನ್ ಲಂಚದಾಸೆ ತೋರಿಸಿ ಮಂಗಳಾರತಿ ಮಾಡಿಸಿಕೊಳ್ಳುತ್ತಾನೆ.
        ಶಿವಾಜಿಪ್ರಭುವನ್ನು ಮುಗಿಸಲು ಹೊಂಚು ಹಾಕುವ ದೊಡ್ಡಣ್ಣ, ಡಾನ್ ಹಾಗೂ ಆತನ ಭಂಟರಂತೆ ಬೀಗುತ್ತಿದ್ದ ಶರತ್ ಲೋಹಿತಾಶ್ವ, ವೇಣು ಕಾರಿಗೆ ಆಪಘಾತ ಮಾಡಿ, ಶಿವಾಜಿಪ್ರಭು ಸತ್ತ ಎಂದು ಜನರೆದುರು ನಾಟಕ ಮಾಡಿ ಶರತ್ ಲೋಹಿತಾಶ್ವ ರಾಜಕಾರಣಿಯಾಗುತ್ತಾನೆ. 
       ಶಿವಾಜಿಪ್ರಭುವನ್ನು ಜನರ ಸಹಾಯದಿಂದ ಸಂಬಂಧಿಕ ಜೈಜಗದೀಶ್ ರಕ್ಷಿಸಿ ಮುಂಬೈನ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿದ ಪರಿಣಾಮ ೧೪ ವರ್ಷಗಳ ನಂತರ ಶಿವಾಜಿಪ್ರಭು ಕೋಮಾದಿಂದ ಆಚೆ ಬರುತ್ತಾರೆ. ನಂತರ ಅವರಿಗೆ ಒತ್ತಡ, ಆಘಾತ ಆದರೆ ಜೀವಕ್ಕೆ ಅಪಾಯ ಎಂಬ ವೈದ್ಯರ ಎಚ್ಚರಿಕೆಯಿಂದಾಗಿ ಅವರು ಖುಷಿಯಾಗಿರಲು ನಡೆಯುವ ಹೈಡ್ರಾಮಾ ಶಿಳ್ಳೆ ಗಿಟ್ಟಿಸುತ್ತವೆ. ಇಲ್ಲಿಂದ ಶುರುವಾಗುವ ಶೂಟಿಂಗ್, ರಿಯಾಲಿಟಿ ಶೋ ಡ್ರಾಮಾ ನೋಡುಗನನ್ನು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ. 
        ಶಿವಾಜಿಪ್ರಭು ಆವರ ಮಗ ಪುನೀತ್ ಪೋಲೀಸ್ ಆಫೀಸರ್. ಆದರೆ ತಂದೆಗೆ ಮಗನನ್ನು ಶಾಸಕನನ್ನಾಗಿ ಮಾಡಬೇಕೆಂಬ ಕನಸಿರುತ್ತದೆ.  ಹಾಗಾಗಿ ಶೂಟಿಂಗ್ ಕಮ್ ಡ್ರಾಮಾ ಶುರುವಾಗುತ್ತದೆ. ಜೊತೆ ಜೊತೆಗೆ ಡಾನ್‌ನನ್ನು ಹಿಡಿಯಲು ಪುನೀತ್ ಆಗಾಗ ಬೇಟೆಗೆ ಹೊರಡುತ್ತಿರುತ್ತಾರೆ. ಕೊನೆಗೆ ತನ್ನ ತಂದೆಯನ್ನು ಮುಗಿಸಲು ಹೊಂಚು ಹಾಕಿದ್ದವರ ಬಂಡವಾಳ ಅರಿತ, ನಂಬಿಕೆ ದ್ರೋಹದ ಫಾರ್ಮುಲಾವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ವೈರಿಗಳನ್ನು ಸದೆಬಡಿಯುವ ಕಥಾ ಹಂದರ ಪವರ್‌ಸ್ಟಾರ್‌ನದ್ದು.
         ಇಡೀ ಚಿತ್ರವನ್ನು ಪುನೀತ್‌ರಷ್ಟು ಹೆಗಲ ಮೇಲೆ ಹೊತ್ತವರಂತೆ ಕಂಡು ಬರುವುದು ರಂಗಾಯಣ ರಘು, ಸಾಧುಕೋಕಿಲಾ ಹಾಗೂ ಆವಿನಾಶ್. ಇವರ ಕಾಮಿಡಿಗೆ ಫುಲ್ ಮಾರ್ಕ್ಸ್. ಪುನೀತ್ ನಟನೆ, ನೃತ್ಯ, ಫೈಟಿಂಗ್ ಬಗ್ಗೆ ದೂಸ್ರಾ ಮಾತೇ ಇಲ್ಲ. ತ್ರಿಶಾಗೆ ಅರಂಭದಲ್ಲಿರುವಷ್ಟು ಸ್ಕೋಪ್ ನಂತರ ಇಲ್ಲ. ಅಭಿನಯದ ವಿಷಯದಲ್ಲಿ ಉಪದೇಶ ನೀಡುವಂಥದ್ದೇನಿಲ್ಲ. ಟೆನಿಸ್ ಕೃಷ್ಣ, ಹರೀಶ್‌ರಾಜ್, ದೊಡ್ಡಣ್ಣ, ಶರತ್ ಲೋಹಿತಾಶ್ವ, ಶಿವಾಜಿಪ್ರಭು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸಿದ್ದಾರೆ. ಥಮನ್ ಸಂಗೀತದಲ್ಲಿ ಗುರುವಾರ ಸಂಜೆ ಹಾಡು ಇಂಪಾಗಿದೆ. ಐಟಂಸಾಂಗ್ ಮೈ ನವಿರೇಳಿಸುತ್ತದೆ. ಛಾಯಾಗ್ರಹಣ ಸೂಪರ್ಬ್. ಕೆ.ಮಾದೇಶ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಸಾಕಷ್ಟು ಎಫರ್ಟ ಹಾಕಿದ್ದಾರೆ. 
         ಪುನೀತ್‌ಗೆ ಗೆಲುವು ಬೇಕಿತ್ತು. ನಿನ್ನಿಂದಲೇ ಮೂಲಕ ಸೋತಿದ್ದ ಪವರ್ ಸ್ಟಾರ್ ತಮ್ಮ ಬಿರುದಿನ ಮೂಲಕ ಮತ್ತೊಮ್ಮೆ ಗೆಲುವಿನ ಹಾದಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಬಹುದು. ಚಿತ್ರ ೧೦೦ ದಿನ ಓಡದಿದ್ದರೂ ಬಂಡವಾಳಕ್ಕೆ ಮೋಸವಿಲ್ಲ.  
-ಚಿತ್ರಪ್ರಿಯ ಸಂಭ್ರಮ್.

ರೇಟಿಂಗ್ : ***೧/೨
---------------------
*ನೋಡಬೇಡಿ
**ನೋಡ್ತಿರಾ?
***ನೋಡಬಹುದು. 
****ಚೆನ್ನಾಗಿದೆ.
*****ನೋಡಲೇಬೇಕು.  

Advertisement

0 comments:

Post a Comment

 
Top