ಸರ್ಕಾರ ರೂಪಿಸುವ ಯಾವುದೇ ಯೋಜನೆಗಳ ಯಶಸ್ಸು, ಆಯಾ ಕ್ಷೇತ್ರದಲ್ಲಿನ ಅಂಕಿ-ಸಂಖ್ಯೆಗಳ ನಿಖರತೆಯನ್ನು ಅವಲಂಬಿಸಿರುವುದರಿಂದ ಅಂಕಿ-ಅಂಶಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್‍ರವರ 122ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ಸಾಂಖ್ಯಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯ ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳ ಆಯಾ ವ್ಯಾಪ್ತಿಯ ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತದೆ. ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಯೋಜನೆಗಳು ವಿಫಲವಾಗುತ್ತವೆ. ಸರ್ಕಾರದ ಸೌಲಭ್ಯ ಕಲ್ಪಿಸುವ ಆರೋಗ್ಯ ಸುಧಾರಣಾ ಯೋಜನೆಗಳನ್ನು ರೂಪಿಸುವಾಗ, ಇಲಾಖೆ ನಿಖರ ಅಂಕಿ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅದೇ ರೀತಿ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ನಿಖರವಾದ ಅಂಕಿ-ಸಂಖ್ಯೆಗಳ ಮಾಹಿತಿಯನ್ನು ಸಂಗ್ರಹಿಸಲು ಶ್ರಮಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಹೇಳಿದರು.
ಸಮಾರಂಭದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಉಪನ್ಯಾಸಕ ಸುರೇಶ ಕುಮಾರ ಸೊನ್ನದ ಹಾಗೂ ಪ್ರಾಚಾರ್ಯ ಎಸ್.ಬಿ.ಶಾಂತಪ್ಪನವರ್ ಅವರು ಮಾತನಾಡಿ, ಪ್ರಶಾಂತಚಂದ್ರ ಮಹಾಲನೋಬಿಸ್ ಅವರು, ಅಂಕಿ-ಸಂಖ್ಯೆಗಳ ಬಗ್ಗೆ ಹೊಂದಿದ್ದ ಅಪಾರವಾದ ಜ್ಞಾನ ಮತ್ತು ಪ್ರಬುದ್ಧತೆಯಿಂದಾಗಿಯೇ ಖ್ಯಾತ ಸಂಖ್ಯಾ ಶಾಸ್ತ್ರಜ್ಞರೆನಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಪಂಚವಾರ್ಷಿಕ ಯೋಜನೆಗಳ ಯಶಸ್ವಿಗೆ ಇವರ ಕೊಡುಗೆ ಅಪಾರವಾಗಿದೆ ಎಂದು ನುಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮನ್ನವರ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಸಾಂಖ್ಯಿಕ ದಿನಾಚರಣೆ ಅಂಗವಾಗಿ ಯಾವುದೇ ಯೋಜನಾ ವರದಿಗೆ, ನಿಖರವಾದ ಅಂಕಿ-ಅಂಶಗಳ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸುತ್ತೇವೆ ಎಂಬುದಾಗಿ ಎಲ್ಲ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಎಲ್ಲ ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿ.ಪಂ. ಯೋಜನೆ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿ ಪ್ರಭು ಮಾನೆ, ಡಿಡಿಪಿಐ ಜಿ.ಹೆಚ್. ವೀರಣ್ಣ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಭೀಮಶಾ ಬಿ.ಸಿಂಗೆ ಸ್ವಾಗತಿಸಿದರು. ವನಿತಾ ಪ್ರಾರ್ಥಿಸಿದರು, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment