PLEASE LOGIN TO KANNADANET.COM FOR REGULAR NEWS-UPDATES


-ಇಸ್ಮತ್ ಫಜೀರ್
‘‘ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಬದುಕಲಾರೆ’’ ಈ ಹೇಳಿಕೆಯನ್ನು ನೋಡಿದಾಗ ಎಂತಹ ಪೆದ್ದನಿಗೂ ಇದೊಂದು ಇಮೋಶನಲ್ ಹೇಳಿಕೆ ಎಂಬುವುದು ಅರ್ಥವಾಗುತ್ತದೆ. ಆದರೆ ವಿಧಿಲೀಲೆ ಹಾಗೆಯೇ ಇತ್ತು. ಮೋದಿ ಪ್ರಧಾನಿಯಾದ ಬಳಿಕ ಅವರು ಹೆಚ್ಚು ಕಾಲ ಬದುಕಲಿಲ್ಲ. ಮೋದಿ ಗುಜರಾತ್‌ನಲ್ಲಿ ಮೆರೆದ ವಿಕಟ ಅಟ್ಟಹಾಸವನ್ನು ದೇಶದ ಉದ್ದಗಲಕ್ಕೂ ಮುಂದುವರಿಸಲಾರರು ಎಂದೇನೂ ಸ್ಪಷ್ಟವಾಗಿ ಹೇಳಲಾಗದು. ಅಂತಹ ಸಾಧ್ಯತೆಗಳನ್ನು ಯೋಚಿಸಲೂ ಆಗದೆ ನಮ್ಮ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಸೂರ್ಯ ಅನಂತಮೂರ್ತಿ ಅಸ್ತಂಗತರಾದರು. ಸುಮ್ಮನೆ ಈ ಲೇಖನದ ಮೊಟ್ಟ ಮೊದಲ ವಾಕ್ಯವನ್ನು ಇನ್ನೊಮ್ಮೆ ಗಮನಿಸಿ....... ಮೋದಿ ಪ್ರಧಾನಿಯಾದಾಗ ಈ ದೇಶದಲ್ಲಿ ಎಷ್ಟು ಮಂದಿ ಇಂತಹ ದುಗುಡಕ್ಕೆ ಒಳಗಾಗಿಲ್ಲ. ನನ್ನ ಆತ್ಮೀಯ ಗೆಳೆಯರೊಬ್ಬರು ಕಂಠ ಮಟ್ಟ ಕುಡಿದು ದಿನಗಟ್ಟಲೆ ಅತ್ತಿದ್ದರು. ಅನಂತಮೂರ್ತಿಯವರದ್ದೋ ಅಥವಾ ಅವರಂತೆ ಯೋಚಿಸುವವರದ್ದೋ ಖಂಡಿತ ಸಿನಿಕತೆಯಲ್ಲ. ಅದು ಅವರ ಆತಂಕ. ಅನಂತಮೂರ್ತಿಯವರು ಅಂತಹ ಹೇಳಿಕೆ ಕೊಡುವುದಕ್ಕೂ ನಾವು ಕೊಡುವುದಕ್ಕೂ ಹಗಲು ರಾತ್ರಿಯ ವ್ಯತ್ಯಾಸವಿದೆ. ನಾವು ಅಂತಹ ಒಂದು ಹೇಳಿಕೆ ಕೊಟ್ಟರೆ, ಲೇಖನ ಬರೆದರೆ, ಭಾಷಣ ಮಾಡಿದರೆ ಅದು ಕೇವಲ ನಮ್ಮ ಧ್ವನಿಯಾಗಿ ಮಾತ್ರ ಉಳಿಯುತ್ತದೆ. ಅನಂತಮೂರ್ತಿಯವರು ಅಂತಹ ಹೇಳಿಕೆ ಕೊಟ್ಟರೆ ಅದು ಅವರಂತೆ ಯೋಚಿಸುವವರೆಲ್ಲರ ಧ್ವನಿಯಾಗುತ್ತದೆ. ಆದುದರಿಂದಲೇ ಅನಂತ ಮೂರ್ತಿಯವರ ಸಾವು ಕೇವಲ ಓರ್ವ ಸಾಹಿತಿಯ, ಚಿಂತಕನ ಸಾವಲ್ಲ. ಅದು ಒಂದು ವೈಚಾರಿಕತೆಯ ಸಾವು. ಅನಂತಮೂರ್ತಿಯವರ ಸಾವಿನೊಂದಿಗೆ ನಮ್ಮೆಲ್ಲರನ್ನೂ ಪ್ರತಿನಿಧಿಸುತ್ತಿದ್ದ ಒಂದು ಧ್ವನಿಯನ್ನೂ ನಾವು ಕಳಕೊಂಡಿದ್ದೇವೆ. ಮೋದಿಯ ಕುರಿತಂತೆ ಅಮರ್ತ್ಯಸೇನ್‌ರವರು ನೀಡಿದ ಹೇಳಿಕೆಯನ್ನು ಒಮ್ಮೆ ಗಮನಿಸಿ ‘‘ಐ ಡಿಟ್ಞಠಿ ಟಠಿಛಿ ್ಛಟ್ಟ ಟಜಿ   
’’ ನಾನು ಮೋದಿಗೆ ಮತ ಹಾಕುವುದಿಲ್ಲ. ಈ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೆಂದಷ್ಟೆ ಹೇಳಬಹುದು. ಅನಂತ ಮೂರ್ತಿಯವರ ಹೇಳಿಕೆ ಭಾವ ನಾತ್ಮಕವಾಗಿದ್ದರೂ ಅವರ ಚಿಂತನೆಯೊಂದಿಗೆ ಸಹಮತವಿರುವ ಪ್ರತಿಯೊಬ್ಬನ ಹೇಳಿಕೆಯೂ ಆಗಿದೆ. ಅನಂತಮೂರ್ತಿಗೂ ಇತರ ಚಿಂತಕರಿಗೂ ಇದ್ದ ವ್ಯತ್ಯಾಸವಿದು. ನಮ್ಮ ನಡುವಿನ ಅನೇಕ ಬುದ್ಧಿಜೀವಿಗಳು ಯಾವುದಾದರೂ ಖಾರವಾದ ಹೇಳಿಕೆ ಕೊಟ್ಟು ಅದು ವಿವಾದದ ಬೆಂಕಿಯನ್ನು ಹೊತ್ತಿಸಬಹುದು ಎಂಬ ಕುರುಹು ಗೋಚರವಾದಾಗ ಅವರು ತಕ್ಷಣ ತಮ್ಮ ಮಾತುಗಳಿಗೆ ತೇಪೆ ಹಚ್ಚುತ್ತಾರೆ. ಆದರೆ ಅನಂತಮೂರ್ತಿ ಸದಾ ಅದಕ್ಕೆ ಅಪವಾದವಾಗಿದ್ದರು. ಹಾಗೆ ನೋಡ ಹೋದರೆ ಅನಂತಮೂರ್ತಿಯವರು ಮೊದಲು ನೀಡಿದ ಹೇಳಿಕೆ ಹಾಗಿರಲಿಲ್ಲ. ಮೊಟ್ಟ ಮೊದಲು ಬರಗೂರು ರಾಮಚಂದ್ರಪ್ಪರವರ ಕೃತಿ ಬಿಡುಗಡೆಯ ಸಂದಭರ್ ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ವಿಶ್ಲೇಷಿಸುತ್ತಾ ‘‘ಮೋದಿ ಪ್ರಧಾನಿಯಾದರೆ ನಾನು ಬದುಕಬಾರದು ಅನ್ನಿಸುತ್ತೆ’’ ಎಂದಿದ್ದರು. ಅದನ್ನು ಕೆಲವು ಮಾಧ್ಯಮಗಳು ವಿವಾದವಾಗಿ ಬೆಳೆಸಿದಾಗ ಅವರು ಇನ್ನಷ್ಟು ಸ್ಪಷ್ಟವಾಗಿ ‘‘ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಬದುಕುವುದಿಲ್ಲ’’ ಎಂದು ಹೇಳಿದರು. ಇದು ಇತರ ಬುದ್ಧಿಜೀವಿಗಳಿಗೂ ಅನಂತಮೂರ್ತಿಯವರಿಗೂ ಇದ್ದ ವ್ಯತ್ಯಾಸ. ವಿವಾದದ ಕಿಡಿ ಹೊತ್ತಿದಾಗ ತನ್ನ ವೈಚಾರಿಕತೆಯನ್ನು ಮತ್ತಷ್ಟು ಸ್ಪಷ್ಟಗೊಳಿಸಿ ತನ್ನ ಅದೇ ನಿಲುವಿಗೆ ಬದ್ಧನಾಗಿರುವುದು ಅನಂತಮೂರ್ತಿಯವರ ಸ್ಟೈಲ್. ಅನಂತಮೂರ್ತಿಯವರು ವಿಧಿ ವಶರಾದಾಗ ಸಿಡಿಮದ್ದು ಸಿಡಿಸಿ ಸಂಭ್ರಮಾಚರಿಸಿದವರ ಕೃತ್ಯದಲ್ಲಿ ನನಗೆ ವಿಶೇಷವೇನೂ ಕಂಡಿಲ್ಲ. ಅದು ಅವರ ಸಂಸ್ಕೃತಿ, ಅದು ಅವರ ಧರ್ಮ, ಅದು ಅವರ ಪರಂಪರೆ. ಗಾಂಧಿ ಹುತಾತ್ಮರಾದಾಗ ಪೇಡ ಹಂಚಿ ಸಂಭ್ರಮಾಚರಣೆ ಮಾಡಿದವರಿಂದ ಇಂತಹದನ್ನಲ್ಲದೇ ಇನ್ನೇನನ್ನು ನಿರೀಕ್ಷಿಸಬಹುದು? ಅನಂತಮೂರ್ತಿಯವರು ವಿಧಿವಶರಾದ ಮರುದಿನ ಅಂದರೆ ಮೊನ್ನೆ ಶನಿವಾರ ನನ್ನ ಸ್ನೇಹಿತೆಯೊಬ್ಬರು ಬಂಟ್ವಾಳ ತಾಲೂಕಿನ ವಿಟ್ಲದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ಸಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಹಿಂಬದಿಯ ಸೀಟಲ್ಲಿ ಕೂತವರಿಬ್ಬರು ‘‘ಮೋದಿ ಪ್ರಧಾನಿಯಾಂಡ ದೇಶ ಬುಡ್ಪೆಂದ್ ಪಂತಿನಾಯೆ ಸಯ್ತಿನೇಕ್ ಇನಿ ರಜೆಗೆ’’ (ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆಂದವ ಸತ್ತದ್ದಕ್ಕೆ ಇವತ್ತು ರಜೆಯಂತೆ) ಎಂದು ಮಾತನಾಡುತ್ತಿದ್ದರಂತೆ. ದೇಶ ಕಂಡ ಶ್ರೇಷ್ಠ ಚಿಂತಕನನ್ನು ಇಂತಹ ಕೀಳುಮಟ್ಟದಲ್ಲಿ ಗುರುತಿಸುವ ಪರಿಪಾಠ ಬೆಳೆದಿರುವ ಈ ದೇಶದ ಡೆಮೋಕ್ರೆಟಿಕ್ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುವುದನ್ನು ಇದು ಪ್ರತಿಬಿಂಬಿಸುತ್ತದೆ. ಭಿನ್ನಾಭಿಪ್ರಾಯದಲ್ಲೇ ಪ್ರಜಾತಾಂತ್ರಿಕ ವ್ಯವಸ್ಥೆಯ ಚೈತನ್ಯವಿರುವುದು. ಎಲ್ಲಿ ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲವಾಗುತ್ತದೋ ಎಲ್ಲಿ ಭಿನ್ನ ಧ್ವನಿಯನ್ನು ಹೊಸಕಿ ಹಾಕಲಾಗುತ್ತದೋ ಅಲ್ಲಿ ಪ್ರಜಾತಂತ್ರ ಸಾಯುತ್ತದೆ. ಅನಂತಮೂರ್ತಿಯವರನ್ನು ಅವರಂತೆಯೇ ಯೋಚಿಸುವವರು ಸದಾ ತೆಪ್ಪಗೆ ಒಪ್ಪಿಕೊಂಡಿಲ್ಲ. ಅವರೊಂದಿಗೆ ಅನೇಕ ಬಾರಿ ಅವರಂತೆಯೇ ಯೋಚಿಸುವವರು ಜಗಳ ಕಾಯ್ದದ್ದಿದೆ. ಲಂಕೇಶ್ ಮತ್ತು ಅನಂತಮೂರ್ತಿಯವರ ಜಗಳವಂತೂ ಸುಪ್ರಸಿದ್ಧವಾಗಿತ್ತು. ಅದು ಯಾವತ್ತೂ ವೈಚಾರಿಕತೆಯ ಕುರಿತಂತೆ ಇದ್ದ ಭಿನ್ನಾಭಿಪ್ರಾಯದಿಂದಾಗಿ ಹುಟ್ಟಿಕೊಳ್ಳುವ ಜಗಳವಾಗಿತ್ತು. ಅದು ವ್ಯಕ್ತಿ ದೂಷಣೆ, ದ್ವೇಷದ ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಅನಂತಮೂರ್ತಿಯವರ ಕೆಲವು ರೆಬೆಲಿ ಯನ್ ಹೇಳಿಕೆಗಳು ತಿಂಗಳಾನುಗಟ್ಟಲೆ ಚರ್ಚೆಯಾಗಿ ಕನ್ನಡಿಗರ ಅರಿವಿನ ಹರವನ್ನು ವಿಸ್ತಾರಗೊಳಿಸುತ್ತಿತ್ತು. ಇದರಿಂದ ನಾಡಿಗೆ ಲಾಭವಾಗುತ್ತಿತ್ತೇ ವಿನಹ ನಯಾಪೈಸೆಯ ನಷ್ಟವಾಗುತ್ತಿರಲಿಲ್ಲ. ಸುಮ್ಮನೆ ಅವರ ತೀರಾ ಇತ್ತೀಚಿನ ‘ಬ್ರಾಹ್ಮಣರ ಗೋಮಾಂಸ ಭಕ್ಷಣೆ’ಯ ಕುರಿತ ಹೇಳಿಕೆಯನ್ನು ನೆನಪಿಸಿ ಕೊಳ್ಳಿ. ಕೇಸರಿ ಪ್ರಭೃತಿಗಳು ಅವರ ಮೇಲೆ ಎಷ್ಟೇ ಮುಗಿಬಿದ್ದರೂ, ಅವರು ನೀಡುತ್ತಿದ್ದ ಚಿತ್ರ ವಿಚಿತ್ರ ಹೇಳಿಕೆಗಳಿಗೆ ನಾಡಿನ ಪ್ರಾಜ್ಞರು ವೇದ ಉಪನಿಷತ್, ಮನುಸ್ಮೃತಿಗಳ ಉದ್ಧರಣೆಯ ಮೂಲಕ ಬರೆದ ಅನೇಕಾರು ಬರಹಗಳು ನಮಗೆ ಎಷ್ಟೊಂದು ಹೊಸ ವಿಚಾರಗಳನ್ನು ಕಲಿಸಿಲ್ಲ? ಅದಕ್ಕೇ ಹೇಳುವುದು ಅವರು ನಮ್ಮ ಅರಿವಿನ ಹರವನ್ನು ವಿಸ್ತರಿಸುತ್ತಿದ್ದರೆಂದು. ಇಂತೆಲ್ಲಾ ಕಾರಣಗಳಿಂದಾಗಿಯೇ ಅವರು ಕೊನೆದಿನಗಳವರೆಗೂ ಓರ್ವ ಪಬ್ಲಿಕ್ ಇಂಟಲೆಕ್ಚುವಲ್ ಆಗಿಯೇ ಉಳಿದಿದ್ದು. ಬ್ರಾಹ್ಮಣರ ಗೋಮಾಂಸ ಭಕ್ಷ ಣೆಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಕನ್ನಡದ ಒಂದು ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಸುಮತೀಂದ್ರ ನಾಡಿಗರು ‘‘ತನ್ನಲ್ಲಿ ಏನೂ ಬಂಡ ವಾಳ ಉಳಿದಿರದಿದ್ದಾಗ ಇಂತಹ ವಿವಾದಾಸ್ಪದ ಹೇಳಿಕೆ ಕೊಟ್ಟು ಸದಾ ಸುದ್ದಿಯಲ್ಲಿರಲು ಮತ್ತು ಒಂದು ವರ್ಗವನ್ನು ಮತ್ತು ಆಳುವವರನ್ನು ಖುಷಿಪಡಿಸಿ ಪ್ರಶಸ್ತಿಗಳನ್ನು ಬಾಚಿ ಕೊಳ್ಳಲು ಅವರು ಈ ತಂತ್ರ ಅನುಸ ರಿಸುತ್ತಿದ್ದಾರೆ’’ ಎಂದಿದ್ದರು. ಈ ದೇಶದಲ್ಲಿ ಸಾಹಿತ್ಯಕ್ಕಾಗಿ ನೀಡುವ ಅಲ್ಟಿಮೇಟ್ ಪ್ರಶಸ್ತಿಯಿದ್ದರೆ ಅದು ಜ್ಞಾನಪೀಠ. ಜ್ಞಾನಪೀಠ ಮತ್ತು ಅದರವರೆಗಿನ ಹೆಚ್ಚು ಕಡಿಮೆ ಎಲ್ಲಾ ಸಾಹಿತ್ಯಿಕ ಪ್ರಶಸ್ತಿಗಳನ್ನು ಗಳಿಸಿಕೊಂಡ ಅನಂತಮೂರ್ತಿಯವರಿಗೆ ಇಂತಹದ್ದರ ಅಗತ್ಯವೇನಿದೆ? ಅದರ ಅಗತ್ಯ ಯಾರಿಗಿದೆ ಎಂದು ಸ್ವಲ್ಪ ಆಳವಾಗಿ ಯೋಚಿಸಿದಾಗ ನಮ್ಮ ಅರಿವಿಗೆ ಬರುತ್ತದೆ. ಅನಂತಮೂರ್ತಿಯವರ ಕುರಿತಂತೆ ತೀರಾ ಇತ್ತೀಚೆಗೆ ಎದ್ದ ವಿವಾದವನ್ನೊಮ್ಮೆ ನೋಡೋಣ. ‘‘ನಾನು ಬಾಲಕನಾಗಿದ್ದಾಗ ದೈವದ ಕಲ್ಲಿಗೆ ಉಚ್ಚೆ ಹೊಯ್ದಿದ್ದೆ’’ ಎಂಬ ಅವರ ಬಾಲ್ಯ ಕಾಲದ ಚೇಷ್ಠೆಗಳನ್ನು ಅವರು ಒಂದೆಡೆ ಬರೆದಿದ್ದನ್ನು ವಿವಾದಕ್ಕಾಗಿ ಎಳೆದು ತಂದದ್ದು ಅಥವಾ ತನ್ನ ಮೇಲೆ ಎಸೆಯುವ ಕಲ್ಲನ್ನು ಅನಂತಮೂರ್ತಿಯವರಿಗೆ ತಿರುಗಿಸಿ ತಾನು ಬಚಾವಾಗಲು ಪ್ರಯತ್ನಿಸಿದವರು ನಾವೆಲ್ಲಾ ಅಪಾರವಾಗಿ ಗೌರವಿಸುವ, ವಯಸ್ಸಿನಲ್ಲಿ ಅನಂತಮೂರ್ತಿವರಿಗಿಂತಲೂ ಹಿರಿಯರಾದ ವಿದ್ವಾಂಸ ಎಂ.ಎಂ. ಕಲ್ಬುರ್ಗಿ. ಕಲ್ಬುರ್ಗಿಯವರದ್ದು ತಲೆ ತಪ್ಪಿಸುವ ತಂತ್ರವಾದರೆ ಅನಂತಮೂರ್ತಿಯವರದ್ದು ತನ್ನ ಮಾತಿಗೆ ಬದ್ಧನಾಗಿಯೇ ಉಳಿಯುವ ವೈಚಾರಿಕ ಬದ್ಧತೆ.
ಅನಂತಮೂರ್ತಿಯವರು ಬಾಲ್ಯದಲ್ಲಿ ಮಾಡಿದಅಂತಹ ಚೇಷ್ಠೆಗಳನ್ನು ನಮ್ಮಲ್ಲಿ ಎಷ್ಟು ಮಂದಿ ಮಾಡಿಲ್ಲ? ಬಾಲ್ಯಕಾಲದ ಚೇಷ್ಠೆ ಗಳನ್ನು ಅವರು ಪ್ರಾಮಾಣಿಕವಾಗಿ ಒಂದೆಡೆ ಬರೆದಿದ್ದಾರೆಯೇ ಹೊರತು ಸ್ವತಃ ಅವರಾಗಿ ಅದನ್ನು ಹೋದ ಬಂದಲ್ಲೆಲ್ಲಾ ಹೇಳಿಕೊಂಡು ತಿರುಗಾಡಲಿಲ್ಲ. ಸುಮತೀಂದ್ರ ನಾಡಿಗರೆಂದಂತೆ ಸದಾ ಸುದ್ದಿಯಲ್ಲಿರಲು ಬಯಸಿದ್ದರೆ ಅನಂತಮೂರ್ತಿಯವರೇ ಇದನ್ನು ಹೇಳಬಹುದಿತ್ತು. ಆದರೆ ಅದರ ವಿರುದ್ಧ ಪ್ರತಿಭಟನೆಗೈದವರು ಈ ಹೇಳಿಕೆಯನ್ನು ಯಾರು ನೀಡಿದರು ಎಂದು ಗಮನಿಸಿರದಿರಲಿಕ್ಕೂ ಸಾಕು. ಅವರಿಗೆ ಅದು ಮುಖ್ಯವೂ ಆಗುವುದಿಲ್ಲ. ಅನಂತಮೂರ್ತಿಯವರ ಮೇಲೆ ಮುಗಿಬೀಳಲು ಅವರಿಗೆ ಒಂದಿಲ್ಲೊಂದು ಅವಕಾಶ ಬೇಕಿತ್ತಷ್ಟೆ. ಅನಂತಮೂರ್ತಿಯವರು ಓರ್ವ ಅಪ್ಪಟ ಪೊಲಿಟಿಕಲ್ ರೈಟರ್ ಆಗಿದ್ದರು. ಶಾಂತವೇರಿ ಗೋಪಾಲಗೌಡರ ಅನುಯಾಯಿಯಾಗಿದ್ದ, ಲೋಹಿಯಾ-ಗಾಂಧಿ-ಕಾರ್ಲ್‌ಮಾರ್ಕ್ಸ್ ಚಿಂತ ನೆಗಳ ಮಿಶ್ರಣವಾಗಿದ್ದ ಅವರು ತನ್ನ ಸಾಹಿತ್ಯಿಕ ಬದುಕಿನ ಜೊತೆ ಜೊತೆಗೇ ರಾಜಕೀ ಯ ಬದುಕನ್ನೂ ಆರಂಭಿಸಿದ್ದರು. ಕನ್ನಡ ಸಾಹಿತಿಗಳಲ್ಲಿ ನಿರಂತರವಾಗಿ ಸಮಕಾಲೀನ ರಾಜಕೀಯ ವಿದ್ಯಮಾನಗಳಿಗೆ ಪ್ರತಿಸ್ಪಂದಿಸುತ್ತಿದ್ದ ವಿರಳಾತಿ ವಿರಳರಲ್ಲಿ ಲಂಕೇಶ್ ಮತ್ತು ಅನಂತ ಮೂರ್ತಿ ಪ್ರಮುಖರು. ಹಾಗೆಂದರೆ ಅದು ಕನ್ನಡ ಸಾಹಿತಿಗಳ ಲೋಕವನ್ನು ಸಂಕುಚಿತಗೊಳಿಸಿ ದಂತಾಗದು ಎಂಬುವುದು ನನ್ನ ಖಚಿತ ಅಭಿಪ್ರಾಯ. ಬಹುಷ ಇವರೀರ್ವರೂ ಅಷ್ಟು ಗಾಢವಾ ಗಿ ಪ್ರತಿಸ್ಪಂದಿಸುವುದಕ್ಕೆ ಕಾರಣ ಅವರ ಸಮಾಜವಾದಿ ಹಿನ್ನೆಲೆ ಮಾತ್ರವಲ್ಲ ಬದಲಾಗಿಇವರೀರ್ವರೂ ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು. ಸಹಜವಾಗಿಯೇ ಪಾಶ್ಚಾತ್ಯ ರಾಜಕೀಯ ಆಗುಹೋಗುಗಳಲ್ಲಿ ಭಾಗಿ ಯಾಗುತ್ತಿದ್ದ ಸಾಹಿತಿಗಳ ಬದುಕು ಬರಹಗಳನ್ನು ದಟ್ಟವಾಗಿ ಮಸ್ತಿಷ್ಕಕ್ಕಳಿಸಿಕೊಂಡದ್ದರಿಂದ ಆ ಪ್ರಭಾವ ಇದ್ದೇ ಇತ್ತು ಎಂದು ಸ್ಪಷ್ಟವಾಗಿ ಹೇಳಬಹುದು. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ (1983) ರಾಜಕೀಯ ಸುಂಟರಗಾಳಿ ಬೀಸುವುದಕ್ಕೆ ಬಹುಮುಖ್ಯ ಕಾರಣರು ಲಂಕೇಶ್ ಎಂಬುವುದು ದೇಶಕ್ಕೇ ಗೊತ್ತಿರುವ ಸತ್ಯ. ಲಂಕೇಶರು ಅಧ್ಯಾಪನ ವೃತ್ತಿ ತೊರೆದು ಪತ್ರಿಕೆ ಪ್ರಾರಂಭಿಸಿದ ಮರುವರ್ಷವೇ ಆಗಿನ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ನವಲಗುಂದ, ನರಗುಂದದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿತ್ತು. ಲಂಕೇಶ್ ಎಂಬ ಅಗ್ನಿಪುರುಷನೊಳಗೆ ಧಗಧಗಿಸುತ್ತಿದ್ದ ಬೆಂಕಿಗೆ ಗುಂಡೂರಾವ್ ಸರಕಾರ ತುಪ್ಪಸುರಿಯಿತು. ಆ ಬಳಿಕದ ಒಂದೂವರೆ ವರ್ಷದ ಕಾಲ ಲಂಕೇಶ್ ಕಾಂಗ್ರೆಸ್ ವಿರುದ್ಧ ನಡೆಸಿದ ಸಾಹಿತ್ಯಿಕ ಮತ್ತು ವೈಚಾರಿಕ ಸಮರ 1983ರ ಹೊತ್ತಿಗೆ ಕಾಂಗ್ರೆಸನ್ನು ಹೆಚ್ಚು ಕಡಿಮೆ ಮುಗಿಸಿಬಿಟ್ಟಿತ್ತು. ಅನಂತಮೂರ್ತಿಯವರು ಲಂಕೇಶರಂತೆ ಜಿದ್ದಿಗೆ ಬಿದ್ದಂತೆ ಸಮರ ನಡೆಸಿಲ್ಲದಿರಬಹುದು. ಆದರೆ ಅವರು ಯಾವತ್ತೂ ‘ವೌನಿ’ಯಾಗಿದ್ದಿಲ್ಲ. ಜಗತ್ತಿನ ಸಮಕಾಲೀನ ಶ್ರೇಷ್ಠ ಚಿಂತಕ ನೋಮ್ ಚಾಮ್ಸ್‌ಕಿಯನ್ನು ‘ಮನುಕುಲದ ಮಾತುಗಾರ’ ಎನ್ನಲಾಗುತ್ತದೆ. ಕಳೆದ ಒಂದು ದಶಕದಲ್ಲಿ ಅನಂತಮೂರ್ತಿ ‘ಮಾತು ಸೋತ ಭಾರತ’ದ ಜನತೆಯ ಮಾತಾಗಿದ್ದರು. ಅನಂತಮೂರ್ತಿಯವರು ಅಧಿಕಾರಸ್ಥರ ಪಾಲಿಗೆ ಮಿತ್ರರಾಗಿಯೇ ಉಳಿದಿದ್ದು ಅವರ ಬದುಕಿನ ಈ ಕೊನೆಯ ವರ್ಷದಲ್ಲಿ ಮಾತ್ರ. ಅದಕ್ಕೆ ಸ್ಪಷ್ಟವಾದ ಕಾರಣ ಯಡ್ಡಿ-ರೆಡ್ಡಿ ಮುಂತಾದವರು ಕರುನಾಡನ್ನು ದೇಶ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಿಂಡಿ ಹಿಪ್ಪೆ ಮಾಡಿದ್ದು. ಕೋಮುವಾದ ಎಂಬ ಭಸ್ಮಾಸುರ ದೇಶದ ಜಾತ್ಯತೀತ ಪರಂಪರೆಯನ್ನು ಇಲ್ಲವಾಗಿಸಲು ಪ್ರಯತ್ನಿಸಿದ್ದು. ಆದುದರಿಂದ ಅವರು ಸಿದ್ದರಾಮಯ್ಯರಿಗೆ ಅಭಯ ಹಸ್ತರಾಗಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಸಂಘ ಪರಿವಾರದ ಜೀವ ವಿರೋಧಿ ರಾಜಕೀಯ ಅವರನ್ನು ಎಷ್ಟು ಕಂಗೆಡಿಸಿತ್ತೆಂದರೆ ಅವರು ಇಹದ ಪಯಣ ಮುಗಿಸುವುದಕ್ಕಿಂತ ಕೆಲವೇ ದಿನಗಳ ಹಿಂದಷ್ಟೆ, ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್ಯ?’ ಎಂಬ ಸುದೀರ್ಘ ರಾಜಕೀಯ ಪ್ರಬಂಧವನ್ನು ಬರೆದು ಮುಗಿಸಿದ್ದರು. ಅದು ಅಚ್ಚಿನ ಮನೆಗೆ ಹೋಗುವ ಮುನ್ನವೇ ಅವರು ಕಣ್ಮರೆಯಾದರು. ಅವರು ಆ ಕೃತಿಯ ಕುರಿತಂತೆ ತನ್ನ ಆಪ್ತರ ಬಳಿ ‘‘ಅದು ನಿಷೇಧವಾಗುವ ಸಾಧ್ಯತೆಯೂ ಇದೆ’’ ಎಂದಿದ್ದರಂತೆ. ಗಾಂಧಿಯ ಹಿಂದ್ ಸ್ವರಾಜ್ಯದ ಕಲ್ಪನೆ ಮತ್ತು ಸಂಘ ಪರಿವಾರದ ಹಿಂದುತ್ವವನ್ನು ಮುಖಾಮುಖಿಯಾಗಿಸಲು ವಸ್ತು ವಿಷಯ ಸಿದ್ಧಮಾಡಿಟ್ಟು ಅನಂತಮೂರ್ತಿ ಬಾರದ ಲೋಕಕ್ಕೆ ಹೋಗಿದ್ದಾರೆ. ಬಹುಷ ಕೋಮುವಾದ ವಿರೋಧೀ ಹೋರಾಟಕ್ಕೆ ಅದೊಂದು ಪ್ರಣಾಳಿಕೆಯಾಗಿರಲೂಬಹುದು. ಕಾದು ನೋಡೋಣ. ಅನಂತಮೂರ್ತಿಯವರ ಚಿಂತನೆ ನಾಡಿನ ಜನತೆಯನ್ನೆಂದೂ ದಾರಿತಪ್ಪಿ ಸಿದ್ದಿಲ್ಲ. ಬದುಕಿರುವಾಗ ಅವರು ನಮಗೆ ಮಾರ್ಗ ದರ್ಶಕರಾಗಿದ್ದರು. ಇನ್ನು ಅವರ ಚಿಂತನೆ ನಮಗೆ ಮಾರ್ಗದರ್ಶನ ನೀಡೀತು ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.

courtesy:  varthabharati

Advertisement

0 comments:

Post a Comment

 
Top