PLEASE LOGIN TO KANNADANET.COM FOR REGULAR NEWS-UPDATES

ಸಾಧಾರಣ ಕಥೆಯ ಶ್ರೀಮಂತಿಕೆ ಚಿತ್ರ
       
        ಅವನು ಆತ್ಯತ್ತಮ ಅಥ್ಲೇಟಿಕ್ ಕೋಚ್. ವಿದೇಶದಲ್ಲಿರುವ ಭಾರತೀಯನೊಬ್ಬನ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ತರಬೇತುದಾರನಾಗಿರುವ ಆರ್ಯನ್‌ಗೆ ಪ್ರೀತಿ ಇಲ್ಲದ ಮೇಲೆ ಎನ್ನುವ ನೆನಪು ಆಗಾಗ ಫ್ಲ್ಯಾಶ್‌ಬ್ಯಾಕ್ ರೂಪದಲ್ಲಿ ಇರುತ್ತದೆ. ಪ್ರೀತಿ ಕಳೆದುಕೊಂಡ ಕಾರಣವನ್ನು ಹೇಳಲಾಗದೇ, ಮನಸಿನಲ್ಲಿಟ್ಟುಕೊಂಡು ಒದ್ದಾಡುವ ಪರಿಸ್ಥಿತಿ, ತುಮುಲವನ್ನು ನಿಭಾಯಿಸುವಲ್ಲಿ ಡಾ.ಶಿವಣ್ಣ ಯಶಸ್ವಿ. ಹಾಗೆಯೇ ರಮ್ಯಾ ಅವರ ಈವರೆಗಿನ ಚಿತ್ರಜೀವನದಲ್ಲಿ ಬರದಿರುವ ಪಾತ್ರವನ್ನು ಸಮರ್ಥವಾಗಿ ಚಿತ್ರನಿಭಾಯಿಸಿದ್ದಾರೆ. ಕ್ಲೈಮ್ಯಾಕ್ಸ್ ಒಂಚೂರು ನೋಡುವಂತಿದ್ದರೆ ಅದಕ್ಕೆ ರಮ್ಯಾ ಓಟವೊಂದೇ ಕಾರಣ ಎನ್ನಬಹುದು.
       ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶನದ ಕೊನೆಯ ಚಿತ್ರ ಆರ್ಯನ್. ಸಿನಿಮಾ ಅರ್ಧ ಮಾತ್ರ ಚಿತ್ರೀಕರಣವಾಗಿದ್ದಾಗಲೇ ರಾಜೇಂದ್ರಬಾಬು ನಮ್ಮನ್ನಗಲಿದರು. ಹಾಗಾಗಿ ಚಿತ್ರದ ನಿರ್ದೇಶನದ ಹೊಣೆ ನಟ ಹಾಗೂ ನಿರ್ದೇಶಕ ಚಿ.ಗುರುದತ್ ಹೆಗಲೇರಿತು. ಗುರುದತ್ ನಿರ್ದೇಶನದ ಶೈಲಿಯೇ ಬೇರೆ. ಹಾಗೆಯೇ ರಾಜೇಂದ್ರಬಾಬು ನಿರ್ದೇಶನದ ರೀತಿಯೇ ಬೇರೆ. ಹಾಗಾಗಿ ಚಿತ್ರ ನಿರೀಕ್ಷಿಸಿದ ಮಟ್ಟ ತಲುಪಿಲ್ಲ. ಇಡೀ ಸಿನಿಮಾ ವಿದೇಶದಲ್ಲಿ ಚಿತ್ರೀಕರಣವಾಗಿರುವ ಕಾರಣ ಆರ್ಯನ್ ಒಂದು ಶ್ರೀಮಂತಿಕೆಯ ಚಿತ್ರ. ಆದರೆ ಕತೆ ವಿಷಯದಲ್ಲಿ ಹೇಳಿಕೊಳ್ಳುವಂಥ ಗಟ್ಟಿತನವಿಲ್ಲ. ಆರ್ಯನ್ ಸಿನಿಮಾ ಕ್ರೀಡೆಯ ಹಿನ್ನೆಲೆಯಲ್ಲಿ ಬರುವ ಒಂದು ಪ್ರೀತಿಯ ಸಾಧಾರಣ ಕಥೆ. 
       ಚಿತ್ರದಲ್ಲಿ ಪ್ರಮುಖವಾಗಿ ಬರುವ ಸಸ್ಪೆನ್ಸ್ ಆಂಶಗಳು ಹೇಗಿವೆ ಎಂದರೆ ಅಪರೂಪಕ್ಕೆ ಸಿನಿಮಾ ನೋಡುವವರೂ ಸಹ ಹೀಗೆ ಆಗುತ್ತದೆ ಎಂದು ಸುಲಭವಾಗಿ ಊಹಿಸಬಹುದು. ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ರಮ್ಯಾ, ಸ್ಪರ್ಧೆಯ ಸಮಯದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದನ್ನು ಕಮೀಟಿ ವಿಚಾರಣೆ ನಡೆಸುವಾಗ ಇದು ರಮ್ಯಾ ಅಪ್ಪನದೇ ಕೆಲಸ ಎಂದು ಸಾಮಾನ್ಯ ಪ್ರೇಕ್ಷಕನ ಮನಸು ಮಾತಾಡಿಕೊಳ್ಳುತ್ತದೆ. ಹಾಗೆಯೇ ಶಿವಣ್ಣನ ಬಾಸ್ ಪಾತ್ರದಲ್ಲಿರುವ ರಘು ಮುಖರ್ಜಿಯ ಹೆಂಡತಿಯೇ ರಮ್ಯಾ ಎಂಬುದನ್ನು ಊಹಿಸುವುದು ಕಷ್ಟಕರವಾಗಿಲ್ಲ.
      ಕೊನೆಗೆ ಚಿತ್ರದ ನಾಯಕ-ನಾಯಕಿಯರನ್ನು ಒಂದುಗೂಡಿಸಬೇಕು ಎಂದು ನಿರ್ಧರಿಸಿದಂತೆ ರಘುಮುಖರ್ಜಿ ಪಾತ್ರವನ್ನು ಆಪಘಾತಕ್ಕೀಡಾಗಿ ಸಾಯುವಂತೆ ಮಾಡಿರುವುದು ತೀರಾ ನಾಟಕೀಯ ಎನಿಸುತ್ತದೆ. ಮಾಸ್ ಆಡಿಯನ್ಸ್ ಹಿಡಿದಿಟ್ಟುಕೊಳ್ಳಬೇಕು ಎಂಬ ಕಾರಣಕ್ಕಾಗಿ ಎರಡು ಅನಗತ್ಯ ಫೈಟ್‌ಗಳನ್ನು ಸೇರಿಸಿರುವುದು ಸಹ್ಯ ಎನಿಸುವುದಿಲ್ಲ. ಕೊನೆಗೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವಲ್ಲಿಗೆ ಶುಭಂ.   
        ಡಾ.ಶಿವಣ್ಣ ಹಾಗೂ ರಮ್ಯಾ ಅವರದು ಲವಲವಿಕೆಯ ನಟನೆ. ರಘು ಮುಖರ್ಜಿ ಪಾತ್ರಕ್ಕೆ ಇನ್ನೊಂಚೂರು ಜೋಶ್ ಬೇಕಿತ್ತು. ಶರತ್‌ಬಾಬು ಆವರು ನಾಯಕಿಯ ಕೆಟ್ಟ ಅಪ್ಪನಾಗಿ ನಟಿಸಿದ್ದಾರಷ್ಟೆ. ಅರ್ಚನಾ ಗುಪ್ತಾ ಪಾತ್ರಕ್ಕೂ ಅಷ್ಟು ಸ್ಕೋಪ್ ಇಲ್ಲ ಎನ್ನಬಹುದು. ಬುಲ್ಲೆಟ್ ಪ್ರಕಾಶ್ ಕಾಮಿಡಿ ಬಾಲಿಶತನದಿಂದ ಕೂಡಿದೆ. ರಾಜೇಂದ್ರಬಾಬು ಅವರ ಪತ್ನಿ ಸುಮಿತ್ರಾ ಶಿವಣ್ಣನ ಅಮ್ಮನಾಗಿ ಅಭಿನಯಿಸಿ ಇಷ್ಟವಾಗುತ್ತಾರೆ. ಚಿತ್ರದ ಆರಂಭದಲ್ಲಿ ಕಿಚ್ಚ ಸುದೀಪ್ ಅವರ ೬ ಸೆಕೆಂಡ್ ಮಾತುಗಳು ದಿ.ರಾಜೇಂದ್ರಬಾಬು ಅವರ ಸ್ಮರಣೆಗೆ ಸೀಮಿತವಾಗಿವೆ. ನಿರ್ದೇಶನದ ವಿಷಯದಲ್ಲಿ ಏನನ್ನೂ ಹೇಳುವಂತಿಲ್ಲ. ಏಕೆಂದರೆ ಆರ್ಯನ್ ಇಬ್ಬರ ಕೈಚಳಕದಲ್ಲಿ ಅರಳಿದ ಕಲಾಕೃತಿಯಂತಿದೆ. ಕಲಾಕೃತಿಯ ಅರ್ಧಭಾಗವನ್ನು ಬಾಬು ಸಿದ್ಧಪಡಿಸಿದರೆ ಇನ್ನುಳಿದ ಭಾಗವನ್ನು ಗುರುದತ್ ಸಿದ್ಧಪಡಿಸಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಅಬ್ಬರವೇ ಹೆಚ್ಚು. ಚಂದ್ರಶೇಖರ ಸಿನಿಮಾಟೋಗ್ರಾಫಿ ಅಡ್ಡಿ ಇಲ್ಲ. ನಿರ್ಮಾಪಕರಾದ ಧ್ರುವದಾಸ ಹಾಗೂ ಕಮರ್ ಹಾಕಿದ ಬಂಡವಾಳವನ್ನು ಹಿಂತೆಗೆಯಬಹುದಷ್ಟೇ.
-ಚಿತ್ರಪ್ರಿಯ ಸಂಭ್ರಮ್.

ರೇಟಿಂಗ್ : **೧/೨
---------------------
*ನೋಡಬೇಡಿ
**ನೋಡಬಹುದು. ಆದರೂ...
***ಪರವಾಗಿಲ್ಲ. ನೋಡಬಹುದು.
****ಚೆನ್ನಾಗಿದೆ ನೋಡಿ
*****ನೋಡಲೇಬೇಕು.  

Advertisement

0 comments:

Post a Comment

 
Top