ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಅ. 19 ರಿಂದ 22 ರವರೆಗೆ ಜರುಗಿದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯಲ್ಲಿ ಸುಮಾರು 9000 ಅಭ್ಯರ್ಥಿಗಳು ಭಾಗಿಯಾಗಿದ್ದು, ಸೇನಾ ನೇಮಕಾತಿ ರ್ಯಾಲಿ ಯಶಸ್ವಿಯಾಗಿದೆ ಎಂದು ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಕರ್ನಲ್ ದುಷ್ಯಂತ್‍ಸಿಂಗ್ ಅವರು ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತಂತೆ ಶನಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಭಾರತೀಯ ಸೇನೆಯಲ್ಲಿನ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೇನಾ ಭರ್ತಿ ರ್ಯಾಲಿ ಆ. 19 ರಿಂದ 23 ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕೊಪ್ಪಳ, ಬೀದರ್, ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಆ. 22 ರಂದು ಮಾತ್ರ ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿತ್ತು. ಸುಮಾರು 9000 ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದರು. ಇದರಲ್ಲಿ ನಿಗದಿಗಿಂತ ಕಡಿಮೆ ಎತ್ತರ ಅಂದರೆ 162 ಸೆಂ.ಮೀ. ಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ. ಒಟ್ಟು 350 ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಪೈಕಿ 60 ಅಭ್ಯರ್ಥಿಗಳು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಸಂಪೂರ್ಣ ಫಿಟ್ ಎಂದು ಗುರುತಿಸಲಾಗಿದ್ದು, ಈ ಅಭ್ಯರ್ಥಿಗಳು ಆಗಸ್ಟ್ 31 ರಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಲ್ಲಿ ನಡೆಯಲಿರುವ ಲಿಖಿತ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಉಳಿದ 290 ಅಭ್ಯರ್ಥಿಗಳಿಗೆ ಕೆಲವು ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿ, 42 ದಿನಗಳ ಒಳಗಾಗಿ ವರದಿ ಪಡೆಯುವಂತೆ ತಿಳಿಸಲಾಗಿದ್ದು, ತಜ್ಞ ವೈದ್ಯರು ನೀಡುವ ವರದಿಯ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗಾವಿಯಲ್ಲಿ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಗುವುದು. ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳನ್ನು ಹೋಲಿಸಿದಾಗ ಉತ್ತರ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳೇ ಸೇನೆಗೆ ಸೇರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯುವಕರು ತಮ್ಮ ಆರೋಗ್ಯ ಮತ್ತು ದೈಹಿಕ ಸಾಮಥ್ರ್ಯವನ್ನು ಉತ್ತಮವಾಗಿಟ್ಟುಕೊಂಡು, ಹೆಚ್ಚು, ಹೆಚ್ಚು ಜನ ಸೇನೆಗೆ ಸೇರಲು ಮುಂದಾಗಬೇಕು. ಸೇನೆಯಲ್ಲಿ ಯುವಕರಿಗೆ ವೇತನ, ವಸತಿ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಕುರಿತಂತೆ ಯುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೇನಾ ಅಧಿಕಾರಿಗಳು ಸಿದ್ಧರಾಗಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಸೇನಾ ನೇಮಕಾತಿ ರ್ಯಾಲಿಯನ್ನು ವ್ಯವಸ್ಥಿತವಾಗಿ ಜರುಗಿಸಲು ಕೊಪ್ಪಳ ಜಿಲ್ಲಾಡಳಿತ ಉತ್ತಮ ಸೌಕರ್ಯವನ್ನು ಕಲ್ಪಿಸಿದ್ದು, ಇದಕ್ಕಾಗಿ ಜಿಲ್ಲಾ ಆಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕರ್ನಲ್ ದುಷ್ಯಂತ್‍ಸಿಂಗ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು, ಬೆಂಗಳೂರು, ಕ್ಯಾಲಿಕಟ್ ವಿಭಾಗದ ಸೇನಾ ನೇಮಕಾತಿ ಕಚೇರಿಯ ನಿರ್ದೇಶಕರುಗಳಾದ ವಿಶ್ವನಾಥ್, ಆರ್.ಎಸ್. ಚೌಹಾಣ್, ಅನಿಲ್ ಠಾಕೂರ್, ಕೊಪ್ಪಳದ ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬಿರನಾಯ್ಕರ್ ಉಪಸ್ಥಿತರಿದ್ದರು.
0 comments:
Post a Comment