PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟು ಸಂಕೇತ ಸಂಖ್ಯೆ ಹೊಂದಿರುವ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಶಿಕ್ಷಕರಿಂದ (ಶಾಲೆಗಳಿಂದ), ಬೋಧಿಸಲಾಗಿರುವ ಅಭ್ಯರ್ಥಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಂದ ಮಂಡಳಿಯು ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ಮೂಲಕ ಪ್ರಸಕ್ತ ಸಾಲಿನ ಶಾಸ್ತ್ರೀಯ ಸಂಗೀತ (ಕರ್ನಾಟಕ/ಹಿಂದೂಸ್ತಾನಿ) ಭರತನಾಟ್ಯ/ಕೂಚುಪುಡಿ/ಕಥಕ್ ಮತ್ತು ತಾಳವಾದ್ಯ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪರೀಕ್ಷೆ ಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿದೆ.  ಕಿರಿಯ ದರ್ಜೆ, ಹಿರಿಯ ದರ್ಜೆ, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಹಿಂದೆ 2013 ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ,   ಅನುತ್ತೀರ್ಣರಾದ ಯಾವುದೇ ಲಿಖಿತ ಪತ್ರಿಕೆಗಳಾದ ಶಾಸ್ತ್ರ ಪತ್ರಿಕೆ ಮತ್ತು ಶ್ರವಣ/ದೃಶ್ಯ ಜ್ಞಾನ ಪತ್ರಿಕೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಯಾವುದಾದರೂ ಒಂದು ಪ್ರಾಯೋಗಿಕ ಪತ್ರಿಕೆಯಲ್ಲಿ ಅನುತ್ತೀರ್ಣರಾಗಿದ್ದರೂ ಸಹ ಎಲ್ಲಾ ಪ್ರಾಯೋಗಿಕ ಪತ್ರಿಕೆಗಳಿಗೆ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಈ ಸೌಲಭ್ಯ 2012-13 ರಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅದಕ್ಕೂ ಹಿಂದೆ ಅನುತ್ತೀರ್ಣರಾದ ಅಭ್ಯರ್ಥಿಗಳು ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ ಎಲ್ಲಾ ವಿಷಯಗಳಿಗೂ ಪರೀಕ್ಷೆ ತೆಗೆದುಕೊಳ್ಳಬೇಕಾಗಿದ್ದು ಪರೀಕ್ಷಾ ಅರ್ಜಿ ಸಲ್ಲಿಸಬೇಕು. 
ಸಂಗೀತ ಶಾಲಾ ಶಿಕ್ಷಕರು ಪರೀಕ್ಷೆಗೆ ಹಾಜರುಪಡಿಸುವ ಅಭ್ಯರ್ಥಿಗಳು ಸ್ಥಳೀಯವಾಗಿ ವಾಸವಾಗಿರುವ ಬಗ್ಗೆ ಆಧಾರ ಕಾರ್ಡ್, ರೇಷನ್ ಕಾರ್ಡ್, ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಶಾಲಾ ಮುಖ್ಯಸ್ಥರು ನೀಡಿರುವ ವ್ಯಾಸಂಗ ಪ್ರಮಾಣ ಪತ್ರ ಇದರಲ್ಲಿ ಯಾವುದಾದರೂ ಒಂದು ಗುರುತಿನ ಪ್ರಮಾಣ ಪತ್ರವನ್ನು ಅರ್ಜಿಗಳೊಂದಿಗೆ ಪ್ರತ್ಯೇಕವಾಗಿ, ಅರ್ಜಿಗಳ ಜೊತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಖಾಸಗಿ ಅಭ್ಯರ್ಥಿಗಳು ಸಹ ಯಾವುದಾದರು ಒಂದು ಗುರುತಿನ ಚೀಟಿಯನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿ ಜೊತೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ನೀಡಬೇಕು.  
ಪರೀಕ್ಷಾ ಕೇಂದ್ರ ನಿಗದಿಗೆ ಸಾಕಷ್ಟು ಅಭ್ಯರ್ಥಿಗಳು ಇಲ್ಲದೇ ಇದ್ದರೆ ಅಥವಾ ಇನ್ನಾವುದೇ ಕಾರಣಕ್ಕಾಗಲಿ, ರಾಜ್ಯದ ಯಾವ ಪರೀಕ್ಷಾ ಕೇಂದ್ರವನ್ನಾದರೂ ರದ್ದುಪಡಿಸಲು ಮಂಡಳಿಯು ಪೂರ್ಣ ಅಧಿಕಾರವನ್ನು ಹೊಂದಿದ್ದು, ಅಂತಹ ಕೇಂದ್ರಗಳಿಗೆ ನೊಂದಾಯಿಸಲ್ಪಡುವ ಅಭ್ಯರ್ಥಿಗಳನ್ನು ಹತ್ತಿರದ ಕೇಂದ್ರಗಳಿಗೆ ವರ್ಗಾಯಿಸಲಾಗುವುದು. 
ಸಂಗೀತ ಶಾಲಾ/ಶಿಕ್ಷಕರು ತಾವು ಸ್ವತಃ ಬೋಧಿಸಿರುವ ವಿದ್ಯಾರ್ಥಿಗಳನ್ನು ಮಾತ್ರ ಪರೀಕ್ಷೆಗೆ ಹಾಜರುಪಡಿಸಬೇಕು. ಈ ಬಾರಿ ಖಾಸಗಿಯಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮೂಲಕ ನೇರವಾಗಿ ಅರ್ಜಿ ಶುಲ್ಕ ಪಾವತಿಸಿ ಅರ್ಜಿಗಳನ್ನು ಪಡೆದು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 
ಈಗಾಗಲೇ ಅರ್ಜಿ ವಿತರಣೆ ಪ್ರಾರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಆ.02 ಕೊನೆಯ ದಿನವಾಗಿರುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಂದ ದಂಡದೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಆ.09 ಕೊನೆಯ ದಿನ ಹಾಗೂ ಪರೀಕ್ಷಾ ಕೇಂದ್ರದವರು ಶುಲ್ಕ ಪಾವತಿಸಿದ ಬಗ್ಗೆ ಮೂಲ ಬ್ಯಾಂಕ್ ಚಲನ್‍ಗಳ ಸಹಿತ ಅರ್ಜಿಗಳನ್ನು ಮಂಡಳಿಗೆ ರವಾನಿಸಲು ಆ.12 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳಿಗೆ ಒಂದು ದಿನಕ್ಕೆ, ಒಂದು ಅಭ್ಯರ್ಥಿಗೆ ರೂ.150 ರಂತೆ ದಂಡ ಶುಲ್ಕ ಲೆಕ್ಕಾಚಾರ ಮಾಡಿ ಪರೀಕ್ಷಾ ಶುಲ್ಕದೊಂದಿಗೆ ಸಂಗ್ರಹ ಮಾಡಲಾಗುವುದು ಎಂದು ಕೊಪ್ಪಳದ ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರು  ತಿಳಿಸಿದ್ದಾರೆ.

Advertisement

0 comments:

Post a Comment

 
Top