PLEASE LOGIN TO KANNADANET.COM FOR REGULAR NEWS-UPDATES

 ಜನಸಂಖ್ಯಾ ಸ್ಫೋಟದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ನಮ್ಮ ದೇಶದಲ್ಲಿ, ಚಿಕ್ಕ ಕುಟುಂಬ ವ್ಯವಸ್ಥೆ ಅನುಷ್ಠಾನಗೊಂಡಲ್ಲಿ, ಸಂತೃಪ್ತ ಜೀವನಕ್ಕೆ ಮಾರ್ಗವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಅಭಿಪ್ರಾಯಪಟ್ಟರು.
  ಜಿಲ್ಲಾಡಳಿತ,
ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ಭಾರತ ದೇಶದ ಜನಸಂಖ್ಯೆ ಈಗಾಗಲೆ 121 ಕೋಟಿ, ಕರ್ನಾಟಕ ರಾಜ್ಯದ ಜನಸಂಖ್ಯೆ 6. 40 ಕೋಟಿ ಆಗಿದೆ.  ಜನಸಂಖ್ಯೆಯ ಸ್ಫೋಟದಿಂದಾಗಿ, ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ.  ಕೃಷಿ ಭೂಮಿ ಕಡಿಮೆಯಾಗಿ, ನಗರೀಕರಣ ವ್ಯಾಪಕವಾಗುತ್ತಿದೆ.  ಇದರ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ ಕೊರತೆಯಾಗುತ್ತಿದೆ.  ಆರೋಗ್ಯ ಸೇವೆ ಒದಗಿಸಲು ತೀವ್ರ ತೊಂದರೆ ಉಂಟಾಗುತ್ತಿದೆ.  ಚಿಕ್ಕ ಕುಟುಂಬ ವ್ಯವಸ್ಥೆ ಇದ್ದಲ್ಲಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಅವರ ನಿರ್ವಹಣೆಯೂ ಸುಲಭವಾಗಲಿದೆ.  ಜನಸಂಖ್ಯಾ ನಿಯಂತ್ರಣಕ್ಕೆ ಕೇವಲ ಸಮುದಾಯದಲ್ಲಿ ಅರಿವು ಮೂಡಿಸಿದರೆ ಸಾಲದು, ಕಾನೂನಿನಲ್ಲಿಯೂ ಸೂಕ್ತ ತಿದ್ದುಪಡಿ ಆಗಬೇಕಿರುವುದು ಇಂದಿನ ಅಗತ್ಯವಾಗಿದೆ.  ಈಗಿನ ಯುವ ಪೀಳಿಗೆ ಭವಿಷ್ಯದ ವಿದ್ಯಾವಂತ ಪೀಳಿಗೆಯಾಗಲಿದ್ದು, ಮುಂದಿನ ದಿನಮಾನಗಳಲ್ಲಿ ಜನಸಂಖ್ಯೆ ನಿಯಂತ್ರಣ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಸುರೇಶಕುಮಾರ ಅವರು ಮಾತನಾಡಿ, ಮುಂದುವರೆದ ರಾಷ್ಟ್ರಗಳ ಪೈಕಿ ಭಾರತ ದೇಶವನ್ನು ಹೋಲಿಸಿದಾಗ, ನಮ್ಮ ದೇಶ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವುದು ನಿಜ.  ಆದರೆ ಮುಂದುವರೆದ ರಾಷ್ಟ್ರಗಳಲ್ಲಿನ ಜನಸಂಖ್ಯೆಯ ಶೇ. 60 ರಷ್ಟು ವಯೋವೃದ್ಧರು ಇದ್ದರೆ, ಭಾರತದ ಜನಸಂಖ್ಯೆಯಲ್ಲಿ ಶೇ. 60 ರಷ್ಟು 18 ರಿಂದ 40 ವರ್ಷ ವಯೋಮಾನದವರು ಅಂದರೆ ದುಡಿಮೆ ಮಾಡಲು ಅರ್ಹರಿರುವ ಯುವ ಪೀಳಿಗೆ ಇರುವುದು, ಅಭಿವೃದ್ಧಿಯ ಪಥದತ್ತ ಇರುವ ನಮ್ಮ ದೇಶಕ್ಕೆ ವರದಾನವಾಗಿದೆ.  ಈ ಯುವ ಜನತೆ ದೇಶದ ಅಭಿವೃದ್ಧಿಗೆ ಸಕ್ರಿಯರಾಗಿ ತೊಡಗಿಸಿಕೊಂಡಲ್ಲಿ, ಜನಸಂಖ್ಯೆಯ ಹೆಚ್ಚಳದ ತೊಂದರೆಯೂ ಸಹ ದೇಶಕ್ಕೆ ಅನುಕೂಲವಾಗಿ ಪರಿಣಮಿಸಲಿದೆ.  ಆದರೂ ಜನಸಂಖ್ಯೆಯ ಹೆಚ್ಚಳವನ್ನು ತಡೆಗಟ್ಟುವುದು ಅತಿ ಅವಶ್ಯಕವಾಗಿದೆ.  ಈಗಾಗಲೆ ನಾವು ಕುಡಿಯುವ ನೀರನ್ನು ಹಣ ಕೊಟ್ಟು ಖರೀದಿಸುವ ಸ್ಥಿತಿಗೆ ಬಂದಿದ್ದೇವೆ.  ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು, ಪಾಲಕರು ಹಗಲಿರುಳೂ ಪಾಳಿಗೆ ನಿಲ್ಲುವಂತಹ ಪರಿಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ.  ಯಾವುದೇ ಕ್ಷೇತ್ರಕ್ಕೆ ಹೋದರೂ ಅತಿಯಾದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತಿದೆ.  ಯಾವುದೇ ಕೆಲಸಕ್ಕೂ ನಾವು ಸರ್ಕಾರದತ್ತ ದೃಷ್ಟಿ ಹಾಯಿಸುವ ವ್ಯವಸ್ಥೆ ಇದೆ.  ಜನಸಂಖ್ಯೆ ಹೆಚ್ಚಳ ತಡೆಗಟ್ಟುವುದೂ ಸಹ ಸರ್ಕಾರದ ಜವಾಬ್ದಾರಿ ಆಗಿದೆ ಎಂಬ ಅಭಿಪ್ರಾಯ ಹೊಂದುವುದು ನಿಜಕ್ಕೂ ವಿಪರ್ಯಾಸವಾಗಿದೆ.  ಜನಸಾಮಾನ್ಯರು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳನ್ನು ಮನಗಂಡು, ಸ್ವಯಂ ಪ್ರೇರಿತರಾಗಿ, ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾದಾಗ ಮಾತ್ರ ನಮ್ಮ ದೇಶದ ಪರಿಸ್ಥಿತಿ ಬದಲಾಗುವುದರಲ್ಲಿ ಸಂಶಯವಿಲ್ಲ ಎಂದರು.
  ಕೊಪ್ಪಳ ತಾಲೂಕು ವೈದ್ಯಾಧಿಕಾರಿ ಡಾ. ದಾನರೆಡ್ಡಿ ಅವರು ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಜನಸಂಖ್ಯೆ ಸೇರ್ಪಡೆಯಾಗುತ್ತಿದೆ.  ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇನ್ನು 40 ವರ್ಷದಲ್ಲಿ ದೇಶದ ಜನಸಂಖ್ಯೆ 240 ಕೋಟಿ ಅಂದರೆ, ಈಗಿನ ಜನಸಂಖ್ಯೆಯ ದ್ವಿಗುಣದಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.  ಈಗಾಗಲೆ ದೇಶ ಸಂಪನ್ಮೂಲಗಳ ಕೊರತೆ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ,  ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ವಿರುಪಾಕ್ಷಗೌಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top