ಕೊಪ್ಪಳ : ಕೊಪ್ಪಳ ಚಾರಿತ್ರಿಕವಾಗಿ ಹಾಗೂ ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಊರು. ನಮ್ಮ ಇತಿಹಾಸವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸುವ ಮತ್ತು ಆ ಮೂಲಕ ಅವರಲ್ಲಿ ಕೊಪ್ಪಳದ ಚರಿತ್ರೆ,ಇತಿಹಾಸದ ಬಗ್ಗೆ ಜಾಗೃತಿ,ಹೆಮ್ಮೆಯನ್ನುಂಟು ಮಾಡುವ ಸ್ಮಾರಕಗಳು ಹಾಗೂ ಕಮಾನುಗಳ ರಕ್ಷಣೆ ಮಾಡಬೇಕು. ಅಭಿವೃದ್ದಿಯ ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತವೆ ಎನ್ನುವ ಹೆಸರಿನಲ್ಲಿ ಅವನ್ನು ತೆರವುಗೊಳಿಸುವ ಕಾರ್‍ಯವನ್ನು ನಗರಸಭೆ ಮಾಡಬಾರದು ಎಂದು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಒತ್ತಾಯಿಸಿದೆ.
ಮುಂದಿನ ಪೀಳಿಗೆ ನಮ್ಮ ಊರು ನಾಡಿನ ಬಗ್ಗೆ ಹೆಮ್ಮೆ ಪಡಲು ಇರುವ ಕೆಲವೇ ಕೆಲವು ಸ್ಮಾರಕಗಳಲ್ಲಿ ಈ ಕಮಾನುಗಳು ಸೇರಿವೆ. ಈಗಾಗಲೇ ಸಾವಿರಾರು ಬಸದಿಗಳ ನಾಡು ಎಂದು ಪ್ರಖ್ಯಾತವಾಗಿದ್ದ ಕೊಪ್ಪಳದಲ್ಲಿ ಬೆರಳೆಣಿಕೆಯ ಜೈನ ಬಸದಿಗಳು ಉಳಿದಿವೆ. ಪ್ರಸಿದ್ಧ ಕೋಟೆ ಸರಿಯಾದ ರಕ್ಷಣೆ ಇಲ್ಲದೆ ಮಳೆಗಾಲದಲ್ಲಿ ಅಲ್ಲಲ್ಲಿ ಬೀಳುತ್ತಾ ಸಾಗಿದೆ. ನಮ್ಮ ಜನಪ್ರತಿನಿಧಿಗಳು ಈ ಕಮಾನುಗಳನ್ನು ಉಳಿಸಿ ನಮ್ಮ ಕೊಪ್ಪಳದ ಅಸ್ಮೀತತೆಯನ್ನು ಕಾಪಾಡಬೇಕು ಎಂದು ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ನಡೆದ ೧೭೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಆಗ್ರಹಪಡಿಸಲಾಯಿತು.
ಇದಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಡಾ.ಬಸವರಾಜ ಮಲಶೆಟ್ಟಿಯವರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಡಾ.ಬಸವರಾಜ್ ಮಲಶೆಟ್ಟಿಯವರ ಶಿಷ್ಯಂದಿರಾದ ಮಹೇಶ ಬಳ್ಳಾರಿ,ಸಿರಾಜ್ ಬಿಸರಳ್ಳಿ,ಎನ್.ಜಡೆಯಪ್ಪ,ವಿಜಯಲಕ್ಷ್ಮಿ ಕೊಟಗಿ ಅವರೊಂದಿಗಿನ ಒಡನಾಟವನ್ನು ಮೆಲಕು ಹಾಕಿದರು. ಪಿ.ಲಂಕೇಶ್ ಪ್ರಶಸ್ತಿಯನ್ನು ಪಡೆದಿರುವ ಅಲ್ಲಾಗಿರಿರಾಜ್ ರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಅನಸೂಯಾ ಜಾಗೀರದಾರ -ತತ್ವ,ಜಾಹೀರಾತು, ವಿಜಯಲಕ್ಷ್ಮೀ ಕೊಟಗಿ- ಜಂಬೂ ಸವಾರಿ ಚುಟುಕು, ಪುಷ್ಪಲತಾ ಏಳುಬಾವಿ- ಎದೆ ತುಂಬಿಹಾಡಿದ ಹಕ್ಕಿ, ಕಲಾವತಿ ಕುಲಕರ್ಣಿ- ಗುಟ್ಟು ಮತ್ತು ಇತರೆ ಚುಟುಕುಗಳು, ಎನ್.ಜಡೆಯಪ್ಪ-ಸುಮಾ, ಮಹೇಶ ಬಳ್ಳಾರಿ- ಒಂದು ಪತ್ರ, ಎ.ಪಿ.ಅಂಗಡಿ- ತಾಯಿ ಮೊಗವ ಕಂಡು ಕವನಗಳ ವಾಚನ ಮಾಡಿದರು. ಸಿರಾಜ್ ಬಿಸರಳ್ಳಿ ಸಾದತ್ ಹಸನ್ ಮಂಟೋರವರ ಕೆಲವು ಕತೆಗಳನ್ನು ಓದಿ ಅವುಗಳ ಬಗ್ಗೆ ಮಾತನಾಡಿದರು.
ಕಾರ್‍ಯಕ್ರಮಕ್ಕೆ ಸ್ವಾಗತವನ್ನು ಪುಷ್ಪಲತಾ ಏಳುಬಾ,ವಂದನಾರ್ಪಣೆಯ ಅನಸೂಯಾ ಜಾಗೀರದಾರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment