PLEASE LOGIN TO KANNADANET.COM FOR REGULAR NEWS-UPDATES

 ಅತಿಸಾರ ಭೇದಿಯಿಂದಾಗುವ ಚಿಕ್ಕ ಮಕ್ಕಳ ಮರಣ ಪ್ರಕರಣವನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಜುಲೈ 28 ರಿಂದ ಆಗಸ್ಟ್ 08 ರವರೆಗೆ ಹಮ್ಮಿಕೊಂಡಿರುವ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಓಆರ್‍ಎಸ್ ಹಾಗೂ ಜಿಂಕ್ ಸಿರಪ್ ಕುಡಿಸುವ ಮೂಲಕ ಹಾಗೂ ಓಆರ್‍ಎಸ್-ಜಿಂಕ್ ಕಾರ್ನರ್ ಕೊಠಡಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
  ಶಿಶು ಮರಣ ಪ್ರಕರಣಗಳ ಪೈಕಿ ಶೇ. 11 ರಷ್ಟು  ಮಕ್ಕಳು ಡಯೇರಿಯಾದಿಂದ ಅಂದರೆ ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಿದ್ದು, ಇದರ ನಿಯಂತ್ರಣಕ್ಕೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಜುಲೈ 28 ರಿಂದ ಆಗಸ್ಟ್ 08 ರವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.  ಕಾರ್ಯಕ್ರಮದ ಅಂಗವಾಗಿ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಯೊಂದು ಮನೆ, ಮನೆಗೆ ಭೇಟಿಯನ್ನು ಹಮ್ಮಿಕೊಂಡು, ಚಿಕ್ಕ ಮಕ್ಕಳಿದ್ದಲ್ಲಿ, ಓಆರ್‍ಎಸ್ ಹಾಗೂ ಜಿಂಕ್ ಸಿರಪ್ ಅಥವಾ ಸೂಕ್ತ ಔಷಧಗಳ ಬಳಕೆಯ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ್ ಅವರು ಮಾತನಾಡಿ, 5 ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಭೇದಿಯೂ ಪ್ರಮುಖ ಕಾರಣವಾಗಿದ್ದು, ಬೇಸಿಗೆ ಮತ್ತು ಪೂರ್ವ ಮುಂಗಾರಿನ ಮಾಸಗಳಲ್ಲಿ ಹೆಚ್ಚು ಬಾಧಿಸುತ್ತದೆ.  ಅತಿಸಾರ ಭೇದಿಗೂ, ಅಪೌಷ್ಠಿಕತೆಗೂ ನಿಕಟ ಸಂಬಂಧವಿದ್ದು, ಉತ್ತಮ ಆರೋಗ್ಯವಂತ ಮಕ್ಕಳೂ ಸಹ ಅತಿಸಾರ ಭೇದಿಯಿಂದ ತೂಕ ಕ್ಷೀಣಿಸಿ ಅಪೌಷ್ಠಿಕತೆಗೆ ಒಳಗಾಗುವ ಮೂಲಕ ಸಾವು ಸಂಭವ ಇರುತ್ತದೆ.  ಸೂಕ್ತ ಆಹಾರದ ಜೊತೆಗೆ ಓಆರ್‍ಎಸ್ ಮತ್ತು ಜಿಂಕ್ ದ್ರಾವಣ ಅಥವಾ ಮಾತ್ರೆಯನ್ನು ನೀಡುವುದರಿಂದ ಸಂಭವನೀಯ ಸಾವನ್ನು ತಪ್ಪಿಸಬಹುದಾಗಿದೆ, ಹಾಗೂ ಇದು ಮಗುವಿನ ಸೋಂಕು ನಿರೋಧಕ ಶಕ್ತಿಯನ್ನೂ ಸಹ ಹೆಚ್ಚಿಸುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ ಓಆರ್‍ಎಸ್-ಜಿಂಕ್ ಕಾರ್ನರ್ ಅನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿನ ಒಟ್ಟು 812 ಆಶಾ ಕಾರ್ಯಕರ್ತೆಯರ ಮೂಲಕ ಎಲ್ಲ ಗ್ರಾಮಗಳ ಮನೆ, ಮನೆಗಳಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಂಚಲಾಗುವುದು ಅಲ್ಲದೆ ಸೂಕ್ತ ಅರಿವು ಮೂಡಿಸಲಾಗುವುದು ಎಂದರು.
 ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಲೋಕೇಶ್, ಆರ್‍ಸಿಹೆಚ್ ಅಧಿಕಾರಿ ರಮೇಶ ಮೂಲಿಮನಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ. ದೇಸಾಯಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಎಂ. ಕಟ್ಟಿಮನಿ, ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ: ಪ್ರಭು ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top