PLEASE LOGIN TO KANNADANET.COM FOR REGULAR NEWS-UPDATES








 ಕೊಪ್ಪಳ :  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಶಕ್ತಿಯೇ ಅಡಗಿದೆ. ಅಂತಹ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ ಎಂದು ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.  ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಸನ್ಮಾನ ಮತ್ತು ಕೊಪ್ಪಳ ಇತಿಹಾಸದ ಕುರಿತು ಕಿರುಚಿತ್ರ ಪ್ರದರ್ಶನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
        ಪ್ರಜಾಪ್ರಭುತ್ವವು ಮಹಾಸೌಧವಿದ್ದಂತೆ.ಇದಕ್ಕೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ಮಹಾಸೌಧದ ಆಧಾರಸ್ತಂಭಗಳು. ಇದರಲ್ಲಿ ಶಾಸಕಾಂಗ, ಕಾರ್ಯಾಂಗ ಆಡಳಿತ ತಪ್ಪಿ ನಡೆದಾಗ ನ್ಯಾಯಾಂಗ ಸರಿ ದಾರಿ ತೋರಿಸುತ್ತದೆ. ಇವು ಮೂರು ದಾರಿ ತಪ್ಪಿದಾಗ ಪತ್ರಿಕಾ ರಂಗ, ದಾರಿ ತೋರಿಸಿ ಕೆಲಸ ಮಾಡಿದ ಉದಾಹರಣೆಗಳು ಇವೆ ಎಂದರು.
      ಪತ್ರಿಕೆಗಳು ಪ್ರಜಾಪ್ರಭುತ್ವದ ಸಾಕು ತಾಯಿ ಇದ್ದಂತೆ. ದೇಶದಲ್ಲಿ ಅಕ್ರಮ, ಹಗರಣಗಳನ್ನು ಪತ್ರಿಕಾ ರಂಗವೇ ಹೊರ ಹಾಕುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ಬಗ್ಗೆ ಜನತೆಗೆ ತಿಳುವಳಿಕೆ ಬರಬೇಕಿದೆ. ಆಸಕ್ತಿಯಿಂದ ತಿಳಿದುಕೊಳ್ಳಲು ಮುಂದಾಗಬೇಕಿದೆ ಎಂದರು.
       ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ನಿವೃತ್ತ ಮುಖ್ಯಸ್ಥ ಎ.ಎಸ್.ಬಾಲಸುಬ್ರಮಣ್ಯಂ ಅವರು ಮಾತನಾಡಿ,ಯುರೋಪ್ ರಾಷ್ಟ್ರದ ಪೆಡ್ರಿಕ್, ಮೋಗ್ಲಿನ್ ಎನ್ನುವ ವ್ಯಕ್ತಿ ೧೮೩೬ರಲ್ಲಿ ದೇಶಕ್ಕೆ ಮತ ಪ್ರಚಾರಕ್ಕಾಗಿ ಬಂದವನು. ಇಲ್ಲಿಯ ಜನರ ಮುಗ್ದತೆ,ಸಾಹಿತ್ಯ ಕಲೆಗೆ ಆಸಕ್ತಿ ವ್ಯಕ್ತಪಡಿಸಿ,ಇಲ್ಲಿಯ ಜನರಿಗೆ ಒಂದು ಪತ್ರಿಕೆ ಕೊಡಬೇಕು. ಅವರು ಇಲ್ಲಿಂದಲೇ ಪ್ರಪಂಚವನ್ನು ನೋಡುವಂತಾಗಬೇಕು ಎನ್ನುವ ಉದ್ದೇಶದಿಂದ ೧೮೪೩ ಜು.೦೧ ರಂದು ಮಂಗಳೂರಿನಲ್ಲಿ ಬಾಸಲ್ ಮಿಷನ್ ಮೂಲಕ ಮಂಗಳೂರು ಸಮಾಚಾರ್ ಎನ್ನುವ ಮೊಟ್ಟ ಮೊದಲ  ಪಾಕ್ಷಿಕ ಪತ್ರಿಕೆ ಜನತೆಗೆ ನೀಡುತ್ತಾನೆ. ಹಾಗಾಗಿ ಈ ವರೆಗೂ ಆ ದಿನವನ್ನು ಪತ್ರಿಕಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದರು.
       ಪ್ರಸ್ತುತ ದಿನಗಳಲ್ಲಿ ಪತ್ರಕರ್ತರೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳ ಮಧ್ಯೆ ಜನತೆಯ ನೋವು, ಸಮಸ್ಯೆಯ ಕುರಿತು ವರದಿ ಪಡೆದು ತನ್ನ ಸಮಸ್ಯೆಯನ್ನು ಮುಚ್ಚಿಟ್ಟು ಜನತೆಯ ಸಮಸ್ಯೆಯನ್ನು ಪ್ರಸ್ತುತ ಪಡಿಸುತ್ತಿದ್ದು, ದಿನದ ೨೪ ಗಂಟೆಯೂ ಪತ್ರಕರ್ತರು ಕರ್ತವ್ಯ ನಿರತರಾಗಿರುತ್ತಾರೆ. ಪತ್ರಿಕೆ ಬೆಳೆಯಲು ಜನತೆ ಮೊದಲು ಅಕ್ಷರಸ್ಥನಾಗಬೇಕು. ಖರೀದಿ ಮಾಡಿ ಓದುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. 
         ಈ ಮೊದಲು ಇದ್ದ ಪತ್ರಿಕಾ ರಂಗ ಹೋಗಿ ಈಗ ಪತ್ರಿಕೋದ್ಯಮ ಎನ್ನುವ ಹೆಸರು ಬಂದಿದೆ. ಪತ್ರಿಕೆಗಳು ಸಹಿತ ಉದ್ಯಮವಾಗಿ ಬೆಳೆದಿವೆ. ಕೈಗಾರಿಕೋದ್ಯಮದ ಸ್ವರೂಪ ಪಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
       ೧೯೯೦ರಲ್ಲಿ ದೇಶದಲ್ಲಿ ಟೆಲಿವಿಜನ್ ದೊಟ್ಟ ಮಟ್ಟದ ಕ್ರಾಂತಿಯೇ ನಡೆಯಿತು. ಉಪಗ್ರಹ ಆಧಾರಿತ ನೇರವಾಗಿ ಪ್ರಸಾರದ ಕಾರ್ಯ ನಡೆಯಿತು. ದೇಶದಲ್ಲಿ ಸದ್ಯ ೯೦ ಸಾವಿರ ಪತ್ರಿಕೆಗಳು ಇವೆ. ೬೦೦ ರೇಡಿಯೋ ಚಾನೆಲ್‌ಗಳಿವೆ. ೭೦೦ ಟಿವಿ ಚಾನಲ್‌ಗಳಿವೆ. ಇಲ್ಲಿ ಪ್ರತಿಯೊಬ್ಬರು ಸಮಸ್ಯೆಯನ್ನು ಬದಿಗೊತ್ತಿ ಕೆಲಸ ಮಾಡುತ್ತಿರುತ್ತಾರೆ. ಪತ್ರಕರ್ತ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
       ಸಮಾರಂಭದಲ್ಲಿ ಸುವರ್ಣಾ ನ್ಯೂಸ್‌ನ ಕ್ಯಾಮರಾ ವಿಭಾಗದ ಮುಖ್ಯಸ್ಥ ಸತ್ಯಬೋಧ ಜೋಷಿ ಅವರು ಮಾತನಾಡಿದರು. ಮೀಡಿಯಾ ಕ್ಲಬ್ ಅದ್ಯಕ್ಷ ಸೋಮರಡ್ಡಿ ಅಳವಂಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಪ್ರಕಾಶ ಕಂದಕೂರು, ಜಿಲ್ಲಾ ವಾರ್ತಾಽಕಾರಿ ಬಿ.ವಿ.ತುಕಾರಾಂ ಅವರು ಉಪಸ್ಥಿತರಿದ್ದರು.
      ಬಳಿಕ ಹಿರಿಯ ಪತ್ರಕರ್ತ ವಾಸುದೇವ ಆಚಾರ್ಯ ಹುಲಗಿ, ಪತ್ರಕರ್ತರಾದ ದೊಡ್ಡೇಶ ಯಲಿಗಾರ, ಸಿರಾಜ್ ಬಿಸರಳ್ಳಿ, ಪ್ರಕಾಶ ಕಂದಕೂರು ಅವರನ್ನು ಸನ್ಮಾನ ಮಾಡಲಾಯಿತು.
       ಅಶೋಕ ಕುಮಾರ ನಿರೂಪಿಸಿದರು. ಮೌನೇಶ ಬಡಿಗೇರ  ಸ್ವಾಗತಿಸಿದರು. ಶರಣಪ್ಪ ಬಾಚಲಾಪೂರ ಪ್ರಾಸ್ತಾವಿಕ ಮಾತನಾಡಿದರು. ಶರಣು ಹುಲಿಹೈದರ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಮುಕ್ಕಣ್ಣ ಕತ್ತಿ ವಂದಿಸಿದರು.

Advertisement

0 comments:

Post a Comment

 
Top