PLEASE LOGIN TO KANNADANET.COM FOR REGULAR NEWS-UPDATES

 ಸರಕು ಸಾಗಾಣಿಕೆ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಜನರನ್ನು ಸಾಗಿಸುವುದು ಕಾನೂನಿಗೆ ವಿರುದ್ಧವಾಗಿದ್ದು, ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ. 
  ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಅಧಿಕವಾಗಿ ಅಮಾಯಕರ ಪ್ರಾಣಹಾನಿಯಾಗುತ್ತಿದೆ. ಇಂತಹ ಪ್ರಕರಣಗಳು ಸುದ್ದಿ ಮಾಧ್ಯಮಗಳಲ್ಲಿ ಸಾಮಾನ್ಯವಾಗುತ್ತಿದೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಣ್ಣ ಸಣ್ಣ ವಾಹನಗಳಾದ ಟಾಟಾ ಏಸ್, ಮಹೇಂದ್ರ ಗೂಡ್ಸ್ ವಾಹನ, ಮಿನಿಡಾರ್, ಟ್ರಾಕ್ಟರ್/ಟ್ರೈಲರ್ ಇನ್ನು ಮುಂತಾದ ಸರಕು ಸಾಗಾಣಿಕೆ ಲಘು ವಾಹನಗಳಲ್ಲಿ ಜನರು ಅಸುರಕ್ಷಿತವಾಗಿ ವಾಹನದ ಸಾಮಥ್ರ್ಯ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಹಾಗೂ ಜನರು ಇಂತಹ ವಾಹನಗಳಲ್ಲಿ ಮೇಲ್ಛಾವಣಿಯ ಮೇಲೆ ಪ್ರಯಾಣಿಸುವುದರಿಂದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳುಂಟಾಗುತ್ತಿವೆ ಹಾಗೂ ಮೃತರಿಗೆ ಯಾವುದೇ ವಿಮಾ ಸೌಲಭ್ಯ ದೊರಕುವುದಿಲ್ಲ.
ಯಾವುದೇ ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು ಮೋಟಾರು ವಾಹನಗಳ ಕಾಯ್ದೆ ಹಾಗೂ ಅದರಡಿ ರೂಪಿತ ನಿಯಮಾವಳಿಗಳಿಗೆ ವಿರುದ್ದವಾಗಿದ್ದು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ವಾಹನದ ಚಾಲಕರ ವಿರುದ್ದ ಕಠಿಣ ಕ್ರಮ ಜರುಗಿಸುವುದಲ್ಲದೇ ವಾಹನದ ನೊಂದಣಿ ಪ್ರಮಾಣ ಪತ್ರವನ್ನು ಅಮಾನತ್ತು/ರದ್ದುಪಡಿಸಲಾಗುವುದೆಂದು ಸರಕು ಸಾಗಾಣಿಕೆ ವಾಹನಗಳ ಮಾಲೀಕರು/ಚಾಲಕರುಗಳಿಗೆ ತಿಳಿಸಲಾಗಿದೆ. 
ಅಲ್ಲದೇ ಸಾರ್ವಜನಿಕರು ಕೂಡ ತಮ್ಮ ಅತ್ಯಮೂಲ್ಯ ಜೀವದ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನಧಿಕೃತ ವಾಹನಗಳಲ್ಲಿ ಪ್ರಯಾಣಿಸಬಾರದು, ಈ ರೀತಿ ಅನಧಿಕೃತ ವಾಹನಗಳಲ್ಲಿ ಪ್ರಯಾಣ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಇಲಾಖೆ, ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಇಂತಹ ವಾಹನಗಳ ಮಾಲೀಕರು/ಚಾಲಕರ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರು ತನಿಖಾ ಸಮಯದಲ್ಲಿ ಸಹಕರಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ.ಪಾಂಡುರಂಗ ಶೆಟ್ಟಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top