ವಿಶ್ವದ ಎಲ್ಲೆಡೆ ಜೂ. ೧೨ ನ್ನು ವಿಶ್ವ ಬಾಲಕಾಮಿಕ ಪದ್ಧತಿ ವಿರೋಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಬಾಲಕಾರ್ಮಿಕ ಪದ್ಧತಿ ನಾಗರೀಕ ಸಮಾಜಕ್ಕೆ ಅಂಟಿಕೊಂಡ ಶಾಪ, ಕೋಟ್ಯಾಂತರ ಮಕ್ಕಳು ಇದರ ಕದಂಬ ಬಾಹುಗಳಿಗೆ ಒಳಗಾಗಿ ಅವರ ಬಾಲ್ಯದ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ತಮ್ಮ ಸ್ನೇಹಿತರೊಡನೆ ಶಾಲೆಯಲ್ಲಿ ಸ್ವಚ್ಛಂದ ಹಕ್ಕಿಗಳಂತೆ ಇರಬೇಕಾದ ಪುಟಾಣಿ ಕಂದಮ್ಮಗಳು ಹೊಲಗದ್ದೆಗಳಲ್ಲಿ, ದನ ಕುರಿ ಮೇಯಿಸುವ ಕಾಯಕದಲ್ಲಿ, ಬೀಜ ಕ್ರಾಸಿಂಗ್, ಕೋಳಿಫಾರಂ, ಮನೆ ಕಟ್ಟಡ ಕೆಲಸ, ಹೋಟೇಲ್ ಗ್ಯಾರೇಜ್‌ಗಳಲ್ಲಿ ಇಂದಿಗೂ ದುಡಿಸುತ್ತಿರುವುದು ವಿಪರ್ಯಾಸ. ಬಡತನ, ಅನಕ್ಷರತೆ, ನಿರುದ್ಯೋಗದ ಕಾರಣ ನೀಡಿ, ಪೋಷಕರು ಮತ್ತು ಮಾಲೀಕರ ಆಸೆ ಆಮಿಷಗಳಿಗೆ ಬಲಿಯಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇಂತಹ ಮಕ್ಕಳು ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಳ್ಳಬೇಕು. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಪ್ರತಿಯೊಂದು ಮಗುವಿಗೆ ಶಿಕ್ಷಣ ಸಿಗುವಂತಾಗಬೇಕು. ಬಾಲಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣ ಮಾಲೀಕರಲ್ಲಿರುವ ಆಸೆಬುರುಕುತನ, ತಂದೆ-ತಾಯಿ, ಪೋಷಕರಲ್ಲಿ ಶಿಕ್ಷಣದ ಬಗ್ಗೆ ಇರುವ ಅಜ್ಞಾನ ಮತ್ತು ಅಸಡ್ಡೆತನ. ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿಗೆ ಕಾರಣ ಬಡತನ ಎನ್ನುವ ಮಿಥ್ಯಧೋರಣೆ. ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ ಎನ್ನುವ ಸಂಕೋಲೆಯಿಂದ ಹೊರತಂದು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ನಾಗರಿಕರೆಲ್ಲರ ಆದ್ಯ ಕರ್ತವ್ಯ.
ಹೋಟೆಲ್, ಗ್ಯಾರೇಜ್, ಕಟ್ಟಡ ನಿರ್ಮಾಣ, ಕೋಳಿಫಾರಂ, ಕುರಿ-ಹಸು ಮೇಯಿಸುವುದು, ಹತ್ತಿ ಮತ್ತು ಬೀಜ ಕ್ರಾಸಿಂಗ್ ಮಾಡುವುದು ಇತ್ಯಾದಿ ಅಪಾಯಕಾರಿ ಕೆಲಸದಲ್ಲಿ ತೊಡಗಿರುವ ಮಕ್ಕಳನ್ನು ಕೆಲಸದಿಂದ ಬಿಡಿಸಿ ಶಿಕ್ಷಣದ ವಾಹಿನಿಗೆ ತರುವುದು, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಮುಖ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಜೂ. ೧೨ ರಂದು ಪ್ರತಿ ಹಳ್ಳಿಯಲ್ಲಿ, ಮನೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಜಿಲ್ಲಾ ಮಟ್ಟದಲ್ಲಿ ಅಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘವು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಜೊತೆಗೆ ತಾಲೂಕು ಮಟ್ಟದಲ್ಲಿ ಆಯಾ ತಾಲೂಕು ತಹಸಿಲ್ದಾರರ ನೇತೃತ್ವದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಜೂ. ೧೨ ರಂದು ತಮ್ಮ ಶಾಲಾ ವ್ಯಾಪ್ತಿಯಲ್ಲಿ ಪೋಷಕರಿಗೆ, ಎಸ್‌ಡಿಎಂಸಿ ಯವರೊಂದಿಗೆ ಸಭೆ ಆಯೋಜಿಸಿ, ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಿ, ಶಾಲೆಗೆ ದಾಖಲಿಸುವ ಬಗ್ಗೆ ಯೋಜಿಸಬೇಕು. ಪೋಷಕರಿಂದ ಪ್ರತಿಜ್ಞಾ ವಿಧಿ, ಮಕ್ಕಳಿಂದ ಕಿರುನಾಟಕ ಮುಂತಾದ ಜಾಗೃತಿ ಜಾಥಾಗಳನ್ನು ಗ್ರಾ.ಪಂ. ಗಳ ಸಹಕಾರದೊಂದಿಗೆ ಆಯೋಜಿಸಬೇಕು. ಅಂಗನವಾಡಿಗಳಲ್ಲಿ ಬಾಲ ವಿಕಾಸ ಸಮಿತಿ ಸಭೆಯನ್ನು ಆಯೋಜಿಸಿ, ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಗ್ರಾಮ ಪಂಚಾಯತಿ ಸಾಮಾನ್ಯ ಸಭೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
0 comments:
Post a Comment