PLEASE LOGIN TO KANNADANET.COM FOR REGULAR NEWS-UPDATES

(೨೨.೦೬.೨೦೧೪ ರಂದು ಪುಣ್ಯಸ್ಮರಣೋತ್ಸವ ನಿಮಿತ್ಯ)

ಈ ನಾಡಿನ ಯಾವೊಂದು ಮಗುವು ಅನ್ನ-ಅಕ್ಷರ-ಆರೋಗ್ಯ-ಆಧ್ಯಾತ್ಮಗಳಿಂದ ವಂಚಿತವಾಗಬಾರದು, ಮಾಡದ ತಪ್ಪಿಗೆ ಬಡತನದಲ್ಲಿ ಹುಟ್ಟಿದೆ ಎಂಬ ನಿಕೃಷ್ಟ ಕೊರಗೂ ಸಹ ಆ ಮಗುವಿನ ಮೇಲೆ ಮೂಡಿಬರಬಾರದು. ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವ ಮಹೋನ್ನತ ಉದ್ದೇಶದಿಂದಲೇ ೧೯೫೧ರಲ್ಲಿ (ಈ ಹೈದ್ರಾಬಾದ-ಕರ್ನಾಟಕ ಭಾಗದಲ್ಲಿ) ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಯನ್ನೂ, ಉಚಿತ ಪ್ರಸಾದ ನಿಲಯವನ್ನು ಆರಂಭಿಸಿದವರು ಪ್ರಾತಃಸ್ಮರಣೀಯ ಜ|| ಮರಿಶಾಂತವೀರ ಮಹಾಸ್ವಾಮಿಗಳವರು.

ಇತಿಹಾಸ ಪ್ರಸಿದ್ಧ ಸಂಸ್ಥಾನ ಗವಿಮಠ ತ್ರಿವಿಧ ದಾಸೋಹದ ಪರಮ ಪವಿತ್ರಕ್ಷೇತ್ರ ಆಯುರ್ವೇದ, ಆಧ್ಯಾತ್ಮದ ಮೂಲಕ ಈ ನಾಡನ್ನು ಹಾಗೂ ನಾಡವರ ಉದಾತ್ತ, ಬದುಕನ್ನು ರೂಪಿಸುವಂತಹ ಮಹಾಮಣಿಹ ಕಾಯಕದಲ್ಲಿ ನಿರತವಾಗಿರುವುದು. ಸಂಸ್ಥಾನ ಶ್ರೀ ಗವಿಮಠ ಈಗಾಗಲೆ ೧೮ ಪೀಠಾಧಿಪತಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲ ಪೂಜ್ಯರು ಆಧ್ಯಾತ್ಮ ಲೋಕದ ಅನರ್ಘ್ಯ ನಿಧಿಗಳು. ಸಕಲ ಜೀವಾತ್ಮರಿಗೆ ಲೇಸ ಕರುಣಿಸಿದ ಕರುಣಾಮಯಿಗಳು. ಈ ಸತ್ ಪರಂಪರೆಯಲ್ಲಿಯೆ ಸಾಗಿ ಬಂದ ಜ|| ಮರಿಶಾಂತವೀರ ಮಹಾಸ್ವಾಮಿಗಳವರು ಕಳಸಪ್ರಾಯರು. 

      ಜನನ-ಬಾಲ್ಯ-ಶಿಕ್ಷಣ
ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಮರಿಶಾಂತವೀರ ಮಹಾಸ್ವಾಮಿಗಳವರ ಜನ್ಮಸ್ಥಳ. ಬಸವಲಿಂಗಯ್ಯ-ಶಾಂತಮ್ಮ ದಂಪತಿಗಳೇ ಪೂಜ್ಯರ ತಂದೆ-ತಾಯಿಗಳು (೦೩.೧೨.೧೮೮೮ ರಂದು ಜನನ). ಆರಂಭದ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿದರು. ಅಸಾಧಾರಣ ಪ್ರತಿಭೆಯ ಗುರುನಂಜಯ್ಯ (ಮೊದಲಿನ ಹೆಸರು) ಎಳೆವಯದಲ್ಲಿಯೇ ಸಂಸ್ಕೃತಾಧ್ಯಯನ ಗೈಯುತ್ತ ಶಬರ ಶಂಕರ ವಿಳಾಸ, ರಾಜಶೇಖರ ವಿಳಾಸ, ಕವಿಕರ್ಣರಸಾಯನ ಮುಂತಾದ ಸಂಸ್ಕೃತ ಭೂಯಿಷ್ಟ ಗ್ರಂಥಗಳ ಅಧ್ಯಯನ ಮಾಡಿದರು.

ಪ್ರಾಥಮಿಕ ಹಂತದ ತರುವಾಯದಲ್ಲಿ ಉಪ್ಪಿನಬೇಟಗೇರಿ(ಕೊಪ್ಪಳ), ಅಬ್ಬಿಗೇರಿ(ರೋಣ), ಕೊಟ್ಟೂರು ಹಾಗೂ ಹುನಗುಂದ ಪಾಠಶಾಲೆಯಲ್ಲಿ ಅಧ್ಯಯನ ಗೈದು ನಂತರ ಸೊಲ್ಲಾಪುರದ ವಾರದ ಮಲ್ಲಪ್ಪನವರ ಪಾಠಶಾಲೆಯಲ್ಲಿ ಸುಮಾರು ೫ ವರ್ಷ ಅಧ್ಯಯನಗೈದರು. ಸಂಸ್ಕೃತಸಾಹಿತ್ಯ, ವ್ಯಾಕರಣ, ನ್ಯಾಯ, ತರ್ಕ ಮುಂತಾದ ವಿಷಯಗಳಲ್ಲಿ ಪರಿಣಿತಿಸಾಧಿಸಿದ್ದ ಗುರುನಂಜಯ್ಯ(ಮೊದಲಿನ ಹೆಸರು)ನನ್ನು ಉನ್ನತ ಶಿಕ್ಷಣ ಪಡೆಯಲು ಕಾಶಿಗೆ ಕಳುಹಿಸಬೇಕೆಂಬ ಅಧ್ಯಾಪಕರ ವಿಚಾರಗಳಿಗೆ ಮಲ್ಲಪ್ಪನವರೂ ಸಹ ಒಪ್ಪಿಗೆ ಸೂಚಿಸಿದರು. ೧೯೦೯ನೆಯ ಇಸ್ವಿ ಪೂಜ್ಯ ಮರಿಶಾಂತವೀರ ಶಿವಯೋಗಿಗಳ ಬದುಕನ್ನೆ ಹೊಸ ಪಥದತ್ತ ಕೊಂಡೋಯ್ದಂತಹ ಮಹಾನ್ ಕಾಲ ಘಟ್ಟವಾಗಿದೆ. ಆ ವರ್ಷ ಬಳ್ಳಾರಿಯಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭೆಯ ೫ನೇ ಅಧಿವೇಶನ ಜರುಗಿತು. ಮಲ್ಲಪ್ಪನವರು ಅಧಿವೇಶನಕ್ಕೆ ಬರುವಾಗ ತಮ್ಮೊಂದಿಗೆ ವಿದ್ವಾಂಸರನ್ನು ಆಯ್ದ ಜಾಣ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದರು. ಬಳ್ಳಾರಿಯಲ್ಲಿ ಸಕ್ಕರಿ ಕರೆಡೆಪ್ಪನವರ ಮನೆಯಲ್ಲಿ ಪೂಜೆ, ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಧಿವೇಶನದ ಸಂಘಟಕರಲ್ಲಿ ಒಬ್ಬರಾದ ಗವಿಮಠದ ೧೫ನೇ ಪೀಠಾಧಿಪತಿಗಳಾಗಿದ್ದ ಜ|| ಶಿವಶಾಂತವೀರ ಮಹಾಸ್ವಾಮಿಗಳು (ಗಡ್ಡದಜ್ಜನವರು) ಸಹ ಅಲ್ಲಿಯೇ ಇದ್ದರು.

ಈಶಾವಾಶ್ಯೋಪನಿಷತ್, ಛಾಂದೋಗೋಪ್ಯನಿಷತ್ತು ಬೃಹದಾರಣ್ಯಕೋಪನಿಷತ್ತು ಶ್ರೀಕರಭಾಷ್ಯ, ಕಾಮಿಕಾಗಮ, ಭತೃಹರಿ ನೀತಿಶತಕಮ್, ಸಾಂಖ್ಯ ವ್ಯಾಕರಣಾದಿ ಗ್ರಂಥಗಳನ್ನು ತಮಿಳುನಾಡಿನ ಸಂಸ್ಕೃತ ಪಂಡಿತರೊಬ್ಬರು ಹರಡಿಕೊಂಡು ಮಾರಾಟ ಮಾಡುತ್ತಿದ್ದರು, ಗ್ರಂಥಗಳನ್ನು ಕೊಳ್ಳಲು ಆಸಕ್ತರಾದವರಿಗೆ ತಮಿಳು ಬಾರದು ವ್ಯಾಪಾರಿಗೆ ಕನ್ನಡ ಬಾರದು ಹೀಗಾಗಿ ಅಲ್ಲಿಯೇ ಇದ್ದ ಗುರುನಂಜಯ್ಯ (ಮರಿಶಾಂತವೀರ ಸ್ವಾಮಿಗಳವರು) ಪುಸ್ತಕ ವ್ಯಾಪಾರಿಯೊಂದಿಗೆ ಸಂಸ್ಕೃತದಲ್ಲಿ ವ್ಯವಹರಿಸಿ ಪುಸ್ತಕಾಸ್ತರಿಗೆ ಗ್ರಂಥಗಳ ವಿವರಣೆ ಬೆಲೆ ಇತ್ಯಾದಿ ವಿವರಿಸಿ ಗ್ರಂಥಗಳನ್ನು ಕೊಡಿಸಿ ಸಹಕರಿಸಿದರು. ಅಲ್ಲಿಯೇ ಗ್ರಂಥಗಳನ್ನು ಕೊಳ್ಳುತ್ತಿದ್ದ ಜ|| ಶಿವಶಂತವೀರ ಶಿವಯೋಗಿಗಳು(ಗಡ್ಡದಜ್ಜನವರು) ಬಾಲಕನ ವಾಕ್‌ಚಾತುರ್ಯ, ಸಮಯಪ್ರಜ್ಞೆ, ಸಂಸ್ಕೃತ ಸಾಹಿತ್ಯ ಭಾಷೆಯ ಪ್ರಭುತ್ವ ಕಂಡು ಬೆರಗಾದರು, ಬಾಲಕನನ್ನು ಪಕ್ಕಕ್ಕೆ ಕರೆದು ಆತನ ಪೂರ್ವಪರಗಳನ್ನೆಲ್ಲ ತಿಳಿದುಕೊಂಡರು.


ಅಧ್ಯಯನ ಗೈಯಲು ಕಾಶಿಗೆ ಹೋಗುವ ವಿಷಯ ಕೇಳಿ ತಿಳಿದರು. ನಮ್ಮ ಮಠಕ್ಕೆ (ಕೊಪ್ಪಳ ಗವಿಮಠಕ್ಕೆ) ಬರುವೆಯಾ? ಎಂದೂ ಕೇಳಿದರು. ಈ ಎಲ್ಲ ಘಟನೆಗಳಿಂದ ಸಂಕೋಚದಿಂದ ಶ್ರೀಗಳು ಮುದುಡಿ ಹೋದರು.  ಮುಂದೆ ಕಾಶಿಯಲ್ಲಿ ದಶಕಗಳ ಕಾಲ ಅಧ್ಯಯನ ಮಾಡುತ್ತಿದ್ದಾಗ ಪ್ರತಿ ತಿಂಗಳು ಗವಿಮಠದ ೧೫ನೇ ಪೀಠಾಧಿಪತಿಗಳು ಶ್ರೀಮಠದ ಬಗ್ಗೆ ಕಾಗದ ಬರೆಯುತ್ತಾ ಇಲ್ಲಿಯ ಎಲ್ಲಾ ಇತಿವೃತ್ತಗಳನ್ನು ತಿಳಿಸುತ್ತಾ ಹಣವನ್ನು ಸಹ ಕಳಿಸುತ್ತಿದ್ದರು.
ಸುಮಾರು ದಶಕಗಳ ಕಾಶಿಯಲ್ಲಿದ್ದು ಅಧ್ಯಯನ ಮಾಡುತ್ತಿರುವಷ್ಟು ಕಾಲದಲ್ಲಿ ಶಿವಶಾಂತ ಶಿವಯೋಗಿಗಳು (ಗಡ್ಡದಜ್ಜನವರು) ಗವಿಮಠದ ಎಲ್ಲಾ ವಿವರಗಳನ್ನು ತಿಳಿಸುತ್ತಿದ್ದರಲ್ಲದೆ, ಮುಂದೆ ತಾವುಗಳು ಈ ಮಠದ ಉತ್ತರಾಧಿಕಾರಿಗಳು ಎನ್ನುವ ರೀತಿಯಲ್ಲಿ ಕಾಗದಗಳನ್ನು ಬರೆಯುತ್ತಿದ್ದರು ಹಾಗೆಯೇ ತಮ್ಮ ಅಂತ್ಯಾವಸ್ಥೆಯಲ್ಲಿಯೂ ಸಹಿತ ಗವಿಮಠದ ಉತ್ತರಾಧಿಕಾರಿಗಳು ಮರಿಶಾಂತವೀರ ಮಹಾಸ್ವಾಮಿಗಳಾಗಬೇಕೆಂದು ಪಂಚರ ಸಮಕ್ಷಮ ಉಯಿಲ್ನ್ನು  ಬರೆಯಿಸಿದ್ದರು. ಸದುವಿನಯ ವಿದ್ಯಾಪಕ್ಷಿಪಾತಿಗಳಾಗಿದ್ದ ಜ|| ಶಿವಶಾಂತವೀರ ಮಹಾಸ್ವಾಮಿಗಳವರು ಬಳ್ಳಾರಿಯ ಅಖಿಲಭಾರತ ವೀರಶೈವ ಮಹಾಸಭೆಯಲ್ಲಿ ಕಂಡ ವಿನಯಶಾಲಿ ವಿದ್ಯಾರ್ಥಿ ಗುರುನಂಜಯ್ಯ (ಮರಿಶಾಂತವೀರ ಮಹಾಸ್ವಾಮಿಗಳು) ನಡೆ-ನುಡಿಗಳನ್ನು ಮೆಚ್ಚಿಕೊಂಡು ಈತನ ಮೇಲೆ ಅಪಾರ ಕರುಣೆಯನ್ನು ಬೀರಿದರು.

ಗುರುನಂಜಯ್ಯ ೧೯೧೩ ರಿಂದ ಸುಮಾರು ದಶಕಗಳ ಕಾಲ ಕಾಶಿಯಲ್ಲಿದ್ದು ಸಂಸ್ಕೃತಾಧ್ಯಯನ ಗೈದು ಸ್ವಗ್ರಾಮ ಸೂಡಿಗೆ ಮರಳಿದರು. ಹಾಗೆಯೇ ಇತ್ತಕಡೆ ಅಂದರೆ ಕೊಪ್ಪಳ ಗವಿಮಠದ ೧೫ನೇ ಪೀಠಾಧಿಪತಿಗಳಾಗಿದ್ದ ಜ|| ಶಿವಶಾಂತವೀರ ಮಹಾಸ್ವಾಮಿಗಳವರು(ಗಡ್ಡದಜ್ಜನವರು) ಶಿವಾಧೀನರಾಗಿದ್ದರು. ಈ ಮೊದಲೇ ಪೂಜ್ಯರು ಬರೆಯಿಸಿಟ್ಟಿದ್ದ ಉಯಿಲಿನ ಪ್ರಕಾರ ಕೊಪ್ಪಳ ಗವಿಮಠದ ಭಕ್ತರು ಸೂಡಿಗೆ ಬಂದು ಜ|| ಶಿವಶಾಂತವೀರ ಮಹಾಸ್ವಾಮಿಗಳವರ ಸತ್ಯ ಸಂಕಲ್ಪ ಹಾಗೂ ಬರೆಯಿಸಿಟ್ಟಿದ್ದ ಉಯಿಲಿನ ಮಾಹಿತಿಯನ್ನು ಸೂಡಿಯ ಪ್ರಮುಖರಿಗೂ, ಗುರುನಂಜಯ್ಯನವರ ತಂದೆ-ತಾಯಿಗಳಿಗೆ ತಿಳಿಸಿದ ನಂತರ ಗುರುನಂಜಯ್ಯ ಎಲ್ಲ ಹಿರಿಯರ ಅಪ್ಪಣೆ ಆಶೀರ್ವಾದ ಪಡೆದುಕೊಂಡು ಶಾಲಿವಾಹನ ಶಕೆ ೧೮೪೪ನೆಯ ದುಂದುಭಿನಾಮ ಸಂವತ್ಸರದ ಮಾರ್ಗಶಿರ ಬಹುಳ ದಶಮಿ ಬುಧವಾರ (ತಾ. ೧೩.೧೨.೧೯೨೨) ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳೆಂಬ ಅಭಿನಾಮದಿಂದ ಶ್ರೀಗವಿಮಠದ ಪೀಠಾಧಿಕಾರವನ್ನು ಸ್ವಿಕಾರ ಮಾಡಿದರು.

೬೩ ಶಾಖಾಮಠಗಳನ್ನು ಹೊಂದಿರುವ ಈ ವಿರಕ್ತಪೀಠ ಈ ನಾಡಿನಲ್ಲಿಯೇ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಹೈದ್ರಾಬಾದ ನಿಜಾಮನಿಂದ ಹಲವು ಹಳ್ಳಿಗಳ ಸರ್ವ ಸ್ವಾಮಿತ್ವದ ಜಹಾಗೀರನ್ನು ೧೮೦೧ರಲ್ಲಿ ಪಡೆದುಕೊಂಡ ದಾಖಲೆಗಳು ಈಗಲೂ ಲಭ್ಯವಾಗಿರುವ ಹಿನ್ನಲೆಯಲ್ಲಿ ಶ್ರೀಮಠವು ಸಂಸ್ಥಾನ ವಿರಕ್ತಮಠವಾಗಿದೆ. ಜ|| ಮರಿಶಾಂತವೀರ ಮಹಾಸ್ವಾಮಿಗಳವರು ಸಮಗ್ರ ೪೫ ವರ್ಷಗಳ ಉಗ್ರ ತಪಸ್ವಿಗಳಾಗಿ ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲ ಶಿಲಾಚರಣೆಯ ಲಿಂಗಾಂಗ ಸಾಮರಸ್ಯದಲ್ಲಿ ಶಿವಾನುಭವಿಗಳಾಗಿ ತ್ರಿವಿಧ ದಾಸೋಹ ಮೂರ್ತಿಗಳಾಗಿ ಪೀಠದ ಬೆಳಕನ್ನು ಬೆಳಗಿಸಿದರು. ಸ್ವತಃ ವಿದ್ಯಾವಂತರು, ವಿದ್ಯಾಪಕ್ಷಿಪಾತಿಗಳಾಗಿದ್ದ ಶಿವಯೋಗಿಗಳು ೧೯೫೧ ರಲ್ಲಿಯೇ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ. ವಿದ್ಯಾ ಪ್ರಸಾರಕ್ಕೆ ಆಶ್ರಯ ನೀಡಿದರು. ಹಾಗೆಯೇ ಆಯುರ್ವೇದದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಪೂಜ್ಯರು ಈ ನಾಡಿಗೆ ಸಹಸ್ರಾರು ಜನ ಆಯುರ್ವೇದ ವೈದ್ಯರನ್ನು ನೀಡಿ ಸಮಾಜದ ಸ್ವಾಸ್ಥೆಗೆ ಕಾಯಕಲ್ಪ ನೀಡಿದವರು.

ಪೂಜ್ಯರು ಅಂದು ಆರಂಭಿಸಿದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಇಂದು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಬಿ.ಎ, ಬಿ.ಕಾಂ-ಬಿ.ಬಿ.ಎಮ್, ಬಿ.ಇ.ಡಿ, ಡಿ.ಇಡಿ, ಎಮ್.ಕಾಂ, ಬಿ.ಎ.ಎಮ್.ಎಸ್, ಪಿ.ಎಚ್.ಡಿ ಮುಂತಾದ ೨೫ ಶಿಕ್ಷಣ ಸಂಸ್ಥೆಗಳು ಶ್ರೀ ಗವಿಮಠ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಹಿತ-ಮಿತ ಭಾಷೆಗಳಾಗಿದ್ದ  ಜ|| ಮರಿಶಾಂತವೀರ ಶಿವಯೋಗಿಗಳು ಸದಾ ಲಿಂಗಪೂಜೆಯಲ್ಲಿಯೇ ನಿರತರಾಗಿರುತ್ತಿದ್ದರು. ಹೀಗೆ ಲಿಂಗ ಪೂಜೆಗೈಯ್ಯುತ್ತಲೇ ಆ ಲಿಂಗದ ಬೆಳಗಿನ ಬೆಳಕಿನಲ್ಲಿ ೦೧.೦೭.೧೯೬೭ರಂದು ಬಯಲಾದರು. ಪ್ರಾತಃಸ್ಮರಣೀಯ ವಿದ್ಯಾಚೇತನರು ಬಾಳಿ ಬೆಳಗಿದ ಗವಿಮಠವು ಬಾವುಕ ಭಕ್ತರನ್ನು ಕೈ-ಬೀಸಿ ಕರೆಯುತ್ತಿದೆ. ಪೂಜ್ಯ             ಜ|| ಮರಿಶಾಂತವೀರ ಶಿವಯೋಗಿಗಳ ಶ್ರೀಪಾದಕ್ಕೆ ಶರಣು ಶರಣಾರ್ಥಿ. ಈ ಸಂದರ್ಭದಲ್ಲಿಯೇ ಶ್ರೀಮಠದ ಪೀಠಾಧಿಪತಿಗಳು, ಪೂಜ್ಯರ ನೆನಹಿನಲ್ಲಿ ಸಹಸ್ರಾರು ಸಸಿಗಳನ್ನು ನೆಡುವ ಮೂಲಕ ಪುಣ್ಯಾರಾಧನೆಯನ್ನು ಸ್ಮರಣೀಯಗೊಳಿಸುತ್ತಿರುವುದು ಅನನ್ಯ ಹಾಗೂ ಅನುಕರಣೀಯ ಕಾರ್ಯಕ್ರಮವಾಗಿದೆ.

ಲೇಖಕರು: ಎಸ್.ಎಮ್.ಕಂಬಾಳಿಮಠ, ಕೊಪ್ಪಳ.
------------------------------------------------------------------------------------------------------------
ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳು
(ದಿನಾಂಕ ೨೨.೦೬.೨೦೧೪ ರಂದು ಪುಣ್ಯಸ್ಮರಣೋತ್ಸವ ನಿಮಿತ್ಯ ಈ ಕಿರು ಲೇಖನ)

ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮೀಜಿಗಳು ಗದಗ ಜಿಲ್ಲೆಯ  ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿಹೀರೇಮಠದ ಬಸವಲಿಂಗಯ್ಯ ಹಾಗು ಶಾಂತಮ್ಮನವರ ಪುತ್ರರಾಗಿ ೦೩.೧೨.೧೮೮೮ ರಂದು ಜನಿಸಿದರು. ಇವರ ಮೂಲ ಹೆಸರು ಜುಕ್ತಿಹೀರೇಮಠದ ಗುರುನಂಜಯ್ಯ 

ಪೂಜ್ಯರ ವಿದ್ಯಾಬ್ಯಾಸವು ಉಪ್ಪಿನಬೇಟಗೇರಿ, ಅಬ್ಬಿಗೇರಿ, ಕೊಟ್ಟೂರು , ಹುನಗುಂದ ಈ ಮೊದಲಾದ ಪಾಠಶಾಲೆಗಳಲ್ಲಿ ಅಧ್ಯಯನ ಗೈದು ಉನ್ನತ ಶಿಕ್ಷಣಕ್ಕಾಗಿ ಸೊಲ್ಲಾಪುರ ಹಾಗೂ ಕಾಶಿಗೆ ತೆರಳಿದರು.  ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ ಪಾಠಶಾಲೆಯಲ್ಲಿ ಸುಮಾರು ೫ ವರ್ಷ ಅಧ್ಯಯನಗೈದು   ಸಂಸ್ಕೃತಸಾಹಿತ್ಯ, ವ್ಯಾಕರಣ, ನ್ಯಾಯ, ತರ್ಕ ಮುಂತಾದ ವಿಷಯಗಳಲ್ಲಿ ಪರಿಣಿತಿ ಪಡೆದರು. 

ಸೊಲ್ಲಾಪುರದ ವಾರದ ಮಲ್ಲಪ್ಪನವರು ನಡೆಸುತ್ತಿದ್ದ ಸಂಸ್ಕೃತ ಪಾಠ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯ ನಾಲ್ವತ್ತವಾಡ ಶ್ರೀ ವೀರೇಶ್ವರ ಶರಣರ ಕ್ರಿಯಾಮೂರ್ತಿಗಳಾಗಿ ಬಿನ್ನಹಕ್ಕೆ ಹೋಗಿಬರುತ್ತಿದ್ದರು. ಅವರೊಡನೆ ವಯೋಮಾನದಲ್ಲಿ ಕಿರಿಯರಾಗಿದ್ದರೂ ಆಧ್ಯಾತ್ಮಿಕ ಸಂಬಂಧ ಹೊಂದಿದ್ದರು. ಇಂತಹ ಪರಮಪೂಜ್ಯರು ಕ್ರಿ.ಶ ೧೮೪೪ ನೆಯ ದುಂದುಭಿನಾಮ ಸಂವತ್ಸರದ ಮಾರ್ಗಶಿರ ಬಹುಳ ದಶಮಿ ಬುಧವಾರ ತಾ. ೧೩.೧೨.೧೯೨೨ ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳೆಂದು ನೂತನ ಹೆಸರಿನೊಂದಿಗೆ  ಶ್ರೀಗವಿಮಠದ ೧೬ ನೇ ಪೀಠಾಧಿಪತಿಗಳಾಗಿ ಪೀಠಾಧಿಕಾರವನ್ನು  ವಹಿಸಿದರು.

ಲಿಂ. ಮರಿಶಾಂತವೀರ ಮಹಾಸ್ವಾಮಿಗಳವರು ಹಿತ-ಮಿತ ಭಾಷಿಗಳಾಗಿದ್ದರು. ಸದಾ ಲಿಂಗಪೂಜೆಯಲ್ಲಿಯೇ ನಿರತರಾಗಿರುತ್ತಿದ್ದರು. ಮಹಾತಪಸ್ವಿಗಳಾಗಿ, ಶಿವಾನುಭವಿಗಳಾಗಿ ತ್ರಿವಿಧ ದಾಸೋಹ ಮೂರ್ತಿಗಳಾಗಿ ಶ್ರೀಗವಿಮಠದ ಹೆಸರನ್ನು ಬಹುಎತ್ತರಕ್ಕೇರಿಸಿದ್ದಾರೆ. ಸ್ವತಃ ವಿದ್ಯಾವಂತರು ಆಗಿದ್ದ ಇವರು ೧೯೫೧ ರಲ್ಲಿ ಶ್ರೀಗವಿಸಿದ್ಧೇಶ್ವರ ಮಿಡ್ಲ ಸ್ಕೂಲ್ ಸ್ಥಾಪಿಸಿ ಶಿಕ್ಷಣದ ಪ್ರಸಾರಕ್ಕೆ ಆಶ್ರಯ ನೀಡಿದರು. ಇದಾದನಂತರ ೧೯೬೩ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ದಕ ಸಂಸ್ಥೆಯನ್ನು ಆರಂಭಿಸಿದರು. ಸುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳನ್ನು ಶ್ರೀಗವಿಮಠಕ್ಕೆ ಕರೆತಂದು ಶಿಕ್ಷಣದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು. ಶ್ರೀಮಠದ ಭೂ ಆಸ್ತಿಯನ್ನೆಲ್ಲ ಶಿಕ್ಷಣ ಸಂಸ್ಥೆಗೆ ದಾನ ನೀಡಿ ಶಿಕ್ಷಣ ಬಿತ್ತರಿಸುವ ಜ್ಞಾನದಾಸೋಹದ ಜೊತೆಗೆ ಅನ್ನದಾಸೋಹವನ್ನು ನಿರಂತರವಾಗಿ ಶ್ರೀಗವಿಮಠದಲ್ಲಿ ಇಟ್ಟಿದ್ದರು ಆಯುರ್ವೇದದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಪೂಜ್ಯರು ಈ ನಾಡಿನಲ್ಲಿ  ಸಹಸ್ರಾರು ಜನ ಆಯುರ್ವೇದ ವೈದ್ಯರನ್ನು ಸಮಾಜಕ್ಕೆ ನೀಡಿದ್ದಾರೆ. ಭಕ್ತರ ನಾಡಿ ಹಿಡಿದು ರೋಗಗಳನ್ನು ಪರೀಕ್ಷಿಸಿ ಆಯುರ್ವೇದದ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಪಡಿಸುತ್ತಿದ್ದ ಕೀರ್ತಿ ಪೂಜ್ಯರಿಗಿದೆ.

ಇವರು ಅಂದು ಆರಂಭಿಸಿದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಬಿ.ಎ, ಬಿ.ಕಾಂ, ಬಿ.ಎಸ್ಸಿ , ಬಿ.ಸಿ.ಎ, ಬಿ.ಬಿ.ಎಂ, ಡಿ.ಇಡಿ, ಬಿ.ಇಡಿ, ಎಂ.ಎ, ಎಂ.ಕಾಂ, ಎಂ.ಎಸ್ಸಿ., ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಪಿ.ಜಿ,  ಮುಂತಾದ ಹಲವು  ಶಿಕ್ಷಣ ಸಂಸ್ಥೆಗಳು ಶ್ರೀ ಗವಿಮಠ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.  ಇಷ್ಟೊಂದು ಸಾಧನೆಯ  ಪುಜ್ಯ ಲಿಂ.ಮರಿಶಾಂತವೀರ ಮಹಾಸ್ವಾಮೀಜಿಗಳು ೦೧-೦೭-೧೯೬೭ ರಂದು ಲಿಂಗೈಕ್ಯರಾದರು              


          ಡಾ.ಪ್ರಕಾಶ ಬಳ್ಳಾರಿ


Advertisement

0 comments:

Post a Comment

 
Top