ಸಾಂಕ್ರಾಮಿಕ ರೋಗಗಳು ಹಾಗೂ ಸೊಳ್ಳೆಗಳ ಮೂಲಕ ಹರಡುವ ರೋಗಗಳ ನಿಯಂತ್ರಣದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐಸ್‌ಕ್ರೀಂಗೆ ಕಳಪೆ ಗುಣಮಟ್ಟದ ನೀರು : ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಐಸ್‌ಕ್ರೀಂ ತಯಾರಿಸುವ ಘಟಕಗಗಳಿದ್ದು, ಇಂತಹ ಘಟಕಗಳಲ್ಲಿ ಕಳಪೆ ಗುಣಮಟ್ಟದ ನೀರು ಬಳಕೆಯಾಗುತ್ತಿರುವ ಸಾಧ್ಯತೆಗಳು ಹೆಚ್ಚಾಗಿದೆ. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಐಸ್‌ಕ್ರೀಂ ಮಾರಾಟ ಮಾಡಲಾಗುತ್ತಿದ್ದು, ಐಸ್‌ಕ್ರೀಂ ಸೇವಿಸುವವರಲ್ಲಿ ವಾಂತಿ-ಭೇದಿ ಸೇರಿದಂತೆ ವಿವಿಧ ಸೋಂಕು ರೋಗಗಳು ಹರಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಐಸ್‌ಕ್ರೀಂ ತಯಾರಿಕಾ ಘಟಕಗಳನ್ನು ಪರಿಶೀಲಿಸಿ, ಕಳಪೆ ಗುಣಮಟ್ಟದ ನೀರು ಬಳಸುತ್ತಿರುವ ಐಸ್‌ಕ್ರೀಂ ಘಟಕಗಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕುಡಿಯುವ ನೀರು ಬಗ್ಗೆ ಎಚ್ಚರ ವಹಿಸಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಸಾಕಷ್ಟು ಎಚ್ಚರ ವಹಿಸುವುದು ಅಗತ್ಯವಾಗಿದೆ. ಎಲ್ಲ ಗ್ರಾಮ ಪಂಚಾಯತಿಗಳೂ, ಕನಿಷ್ಟ ೧೦ ದಿನಕ್ಕೊಮ್ಮೆ ಕುಡಿಯುವ ನೀರು ಘಟಕಗಳಲ್ಲಿ ಕ್ಲೋರಿನೇಷನ್ ಮಾಡಬೇಕು. ಪೈಪ್‌ಲೈನ್ ಸೋರಿಕೆ ಕಂಡುಬಂದಲ್ಲಿ, ಕೂಡಲೆ ದುರಸ್ತಿಗೊಳಿಸಬೇಕು. ಬೋರ್‌ವೆಲ್‌ಗಳ ಸುತ್ತ ಕೆಸರು ಸಂಗ್ರಹವಾಗುವುದರಿಂದ, ಕುಡಿಯುವ ನೀರು ಸಹ ಕಲುಷಿತಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟಲು, ಬೋರ್‌ವೆಲ್ ಸುತ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಸೇರಿದಂತೆ ಲಕ್ಮಾಪುರ, ಕೋಮಲಾಪುರ ಗ್ರಾಮಗಳಲ್ಲಿ ಈ ಹಿಂದೆ ವಾಂತಿ-ಭೇದಿ ಪ್ರಕರಣ ಹೆಚ್ಚಾಗಿ ಕಂಡುಬಂದಿರುವ ಬಗ್ಗೆ ವರದಿ ಇದ್ದು, ಇಲ್ಲಿನ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ಸಮಸ್ಯೆ ಇದ್ದಲ್ಲಿ, ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಬಹುತೇಕ ಶಾಲೆ ಹಾಗೂ ಅಂಗನವಾಡಿಗಳಲ್ಲಿನ ನೀರು ಸಂಗ್ರಹ ಟ್ಯಾಂಕ್‌ಗಳು ಮಲಿನವಾಗಿದ್ದು, ಇವುಗಳ ಸ್ವಚ್ಛತೆಗೆ ಆಯಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಅಂಗನವಾಡಿ ಮೇಲ್ವಿಚಾರಕರಿಗೆ ಸೂಕ್ತ ನಿರ್ದೇಶನ ನೀಡಿ, ಈ ಕುರಿತ ಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಇಲಾಖೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಇಸ್ಮಾಯಿಲ್‌ಖಾನ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯಾಧಿಕರಿಗಳು, ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment