ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ವಸತಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಂಡಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು ತಿಳಿಸಿದರು.
ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಈ.ಕ.ರಾ.ಸಂಸ್ಥೆಯ ಬಸ್ ನಿಲ್ದಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಲ್ಲಿಯೇ ಹೋಬಳಿಗೊಂದು ವಸತಿ ಶಾಲೆ ತೆರೆಯುತ್ತೇವೆ ಎಂದು ಘೋಷಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬಾಡಿಗೆ ಕಟ್ಟಡಗಳಲ್ಲಿರುವ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಒದಗಿಸಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದ್ದು, ಈ ವರ್ಷ 100 ವಸತಿ ಶಾಲೆಗಳನ್ನು ನವೋದಯ ವಿದ್ಯಾಲಯ ಮಾದರಿಯಲ್ಲಿ ಮತ್ತು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಶಾಲೆಗಳನ್ನು ರಾಜ್ಯದಲ್ಲಿ ನಿರ್ಮಿಸಲು ಯೋಜಿಸಲಾಗಿದೆ ಎಂದರು.
ರಾಜ್ಯದಲ್ಲಿ 543 ವಸತಿ ಶಾಲೆಗಳಿದ್ದು, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ,, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿವೆ. ಬಾಡಿಗೆ ಕಟ್ಟಡಗಳಲ್ಲಿ 240 ವಸತಿ ಶಾಲೆಗಳಿದ್ದು, ಸ್ವಂತ ಕಟ್ಟಡ ನಿರ್ಮಿಸಲು ಸರಕಾರದಿಂದ ನಿವೇಶನವನ್ನು ಪಡೆಯಲಾಗಿದೆ. ನವೀನ ತಂತ್ರಜ್ಞಾನವನ್ನು ಅನುಸರಿಸಿ ತ್ವರಿತವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡುವ ಅಂದರೆ ಸುಮಾರು 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಧಾನದಲ್ಲಿ, ಏಕಕಾಲದಲ್ಲಿಯೇ ಸುಮಾರು 100 ರಿಂದ 200 ವಸತಿ ಶಾಲೆಗಳನ್ನು ಸಮಾರೋಪಾದಿಯಲ್ಲಿ ಪ್ರಾರಂಭ ಮಾಡಬೇಕೆಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್, ಕಾಲೇಜುಗಳ ಖಾಲಿ ಜಾಗೆಯಲ್ಲಿ ಗಿಡ ಮರಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ತಾಳಕೇರಿ ಗ್ರಾಮದಲ್ಲಿ ಸರ್ಕಾರದಿಂದ ವಸತಿ ಶಾಲೆಗಾಗಿ ಪ್ರತಿ ಎಕರೆಗೆ 3.70 ಲಕ್ಷ ರೂ.ನಂತೆ ಒಟ್ಟು 20 ಎಕರೆ ಜಮೀನು ಪಡೆಯಲಾಗಿದ್ದು, ಜಮೀನು ನೀಡಿರುವ ದಾನಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಬೋರ್‍ವೆಲ್ ಕೊರೆಯಿಸಿ ಕೊಡಲು ಆದ್ಯತೆ ನೀಡಲಾಗುವುದು. ಅಲ್ಲದೇ ಬಸ್ ನಿಲ್ದಾಣಕ್ಕಾಗಿ 8 ರೈತರು ಜಮೀನು ಒದಗಿಸಿದ್ದು, ಇವರಿಗೂ ಸಹ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಯಿಸಿ ಕೊಡುವುದು ಹಾಗೂ 1 ಲಕ್ಷ ರೂ. ವೆಚ್ಚದಲ್ಲಿ ಅವರು ಕೈಗೊಳ್ಳುವ ವ್ಯಾಪಾರ, ಹೈನುಗಾರಿಕೆಗೆ ಸಬ್ಸಿಡಿ ನೀಡುವ ಯೋಜನೆಯ ಸೌಲಭ್ಯ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಯಲಬುರ್ಗಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇನ್ನಷ್ಟು ವಸತಿ ಶಾಲೆಗಳ ಅಗತ್ಯ ತಾಲೂಕಿಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸದ್ಯ ಮೆಟ್ರಿಕ್ ತನಕ ಮಾತ್ರ ಇದ್ದು, ಅವುಗಳನ್ನು ಪಿಯುಸಿ ವರೆಗೂ ವಿಸ್ತರಿಸಿ ಮೇಲ್ದರ್ಜೆಗೇರಿಸುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ತೋಟದ, ತಾ.ಪಂ. ಹಂಗಾಮಿ ಅಧ್ಯಕ್ಷ ಫಕೀರಪ್ಪ ತಳವಾರ, ಹಿರೇಅರಳಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮವ್ವ ಗೆದಗೇರಿ, ಜಿ.ಪಂ. ಸದಸ್ಯ ರಾಮಣ್ಣ ಎಂ.ಸಾಲಭಾವಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪಿ.ಶುಭ ಮುಂತಾದವರು ಪಾಲ್ಗೊಂಡಿದ್ದರು. ವಸತಿ ನಿಲಯ ಹಾಗೂ ಬಸ್ ನಿಲ್ದಾಣಕ್ಕಾಗಿ ಭೂಮಿ ಒದಗಿಸಿದ ರೈತರಿಗೆ ಇದೇ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು. ನಂತರ ಸಚಿವರು ಲಿಂಗನಬಂಡಿ ಗ್ರಾಮಕ್ಕೆ ಭೇಟಿ ನೀಡಿ ಹೊಸದಾಗಿ ಮಂಜೂರಾದ ಮೊರಾರ್ಜಿದೇಸಾಯಿ ವಸತಿ ನಿಲಯ ಅಲ್ಲದೆ ಬಳೂಟಗಿ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯಗಳ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿದರು.
0 comments:
Post a Comment