PLEASE LOGIN TO KANNADANET.COM FOR REGULAR NEWS-UPDATES


ಅಮರ್ ದೀಪ್ ಪಿ.ಎಸ್.
ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ  ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು.  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು.  ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ  ಕನ್ನಡೀಕರಿಸಿರಬಹುದು.  ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ  "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ  ನನ್ನ ಪ್ರಶ್ನೆ ಇರುವುದು  ಈಗ ಈ ಅಂಗ ಊನತೆ ಇರುವ ಜನರನ್ನು   ನಿಜ ವಾಗಿಯೂ ಹಾಗೇ ಕರೆಯಬಹುದೇ? ಅಂತ.  ನನಗನ್ನಿಸಿದಂತೆ ಸಾಮಾನ್ಯವಾಗಿ ಕೈ ಕಾಲು, ಕಣ್ಣು ಮೂಗು, ಬಾಯಿ, ಕಿವಿ, ನೋಡುವುದಕ್ಕೆ ಚೆನ್ನಾಗಿದ್ದ ಮಾತ್ರಕ್ಕೆ ಅವರು ಸದೃಢರೇ? ಒಮ್ಮೊಮ್ಮೆ ತಲೆ ಇದ್ದೂ ಇಲ್ಲದವರಂತೆ ಆಡುವವರನ್ನು ಒಳಗೊಂಡಂತೆ.

ಹಾಗೆನೇ  ಎಲ್ಲಾ ಅಂಗಾಂಗಗಳು ಚೆನ್ನಾಗಿದ್ದು, ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಬೆಳವಣಿಗೆ ಕಡಿಮೆ ಇದೇ ಎಂದ ಮಾತ್ರಕ್ಕೆ  ಅವರನ್ನು M. R (MENTALLY  RETARTED) ಎಂದು ಕರೆಯಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ.  ನಿಜ ಹೇಳಬೇಕೆಂದರೆ,  ಸಾಮಾನ್ಯ ಜನರಿಗಿಂತ ತುಸು ಹೆಚ್ಚೇ  ಅನ್ನಿಸುವಷ್ಟು ಆ ವರ್ಗದ ಜನರಿಗೆ ಏಕಾಗ್ರತೆ, ಆಸಕ್ತಿ, ಧೃಡತೆ ಇರುತ್ತದೆಂದೇ ನನ್ನ ಅನಿಸಿಕೆ.  ಅಂತಹುದೇ ಒಬ್ಬ ವ್ಯಕ್ತಿಯ ಬಗ್ಗೆ ಒಂದಿಷ್ಟು ಹೇಳಬೇಕಿನಿಸಿದೆ.  ನಿಜ, ನಮ್ಮ ಸುತ್ತಮುತ್ತಲೂ ಸಾಕಷ್ಟು ಇಂಥ ಜನರು ಇದ್ದೇ ಇದ್ದಾರೆ.. ಆದರೆ, ಆವರಲ್ಲಿ ಪರಾವಲಂಬಿ ಆಗದೇ ತಮ್ಮ ಶ್ರಮದಿಂದಲೇ ಇನ್ನೊಬ್ಬರಿಗೆ ಆಶ್ರಯವಾಗುವ ಮಟ್ಟಿಗೆ ಬೆಳೆದರೆ ಅದು ಅಂಗ ಊನತೆ ಇರದ ಸಾಮಾನ್ಯನಿಗೂ ಮಾದರಿಯಲ್ಲವೇ? ಅದು ಈ ಕ್ಷಣದ ನನ್ನ ವಿಷಯ…

ಬಿದಿರಿಕೊಂತಂ …..

ಆಗಿನ ಅವಿಭಜಿತ ಆಂಧ್ರದ ಅನಂತಪುರಂ ಜಿಲ್ಲೆಯ ಅದೊಂದು  ಹಳ್ಳಿ.. ಅಲ್ಲಿ  ಮೊದಲೆರಡು ಗಂಡು ಮಕ್ಕಳು ಒಂದು ಹೆಣ್ಣು ನಂತರ ಒಂದು ಗಂಡು ಒಟ್ಟು ನಾಲ್ಕು ಮಕ್ಕಳಿದ್ದ ಚಿಕ್ಕ ಸಂಸಾರವನ್ನು ಗಂಡ ಹೆಂಡತಿ ದೇಕುತ್ತಲೇ ಸಾಗಿಸುತ್ತಿದ್ದರು. ಎಲ್ಲಾ ಮಕ್ಕಳು ಮೂಲತಃ ತೆಲುಗು ಮಾಧ್ಯಮದಲ್ಲೇ ಕಲಿಯುತ್ತಿದ್ದರು.  ಅದೊಮ್ಮೆ ಎರಡನೇ ಮಗನಿಗೆ ಮೆದುಳು ಜ್ವರ ಕಾಣಿಸಿಕೊಂಡಿತು.  ಇರುವ ಸಣ್ಣ ಹಳ್ಳಿಯಲ್ಲಿ ಊರಿಗೊಬ್ಳೆ ಪದ್ಮಾವತಿ  ಅನ್ನುವಂತೆ ಇದ್ದ ವೈದ್ಯ ನೊಬ್ಬನ ಹತ್ತಿರ ತೋರಿಸಲು ಆ ಬಡ ತಂದೆ ತಾಯಿ ಎರಡು ವರ್ಷದ ಮಗುವನ್ನು ಕರೆದುಕೊಂಡು ಹೋಗುತ್ತಾರೆ.   ಆ ಪುಣ್ಯಾತ್ಮ ಅದ್ಯಾವ ಇಂಜೆಕ್ಷನ್ ಕೊಟ್ಟನೋ ಏನೋ ಎರಡು ವರ್ಷದವರೆಗೂ ಓಡಾಡಿ ಕೊಂಡಿದ್ದ ಮಗು ಆ ವೈದ್ಯ ನೀಡಿದ ಇಂಜೆಕ್ಷನ್ ಸೈಡ್ ಎಫೆಕ್ಟ್ ನಿಂದಾಗಿ ಪೋಲಿಯೋ ಅಟ್ಯಾಕ್ ಆಗಿ ಸೊಂಟದ ಕೆಳಗಿನ ಭಾಗದಿಂದ ಸ್ವಾಧೀನ ಕಳೆದುಕೊಂಡುಬಿಟ್ಟಿತು.  ಆಡ್ತಾ ಇದ್ದ ಕೋಳಿ ಕಾಲು ಮುರಿದಂತಾಯಿತೆಂದು ತಂದೆ ತಾಯಿ ಗೋಳಾಡಿದರು. ವೈದ್ಯನನ್ನು ಎದುರು ಹಾಕಿಕೊಳ್ಳು ವಂತೆಯೂ ಇಲ್ಲ. ಇತ್ತ ಪೋಲಿಯೋ ಪೀಡಿತ ಮಗುವನ್ನು ಕೈಬಿಟ್ಟು ಇರುವಂತೆಯೂ ಇಲ್ಲ.  ಈಗಿನಂತೆ ವೈದ್ಯಕೀಯ ನಿರ್ಲಕ್ಷ್ಯತನಕ್ಕೆ ಬಡಿದಾಡಿ ಕೇಸು ಹಾಕುವ ಮಟ್ಟಿಗೆ ಕಾನೂನು ಇದ್ದಿಲ್ಲ. ಅಷ್ಟು ತಾಳ್ಮೆ, ಸಮಯ, ಜ್ಞಾನ, ಈ ದಂಪತಿಗೂ ಇದ್ದಿಲ್ಲ.  ಯಾಕೆಂದರೆ ಅದಾಗಿದ್ದು 1985 ರಲ್ಲಿ.

ಆ ಮಗುವಿನ ಹೆಸರು ತೋಟದ್ ರವಿಕುಮಾರ್…..

ಹಾಗೂ ಹೀಗೂ ಆ ಹುಡುಗ ರವಿ ಮಾತು ಕಲಿತು, ಕೈಯಿಂದಲೇ ತೆವಳುತ್ತಾ ಇತರೇ ಮಕ್ಕಳಂತೆ ಶಾಲೆಗೆ ಹೋಗಲು ಶುರು ಮಾಡಿತು.  ಮೊದ ಮೊದಲು ಒಬ್ಬರ ಆಸರೆಯಿಂದ ತೆರಳುತ್ತಿದ್ದ ಮಗು ದೊಡ್ದವನಾದಂತೆ ತ್ರಿಚಕ್ರ ಸೈಕಲಲ್ಲಿ ಓಡಾಡುವುದನ್ನು ಕಲಿತ.  ಒಂದರಿಂದ ಎಂಟನೆ ತರಗತಿವರೆಗೆ ಪೂರ್ಣವಾಗಿ ತೆಲುಗು ಮಾಧ್ಯಮದಲ್ಲೇ ಕಲಿತ ಆ ಹುಡುಗ, ಅದೊಮ್ಮೆ ಅವರ ಕುಟುಂಬ ಬಳ್ಳಾರಿಗೆ ವಲಸೆ ಬಂದ ಹೊಸತರಲ್ಲಿ ಒಂಬತ್ತನೇ ಮತ್ತು ಹತ್ತನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲೇ ಓದಿ ಉತ್ತೀರ್ಣನಾದನು.  ಪಿಯುಸಿ ಓದುತ್ತಲೇ  ಕನ್ನಡ ಮತ್ತು ಅಂಗ್ಲ ಭಾಷೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಕಲಿತು ಅದರಲ್ಲೂ ಉತ್ತೀರ್ಣನಾದ. ಅಷ್ಟರಲ್ಲೇ ಅವನ ಅಣ್ಣನೊಬ್ಬ I. T.I. ಓದಿದ್ದ.  ತಮ್ಮ ತಂಗಿ ಇನ್ನು ಓದುತ್ತಿದ್ದರು.  ಮತ್ತು ತಂದೆ? ಬಳ್ಳಾರಿ ಯಲ್ಲಿ ಸಂಭಂಧಿಕರದೇ ಮನೆಯೊಂದರಲ್ಲಿ ಬಾಡಿಗೆಗಿದ್ದು, ಬ್ರೂಸ್ ಪೇಟೆ  ಹತ್ತಿರದ ಬಜಾರದಲ್ಲಿ ಕೇವಲ ಸಾವಿರ ಎರಡು ಸಾವಿರಕ್ಕೆ ಗುಮಾಸ್ತಗಿರಿ ಮಾಡಿಕೊಂಡಿದ್ದರು..

2002-03 ರೊಳಗೆ ಈ ಹುಡುಗ ರವಿ ಹೇಗೂ ಬೆರಳಚ್ಚು ಮತ್ತು ಶೀಘ್ರಲಿಪಿ ಮಾಡಿಕೊಂಡಿದ್ದನಲ್ಲ?  ಕಂಡ ಕಂಡ ಜಿಲ್ಲೆಯ ಕೋರ್ಟುಗಳಲ್ಲಿ ಕರೆದ ಬೆರಳಚ್ಚುಗಾರ/ಶೀಘ್ರಲಿಪಿಗಾರ  ಹುದ್ದೆಗೆ ಅರ್ಜಿ ಗುಜರಾಯಿಸಿದ.  ಅವನ ಅದೃಷ್ಟಕ್ಕೆ ಕೆಲಸವೂ ಸಿಕ್ಕಿತು.  ವಿಪರ್ಯಾಸವೆಂದರೆ ಆ ಹುಡುಗನಿಗೆ ನೌಕರಿ ಸಿಕ್ಕಿದ್ದು; ಮಡಿಕೇರಿ ಜಿಲ್ಲೆಯ ವಿರಾಜ ಪೇಟೆಯ ಕೋರ್ಟ್ ನಲ್ಲಿ.. ಅದು copyist- Typist ಹುದ್ದೆ.  ಎಲ್ಲಿಯ ಬಳ್ಳಾರಿ? ಎಲ್ಲಿಯ ವಿರಾಜಪೇಟೆ? ಬೇರೆ ಯಾರಾದ್ರೂ ಸಾಮಾನ್ಯವಾಗಿ ಕೈ ಕಾಲು ನೆಟ್ಟಗಿದ್ದವರೂ  "ಇಲ್ಲೇ ಎಲ್ಲೋ ಹತ್ತಿರದ ಜಿಲ್ಲೆಯಲ್ಲಿ  ಆಗಿದ್ರೆ ಹೋಗ್ಬಹುದಿತ್ತಪ್ಪ; ಭಾಳ ದೂರಾತು" ಅಂದು ಇನ್ನೊಂದು ಅರ್ಜಿ ತುಂಬಲು ಅಣಿಯಾಗು ತ್ತಿದ್ದರೇನೋ.  ಆದರೆ ಆ ಹುಡುಗ? ಉಹೂ … ಬಳ್ಳಾರಿಯಲ್ಲಿ ಉಳಿದವರನ್ನು ಬಿಟ್ಟು, ಅಪ್ಪ ಅಮ್ಮನನ್ನು ಜೊತೆ ಮಾಡಿಕೊಂಡು  ಹೊರಟ; ತನ್ನ ತ್ರಿಚಕ್ರ ಸೈಕಲ್ಲಿನ ಸಮೇತ.  ನಾವು ಸೊಟ್ಟು ನಮ್ಮ ನಾಲ್ಕು ಬ್ಯಾಗ್ ಲಗೇಜ್ ಹೊತ್ಯೊಯ್ಯಲು ಸೋಮಾರಿತನದಿಂದ "ಆಟೋ" ಅನ್ನುತ್ತೇವೆ.. ಬಳ್ಳಾರಿ ರಣ ಬಿಸಿಲಿಗೆ ಹೆಸರು, ಮಡಿಕೇರಿ ಬಿಸಿಲೇ ಕಾಣದ ಸದಾ ತೊಯ್ಯುತ್ತಲೇ ಇರುವ ಹಸಿರು.. ಅಲ್ಲಿಯ ವಾತಾವರಣಕ್ಕೆ ರವಿಯ ತಂದೆ ಅಥವಾ ತಾಯಿಗೋ ತಂಪಿನಿಂದ ಅನಾರೋಗ್ಯವು ಕಾಡಿತು.  ಅನಿವಾರ್ಯ, ದುಡಿಮೆ ಜರೂರಿದೆ.  ದೂರದ ಊರು ಬಿಟ್ಟು ಬಂದಾಗಿದೆ, ಇರಲೇಬೇಕು.

2004 ನಮ್ಮ ಇಲಾಖೆಯಲ್ಲಿ  ಕರೆದ ಕೇವಲ ಸುಮಾರು 50  ಶೀಘ್ರಲಿಪಿಗಾರರ ಹುದ್ದೆಗಳಲ್ಲಿ  ಸಮುಚಿತ ಮಾರ್ಗವಾಗಿ  (through proper channel ಅಂದರೆ ತನ್ನ ಇಲಾಖೆಯ/ ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆದೇ) (ಈಗಾಗಲೇ ಸರ್ಕಾರಿ ಹುದ್ದೆಯಲ್ಲಿರುವವರು ಬೇರೊಂದು ಇಲಾಖೆಯಲ್ಲಿನ ಹುದ್ದೆಗೆ ಅರ್ಜಿ ಹಾಕುವಾಗ ಈ ಕ್ರಮವನ್ನು ಅನುಸರಿಸಲೇಬೇಕು) ಅರ್ಜಿ ಸಲ್ಲಿಸಿದ. ಈಗ ಶೀಘ್ರಲಿಪಿಗಾರನಾಗಿ ನೇಮಕಗೊಂಡು ಮತ್ತೆ ಬಳ್ಳಾರಿಗೆ  ಬಂದ.    ಆಗ ನಾನಲ್ಲಿ ಶಿರಸ್ತೇದಾರ್ ನಾಗಿದ್ದೆ.  ಮೊದ ಮೊದಲು  ನೇಮಕಾತಿ ಆದೇಶ ನೋಡುತ್ತಲೇ ಅವನ ಮಡಿಕೇರಿ ವಿಳಾಸ ನೋಡಿ "ಪಾಪ, ಭಾಳ ದೂರಾತು ಊರು" ಅಂದುಕೊಂಡಿದ್ದೆ.  ಆಮೇಲೆ ಗೊತ್ತಾಯ್ತು; ಈ ಹುಡುಗನದು  ಸ್ವಗ್ರಾಮ ಬಳ್ಳಾರಿ ಎಂದು.. ಆದರೆ ನನಗೆ ಮೊದಲೇ ಗೊತ್ತಿರದಿದ್ದ ಸಂಗತಿ ಎಂದರೆ; ಈ ಹುಡುಗ ಪೋಲಿಯೋ ಪೀಡಿತ ಮತ್ತು ತ್ರಿಚಕ್ರದಲ್ಲಿ ಬಂದು ಕೈಯಿಂದಲೇ ತೆವಳಿ ನಡೆಯುತ್ತಾ ನೆನ್ನುವುದು..  


ಈ ಹುಡುಗನನ್ನು ಮೊದಲು ನೋಡಿದವನೇ ಗಾಬರಿಯಾಗಿದ್ದೆ.. ಆದರೆ, he was quite common like others who are fit.  ನಾನು ಹೇಳುತ್ತಿರುವುದು ಇತರರಂತೆ ಅವನ ದೈಹಿಕ ಸ್ಥಿರತೆ ಬಗ್ಗೆ ಅಲ್ಲ ಮಾನಸಿಕ ಸ್ಥಿರತೆ ಬಗ್ಗೆ.. ಅಷ್ಟು  confidence ಅವನಲ್ಲಿ.. ಮೊದಲು  "ಹೇಗಪ್ಪಾ ಇವನಿಗೆ ಕೆಲಸ ಹೇಳೋದು?" ಅನ್ನೋದೇ ನನ್ನ ದೊಡ್ಡ ಸಮಸ್ಯೆ ಆಗಿತ್ತು.   ಈ ಹುಡುಗನ ಆಸಕ್ತಿ, ತಾಳ್ಮೆ ನೋಡಿ? ಬರು ಬರುತ್ತಾ ಕೆಲಸಗಳ ಬೆರಳಷ್ಟೇ ಸಾಕಿತ್ತು ಅವನಿಗೆ; ಹಸ್ತ ನುಂಗುವುದು ಅವನಾಗಲೇ ಕಲಿತಿದ್ದ.  ಹಗಲು ರಾತ್ರಿ, ಬೆಳಿಗ್ಗೆ ಏಳಕ್ಕೆಂದರೆ ಏಳಕ್ಕೆ ಸಂಜೆ ಎಂಟರ ತನಕ ಅಂದರೆ ಅಲ್ಲಿಯತನಕ, ಅದೇ ಸ್ಪೀಡ್.  ಅವನ ಜೊತೆ ಉಳಿದ ನೌಕರರು ಇದ್ದು ಕೆಲಸ ಮಾಡುತ್ತಿದ್ದರು.   ರವಿ ತನ್ನ ಸ್ಟೆನೋಗ್ರಫಿ ಕೆಲಸದ ಜೊತೆ ನಮ್ಮ ಗ್ರಾಹಕರ ವೇದಿಕೆಯ ಶಿರಸ್ತೇದಾರ್ ಕೆಲಸ, ಬೆಂಚ್ ಕ್ಲೆರ್ಕ್ ಕೆಲಸ, ಯಾವುದಿದ್ರೂ "ಎಲ್ಲದಕ್ಕೂ ಸೈ.. ಆಯ್ತು ಸರ್" ಅನ್ನುವಷ್ಟು ಪಳಗಿದ್ದಾನೆ.

ಅದೊಂದು ದಿನ ಸರ್ಕಾರಿ ವಸತಿ ಗೃಹಕ್ಕೆ ಅರ್ಜಿ ಹಾಕುವುದಾಗಿ ಹೇಳಿದ. ನಾನು ಕೂಡ ಅರ್ಜಿ ಹಾಕುವುದ ರಲ್ಲಿದ್ದೆ.  ನನಗ್ಯಾಕೋ ಆಗಲೇ ಅನ್ನಿಸಿತ್ತು; ಬಳ್ಳಾರಿಯಿಂದ  ಈ ವರ್ಷ ದಾಟಿದರೆ ನನಗೆ ವರ್ಗವಾಗಬಹುದು ಅಂತ. ಹಾಗಾಗಿ ನಾನು ಕೈ ಬಿಟ್ಟೆ.   ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೆ ಹೇಳಿದೆ.  ನಂತರ ಆಗ ದಕ್ಷ ಜಿಲ್ಲಾಧಿಕಾರಿ ಅರವಿಂದ್ ಶ್ರೀವಾಸ್ತವ್ ಇದ್ದರು. ಅವರನ್ನು ವೈಯುಕ್ತಿಕವಾಗಿ ಕಾಣಲು ವ್ಯವಸ್ಥೆ ಮಾಡಿ ಮನವಿ ಮಾಡಲು ಕರೆದ್ಯೊಯ್ದಿದ್ದೆ .  ಗ್ರೇಟ್, ಇವನ ಕಂಡೀಶನ್ ನೋಡಿ ವಿಶೇಷ ಕೋಟಾ ಅಡಿ ಯಲ್ಲಿ ಜಿಲ್ಲಾಧಿಕಾರಿ ಅವನಿಗೆ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡಿದರು. ಈಗ ಆರನೇ ವರ್ಷ ವಸತಿ ಗೃಹ  ಹಂಚಿಕೆಯಾಗಿ.
 
ಇದರ ಮಧ್ಯೆ ಅವನ ಅಣ್ಣ ಬಸವರಾಜ್ ಗೆ KPTCL ಗುಲ್ಬರ್ಗಾ ವಿಭಾಗದಲ್ಲಿ ನೇಮಕವಾಯ್ತು ಅದು ನಯಾ ಪೈಸೆ ಖರ್ಚಿಲ್ಲದೇ.  ಆದರೆ, ರವಿ  "ಅವನಿಗೆ ಬಳ್ಳಾರಿಗೆ ಪೋಸ್ಟಿಂಗ್ ಸಿಕ್ಕಿದ್ದರೆ ಅನುಕೂಲವಾಗುತ್ತೆ ಸರ್" ಅಂದ.   ನನಗೂ ಇದ್ಯಾವುದರ ಲಕ್ಷ್ಯ  ಇದ್ದಿಲ್ಲ.  ಆದ್ರೆ ಒಳ್ಳೇದಲ್ಲ ? ಅಷ್ಟೇ ನನಗನ್ನಿಸಿದ್ದು.  ಒಂದಿನ ನನಗೆ ಗೊತ್ತಿದ್ದ ಅದೇ ಇಲಾಖೆಯ ನನ್ನ ಹೆಂಡತಿ ಸೋದರ ಮಾವ ಸಿಕ್ಕಿದ್ದರು.  ಅವರಿಗೆ ಒಂದು ಮಾತು ಹೇಳಿದ್ದೆ ಅಷ್ಟೇ.  ರವಿ ಅಣ್ಣನಿಗೆ ಬಳ್ಳಾರಿಯಲ್ಲೇ ಪೋಸ್ಟಿಂಗ್ ಕೂಡ ಸಿಕ್ಕಿತು; ಒಂದು ಪೈಸೆ ನೀಡದೇ.

ಎರಡು ವರ್ಷಗಳ ಹಿಂದೆ ಕಷ್ಟ ಪಟ್ಟು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹರಾಜಾದ ಒಂದು ಸೈಟನ್ನು ಖರೀದಿಸಿ  ಅಣ್ಣ ತಮ್ಮಂದಿರಿಬ್ಬರೂ ಹತ್ತು ಲಕ್ಷ ಸಾಲ ಮಾಡಿ ಅವರ ಅಮ್ಮನ ಹೆಸರಿಗೆ ಮಾಡಿದ್ದಾರೆ.  ಈಗಲೂ  ಅವನು ಅದೇ ತ್ರಿ ಚಕ್ರದ ಸೈಕಲ್ಲನ್ನೇ ತಳ್ಳಿಕೊಂಡು ಕಚೇರಿಗೆ ಬರುತ್ತಾನೆ.. ಕನಿಷ್ಠ ಆರರಿಂದ ಎಂಟು ಕಿಲೋ ಮೀಟರ್ ಪ್ರತಿ ದಿನ ತಿರುಗಾಡುತ್ತಾನೆ.. ಮತ್ತೀಗ ಅವರಪ್ಪ ಗುಮಾಸ್ತ ಕೆಲಸಕ್ಕೆ ಹೋಗು ತ್ತಾರೋ ಅಥವಾ ಬಿಟ್ಟಿದ್ದಾರೋ ಗೊತ್ತಿಲ್ಲ.. "ಸರ್ಕಾರದಿಂದ ರಿಯಾಯಿತಿ ದರದಲ್ಲಿ ಸಿಗುವ  ತ್ರಿ ಚಕ್ರ ವಾಹನ ತಗೊಳ್ಳೋ" ಅಂತೇನಾದ್ರೂ ಹೇಳಿದ್ರೆ, "ಮುಂದೆ ನೋಡಾಣಾ ಬಿಡಿ ಸರ್" ಅನ್ನುತ್ತಾನೆ.  ಅದೂ ಅಲ್ಲದೇ ರವಿ ಮತ್ತವನ ಅಣ್ಣ ಇಬ್ಬರೂ ತಮ್ಮ ತಂಗಿಯನ್ನು ಓದಿಸಿ, ತಂಗಿಯ ಮದುವೆಯನ್ನೂ ಸಹ ಮಾಡಿದರು. ಅವನು ಓದಿ ಡಿಗ್ರಿ ಮುಗಿಸಿಕೊಂಡ.   ಮಧ್ಯಮ ವರ್ಗದ ಜನರಿಗೆ ಇಷ್ಟಿಷ್ಟೇ ಅಲ್ಲವೇ ಆಸೆಗಳು? ನೆರ ವೇರಿದ  ಆ  ಆಸೆಗಳೇ ಖುಷಿ ನೀಡುತ್ತವಲ್ಲ? ಆ ಖುಷಿ ದೊಡ್ಡ ದೊಡ್ಡ achievementಗಳು ಸಹ ನೀಡು ವುದಿಲ್ಲ.. ಇಷ್ಟರಲ್ಲೇ 371 (j) ಹೈದರಾಬಾದ್ – ಕರ್ನಾಟಕ ಪ್ರದೇಶದ ಭಾಗದ  ಅವಕಾಶದಡಿ ಕಚೇರಿ ಅಧೀಕ್ಷಕ (ಶಿರಸ್ತೇದಾರ್ )  ಹುದ್ದೆಗೆ ಪದೋನ್ನತಿ ಪಡೆಯಲು ತುದಿಗಾಲಲ್ಲಿದ್ದಾನೆ.

ಇತ್ತೀಚಿಗೆ ಫೆಬ್ರವರಿ -2014 ರಲ್ಲಿ ನಮ್ಮ ರಾಜ್ಯ  ಸರ್ಕಾರ ಇಂಥ ನೌಕರರಿಗೆ ಅನುಕೂಲವಾಗಲೆಂದು ಅವರಿಗೆ ವರ್ಗಾವಣೆ, ಪದೋನ್ನತಿ ಏನೇ ನೀಡಿದರೂ ಅವರು ಕೇಳುವ, ಅವರಿಗೆ ಅನುಕೂಲವಾಗುವ ಸ್ಥಳಕ್ಕೆ ನಿಯೋಜಿಸಲು ಆದೇಶಿಸಿದೆ.  ಅಲ್ಲದೇ ಬರೀ ಅಂಗವೈಕಲ್ಯದ ಕಾರಣವಾಗಿ ಅಂಥ  ನೌಕರರಿಗೆ ಪದೋ ನ್ನತಿಯನ್ನೂ ಸಹ ನಿರಾಕರಿಸುವಂತಿಲ್ಲವೆಂದೂ ಸಹ ಆದೇಶಿಸಿದೆ.

ನಮ್ಮ ರಾಜ್ಯ ಸರ್ಕಾರಿ ನೌಕರರ ಪೈಕಿ ಸುಮಾರು 14500 ರಷ್ಟು ಮಂದಿ physically challenged  ಗುಂಪಿಗೆ  ಸೇರಿದವರಿದ್ದಾರಂತೆ.  ಈಗಾಗಲೇ ಇವರದೇ ಒಂದು ರಾಜ್ಯ ಮಟ್ಟದ ಸಂಘವನ್ನು ಕಟ್ಟಿಕೊಂಡು ಈ ಬಳಗಕ್ಕೆ ಮತ್ತು ಅವರ ಅವಲಂಬಿತ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಕನಿಷ್ಠ ಸೌಲಭ್ಯಗಳನ್ನು ಪಡೆಯುವಲ್ಲಿ ಕೊಂಚ ಯಶಸ್ಸನ್ನು ಸಹ ಕಂಡಿದೆ.  ಇನ್ನು ಈ ವರ್ಗದ ನೌಕರರಿಗೆ  ಪದೋನ್ನತಿಯಲ್ಲಿ ಮೀಸ ಲಾತಿಯನ್ನು ನಿಗದಿ ಪಡಿಸಲು ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸಿದ್ದಾರೆ. ಬಿಡಿ, ಇದು ಸರ್ಕಾರಿ ನೌಕರಿ ಇದ್ದ ವರ  ಪಾಡು.  ಇನ್ನೂ ನೌಕರಿಯೇ ಇಲ್ಲದ, ಕನಿಷ್ಠ ಸೌಲಭ್ಯವೂ ಸಿಗದ   ಬಡ ವರ್ಗದಲ್ಲಿ  physically challenged ಪಂಗಡದ ಅದೆಷ್ಟು ಜನರಿದ್ದಾರೋ?  ಪ್ರತಿ ವರ್ಷ  ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯು  ಈ ತರಹದ ಆಯ್ದ  ನಾಗರಿಕರಿಗೆ  ಬಡ್ಡಿ ಇಲ್ಲದೇ ಇಪ್ಪತ್ತು ಸಾವಿರ ಸಾಲ ಮತ್ತು ಹದಿನೈದು ಸಾವಿರ ಮೌಲ್ಯದ ಸಲಕರಣೆಗಳನ್ನು ನೀಡಿ  ಆಶ್ರಯ ಯೋಜನೆ ಅಡಿ  ಸ್ವಾವಲಂಭಿಗಳಾಗಳು ಪ್ರೋತ್ಸಾಹಿಸಿರುವುದನ್ನು ಸಹ ಕೇಳಿದ್ದೇನೆ.

ಇಲ್ಲೊಬ್ಬ ನಮ್ಮ ಕಚೇರಿಯ ಪಕ್ಕದಲ್ಲೇ ಇರುವ ಶಾಲೆಯಲ್ಲಿ  ಸಹ ಶಿಕ್ಷಕರಾಗಿರುವ ಬೀರಪ್ಪ ಅಂಡಗಿ ಇದ್ದಾರೆ. ಅವರೂ physically challenged. ರವಿಗಿಂತ ಕೊಂಚ ಶಕ್ತರು, "ಓಡಾಡ" ಬಲ್ಲಂಥವರು.  ಆದರೆ ಯಾವ  ಸಹಜ ನಾಗರೀಕನಿಗಿಂತಲೂ ಕಡಿಮೆ ಇಲ್ಲದ ಉತ್ಸಾಹದವರು.  ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.  ಸ್ಥಳೀಯವಾಗಲಿ  ಮತ್ತು  ರಾಜ್ಯ ಮಟ್ಟ ದಲ್ಲೇ  ಆಗಲೀ ಅಂಗವಿಕಲ ನೌಕರರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ಅಥವಾ  ಪ್ರತಿಭಟಿಸಲು  ಸಕ್ರೀಯವಾಗಿದ್ದಾರೆ.  ಇದಕ್ಕೆ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ.ನಾಗರಾಜ್ ಆರ್. ಜುಮ್ಮನ್ನವರ್ ಇವರ  ಸಂಪೂರ್ಣ ಸಹಕಾರವೂ  ಈತನಿಗಿದೆ. 


ಇರಲಿ, ಸಂಘಟನೆ, ಸಮೂಹ, ಶಕ್ತಿ ಇವೆಲ್ಲಾ ಒಗ್ಗಟ್ಟಿನ ಸೂಚನೆ.  ಆದರೆ, ಇಷ್ಟೆಲ್ಲಾ ಪ್ರಯತ್ನಗಳು, ಕ್ರಿಯಾ ಶೀಲತೆ ಬರೀ ಪ್ರಚಾರದ ಮುಖದಲ್ಲೇ ಮರೆಯಾಗದೇ ಕ್ರಿಯಾರೂಪಕ್ಕೂ ಅನಾವರಣಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯ ಸಂಕೇತ.  ಒಂದು ವೇಳೆ ಅದಾಗದಿದ್ದಲ್ಲಿ ಕಾಗದ ಮೇಲಿನ ನೀರಲ್ಲಿ ಈಜುತ್ತಿರುವ ಮೀನಿನಂತೆ ಭಾಸವಾಗುವ  ಪರಿಸ್ಥಿತಿಯೂ ಒದಗುತ್ತಿತ್ತು.
 ನಿಜ,  ಎಷ್ಟೋ ನೌಕರರು ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ವಲಯಗಳಲ್ಲಿ, ನಮ್ಮ ಸುತ್ತ ಮುತ್ತ ಸಾಕಷ್ಟು  physically challenged ವರ್ಗಕ್ಕೆ ಸೇರಿದವರು,  ಸಾಧನೆ ಮಾಡಿದವರು ಸಿಕ್ಕೇ ಸಿಗುತ್ತಾರೆ.  ಅವರೂ ಅಭಿನಂದನೀಯರು. ಅವರಲ್ಲಿ ರವಿ ಒಬ್ಬನು. ಅದರಂತೆ ಅದೇ ಬಳ್ಳಾರಿ ತಾಲೂಕಿನ ಚಳ್ಳಗುರ್ಕಿಯ ಶ್ರೀದೇವಿ ಅಂಗಡಿ ಎಂಬ ಅಂಧರೊಬ್ಬರು ಇಷ್ಟರಲ್ಲೇ ಬೆಂಗಳೂರಿನಂಥ ನಗರದಲ್ಲಿ ವಿಶೇಷ ಶಿಕ್ಷಣ ಸಂಸ್ಥೆಯನ್ನೇ ಹುಟ್ಟು ಹಾಕುತ್ತಿರುವ ಸಂಗತಿ ಸಾಮಾನ್ಯದ್ದಲ್ಲ. ಅವರೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ  ಅಪ್ಪಟ ಪ್ರತಿಭೆ ಎಂತಲೇ ಹೇಳಬಹುದು. ಅದಕ್ಕೆ ಜಾನಪದ ಸೊಗಡಿನ  ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಶ್ರೀ ಚಂದ್ರಶೇಖರ ಕಂಬಾರರು ಖುದ್ದಾಗಿ ಉದ್ಘಾಟನೆಗೆ ಬರಲು ಇಚ್ಚಿಸಿದ್ದಾರೆಂದರೆ ನೋಡಿ?   ಅದಲ್ಲವೇ ಪ್ರೋತ್ಸಾಹ?   ಎಲ್ಲಾ  ಸಾಧಕರು ಎಲ್ಲರಿಗೂ ವೈಯುಕ್ತಿಕವಾಗಿ ಪರಿಚಯಕ್ಕೆ ಸಿಗಲಾರರು. ಆದರೆ, ಈ  ಬರಹದ  ಮೂಲಕ ಮರೆಯಲ್ಲಿದ್ದ ಒಬ್ಬ ರವಿಯನ್ನು  ಮತ್ತೊಬ್ಬ ಬೀರಪ್ಪನನ್ನು ನನ್ನ ಗೆಳೆಯರ ಬಳಗಕ್ಕೆ ಪರಿಚಯಿಸುವುದು ಸೂಕ್ತವೆಂದು ಭಾವಿಸುತ್ತೇನೆ.   ಬಹಳಷ್ಟು ಕಡೆ ತಮ್ಮನ್ನು ತಾವು ಗುರುತಿಸಿ "ಕೊಳ್ಳು" ವುದರಲ್ಲೇ ತಮ್ಮ ಶ್ರಮ ಇದೆ ಎಂದು ಭಾವಿಸಿ ಪ್ರಶಸ್ತಿಗಳಿಗೆ ಲಾಬಿ ಮಾಡುವ ಜನರಿರುವ ಮಧ್ಯೆ ಇಂಥವರನ್ನು ನಾವು ಗುರುತಿಸುವುದು ನಮ್ಮ ಶ್ರೇಯಸ್ಸಲ್ಲವೇ?
 ವಿಷಯಕ್ಕೆ ಬರೋಣ . ಈಗ ಹೇಳಿ, ರವಿ ಮೂಲತಃ ತೆಲುಗನಾದರೂ ಕನ್ನಡ, ಆಂಗ್ಲ ಭಾಷೆ  ಕಲಿತು,  ಸಾಮಾನ್ಯ ದೈಹಿಕ  ಸದೃಢತೆ ಹೊಂದಿರದ ಮನುಷ್ಯನಾಗಿಯೂ ತನ್ನ ಶ್ರಮ,ದುಡಿಮೆ, ತಾಳ್ಮೆಯಿಂದ  ತಾನೊಬ್ಬ ಸ್ವಾವಲಂಭಿ ಮತ್ತು ಅವಲಂಬಿತರ ದೇಖರಿಕೆಯನ್ನು ಸಹ ಮಾಡಿ, ತನ್ನ ಶಕ್ತ್ಯಾನುಸಾರ ಕುಟುಂಬಕ್ಕೆ ನೆರವಾಗುವ ಪರಿಶ್ರಮ,  ನಿಜಕ್ಕೂ ನಮ್ಮಂತೆ  ಕಚೇರಿಗೆ ಬಂದು ಎಂಟು ಸಾರಿ ಟೀ ಗೆ,  ಬ್ಯಾಂಕ್ ಗೆ, ATM ಗೆ ಪದೇ ಪದೇ ನೆಪ ಹೇಳಿ ಸೀಟು ಬಿಟ್ಟು ಎದ್ದು ಹೋಗುವ, ಬಂದ ವೇತನವನ್ನು ಪೋಲು ಮಾಡುವ ಇತರ ಎಷ್ಟೋ ನೌಕರ ರಿಗೆ ಮಾದರಿಯಲ್ಲವೇ?
  ಅದೊಮ್ಮೆ ವೈದ್ಯರ ನಿರ್ಲಕ್ಷ್ಯದಿಂದ ಆದ ತೊಂದರೆಯಿಂದ  ಜೀವನ ಪರ್ಯಂತದ ಪೋಲಿಯೋ  ಸಮಸ್ಯೆ ಎದುರಿಸುತ್ತಿರುವ ರವಿ, ಸದ್ಯ ಅಂತಹುದೇ ವೈದ್ಯರ ನಿರ್ಲಕ್ಷ್ಯದ ಪ್ರಕರಣಗಳು ದಾಖಲಾಗಬಹುದಾದ ಗ್ರಾಹಕರ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಾಕತಾಳೀಯವೇ ಸರಿ.  ಎಲ್ಲಾ ಸರಿ, ಈ ಹುಡುಗ ರವಿ ಮತ್ತವನ  ಯಥಾಸ್ಥಿತಿಯನ್ನು ಒಪ್ಪಿಕೊಂಡು, ಅನುಕಂಪವಿಲ್ಲದೇ  ಒಬ್ಬ ಕಂಪ್ಯಾನಿಯನ್ ಆಗಿ ಒಂದು  ಹುಡುಗಿ ಸಂಗಾತಿ(ಮದುವೆ)ಯಾಗಲೂ ಸಿಕ್ಕಿದರೆ ಅದೇ ಸಂತೋಷವಲ್ಲವೇ? 

couresy: http://www.panjumagazine.com

Advertisement

0 comments:

Post a Comment

 
Top