PLEASE LOGIN TO KANNADANET.COM FOR REGULAR NEWS-UPDATES

ಎರಡು ಕನ್ನಡ ಸಿನಿಮಾ ನೆನಪಾಗುತ್ತೆ ಅಂತ ಹೇಳ್ಬೋದಾ? ಹೇಳ್ಬಾರ‍್ದಾ?


         ೨೦೧೨ರ ನವೆಂಬರ್ ೧ ರಂದು ಬಿಡುಗಡೆಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ೨೦೧೩ರ ಡಿಸೆಂಬರ್ ೧೨ ರಂದು ಬಿಡುಗಡೆಯಾದ ಭಜರಂಗಿ ಈ ಎರಡೂ ಕನ್ನಡ ಸಿನಿಮಾಗಳ ನೆರಳಿನಂತೆ ಗೋಚರಿಸುವ ಗಜಕೇಸರಿ ಎಲ್ಲೂ ಬೋರ್ ಹೊಡೆಸದು ಎನ್ನುವುದು ಎಷ್ಟು ಸತ್ಯವೋ ಆ ಸಿನಿಮಾಗಳ ನೆರಳಿನಿಂದ ಆಚೆ ಬಂದು, ಗಜಕೇಸರಿ ಕನ್ನಡದ ಮತ್ತೊಂದು ವಿಭಿನ್ನ ಸಿನಿಮಾ ಎನಿಸಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎನಿಸುವುದು ಅಷ್ಟೇ ಸತ್ಯ
          ಚಿತ್ರದ ಆರಂಭ, ಅಂತ್ಯ, ಮದ್ಯಂತರ ನಿಧಾನ ಎನಿಸದು. ಚಿತ್ರವನ್ನು ಮತ್ತಷ್ಟೂ ಪುಶ್ ಮಾಡಬೇಕು ಎಂದುಕೊಂಡು ಹೊಸೆದಿರುವ ಸಾಧುಕೋಕಿಲ, ರಂಗಾಯಣ ಕೋಕಿಲಾ ಕಾಮಿಡಿ, ನಗಿಸುವುದಕ್ಕಿಂತ ಇದ್ಯಾಕೋ ನಿಧಾನ ಆಯ್ತು ಎನಿಸದೇ ಇರದು. ಇದೊಂದು ಕಾಡಿನ ಪಾಡಿ ಜನರ ನಡುವೆ ಸಾಗುವ ಕಥೆಯಾಗಿದ್ದರಿಂದ ಕಾಡುಗಳ್ಳನ ಆ‘ಸೆರೆ’ಯಲ್ಲಿದ್ದ ಅಣ್ಣಾವ್ರ ದಿನಗಳನ್ನು ಕಾಮಿಡಿಗೆ ಸಿಂಕ್ ಮಾಡಲಾಗಿದೆ. ಜೊತೆಗೆ ಕಾಮಿಡಿ ಬೇಕೆನಿಸಿದಾಗ ಅವರ ಹೆಸರಿನ ಸಿನಿಮಾ, ಹಾಡು, ಮಿಮಿಕ್ರಿಯನ್ನೇ ಕಾಮಿಡಿ ಎಂದು ಪರಿಭಾವಿಸಿದ್ದು ಅತಿರೇಕ ಅನಿಸುತ್ತದೆ.
           ಮಿಕ್ಕಂತೆ ಕಥೆಯಲ್ಲಿ ಓಟವಿದೆ. ಬಡ್ಡಿ ಸಾಲ ನೀಡುವ ಕೃಷ್ಣನಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ಆದರೆ ಅವನು ಹುಟ್ಟಿದ್ದು ಗಜಕೇಸರಿ ಯೋಗದಲ್ಲಿ. ಹಾಗಾಗಿ ಅವನಿಂದ ಇತರರಿಗೆ ಉಪಕಾರವಾಗುತ್ತದೆ. ಆತನಿಗೆ ಅದು ಗೊತ್ತೇ ಆಗುವುದಿಲ್ಲ ಎಂಬುದನ್ನು ಆರಂಭದಲ್ಲಿ ಹೇಳಿ. ಮಠವೊಂದಕ್ಕೆ ಉಂಡಾಡಿಗುಂಡನನ್ನು ಮಠಾಽಪತಿಯಾಗಲು ತಯಾರಾಗುವಂತೆ ಶ್ರೀಗಳು ಹೇಳುತ್ತಿದ್ದಂತೆ ಥಟ್ಟನೆ ಒಪ್ಪಿಕೊಳ್ಳುವ ಕೃಷ್ಣ, ಮದುವೆನೂ ನೀವೆ ಮಾಡಿಸ್ತಿರಾ ಎಂದು ಕೇಳುತ್ತಾನೆ. ಅರಿಷಡ್ವರ್ಗಗಳನ್ನು ಬಿಡಬೇಕು ಎಂಬ ಉಪದೇಶ ಸಿಕ್ಕಾಕ್ಷಣವೇ. ಮಠಾಽಶನ ಸ್ಥಾನ ನನಗೆ ಬೇಡ. ತಪ್ಪು ಕಾಣಿಕೆ ಏನು ಕೊಡಬೇಕು ಹೇಳಿ ಕೊಡ್ತಿನಿ ಎಂದಾಗ ಕನ್ನಡ ಬಲ್ಲ ಆನೆಯೊಂದನ್ನು ಮಠಕ್ಕೆ ಬಿಡುವುದೇ ಪರಿಹಾರ ಎಂದು ತಿಳಿದು ಆನೆ ಹುಡುಕುತ್ತಾ ಕಾಡಿನ ಹಾದಿ ಹಿಡಿದಾಗ ಕಥೆ ಬೇರೊಂದು ಜಾಡಿನಲ್ಲಿ ಸಾಗುತ್ತದೆ. 
          ಅನಿರೀಕ್ಷಿತವಾಗಿ ಸಿಗುವ ಹುಡುಗಿ. ಪಾಡಿಯ ಜನರ ಪ್ರೀತಿ, ಕಾಳಿಂಗ (ಆನೆ)ನ ಕಾವಲು ಕೊನೆಗೂ ದಕ್ಕುವ ಹುಡುಗಿಯ ಪ್ರೀತಿ. ಇನ್ನೇನು ಕಾಳಿಂಗನನ್ನು ಮಠಕ್ಕೆ ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಕಾಡನ್ನು ಕಡಿದು ರೇಸಾರ್ಟ್ ಮಾಡಲು ಹೊರಟ ಡಾನ್, ಪಾಡಿಯ ಜನರನ್ನು ಕಾಡನಿಂದ ಹೊರಹೋಗುವಂತೆ ಆವಾಜ್ ಹಾಕುತ್ತಾನೆ. ಕೃಷ್ಣ ವಿಲನ್‌ಗಳನ್ನು ಮಟ್ಟ ಹಾಕುತ್ತಾನೆ. ಇದರಿಂದ ಪಾಡಿಯ ನಾಯಕನಿಗೆ ೩೬೦ ವರ್ಷಗಳ ಹಿಂದೆ ಇದ್ದ ಬಾಹುಬಲಿ ಎನ್ನುವ ಗಜಕೇಸರಿಯ ನೆನಪಾಗಿ ಇತಿಹಾಸವನ್ನು ಹೇಳಿ, ಕೃಷ್ಣನಿಗೆ ನೀನು ಅವನ ಅವತಾರ ಎಂದು ಹೇಳುತ್ತಾನೆ. ಮೊದಲಿಗೆ ಕೃಷ್ಣ ಇದನ್ನು ನಂಬುವುದಿಲ್ಲ. ಆದರೆ ಕಾಡಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಾಗ ತನಗರಿವಿಲ್ಲದೇ ಆತ ಹಿರೋ ಆಗಿರುತ್ತಾನೆ. ಪಾಡಿಯ ಜನರ ರಕ್ಷಣೆಗೆ ಕಂಕಣಬದ್ಧವಾಗಿ ದುಷ್ಟರನ್ನು ಸದೆಬಡಿಯುವಲ್ಲಿಗೆ ಚಿತ್ರ ಸುಖಾಂತ್ಯ.
         ಆನೆಯನ್ನು ಚಿತ್ರದಲ್ಲಿ ಬಳಸಿಕೊಂಡಿರುವುದು ಮಕ್ಕಳಿಗೆ ಖುಷಿ ನೀಡುತ್ತದೆ. ಎರಡು ಶೆಡ್‌ನಲ್ಲಿ ಕಾಣಿಸಿಕೊಂಡಿರುವ ಯಶ್, ೩೬೦ ವರ್ಷಗಳ ಹಿಂದಿನ ಬಾಹುಬಲಿಯ ರಗಡ್ ಲುಕ್‌ನಲ್ಲಿ ಸಖತ್ ಇಷ್ಟ ಆಗುತ್ತಾರೆ. ಅಮೂಲ್ಯ ಎಮೋಷನಲ್ ಬೇಬಿ ಕಮ್ ಮಾಡರ್ನ ಗರ್ಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಪಾತ್ರಕ್ಕೆ ಇನ್ನೊಂಚೂರು ವೇಟೇಜ್ ಬೇಕಿತ್ತು ಎನಿಸುತ್ತದೆ. ಅನಂತನಾಗ್ ಅವರದ್ದು ಮಠಾಽಶರಾಗಿ ತೂಕದ ಅಭಿನಯ. ಪಾಡಿಯ ನಾಯಕನಾಗಿ ಕಾಣಿಸಿಕೊಂಡಿರುವ ರಮೇಶ್ ಪಂಡಿತ್ ಗಟ್ಟಿಯಾಗಿರುವ ಚಿಕ್ಕಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಧುಕೋಕಿಲಾ, ರಂಗಾಯಣರಘು, ಮಂಡ್ಯರಮೇಶ್, ಹೊನ್ನವಳ್ಳಿ ಕೃಷ್ಣ, ಗಿರಿಜಾ ಲೋಕೇಶ್, ಅಶೋಕ್, ಶಿವರಾಂ, ರಾಜೇಶ್, ಶ್ರೀನಿವಾಸಪ್ರಭು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 
         ವಿ.ಹರಿಕೃಷ್ಣ ಸಂಗೀತದಲ್ಲಿ ಎರದು ಹಾಡುಗಳು ಗುನುಗುವಂತಿವೆ. ಉಳಿದ ಹಾಡುಗಳು ಅಷ್ಟಕ್ಕಷ್ಟೇ. ಸತ್ಯ ಹೆಗಡೆಯವರ ಛಾಯಾಗ್ರಹಣ ಚಿತ್ರದ ಹೈಲೈಟ್‌ಗಳಲ್ಲೊಂದು.   ಕೃಷ್ಣ ಅವರ ಕಥೆ ಮತ್ತು ನಿರ್ದೇಶನ ಸೂಪರ್. ಸಂಭಾಷಣೆಗಳಿಗೆ ಬೀಳುವ ಚಪ್ಪಾಳೆ ನೋಡಿದರೆ ಮಾತುಗಳ ಜೋಡಣೆಗೂ ಫುಲ್ ಮಾರ್ಕ್ಸ್.  ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುವ ಮತ್ತೊಂದು ದೊಡ್ಡ ಬಜೆಟ್‌ನ ಸಿನಿಮಾ ಗಜಕೇಸರಿ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಭಜರಂಗಿಯನ್ನು ಪಕ್ಕಕ್ಕಿಟ್ಟು ಫ್ರೆಶ್ ಕಥೆ ಎಂದುಕೊಂಡು ಸಿನಿಮಾ ನೋಡಿದರಿಗೆ ಗಜಕೇಸರಿ ವಾವ್. ಅವೆರಡೂ ಸಿನಿಮಾ ನೋಡಿ ಗಜಕೇಸರಿ ನೋಡಿದವರಿಗೆ ಓಹ್ ಎನಿಸುವಂಥ ಸಿನಿಮಾ.

-ಚಿತ್ರಪ್ರಿಯ ಸಂಭ್ರಮ್.

ರೇಟಿಂಗ್ : ****
-----------------
*ನೋಡಬೇಡಿ
**ನೋಡಬಹುದು. ಆದರೂ...
***ಪರವಾಗಿಲ್ಲ ನೋಡಬಹುದು.
****ಚೆನ್ನಾಗಿದೆ ನೋಡಿ.
***** ನೋಡಲೇಬೇಕು.

Advertisement

0 comments:

Post a Comment

 
Top