ಕೋಮುವಾದಿ,ಕಾಂಗ್ರೆಸ್ ವಿರೋಧಿ ಕೋಳಿವಾಡ ಪ್ರತಿಕೃತಿ ದಹನ
ಗದಗ :
ಕಾಂಗ್ರೆಸ್ ಪಕ್ಷದ ಶಾಸಕರು ಮಾಜಿ ಸಚಿವರಾದ ಕೆ.ಬಿ.ಕೋಳಿವಾಡ ಅವರ ಕೋಮುವಾದಿ ಅಲ್ಪಸಂಖ್ಯಾತ ವಿರೋಧಿ ನಿಲುವನ್ನು ಖಂಡಿಸಿ ಕರ್ನಾಟಕ ಮುಸ್ಲಿಂ ಜಾಗೃತಿ ವೇದಿಕೆಯ ನೂರಾರು ಕಾರ‍್ಯಕರ್ತರು ಮುಸ್ಲಿಂ ಸಮುದಾಯದ ಯುವಕರು,ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಕೋಳಿವಾಡ ಅವರ ಪ್ರತಿಕೃತಿ ದಹನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಾಗೃತ ವೇದಿಕೆ ಜಿಲ್ಲಾ ಉಸ್ತುವಾರಿಗಳಾದ ಜಾವೇದ ಸುಂಕದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ, ಜಿಲ್ಲೆಯಲ್ಲಿ ಸಚಿವರು ಶಾಸಕರೆಲ್ಲ ಕಾಂಗ್ರೆಸ್ ಪಕ್ಷದವರೇ ಇದ್ದರೂ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ ಅವರ ಸೋತಿದ್ದು ಈ ಸೋಲಿಗೆ ಪಕ್ಷದ ಕೆಲ ಶಾಸಕರು ಅನುಸರಿಸಿದ ಜಾತಿವಾದಿ ನಿಲುವೇ ಕಾರಣವಾಗಿದೆ ಇಂತಹ ಎಲ್ಲ ಶಾಸಕರ ವಿರುದ್ದ ಪಕ್ಷದ ಹೈಕಮಾಂಡ್‌ಗೆ ಭೇಟಿಯಾಗಿ ಸವಿವರವಾದ ಮಾಹಿತಿ ನೀಡಿ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗುವುದೆಂದು ಹೇಳಿದರು.
ಮುಸ್ಲಿಂ ಜಾಗೃತಿ ವೇದಿಕೆಯ ಹಿರಿಯರಾದ ಶಿರಾಜ್ ಖಾಜಿ ಅವರು ಮಾತನಾಡಿ, ೬ ದಶಕಗಳಿಂದಲೂ ಕಾಂಗ್ರೆಸ್ ಪಕ್ಷವನ್ನೇ ನಂಬಿಕೊಂಡು ಬಂದ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಹ ವಿದ್ಯಮಾನಗಳು ಈಚೆಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದಲೇ ನಡೆಯುತ್ತಿರುವುದು ವಿಷಾದನೀಯ. ಪಕ್ಷದ ಸಂಘಟನೆಗೆ ಅಮೂಲ್ಯ ಕೊಡುಗೆ ನೀಡಿದ ಅಲ್ಪಸಂಖ್ಯಾತ ಸಮುದಾಯದ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ ಟಿಕೇಟು ಸಿಕ್ಕಿರುವಾಗ ಗೆಲುವಿಗೆ ಶ್ರಮಿಸದೆ ಕೋಳಿವಾಡ ಅವರಂತಹ ಕೆಲವೊಂದು ಶಾಸಕರು ಜಾತಿ ರಾಜಕಾರಣ ಮಾಡಿ ಸಲೀಂ ಅಹ್ಮದ ಅವರ ಸೋಲಿಗೆ ಕಾರಣರಾಗಿದ್ದಾರೆ. ಕೂಡಲೆ ಪಕ್ಷದ ಹೈಕಮಾಂಡ ತನಗೆ ನಿಜವಾದ ಜನಪರ ಕಾಳಜಿ ಇದ್ದರೆ ಕೂಡಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದರು.
ಯುವ ಮುಖಂಡರಾದ ಜುನೇದ ಉಮಚಗಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಪ್ರಭಾವಿ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು, ಹಾವೇರಿ ಲೋಕಸಭೆ ಕ್ಷೇತ್ರದಲ್ಲಿರುವ ಏಕೈಕ ಸಚಿವರು ಆದರೆ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಗೆಲುವಿಗೆ ಮಹತ್ವದ ಪಾತ್ರ ವಹಿಸಬಹುದಿತ್ತು ಆದರೆ ಇವರು ತಮ್ಮ ಹಿರಿಯ ಸಹೋದರರಿಗೆ ಟಿಕೇಟು ಗಳಿಸಲು ಮೊದಲು ಲಾಬಿ ನಡೆಸಿದ್ದರು ಸಚಿವರ ಈ ಪ್ರಯತ್ನದಿಂದಾಗಿ ಸಲೀಂ ಅಹ್ಮದ ಅವರಿಗೆ ವಿಳಂಬವಾಗಿ ಟಿಕೇಟು ಸಿಗುವಂತಾಯಿತು.ಆದರೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವದು ಬಿಟ್ಟು ಪಕ್ಷದ ಅಭ್ಯರ್ಥಿ ಸೋಲುವಂತಾಗಲು ಇವರ ಅಲಕ್ಷ್ಯ ಧೋರಣೆ,ಜಾತಿವಾದ ಕಾರಣವಾಗಿದೆ ಎಂದು ದೂರಿದರು.
ಹೋರಾಟದ ಮುಂದಾಳತ್ವ ವಹಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಾಗೃತಿ ವೇದಿಕೆ ಪ್ರಚಾರ ಸಮಿತಿಯ ಸದಸ್ಯರಾದ ನಿಸ್ಸಾರಅಹ್ಮದ ಖಾಜಿ ಮಾತನಾಡಿ ಈ ಹಿಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿದರೆ ಎಚ್.ಕೆ.ಪಾಟೀಲ ಅವರು ತೆಗೆದುಕೊಂಡ ಮತಗಳ ಸಂಖ್ಯೆ ೭೦,೪೭೪ ಆದರೆ, ಕೆಜೆಪಿ-ಬಿಜೆಪಿ-ಬಿಎಸ್ಸಾರ್ ಇವು ಮೂರು ಸೇರಿ ಗಳಿಸಿದ ಮತಗಳು ಕೇವಲ ೬೦,೨೭೧ ಆಗಿದ್ದು ಅಂದರೆ ಇವು ಮೂರುಪಕ್ಷಗಳನ್ನು ಮೀರಿ ಕಾಂಗ್ರೆಸ್ ಪಕ್ಷ ೧೦,೨೦೩ ಹೆಚ್ಚುವರಿ ಮತ ಗಳಿಸಿದ ದಾಖಲೆ ಇದೆ.ಆದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಸಲೀಂ ಅಹ್ಮದ ಅವರಿಗೆ ಕೇವಲ ೫೬,೨೪೯ ಮತಗಳು ಬಿದ್ದಿದ್ದು ಬಿಜೆಪಿಯ ಅಭ್ಯರ್ಥಿಗೆ ೭೦,೨೧೭ ಮತಗಳು ಬಿದ್ದಿದ್ದು ಬಿಜೆಪಿಗೆ ೧೩,೯೬೮ ಹೆಚ್ಚುವರಿ ಮತಗಳು ಬಿಜೆಪಿಗೆ ಹೇಗೆ ಬಿದ್ದವು ಎಂಬುದು ಯಕ್ಷ ಪ್ರಶ್ನೆಯಾಗಿದ್ದು ಕಾಂಗ್ರೆಸ್ ಪಕ್ಷದ ಈ ಹಿನ್ನೆಡೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರೇ ನೈತಿಕ ಹೊಣೆ ಹೊರಬೇಕು. ಕೆಲವೊಂದು ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸಮರ್ಪಕವಾಗಿ ಪ್ರಚಾರ ಕಾರ‍್ಯವನ್ನು ಮಾಡದೆ ಹೋಗಿದ್ದು ಕಾಂಗ್ರೆಸ್ ಪಕ್ಷದ ತಾರತಮ್ಯ ನೀತಿ ಎದ್ದು ಕಾಣುತ್ತಿತ್ತು ಎಚ್.ಕೆ.ಪಾಟೀಲರು ಸ್ವತಃ ತಾವೇ ಚುನಾವಣೆಗೆ ನಿಂತಾಗ ಯಾವ ತುರುಸು ಇತ್ತೋ ಅಂತಹ ಯಾವುದೆ ಪ್ರಾಮಾಣಿಕ ಕಳಕಳಿಯ ಪ್ರಚಾರಕ್ಕೆ ಸಚಿವರು ಚಾಲನೆ ನೀಡಲಿಲ್ಲ ಇದರಿಂದಾಗಿ ಸಲೀಂ ಅಹ್ಮದ ಅವರ ಸೋಲುವಂತಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದನ್ನು ಬಿಟ್ಟು ಅಲ್ಪಸಂಖ್ಯಾತರಿಗೆ ಪಕ್ಷದ ಟಿಕೇಟು ನೀಡಿದ್ದೇ ತಪ್ಪು ಎಂದು ಶಾಸಕ ಕೋಳಿವಾಡ ಅವರು ಹೇಳಿಕೆ ನೀಡಿದ್ದಲ್ಲದೆ ಏಳು ಜನ ಶಾಸಕರು ಸಹಿ ಮಾಡಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೇಟು ನೀಡಬಾರದೆಂದು ಪತ್ರ ಬರೆದಿರುವುದು ತಾವೆ ಅಲ್ಪಸಂಖ್ಯಾತ ಅಭ್ಯರ್ಥಿಯ ವಿರೋಧಿಗಳೆಂಬುದನ್ನು ಸಾಬೀತು ಮಾಡಿದೆ ಎಂದು ನಿಸ್ಸಾರ ಅಹ್ಮದ ಖಾಜಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಎಂ.ಡಿ.ಸವದತ್ತಿ,ಎಂ.ಐ.ಮುಲ್ಲಾ,ಬಿ.ಎ.ಶಿರಹಟ್ಟಿ, ಎಂ.ಯು.ದೊಡ್ಡಮನಿ,ರಫೀಕ್ ಮುಲ್ಲಾ, ಶಾಹೀದ್ ಸುಂಕದ,ಶಬ್ಬೀರ ರೋಣದ, ಹಿರಿಯರಾದ ಎಸ್.ಎಸ್.ಇನಾಮದಾರ,ಇಮ್ರಾನ್ ಶಿರಹಟ್ಟಿ, ಇಮಾಮ ತಳಕಲ್ಲ, ಸಮೀರ ಮುಳಗುಂದ,ಯುಸೂಫ್ ಕೊಟ್ಟೂರ, ರಫೀಕ್ ರೋಣ, ಮೆಹಬೂಬ ಮಿರ್ಜಿ, ಶಫಿ ಬಬರ್ಚಿ, ಇರ್ಫಾನ ಕಾಗದಗಾರ, ಸದ್ದಾಂ ಹುಬ್ಬಳ್ಳಿ, ಇಮ್ತಿಯಾಜ್ ಶೇಖ, ಜಹಾಂಗೀರ ಅಹ್ಮದ ಮುಳಗುಂದ, ಅಕ್ಬರ ಬಳ್ಳಾರಿ.ಸುಹಿಲ್ ಶಿರಹಟ್ಟಿ, ತೌಶಿಫ್ ನರಗುಂದ, ಇಸ್ಮಾಯಿಲ್ ಕಲಾದಗಿ,ಇಮ್ತಿಯಾಜ್ ಶೇಖ,ಶೌಕತ ಅಲಿ ನರಗುಂದ, ಸುಲೇಮಾನ ಕಾಗದಗಾರ,ಮೆಹಬೂಬಖಾದರ ನರಸಾಪೂರ,ಗರೀಬ ನರಗುಂದ, ನನ್ನಾಸಾಬ ನಡುವಿನಮನಿ, ರುಸ್ತುಖಾನ್ ಪಠಾಣ್,ಮಮ್ತಾಜ್ ಮುಲ್ಲಾ,ಫಾತಿಮಾ ಮುಳಗುಂದ,ಶೆಹನಾಜ ಅಬ್ಬಿಗೇರಿ, ಹಸೀನಾ ದಂಡಿನ, ಜರಬನ್ ಮುಳಗುಂದ, ಜುಲೇಕಾ ಮುಳಗುಂದ ಮುಂತಾದ ನೂರಾರು ಜನತೆ ಮಹಿಳೆಯರು ಅಲ್ಪಸಂಖ್ಯಾತ ಸಮುದಾಯದ ಯುವಕರು ಮುಖಂಡರು ಕೋಳಿವಾಡ ಪ್ರತಿಕೃತಿ ದಹನ ಹೋರಾಟದಲ್ಲಿ ಪಾಲ್ಗೊಂಡಿದ್ದರು.
0 comments:
Post a Comment