PLEASE LOGIN TO KANNADANET.COM FOR REGULAR NEWS-UPDATES

  ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು   ಚುನಾವಣಾ ಆಯೋಗ ಜಾರಿಗೆ ತಂದ ಸ್ವೀಪ್ ಕಾರ್ಯಕ್ರಮದ ಪರಿಣಾಮವಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  ಮತದಾರರು ತಮ್ಮ ಪವಿತ್ರ ಕರ್ತವ್ಯದಿಂದ ವಿಮುಖರಾಗುತ್ತಿರುವ ಪರಿಣಾಮವಾಗಿ ದೇಶದ ಅನೇಕ ಕಡೆಗಳಲ್ಲಿ ಕನಿಷ್ಟ ಪ್ರಮಾಣದ ಮತದಾನ ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ.  ಜನಹಿತ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವಂತಹ ಜವಾಬ್ದಾರಿಯನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಹಿಸಿಕೊಡಲಾಗಿದ್ದು, ಇಂತಹ ಜನಪ್ರತಿನಿಧಿಗಳು ಈ ನಾಡಿನ ಎಲ್ಲ ಮತದಾರರ ಪ್ರತಿನಿಧಿಯಾಗಿರುತ್ತಾರೆ.  ಇಂತಹ ಜನಪ್ರತಿನಿಧಿಯನ್ನು ಶೇ. ೧೦೦ ರಷ್ಟು ಮತದಾರರೇ ಆಯ್ಕೆ ಮಾಡಿದಲ್ಲಿ, ಅದು ಸೂಕ್ತ.  ಇಲ್ಲದೇ ಹೋದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.  ಎಲ್ಲ ಮತದಾರರು ಅಂದರೆ ಶೇ.  ೧೦೦ ರಷ್ಟು ಮತದಾನವಾಗಬೇಕೆಂಬುದೇ ನಮ್ಮ ಜನತಂತ್ರದ ಸಿದ್ದಾಂತವಾಗಿದ್ದು, ಹೀಗಾದಾಗ ಮಾತ್ರ ಜನಪ್ರತಿನಿಧಿಯ ಆಯ್ಕೆ ಸಮಂಜಸ ಎನಿಸಿಕೊಳ್ಳುತ್ತದೆ.  ಕ್ಷೇತ್ರದಲ್ಲಿ ಈಗ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.  ಇವರಲ್ಲಿ ಎಲ್ಲ ಮತದಾರರಾದರೂ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಚುನಾವಣೆ ವ್ಯವಸ್ಥೆಗೆ ಒಂದು ಅರ್ಥ ಬಂದಂತಾಗುತ್ತದೆ  
  ಕಳೆದ ೨೦೦೪ ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ  ಕೊಪ್ಪಳ  ಕ್ಷೇತ್ರದಲ್ಲಿ ಶೇ. ೬೪ ರಷ್ಟು, ೨೦೦೯ ರಲ್ಲಿ ಶೇ. ೫೫. ೮ ರಷ್ಟು ಮತದಾನವಾಗಿದೆ.   ಈ ರೀತಿಯ ಕಡಿಮೆ ಮತದಾನ ಪ್ರಮಾಣದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು.  ಎಲ್ಲ ಮತದಾರರೂ ಕಡ್ಡಾಯವಾಗಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಯಾವುದೇ ವಯಕ್ತಿಕ ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು.  ಮತದಾರ ತನ್ನ ಶಕ್ತಿ ಪ್ರದರ್ಶಿಸಲು ಚುನಾವಣೆಯೇ ಸೂಕ್ತ ವೇದಿಕೆಯಾಗಿದ್ದು, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು.  ಈ ಮೂಲಕ ಸುಭದ್ರ ದೇಶ ಕಟ್ಟಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ.
ಮತದಾರರ ಜಾಗೃತಿಗೆ ವ್ಯಾಪಕ ಕ್ರಮ : ಮೊದಲ ಹಂತದಲ್ಲಿ ಮತದಾರರ ನೊಂದಣಿಗೆ ಹೆಚ್ಚಿನ ಒತ್ತು ನೀಡಿ, ಜಿಲ್ಲೆಯಾದ್ಯಂತ ವಿಶೇಷ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಉತ್ತೇಜನ ನೀಡಿದ  ಪರಿಣಾಮವಾಗಿ ಕ್ಷೇತ್ರದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.  ಎರಡನೆ ಹಂತವಾಗಿ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಏರ್ಪಡಿಸಲಾಯಿತು, ಆಕಾಶವಾಣಿ ಕೇಂದ್ರದ ಸಹಕಾರದೊಂದಿಗೆ ನೇರ-ಫೋನ್-ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.  ಕೆಲಸಕ್ಕಾಗಿ ವಲಸೆ ಹೋಗುವ ಜಿಲ್ಲೆಯ ವಿವಿಧ ತಾಂಡಾಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ.  ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಕ್ಯಾಂಡಲ್ ಲೈಟ್ ಜಾಥಾ, ಜಾಗೃತಿ ಜಾಥಾ, ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕರಪತ್ರ ಹಂಚಿ, ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು.  ವಾರ್ತಾ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಂದ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ, ಜಾನಪದ ಸಂಗೀತ ಮೂಲಕ ಜಾಗೃತಿ. ಆಟೋರಿಕ್ಷಾದವರ ಸಹಕಾರದೊಂದಿಗೆ ಆಟೋಗಳಿಗೆ ಜಾಗೃತಿ ಫ್ಲೆಕ್ಸ್ ಅಳವಡಿಕೆ, ಕಡ್ಡಾಯ ಮತದಾನದ ಸಹಿ ಸಂಗ್ರಹ ಅಭಿಯಾನ.  ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರ ಜಾಗೃತಿಗೆ ತರಬೇತಿ. ನಗರ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ಮೈಕ್‌ಸಿಸ್ಟಂ ಅಳವಡಿಸಿ ಮತದಾರರ ಜಾಗೃತಿ ಗೀತೆಗಳ ಪ್ರಸಾರ ಮುಂತಾದ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.  ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಮತದಾರರ ಜಾಗೃತಿ ಹೀಗೆ ಹತ್ತು ಹಲವು ಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಜಾಗೃತಿ ಕಾರ್ಯಗಳಿಗೆ ವಾರ್ತಾ ಇಲಾಖೆ, ಶಿಕ್ಷಣ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪೌರಾಡಳಿತ, ಬಿಸಿಎಂ., ಆರೋಗ್ಯ, ಯುವಜನ ಸೇವಾ ಮತ್ತು ಕ್ರೀಡೆ ಮುಂತಾದ ಇಲಾಖೆಗಳ ಕೊಡುಗೆ ಅಮೂಲ್ಯವಾಗಿದೆ ಎಂದರು.
  ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅನೇಕ ಕ್ರಮಗಳು ಪರಿಣಾಮಕಾರಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top