PLEASE LOGIN TO KANNADANET.COM FOR REGULAR NEWS-UPDATES

 ಎಲ್ಲ ಮತದಾರರು ಮತ ಚಲಾಯಿಸುವ ಮೂಲಕ ಜನರ ಶಕ್ತಿ ಏನೆಂಬುದನ್ನು ನಿರೂಪಿಸಲು, ಚುನಾವಣೆ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾ ಸ್ವೀಪ್ ಸಮಿತಿಯ ಸಹಕಾರದೊಂದಿಗೆ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮತದಾರರ ಜಾಗೃತಿಗಾಗಿ ಆಯೋಜಿಸಿರುವ ಬೀದಿ ನಾಟಕ ಕಾರ್ಯ


ಕ್ರಮಗಳಿಗೆ ತಾಲೂಕಿನ ಗುನ್ನಳ್ಳಿ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
  ಜನರ ಆಶೋತ್ತರಗಳನ್ನು ಈಡೇರಿಸುವ ಜನಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡಬೇಕಿರುತ್ತದೆ.  ಇಂತಹ ಆಯ್ಕೆ ಪ್ರಕ್ರಿಯೆ ನಡೆಯುವುದು ಚುನಾವಣೆಯಲ್ಲಿ ಮಾತ್ರ ಆಗಿರುವುದರಿಂದ, ಚುನಾವಣೆ ಎಂಬುದು ಬಹು ಮಹತ್ವದ ವಿಚಾರವಾಗಿದೆ.  ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಮತ ಚಲಾವಣೆ ಮಾಡುವ ಮೂಲಕ ಎಲ್ಲರೂ ಪಾಲ್ಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.  ದೇಶದ ಸ್ಥಿರತೆ ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗುವುದರಿಂದ, ಎಲ್ಲ ಮತದಾರರೂ ಕಡ್ಡಾಯವಾಗಿ ಮತದಾನ ಮಾಡಬೇಕು.  ಮತದಾನ ಪವಿತ್ರ ಕರ್ತವ್ಯವಾಗಿರುವುದರಿಂದ, ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಮತವನ್ನು ಮಾರಾಟ ಮಾಡಿಕೊಳ್ಳುವುದು ನಮ್ಮನ್ನೇ ನಾವು ಮಾರಾಟ ಮಾಡಿಕೊಂಡಂತಾಗುತ್ತದೆ.  ಜನರಿಗೆ ಮತದಾನದ ಪವಿತ್ರ ಕರ್ತವ್ಯದ ಬಗ್ಗೆ ಮನವರಿಕೆ ಮಾಡಿಕೊಡಲು, ಬೀದಿ ನಾಟಕ ಕಾರ್ಯಕ್ರಮಗಳು ಉತ್ತಮ ಮಾಧ್ಯಮವಾಗಿದ್ದು, ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯಲ್ಲಿ ಕಡಿಮೆ ಮತದಾನ ದಾಖಲಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿ, ಅಂತಹ ಗ್ರಾಮಗಳಲ್ಲಿ ಬೀದಿ ನಾಟಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ.  ಬೀದಿ ನಾಟಕ ಕಾರ್ಯಕ್ರಮಗಳು ಜನರಲ್ಲಿ ಹೆಚ್ಚು ಜಾಗೃತಿ ಮೂಡಿ, ಎಲ್ಲರೂ ಮತದಾನದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತಾಗಲಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಆಶಯ ವ್ಯಕ್ತಪಡಿಸಿದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಮಾತನಾಡಿ, ಏ. ೮ ರಿಂದ ೧೨ ರವರೆಗೆ ಜಿಲ್ಲೆಯಲ್ಲಿ ಈ ಬಾರಿ ಮತದಾರರ ಜಾಗೃತಿಗಾಗಿ ದಿನನಿತ್ಯ ೦೫ ಗ್ರಾಮಗಳಲ್ಲಿ ಬೀದಿ ನಾಟಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕುದರಿಮೋತಿಯ ಕಲಾವಿದ ಖಾಜಾ ಮೊಯಿನುದ್ದೀನ್ ನೇತೃತ್ವದ ಕಲಾತಂಡ ಬೀದಿ ನಾಟಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದೆ.  ಏ. ೮ ರಂದು ಗುನ್ನಳ್ಳಿ, ಭಾಗ್ಯನಗರ, ಮಂಗಳಾಪುರ, ಹೊರತಟ್ನಾಳ.  ಏ. ೯ ರಂದು ಯಲಬುರ್ಗಾ ತಾಲೂಕಿನ ಬಂಡಿಹಾಳ, ತೊಂಡಿಹಾಳ, ಚಿಕ್ಕೇನಕೊಪ್ಪ, ಮನ್ನಾಪುರ, ಇಟಗಿ.  ಏ. ೧೦ ರಂದು ಕುಷ್ಟಗಿ ತಾಲೂಕಿನ ನೆರೆಬೆಂಚಿ, ಶಾಖಾಪುರ, ಗುಮಗೇರಾ, ಕುಷ್ಟಗಿ.  ಏ. ೧೧ ರಂದು ಗಂಗಾವತಿ ತಾಲೂಕಿನ ಮರ್ಲಾನಹಳ್ಳಿ, ಜೂರಟಗಿ, ಬೂದಗುಂಪಾ, ಕಾರಟಗಿ.  ಏ. ೧೨ ರಂದು ಗಂಗಾವತಿ, ಬಸವಪಟ್ಟಣ, ದಾಸನಾಳ ಮತ್ತು ಮುಕ್ಕುಂಪಿ ಗ್ರಾಮಗಳಲ್ಲಿ ಬೀದಿನಾಟಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
  ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಕಲ್ಲೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಗುನ್ನಳ್ಳಿಯ ಗ್ರಾಮಸ್ಥರಿಗೆ ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು

Advertisement

0 comments:

Post a Comment

 
Top