ಸರ್ಕಾರದ ಸಕಲ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪಡೆಯಿರಿ: ಸಂಗಣ್ಣ ಕರಡಿ
ಕೊಪ್ಪಳ. ಜು. ೨೭ : ನಮ್ಮ ದೇಶದ ಎಲ್ಲಾ ನಾಗರೀಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವಂತಹ ಆಧಾರ್ ಕಾರ್ಡ್ ಕಡೆಯುವುದು ಈ ದೇಶದ ಎಲ್ಲ ನಾಗರೀಕರ ಹಕ್ಕಾಗಿ ಪರಿಣಮಿಸಿದ್ದು, ಒಬ್ಬ ವ್ಯಕ್ತಿಯನ್ನು ಗುರುತಿಸಲು ಹಾಗೂ ಸರ್ಕಾರದಿಂದ ಯಾವುದೇ ಸವಲತ್ತು ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಅವಶ್ಯಕ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲೆಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬಹುದಾದ ಆಧಾರ್ ಯೋಜನೆಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದ ಎಲ್ಲಾ ನಿವಾಸಿಗಳಿಗೆ ವಿಶಿಷ್ಟವಾದಂತಹ, ಯಾವುದೇ ಕಾರಣಕ್ಕೂ ನಕಲು ಮಾಡಲು ಸಾಧ್ಯವಾಗದೇ ಇರುವಂತಹ ಗುರುತಿನ ಕಾರ್ಡ್ ನೀಡುವ ಯೋಜನೆಯಾಗಿರುವ ಆಧಾರ್ ಕಾರ್ಡ್ ವಿತರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಯೋಜನೆ ರೂಪಿಸಿದೆ. ಇಡೀ ವಿಶ್ವದಲ್ಲೇ ಭಾರತ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಜಾರಿಗೆ ತಂದಿರುವ ದೇಶವಾಗಿದೆ. ಆಧಾರ್ ಯೋಜನೆ ಭಾರತದ ತಂತ್ರಜ್ಞಾನದ ಸ್ವಾವಲಂಬನೆ, ಅತ್ಯಾಧುನಿಕ ತಂತ್ರಜ್ಞಾನದ ನೈಪುಣ್ಯತೆಗೆ ನಿದರ್ಶನವಾಗಿದೆ. ಮುಂದಿನ ದಿನಮಾನಗಳಲ್ಲಿ ಭಾರತ ದೇಶವನ್ನೆ ಮಾದರಿಯಾಗಿಟುಕೊಂಡು, ಈ ಯೋಜನೆಯ ರೂಪರೇಷೆ ಹಾಗೂ ಮಾಹಿತಿಯನ್ನು ತಿಳಿದುಕೊಳ್ಳಲು ದೇಶ, ವಿದೇಶಗಳಿಂದ ಬೇಡಿಕೆ ಬರುವ ಸಾಧ್ಯತೆ ಇದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ಅದರಲ್ಲೂ ಮುಖ್ಯವಾಗಿ ಈ ಯೋಜನೆಯನ್ನು ರೂಪಿಸಿರುವ ಕನ್ನಡಿಗರೇ ಆದ ನಂದನ್ ನಿಲೇಕಣಿ ಅವರು ಅಭಿನಂದನಾರ್ಹರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕೋಟಿಗಟ್ಟಲೆ ಅನುದಾನ ನೀಡುತ್ತಿದೆ. ಆದರೆ ಯೋಜನೆಯ ಲಾಭ ಹೆಚ್ಚಾಗಿ ಅನರ್ಹರ ಪಾಲಾಗುತ್ತಿದೆ, ಅಲ್ಲದೆ ಶ್ರೀಸಾಮಾನ್ಯನಿಗೆ ಲಭಿಸಬೇಕಾಗಿರುವ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ವ್ಯಾಪಕ ದೂರುಗಳಿವೆ. ಇಂತಹ ತೊಂದರೆಯನ್ನು ನಿವಾರಿಸಿ, ಅರ್ಹ ಫಲಾನುಭವಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂಬ ಆಶಯದೊಂದಿಗೆ ಆಧಾರ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರು ಈ ಯೋಜನೆಯನ್ನು ಯಶಸ್ವಿಯಾಗಿಸಲು ಶ್ರಮಿಸುವ ಅಗತ್ಯವಿದೆ. ಎಲ್ಲ ಸಾರ್ವಜನಿಕರು ಆಧಾರ್ ಕಾರ್ಡ್ ಅನ್ನು ತಪ್ಪದೆ ಪಡೆಯುವಂತೆ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಕರೆ ನೀಡಿದರು.
ಆಧಾರ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ಹೊಂದಿರುವ ರಾಜ್ಯ ಇ-ಆಡಳಿತ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಎಸ್. ರವೀಂದ್ರನ್ ಅವರು ಮಾತನಾಡಿ, ದೇಶದಲ್ಲಿ ಸುಮಾರು ಶೇ. ೩೦ ರಿಂದ ೩೫ ರಷ್ಟು ಜನರು ತಮ್ಮನ್ನು ಗುರುತಿಸುವಂತಹ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ದೇಶದ ಸುಮಾರು ೧೨೨ ಕೋಟಿ ಜನರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಆಧಾರ್ ಯೋಜನೆಯನ್ನು ಕನ್ನಡಿಗರೇ ಆಗಿರುವ ನಂದನ್ ನಿಲೇಕಣಿ ಅವರು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ. ೨೦೧೦ ರ ಸೆಪ್ಟಂಬರ್‌ನಿಂದ ಪ್ರಾರಂಭವಾಗಿರುವ ಈ ಯೋಜನೆ ನಮ್ಮ ರಾಜ್ಯದ ಮೈಸೂರು ಹಾಗೂ ತುಮಕೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈಗಾಗಲೆ ಉಭಯ ಜಿಲ್ಲೆಗಳಲ್ಲಿ ಶೇ. ೯೬ ರಷ್ಟು ಜನರಿಗೆ ಆಧಾರ್ ಕಾರ್ಡ್ ನೊಂದಣಿ ಮಾಡಲಾಗಿದೆ. ಸಿಲಿಂಡರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಬಹಳಷ್ಟು ದಾಖಲೆಗಳನ್ನು ನಕಲು ಮಾಡುವ ಸಾಧ್ಯತೆ ಇದೆ. ಆದರೆ ಆಧಾರ್ ಕಾರ್ಡ್ ಅನ್ನು ನಕಲು ಮಾಡುವುದು ಸಾಧ್ಯವೇ ಇಲ್ಲ. ವ್ಯಕ್ತಿಯ ಹತ್ತೂ ಬೆರಳುಗಳ ಬೆರಳಚ್ಚು ಹಾಗೂ ಕಣ್ಣಿನ ಅಕ್ಷಿಪಟಲವನ್ನು ಸ್ಕ್ಯಾನ್ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಇವೆರಡೂ ಮಾಹಿತಿಗಳು ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬೇರೆ ಬೇರೆ ಇರುತ್ತದೆ. ಈ ಸಂಗತಿ ಯೋಜನೆಗೆ ಪ್ರಮುಖ ಧನಾತ್ಮಕ ಅಂಶವಾಗಿದೆ. ಕರ್ನಾಟಕ ರಾಜ್ಯದಲ್ಲಿ ಇನ್ನು ೬ ರಿಂದ ೮ ತಿಂಗಳ ಒಳಗೆ ಎಲ್ಲಾ ವ್ಯಕ್ತಿಗಳಿಗೂ ಆಧಾರ್ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ. ವಿವಿಧ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಮುಂತಾದ ಫಲಾನುಭವಿಗಳು ಆಧಾರ್ ಕಾರ್ಡ್‌ಗೆ ನೊಂದಣಿ ಮಾಡಿಸಿಕೊಂಡಲ್ಲಿ ಅವರಿಗೆ ೧೦೦ ರೂ.ಗಳ ಸಹಾಯಧನವನ್ನು ಸಂಬಂಧಿಸಿದವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆದೇಶದನ್ವಯ ಇನ್ನು ಮುಂದೆ ಸರ್ಕಾರದಿಂದ ಪಡೆಯುವ ಸಿಲಿಂಡರ್, ಪಡಿತರ ಚೀಟಿ, ಮಾಸಾಸನಗಳು ಸೇರಿದಂತೆ ಯಾವುದೇ ಸವಲತ್ತು ಪಡೆಯಬೇಕು ಎಂದರೆ ಅವರು ಆಧಾರ್ ಕಾರ್ಡ್ ಹೊಂದಬೇಕಾಗಿರುವುದು ಕಡ್ಡಾಯವಾಗಿದೆ. ಇದನ್ನು ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿದೆ. ಜಿಲ್ಲೆಯ ಎಲ್ಲರೂ ತಪ್ಪದೆ ಆಧಾರ್ ಕಾರ್ಡ್ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಳಕಪ್ಪ ಜಾಧವ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ನಗರಸಭೆ ಸದಸ್ಯರುಗಳಾದ ಇಂದಿರಾ ಬಾವಿಕಟ್ಟಿ, ಗವಿಸಿದ್ದಪ್ಪ ಮುಂಡರಗಿ, ಅಲಿಮಾಬಿ, ಸಹಾಯಕ ಆಯುಕ್ತ ಶರಣಬಸಪ್ಪ ಮುಂತಾದವರು ಭಾಗವಹಿಸಿದ್ದರು. ಅಂಕಿ-ಸಂಖ್ಯೆ ಇಲಾಖೆಯ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment