ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟಗಳಲ್ಲಿ ಇದುವರೆಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕಸರತ್ತು ನಡೆಸಿದ ಜಿಲ್ಲಾ ಸ್ವೀಪ್ ಸಮಿತಿ ಇದೀಗ ಜಿಲ್ಲೆಯ ವಿವಿಧ ತಾಂಡಾಗಳಿಗೆ ಭೇಟಿ ನೀಡಿ, ಮತದಾರರಿಗೆ ಕಡ್ಡಾಯ ಮತದಾನದ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ನಿರತವಾಗಿದೆ.
ಜಿಲ್ಲಾ ಸ್ವೀಪ್ ಸಮಿತಿಯ ಅಧಿಕಾರಿಗಳ ನೇತೃತ್ವದಲ್ಲಿ ಆಯಾ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕೆಲಸಕ್ಕಾಗಿ ಜನರು ಇತರೆ ಪ್ರದೇಶಗಳಿಗೆ ಗುಳೆ ಹೋಗುವಂತಹ ತಾಂಡಾಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳು, ಕುಡಿಯುವ ನೀರು, ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ವರದಿಯನ್ನು ಕಲೆ ಹಾಕಿದೆ ಅಲ್ಲದೆ, ಅಲ್ಲಿನ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಮತದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ತಾಂಡಾ ನಿವಾಸಿಗಳೂ ಸಹ ಅಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚಿಸಿದರಲ್ಲದೆ, ಪ್ರತಿ ಚುನಾವಣೆಯಲ್ಲೂ ತಾಂಡಾಗಳಲ್ಲಿ ಬಹುತೇಕ ಸುಮಾರು ಶೇ. ೮೦ ರಷ್ಟು ಮತದಾನವಾಗಿದೆ ಎಂಬುದಾಗಿ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶಂಕ್ರಪ್ಪ ಎಫ್.ಟಿ. ನೇತೃತ್ವದಲ್ಲಿ ಸ್ವೀಪ್ ನೋಡಲ್ ಅಧಿಕಾರಿ ಕೊಟ್ರಪ್ಪ ಚೋರನೂರ, ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಮುಂತಾದ ಅಧಿಕಾರಿಗಳು ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾ, ಹಿರೇಸೂಳಿಕೇರಿ ತಾಂಡಾ, ಕೆಂಚನದೋಣಿ ತಾಂಡಾ, ಹೊಸ ಕನಕಾಪುರ ತಾಂಡಾಗಳಿಗೆ ಭೇಟಿ ನೀಡಿ, ತಾಂಡಾ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜಿನ್ನಾಪುರ ತಾಂಡಾದಲ್ಲಿ ಸುಮಾರು ೪೫೦ ಮತದಾರರಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪಿಡಿಓ ಕೃಷ್ಣಾರೆಡ್ಡಿ ಸೇರಿದಂತೆ ತಾಂಡಾ ನಿವಾಸಿಗಳು ಉಪಸ್ಥಿತರಿದ್ದರು. ಅದೇ ರೀತಿ ಹಿರೇಸೂಳಿಕೇರಿ ತಾಂಡಾಕ್ಕೆ ಭೇಟಿ ನೀಡಿದ ತಂಡ, ಅಲ್ಲಿನ ನಿವಾಸಿಗಳೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿವರಗಳನ್ನು ಕಲೆಹಾಕಿತು. ತಾಂಡಾದಲ್ಲಿ ಸುಮಾರು ೪೦೦ ಮತದಾರರಿದ್ದು, ಮತದಾರರು ಕಡ್ಡಾಯ ಮತದಾನದ ಬಗ್ಗೆ ಭರವಸೆ ನೀಡಿದರಲ್ಲದೆ, ಯಾವುದೇ ಆಸೆ, ಆಮಿಷಗಳಿಗೆ ಮತವನ್ನು ಮಾರಾಟ ಮಾಡುವುದಿಲ್ಲ ಎಂದರು. ಪಿಡಿಓ ಗ್ಯಾನಪ್ಪ ಮುಂತಾದವರು ಹಾಜರಿದ್ದರು. ಕೆಂಚನಡೋಣಿ ತಾಂಡಾಕ್ಕೆ ಭೇಟಿ ನೀಡಿದ ತಂಡ, ತಾಂಡಾ ನಿವಾಸಿಗಳೊಂದಿಗೆ ಚರ್ಚೆ ನಡೆಸಿ, ಕಡ್ಡಾಯ ಮತದಾನದ ಬಗ್ಗೆ ನಿವಾಸಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಾಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶರಣಯ್ಯ ಸಸಿಮಠ ಉಪಸ್ಥಿತರಿದ್ದರು. ಹೊಸ ಕನಕಾಪುರ ತಾಂಡಾದಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಸ್ವೀಪ್ ಸಮಿತಿ ತಂಡ, ಇಲ್ಲಿ ಸುಮಾರು ೪೮೦ ಮತದಾರರಿದ್ದು, ಎಲ್ಲ ಮತದಾರರೂ ಮತದಾನ ಮಾಡಲು ಉತ್ಸುಕರಾಗಿದ್ದು, ತಪ್ಪದೆ ಮತದಾನ ಮಾಡುವ ಬಗ್ಗೆ ಅಲ್ಲಿನ ಮತದಾರರಿಂದ ವಿಶ್ವಾಸ ವ್ಯಕ್ತವಾಯಿತು. ತಾಂಡಾದ ಮಹಿಳೆಯರು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ ಆಗಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಪಿಡಿಓ ಮಹಮದ್ ಗೌಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
0 comments:
Post a Comment