ಈಗ ಎದ್ದು ಕಾಣುತ್ತಿರುವುದು ಇದೊಂದೇ: ಈ ಸಲದ್ದು ಸಂಪೂರ್ಣವಾಗಿ ನರೇಂದ್ರ ಮೋದಿ ಪರ- ವಿರೋಧಿ ಚುನಾವಣೆ. ಅಂತೂ ಈ ಬಾರಿ ಇಡೀ ದೇಶದ ಜನ ಒಬ್ಬ ವ್ಯಕ್ತಿಯ ಪರವೋ, ವಿರುದ್ಧವೋ ಮತ ಚಲಾಯಿಸಬೇಕು; ಯಾಕೆಂದರೆ ಇದು ದೇಶದ ಅಳಿವು ಉಳಿವಿನ ಪ್ರಶ್ನೆ ಎಂಬಂಥ ಉತ್ಕಟ ಉದ್ವೇಗವನ್ನು ಮಾಧ್ಯಮಗಳೇ ಸೃಷ್ಟಿ ಮಾಡಿಬಿಟ್ಟಿವೆ.
ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲೂ ಅಷ್ಟೇ:
ಮೋದಿ ವಿರೋಧಿಗಳು ಅವರ ಸೂರ್ಯಸ್ಪಷ್ಟ ಕೋಮುವಾದಿ ಕಾರ್ಯಸೂಚಿಯನ್ನು, ಗುಜರಾತ್ ಅಭಿ ವೃದ್ಧಿ ಎಂಬ ಕಳ್ಳ ನೆವಗಳನ್ನು ಬಯಲಿಗೆಳೆಯುತ್ತಿದ್ದರೆ, ಮೋದಿ ಅನುಯಾಯಿಗಳಂತೂ ಮೋದಿ ವಿರುದ್ಧ ಸೊಲ್ಲೆತ್ತುವುದೇ ದೇಶದ್ರೋಹ ಎಂಬ ಮಟ್ಟಿನ ಒಕ್ಕೊರಲ ಚೀತ್ಕಾರ ಹೊಮ್ಮಿಸುತ್ತಿದ್ದಾರೆ. ಅಂತೂ ಹಿಂದೆ ಯಾವ ಚುನಾವಣೆಯಲ್ಲೂ ಈ ಮಟ್ಟಿನ ಬ್ಯಾಂಡ್ ಬಾಜಾ ಕಂಡಿದ್ದು ನೆನಪಿಲ್ಲ.
ಇಲ್ಲಿ ಮೋದಿಯವರನ್ನು ಅವರ ಪಕ್ಷ ಸಾವಿರಾರು ಕೋಟಿ ಖರ್ಚು ಮಾಡಿ ಮಾರ್ಕೆಟಿಂಗ್ ಮಾಡುವ ವೈಖರಿಯೋ ಅಥವಾ ಅವರದೇ ಪ್ರಚಾರಯಂತ್ರ ಊದುವ ತುತ್ತೂರಿಯೋ- ಇವೆಲ್ಲ ಸರಿಯೇ ಸರಿ. ಆದರೆ ಕೌತುಕವೆಂದರೆ ಮೋದಿ ಅನುಯಾಯಿಗಳು ಮತ್ತು ಅವರ ಅಭಿಮಾನಿಗಳು ಎಬ್ಬಿಸಿರುವ ಹುಯಿಲು ಇಲ್ಲಿ ಎಲ್ಲರ ಪರಿಶೀಲನೆಗೆ ಅರ್ಹವಾಗಿದೆ. ಯಾಕೆಂದರೆ ಇವರೆಲ್ಲರ ಆಸೆ ಈಡೇರಿದರೆ ನಾಳೆ ನಮಗೆ ದಕ್ಕುವ ಭಾರತ ಎಂಥದು ಎನ್ನುವುದರ ಖಚಿತ ಅಂದಾಜಾಗುತ್ತದೆ.
ಮೋದಿ ಇಷ್ಟು ದಿನ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಮುಂದಿಡಲು ಎಷ್ಟು ಹೆಣಗಾಡಿದರೂ ಬಿಜೆಪಿ ಪ್ರಣಾಳಿಕೆ ಹೊರಬರುತ್ತಿದ್ದಂತೆಯೇ ಮತ್ತದೇ ರಾಮ ಮಂದಿರ, ಸಂವಿಧಾನದ 370ನೆ ವಿಧಿ ಮುಂತಾದ ಹಳೇ ರಾಗವೇ ಹೊರಟಿದ್ದರಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ಮೋದಿ ಪ್ರತಿಪಾದಿಸುವ ಅಭಿವೃದ್ಧಿಗೂ, ಸಂಘ ಪರಿವಾರದ ಕೋಮು ವಾದಿ ನುಡಿಗಟ್ಟಿಗೂ ಅವಿನಾಭಾವ ಸಂಬಂಧವಿದೆ.
ಮೊನ್ನೆ ತಾನೇ ಮೋದಿ ಬಲಗೈ ಬಂಟ ಅಮಿತ್ ಷಾ (ಅಲ್ಪಸಂಖ್ಯಾತರ ವಿರುದ್ಧ) ಸೇಡು ತೀರಿಸಿಕೊಳ್ಳಲು ಬಿಜೆಪಿಗೆ ಮತ ನೀಡಿ ಎಂಬ ಕರೆ ನೀಡಿ ಚುನಾವಣಾ ಆಯೋಗದಿಂದ ನೋಟೀಸ್ ಪಡೆದಿದ್ದಾರೆ. ಮೋದಿ ವಿರುದ್ಧ ಸ್ಪರ್ಧಿಸುವ ಉದ್ಧಟತನ ತೋರಿದ ಅರವಿಂದ ಕೇಜ್ರಿವಾಲ್‌ರನ್ನು ಒಸಾಮಾ ಬಿನ್ ಲಾಡೆನ್‌ನ ವೇಷದಲ್ಲಿ ಬಿಂಬಿಸುವ ಪೋಸ್ಟರ್‌ಗಳೂ ಈಗ ಎಲ್ಲ ಕಡೆ ಪ್ರಚಾರಕ್ಕೆ ಬಂದಿವೆ. ಹೀಗಿದ್ದರೂ ಮೋದಿಯವರ ಅನುಯಾಯಿಗಳಿಗೆ ಮಾತ್ರ ಮೋದಿ ಇಮೇಜ್‌ಅನ್ನು ಎಷ್ಟು ತೊಳೆದು ಬೆಳಗಿದರೂ ಸಮಾಧಾನವಾಗುತ್ತಿಲ್ಲ! 2002ರ ಗುಜರಾತ್ ಹತ್ಯಾಕಾಂಡಕ್ಕೆ ತಾನು ಚಾಲಕ ಶಕ್ತಿಯಾಗಿರಲಿಲ್ಲ ಎಂದು ಮೋದಿ ಹೇಳಿಲ್ಲ.
ಆದರೆ ಮೋದಿ ಇಂಗಿತವನ್ನು ಒಕ್ಕೊರಲಿನಲ್ಲಿ ಉಚ್ಚರಿಸುವ ಈ ಮೋದಿ ೆರಾಕ್ಸ್‌ಗಳು ಮಾತ್ರ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿಲ್ಲವೇ? ಎಂದು ದಬಾಯಿಸುತ್ತಾರೆ. ಆದರೆ ಸತ್ಯ ಸಂಗತಿಯೆಂದರೆ ಈವರೆಗೆ ಯಾವ ಕೋರ್ಟೂ ಮೋದಿಯವರಿಗೆ ಕ್ಲೀನ್ ಚಿಟ್ ದಯಪಾಲಿಸಿಲ್ಲ! ಚುನಾವಣೆಯ ಹೊಸ್ತಿಲಲ್ಲಿ ಮುಸ್ಲಿಮರನ್ನುದ್ದೇಶಿಸಿ ನಿಜ, ಕೆಲವು ತಪ್ಪುಗಳಾಗಿವೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಹೇಳಿದರೇ ಹೊರತು ಮೋದಿಯವರಂತೂ ಬಾಯಿ ಬಿಟ್ಟಿಲ್ಲ.
ಅವರು ಈವರೆಗೂ ಯಾರ ಕ್ಷಮೆಯನ್ನೂ ಯಾಚಿಸಿಲ್ಲ.... ಆದರೂ ಮೋದಿ ೆರಾಕ್ಸ್‌ಗಳಿಗೆ ಗುಜರಾತ್ ನರಮೇಧ ಚರ್ಚಾರ್ಹ ವಿಷಯವೇ ಅಲ್ಲ! ಇನ್ನೂ ಮುಂದುವರಿದರೆ, ಈ ಭಕ್ತರು, 1984ರಲ್ಲಿ ಇಂದಿರಾ ಹತ್ಯೆಯಾದಾಗ ಕಾಂಗ್ರೆಸ್ಸಿನಿಂದ ಸಿಖ್ಖರ ಮಾರಣಹೋಮ ನಡೆಯಲಿಲ್ಲವೇ?... ಅಲ್ಲಿಗೆ ಅದಕ್ಕೂ ಇದಕ್ಕೂ ವಜಾ ಆಯಿತು ಅನ್ನುವ ಧಾಟಿಯಲ್ಲಿ ದನಿಯೆತ್ತುತ್ತಾರೆ! ಸಿಖ್ಖರ ಮಾರಣಹೋಮ- ಈ ದೇಶವೇ ತಲೆ ತಗ್ಗಿಸಬೇಕಾದ ಘಟನೆ ಎಂಬುದು ನಿಜ.
ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ‘ದೊಡ್ಡ ಮರವೊಂದು ಉರುಳಿದಾಗ ಭೂಮಿ ಅಲ್ಲಾಡುವುದು ಸಹಜ’ ಎಂಬ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದೂ ನಿಜ. ಆದರೆ, ಎಲ್ಲರೂ ಮರೆಯುತ್ತಿರುವುದು- ಸಿಖ್ಖರ ನರಮೇಧವೋ ಮತ್ತೊಂದೋ- ಆ ಪಕ್ಷದ ರಕ್ತಗತ ನೀತಿಯ ಭಾಗವಲ್ಲ. ಅದಕ್ಕೆ ಪ್ರತಿಯಾಗಿ ನಾವು ನೆನಪಿಡಬೇಕಾದ್ದು- ಮಹಾತ್ಮ ಗಾಂಧಿ ಹತ್ಯೆಯಿಂದ ಆರಂಭಿಸಿ ಇಂದಿನವರೆಗೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ರಾಜಕಾರಣ ರೂಪಿಸುವುದೇ ಸಂಘ ಪರಿವಾರದ ಅಧಿಕೃತ ನೀತಿ; ಅದರ ಹುಟ್ಟುಗುಣ! ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ.
ಈ ಹಾದಿಯಲ್ಲಿ ಗುಜರಾತ್ ಹತ್ಯಾಕಾಂಡ ಮತ್ತೊಂದು ಮೈಲಿಗಲ್ಲೇ ಹೊರತು, ಆರಂಭವೂ ಅಲ್ಲ, ಅಂತ್ಯವೂ ಅಲ್ಲ. (ಇದೇ ಸಮಯದಲ್ಲಿ ಬಾಬರಿ ಮಸೀದಿ ಧ್ವಂಸವೂ ಅಕಸ್ಮಾತ್ ಭಾವಾವೇಶದ ಗಳಿಗೆಯಲ್ಲಾದ ಅನಾಹುತವಲ್ಲ, ಅದೊಂದು ಪೂರ್ವಯೋಜನೆ, ತರಬೇತಿ- ಎಲ್ಲ ಒಳಗೊಂಡ ದೈತ್ಯ ಸಂಚು ಎಂದು ಕೋಬ್ರಾ ಪೋಸ್ಟ್‌ನ ಕುಟುಕು ಕಾರ್ಯಾಚರಣೆ ಕೂಡ ಬಯಲಿಗೆಳೆದಿದೆಯಲ್ಲ...!) ಆದರೂ ಮೋದಿ ಭಕ್ತರು 2002ರ ಕೋಮು ಹಿಂಸೆಯೊಂದು ಕ್ಷುಲ್ಲಕ ಘಟನೆ, ಅದರ ಬಗ್ಗೆ ಮಾತಾಡಿ ಯಾಕೆ ಸಮಯ ವ್ಯರ್ಥ ಮಾಡುವುದು ಎಂಬಂತೆ ಅಭಿವೃದ್ಧಿ? ಗುಜರಾತ್ ಅಭಿವೃದ್ಧಿ ನೋಡಿದ್ದೀರಾ? ಎಂದು ಸವಾಲು ಹಾಕುತ್ತಾರೆ.
ವಾಸ್ತವವೆಂದರೆ ವ್ಯಾಪಾರ ವಾಣಿಜ್ಯಗಳಲ್ಲಿ ನಿಷ್ಣಾತರಾದ ಜನಸಮೂಹವುಳ್ಳ ಗುಜರಾತ್ ಮೊದಲಿನಿಂದಲೂ ಮೂಲಸೌಕರ್ಯ ಅಭಿವೃದ್ಧಿಯ ಹಾದಿಯಲ್ಲಿ ಮುಂದಿರುವುದು ಅಚ್ಚರಿಯ ವಿಷಯವೇ ಅಲ್ಲ. ಆದರೆ ಇವರೆಲ್ಲ ಹೇಳದೆ ಬಿಟ್ಟದ್ದು- ಮೋದಿ ಸಾಧಿಸುತ್ತಿರುವ ಅಭಿವೃದ್ಧಿ ಸಕಲ ಜನಸ್ತೋಮದ ಸಮಗ್ರ ಪ್ರಗತಿಯಲ್ಲ.
ಅಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಜನಸಾಮಾನ್ಯರನ್ನು ಮುಟ್ಟುವ ಅಭಿವೃದ್ಧಿಯೇ ಆಗಿಲ್ಲ; ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ಹಿಂದುಳಿದಿರುವುದರಿಂದಲೇ ಆ ಮಾದರಿ ನನಗೆ ಸಮ್ಮತವಿಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಕೂಡ ಹೇಳಿದ್ದು. ಅಷ್ಟಕ್ಕೂ ನರೇಂದ್ರ ಮೋದಿ ಗುಜರಾತಿನಲ್ಲಿ ಉದ್ಧಾರ ಮಾಡಲು ಹೊರಟಿರುವುದು ಹೊಟ್ಟೆ ತುಂಬಿದ ಕಾರ್ಪೊರೇಟ್ ವಲಯವನ್ನು ಮಾತ್ರ...
ಹಾಗಾದರೆ ಹೀಗೆ ಮೋದಿ ಭಜನೆಯಲ್ಲಿ ತೊಡಗಿರುವ ಈ ಜೆರಾಕ್ಸ್‌ಗಳೆಲ್ಲ ಏನು ಅಷ್ಟು ದಡ್ಡರೇ? ಇವರೆಲ್ಲ ಕಣ್ಣು, ಕಿವಿ ಎರಡೂ ಇಲ್ಲದವರಂತೆ ದೊಡ್ಡದೊಂದು ಸುಳ್ಳನ್ನು ಸತ್ಯವೆಂದು ನಂಬಿಸಲು ಹಾಗೂ ಸ್ವತಃ ತಾವೂ ನಂಬಲು ಯಾಕೆ ಹಾತೊರೆಯುತ್ತಿದ್ದಾರೆ? ಅದೂ ಅಷ್ಟು ಆವೇಗ ಅಬ್ಬರ ಉದ್ರೇಕಗಳೊಂದಿಗೆ? ಇದರಿಂದ ಇವರಿಗೇನು ಲಾಭ.... ಎಂದೆಲ್ಲ ಯೋಚಿಸುವಾಗ ಹೊಳೆದದ್ದು-
ಹೌದಲ್ಲವೇ? ಈಗಿನ ವ್ಯಾಖ್ಯಾನದಲ್ಲಿ ಅಭಿವೃದ್ಧಿ ಎಂದರೇನು? ಸರ್ವಜನರಲ್ಲಿ ಸಮಾನತೆ ತರುವ ಸಮತೋಲದ ಕಾರ್ಯಯೋಜನೆಯೇ? ಅಲ್ಲವೇ ಅಲ್ಲ! ಇಂದಿನ ಲೆಕ್ಕದಲ್ಲಿ, ಸಾಮಾಜಿಕ ನ್ಯಾಯಕ್ಕೆ ಎಡೆಯಿಲ್ಲದ, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು-ಇವರ್ಯಾರನ್ನೂ ಒಳಗೊಳ್ಳದ, ಪೈಪೋಟಿಯನ್ನೇ ಆಧರಿಸಿದ ಕಾರ್ಪೊರೇಟ್ ವಿಕಾಸವೇ ಅಭಿವೃದ್ಧಿ ಅಲ್ಲವೇ? ಅದಕ್ಕಾಗಿಯೇ ಗುಜರಾತ್ ಹತ್ಯಾಕಾಂಡದ ರಕ್ತ ಮೆತ್ತಿಕೊಂಡ ಕೈಗಳಲ್ಲಿ ಕಾರ್ಪೊರೇಟ್ ಪ್ರಗತಿಯ ಜಪ ಮಾಡುತ್ತಿರುವ ಮೋದಿಯೇ ಇವರೆಲ್ಲರ ಆರಾಧ್ಯ ದೈವ ಆಗಿರುವುದಲ್ಲವೇ? ಅಷ್ಟಕ್ಕೂ ಮೋದಿಯವರ ಅವಗುಣಗಳೇ ಅವರನ್ನು ಇವರಿಗೆಲ್ಲ ಆಕರ್ಷಣೀಯವಾಗಿಸಿರುವುದು! ಅದಕ್ಕೇ ‘ಟ್ರೂಥ್ ಆಫ್ ಗುಜರಾತ್’ನಂಥ ವೆಬ್‌ಸೈಟ್‌ಗಳೋ ಅಥವಾ ಇನ್ನಾವುದಾದರೂ ಮಾಧ್ಯಮವೋ ಮೋದಿ ವಿರುದ್ಧ ಸಾಕ್ಷ್ಯ ಮುಂದಿಟ್ಟಷ್ಟೂ ಮೋದಿ ಜನಪ್ರಿಯತೆ ಹೆಚ್ಚುತ್ತಾ ಹೋಗುವ ಸೋಜಿಗವನ್ನು ಕಾಣುತ್ತಿದ್ದೇವೆ.
ಶತ್ರುಗಳಿಗೆ ಬುದ್ಧಿ ಕಲಿಸಿ ಹದ್ದುಬಸ್ತಿನಲ್ಲಿಡಬಲ್ಲ ನರೇಂದ್ರ ಮೋದಿಯೇ ಇವರ ಕನಸಿನ ಅಭಿವೃದ್ಧಿಯ ಹರಿಕಾರ, ನಾಳಿನ ಭಾರತದ ಭಾಗ್ಯವಿಧಾತ ಆಗಿರುವುದರ ಮೂಲ ಇದೇ ಅಲ್ಲವೇ? ಅಂದರೆ ಹೀಗೆ ಸಂತೋಷದಿಂದ ಮೋದಿಯವರ ಪಾಪಗಳನ್ನು ಮನಸಾರೆ ಹಂಚಿಕೊಳ್ಳಬಯಸುವವರೇ ಅವರ ಅನುಯಾಯಿಗಳು,- ಈ ಮೋದಿ ಜೆೆರಾಕ್ಸ್‌ಗಳು. ಯಾಕೆಂದರೆ ಮೋದಿ ಭಕ್ತರು ಬಯಸುವ ಅಭಿವೃದ್ಧಿಯ ಮಾದರಿ ಇದೇನೇ. ಇದೆಲ್ಲ ಸರಿ. ಆದರೆ ಈ ಹಂತದಲ್ಲಿ ನಮ್ಮ ಆಯ್ಕೆ ಯಾವುದು?.
courtsey : Varthabharati
courtsey : Varthabharati
0 comments:
Post a Comment