PLEASE LOGIN TO KANNADANET.COM FOR REGULAR NEWS-UPDATES

 -ಬಸವರಾಜ ಕರುಗಲ್.

         ಕೊಪ್ಪಳ : ೨೦೧೨ ರ ಡಿಸೆಂಬರ್ ೨೧ ಕ್ಕೆ ಪ್ರಳಯ ಸಂಭವಿಸಿ ಪ್ರಪಂಚ ನಾಶವಾಗಲಿದೆ ಎಂಬ ಹಲವು ಜ್ಯೋತಿಷಿಗಳ ಭವಿಷ್ಯ ಸುಳ್ಳಾಗಿದೆ. ಈಗ ೨೦೫೦ಕ್ಕೆ ಈಗಿರುವ ಪ್ರಪಂಚ ನಾಶವಾಗಿ ಸಕಲ ಜೀವರಾಶಿಗಳು ಮಣ್ಣು ಸೇರಲಿವೆ ಎಂಬ ಭವಿಷ್ಯ ಸುಳ್ಳಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈ ಭವಿಷ್ಯ ನುಡಿದದ್ದು ಸಾಕ್ಷಾತ್ ಭಗವಂತ! ಅದು ಧರೆಗಿಳಿದು ಬಂದು ಪ್ರಪಂಚ ವಿನಾಶ ಖಚಿತ ಎಂದ!
        ಹೌದು ಇದು ಅಚ್ಚರಿಯಾದರೂ ನಿಜ. ಕೊಪ್ಪಳ ಜಿಲ್ಲೆಯ ದೇವನೂರಿನಲ್ಲಿ ಮುಸ್ಲಿಂ ಕುಟುಂಬವೊಂದು ಸತತ ೧೧ ವರ್ಷಗಳ ಕಾಲ ಶಿವನ ಧ್ಯಾನದಲ್ಲಿತ್ತು. ಕುಟುಂಬದ ಕರೆಗೆ ಓಗೊಟ್ಟು ಗ್ರಾಮದ ಎಲ್ಲ ಕೋಮಿನ ಜನರು ನಿತ್ಯವೂ ಕೆಲಕಾಲ ಶಿವನ ಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದರು. ದೇವನೊಬ್ಬ ನಾಮ ಹಲವು ಎಂಬುದು ಈ ಗ್ರಾಮದ ಎಲ್ಲ ವರ್ಗದ ಜನರ ನಂಬಿಕೆಯಾಗಿತ್ತು.
         ೧೧ ವರ್ಷಗಳ ಸತತ ಧ್ಯಾನದ ಫಲ ಸಿಕ್ಕಿದ್ದು ಮಾರ್ಚ್ ತಿಂಗಳ ಕೊನೆಯ ಸೋಮವಾರ. ಜಟಧಾರಿಯೊಬ್ಬನ ಕೊರಳನ್ನು ಅಲಂಕರಿಸಿದ್ದ ಹಾವು ಇಲ್ಲಿನ ಜನರ ಧ್ಯಾನ ಕಂಡು ಮೂಕವಿಸ್ಮಿತವಾಗಿತ್ತು. ಜನರ ಭಕ್ತಿ ಕಂಡು ನೀಲಕಂಠನ ಮೊಗದಲ್ಲಿ ಮಂದಹಾಸ ಮೂಡಿತ್ತು. ಕೈಯಲ್ಲಿದ್ದ ತ್ರಿಶೂಲ ಹೂವಿನ ಹಾರವಾಗಿ ಭಕ್ತರ ಕೊರಳು ಸೇರಿತು. ಇದೇನಿದು ಹೂವಿನ ಹಾರ ನಮ್ಮ ಕೊರಳಿಗೆ ಹೇಗೆ ಬಂತು ಎಂದು ಧ್ಯಾನಾಸಕ್ತರೆಲ್ಲ ತಲೆ ಎತ್ತಿ ನೋಡಿದರೆ ತಮ್ಮ ಕಣ್ಣನ್ನು ತಾವೇ ನಂಬಲಾರದಂತಹ ವಿಸ್ಮಯ ಕಂಡಿತು.
         ಕೆಲವರು ಸಾಕ್ಷಾತ್ ಭಗವಂತನನ್ನೇ ಅನುಮಾನದ ದೃಷ್ಟಿಯಿಂದ ಕಂಡು ‘ಇದು ಯಾವ ನಾಟಕ ಕಂಪನಿಯ ಽರಿಸು?’ ಎಂದು ಪ್ರಶ್ನಿಸಿದರು. ಇನ್ನು ಕೆಲವರು ಇದ್ಯಾವುದನ್ನು ಲೆಕ್ಕಿಸದೇ ಕಾಲಿಗೆರಗಿ ಪುನೀತರಾದರು. ದೇವರು ಈ ಕಾಲದಲ್ಲಿ ಪ್ರತ್ಯಕ್ಷ ಆಗುವುದೇ ಎಂಬ ಅನುಮಾನವಿದ್ದ ಕೆಲವರು ಭಗವಂತನಿಗೆ ಕೆಲ ಪರೀಕ್ಷೆಯನ್ನೊಡ್ಡಿದರು.
         ಭಕ್ತರ ಆಸೆಗೆ ತಣ್ಣೀರೆರೆಚದ ಶಿವ, ಭಕ್ತರ ಬೇಡಿಕೆಯಂತೆ ಹೂ ಮಳೆ ಸುರಿಸಿದ. ಅಂಗವಿಕಲರನ್ನು  ಸ್ಪರ್ಶಿಸಿ ಅವರನ್ನು ಸಹಜಮಾನವರಂತೆ ಮಾಡಿದ. ತನ್ನ ಅಂಗೈಯಲ್ಲೇ ದೇವಲೋಕದ ಕಾರ್ಯಕಲಾಪಗಳನ್ನು ತೋರಿಸಿದ!
         ಬಳಿಕ ಎಲ್ಲರೂ ಭಗವಂತ ಭೂಮಿಗೆ ಬಂದದ್ದನ್ನು ಖಾತ್ರಿ ಪಡಿಸಿಕೊಂಡು ತಮ್ಮ ಕೋರಿಕೆಗಳನ್ನು ಸಲ್ಲಿಸಿದರು. ಭಕ್ತರ ಎಲ್ಲ ಕೋರಿಕೆಗಳಿಗೂ ‘ತಥಾಸ್ತು’ ಎಂದ ಪರಮೇಶ್ವರ, ೨೦೫೦ಕ್ಕೆ ಈಗಿರುವ ಭೂಮಿ ವಿನಾಶವಾಗಲಿದೆ. ಸಕಲ ಜೀವರಾಶಿಗಳು ಇಲ್ಲವಾಗುತ್ತವೆ. ಪ್ರಪಂಚ ವಿನಾಶದ ಸಂದರ್ಭದಲ್ಲಿ ಯಾರಿಗೂ ನೋವಾಗದ ಹಾಗೆ ಎಲ್ಲರ ಆತ್ಮ ಗಗನಮುಖಿಯಾಗುತ್ತವೆ. ಆಸೆ ಬಿಟ್ಟು ಬಿಡಿ, ದುರಾಸೆಯನ್ನಂತೂ ಪಡಲೇಬೇಡಿ. ಇಡೀ ಜಗತ್ತಿಗೆ ಎಲ್ಲರೂ ಒಳಿತನ್ನು ಬಯಸಿ. ಜಾತಿ, ಧರ್ಮದ ಹೆಸರಿನಲ್ಲಿ ಗಲಭೆಯಾಗದಂತೆ ಎಚ್ಚರಿಕೆ ವಹಿಸಿ. ರಾಜಕಾರಣ ಅರಾಜಮಾರ್ಗದಲ್ಲಿ ನಡೆಯುತ್ತಿರುವದನ್ನು ತಡೆಯಿರಿ ಎಂದು ಹೇಳಿ ಮಾಯವಾದ!

ದೇವನೂರಿನ ವಿಶೇಷತೆ ಏನು?
         ಹೆಸರೇ ಹೇಳುವ ಹಾಗೆ ಕ್ರಿ.ಪೂ.೨೦೧೪ ರಲ್ಲಿ ದೇವಮಾನವರು ಸಂಚರಿಸಿದ ಜಾಗವಿದು. ಹಾಗಾಗಿ ಈ ಊರಿಗೆ ದೇವನೂರು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಈ ಊರಲ್ಲಿ ಸುಮಾರು ೨೫೦ ಕುಟುಂಬಗಳಿದ್ದು ಹಿಂದು, ಮುಸ್ಲಿಂ, ಕ್ರೈಸ್ತ, ದಲಿತ ಹೀಗೆ ಎಲ್ಲ ಕೋಮಿನ ಜನರು ಸಹೋದರತೆ, ಸಹಬಾಳ್ವೆ ನಡೆಸುತ್ತಿರುವುದರಿಂದ ಬರೋಬ್ಬರಿ ೪೦೨೮ ವರ್ಷಗಳ ಬಳಿಕ ದೇವರು ಪ್ರತ್ಯಕ್ಷನಾದ ಎಂದು ಗ್ರಾಮದ ಥಾಮಸ್ ಚರ್ಚ್ ತಿಳಿಸಿದರು.
         ಭಗವಂತ ಭೂಮಿಗೆ ಬಂದ ಸುದ್ದಿ ಎಲ್ಲ ವಾಹಿನಿಗಳಲ್ಲೂ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದಂತೆ ಗ್ರಾಮಕ್ಕೆ ರಾಜಕಾರಣಿಗಳ, ಸುತ್ತಮುತ್ತಲಿನ ಊರುಗಳ ಜನರ ದಂಡು ಹರಿದು ಬಂತು. ಭಗವಂತನ ದರ್ಶನ ಸಿಕ್ಕಿದ್ದು  ದೇವನೂರಿನ ಜನರಿಗೆ ಮಾತ್ರ. 

ಕಠಿಣ ತಪಸ್ಸಿಗೆ ಪ್ರಯತ್ನಿಸಬೇಡಿ :
        ದೇವನೂರಿನ ಸುದ್ದಿ ಅರಿತ ದೇಶದ ವಿವಿಧೆಡೆ ದೇವರನ್ನು ಕಾಣುವ ಉದ್ದೇಶದಿಂದ ಕಠಿಣ ತಪಸ್ಸಿನತ್ತ ಜನರು ಮುಖ ಮಾಡುತ್ತಿದ್ದಾರೆ. ಓದುಗರಿಗೆ ನಮ್ಮ ಸಲಹೆ ಇಷ್ಟೇ ; ಯಾರೂ ಕಠಿಣ ತಪಸ್ಸಿನಲ್ಲಿ ತೊಡಗಬೇಡಿ. ನಂಬುವವರಿಗೆ ದೇವರು ನಿಮ್ಮ ನಿಮ್ಮ ಮನಸ್ಸಿನಲ್ಲೇ ನೆಲೆಸಿದ್ದಾನೆ. ಈ ಸುದ್ದಿ ಏಪ್ರಿಲ್ ೧ ರ ಮೂರ್ಖರ ದಿನಕ್ಕಾಗಿ ಬರೆದದ್ದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತೇವೆ. 

Advertisement

0 comments:

Post a Comment

 
Top