ಕೊಪ್ಪಳ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ರ‍್ಯಾಂಡಮೈಜೇಷನ್ ಕಾರ್ಯವನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರ ನೆರವೇರಿಸಿದರು.
ಏನಿದು ರ‍್ಯಾಂಡಮೈಜೇಷನ್ ? :
ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕೆ ಈ ಹಿಂದೆ ಮತಪತ್ರಗಳನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಿಂದ ಮತದಾನ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳು ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಎಂಬ ಎರಡು ಘಟಕಗಳನ್ನು ಹೊಂದಿದ್ದು, ಪ್ರತಿಯೊಂದು ಮತಗಟ್ಟೆಗೆ ತಲಾ ಒಂದು ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ. ಕೊಪ್ಪಳ ಲೋಕಸಭೆ ಚುನಾವಣೆಗೆ ಮತದಾನಕ್ಕಾಗಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅನುಗುಣವಾಗಿ ಹೆಚ್ಚುವರಿ ಮತಯಂತ್ರಗಳೂ ಸೇರಿದಂತೆ ಒಟ್ಟು ೧೩೫೦ ಕಂಟ್ರೋಲ್ ಯುನಿಟ್ ಹಾಗೂ ೧೭೨೦ ಬ್ಯಾಲೆಟ್ ಯುನಿಟ್‌ಗಳನ್ನು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ದಾಸ್ತಾನು ಮಾಡಿ ಇಡಲಾಗಿದೆ. ದಾಸ್ತಾನು ಮಾಡಿ ಇರಿಸಲಾಗಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಬೇಕಾಗಿದ್ದು
, ಈ ಸಂದರ್ಭದಲ್ಲಿ, ವಿದ್ಯುನ್ಮಾನ ಮತಯಂತ್ರಗಳನ್ನು ಅದರ ಯಂತ್ರದ ಸಂಖ್ಯೆವಾರು ಹಂಚಿಕೆ ಮಾಡಲಾಗುತ್ತದೆ. ಇಂತಹ ಸಂಖ್ಯೆಗಳನ್ನು ಕಂಪ್ಯೂಟರ್ ಆಧಾರಿತ ತಂತ್ರಾಂಶವನ್ನು ಬಳಸಿ, ಸಂಖ್ಯೆಗಳನ್ನು ಮಿಶ್ರಣ ಮಾಡಿ, ನಂತರ ವಿಧಾನಸಭಾ ಕ್ಷೇತ್ರವಾರು ಮತಯಂತ್ರಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೇ ರ‍್ಯಾಂಡಮೈಜೇಷನ್. ಮೊದಲ ಹಂತದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ರ‍್ಯಾಂಡಮೈಜೇಷನ್ ಮೂಲಕ ಜಿಲ್ಲೆಯ ೦೫ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮಂಗಳವಾರ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಿದರು.
ಎರಡನೆ ಹಂತದ ರ‍್ಯಾಂಡಮೈಜೇಷನ್ ಕಾರ್ಯ ಬರುವ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾದ ವಿದ್ಯುನ್ಮಾನ ಮತಯಂತ್ರಗಳನ್ನು ಮತಗಟ್ಟೆವಾರು ರ‍್ಯಾಂಡಮೈಜೇಷನ್ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲಾಗುವುದು. ಕೊಪ್ಪಳ ಲೋಕಸಭಾ ಕ್ಷೇತ್ರದ ಸಿಂಧನೂರು, ಮಸ್ಕಿ ಹಾಗೂ ಶಿರಗುಪ್ಪ ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ ಕಾರ್ಯ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜರುಗಲಿದೆ.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಎನ್‌ಐಸಿ ಅಧಿಕಾರಿ ವೀರಣ್ಣ ಏಳುಬಾವಿ, ಎನ್‌ಐಸಿಯ ಬಸವರಾಜ್, ಸಹಾಯಕ ಚುನಾವಣಾಧಿಕಾರಿಗಳಾದ ಸಹಕಾರ ಸಂಘಗಳ ಉಪನಿಬಂಧಕ ಮುನಿಯಪ್ಪ, ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ್, ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಎ.ಎಮ್.ಗದಗ, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ತಹಸಿಲ್ದಾರರುಗಳಾದ ಮಡಿವಾಳರ್, ಪುಟ್ಟರಾಮಯ್ಯ, ಗಂಗಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment